ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್‌ಗಾಂವ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ ಉಗ್ರನೊಬ್ಬ ಹತನಾಗಿದ್ದಾನೆ. ಖಾಂಡಿಪೋರ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಪಡೆದ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದು ದಾಳಿ ನಡೆಸಿದ ವೇಳೆ ಈ ಘಟನೆ ನಡೆದಿದೆ. ಭದ್ರತಾ ಪಡೆಗಳು ದಾಳಿ ನಡೆಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಉಗ್ರರು ತಮ್ಮ ಅಡಗುದಾಣಗಳಿಂದ ಗುಂಡಿನ ಪ್ರತಿ ದಾಳಿ ನಡೆಸಿ ಎನ್‌ಕೌಂಟರ್ ವೇದಿಕೆ ಸೃಷ್ಟಿಸಿದರು. ಈ ಗುಂಡಿನ ಕಾಳಗ ವೇಳೆ ಒಬ್ಬ ಉಗ್ರ ಹತನಾಗಿದ್ದಾನೆ.
ಸಾವನ್ನಪ್ಪಿದ ಉಗ್ರನ ವಿವರ ಇನ್ನಷ್ಟೇ ತಿಳಿಯಬೇಕಾಗಿದೆ. ಅಡಗುದಾಣದಲ್ಲಿ ಇನ್ನಷ್ಟು ಉಗ್ರರಿರುವ ಸಾಧ್ಯತೆಗಳಿದ್ದು, ಭದ್ರತಾ ಪಡೆಗಳ ಕಾರ್ಯಾಚರಣೆಯೂ ಮುಂದುವರಿದಿದೆ.
ಕಾಶ್ಮೀರದಲ್ಲಿ ಕಳೆದ ಕೆಲವು ಸಮಯದಿಂದ ಉಗ್ರ ಚಟುವಟಿಕೆಗಳು ಹೆಚ್ಚಿವೆ. ಕಣಿವೆಯಲ್ಲಿ ಸಹಜ ಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರನ್ನು ಮರಳಿ ಕರೆ ತರುತ್ತಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಹೀಗಾಗಿ ಅವರು ಕೇಂದ್ರ ಸರಕಾರ ಮತ್ತು ಈ ರೀತಿ ನಾನಾ ಉದ್ಯೋಗಗಳೊಂದಿಗೆ ಕಣಿವೆಗೆ ಬಂದವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ವಿದ್ಯಮಾನ ಕಾಶ್ಮೀರದಲ್ಲಿ ಮತ್ತೆ ಉಗ್ರ ಸಂಘಟನೆಗಳು ತಲೆ ಎತ್ತಲು ಕಾರಣವಾಗಿದೆ. ಇವುಗಳ ವಿರುದ್ಧ ಭದ್ರತಾ ಪಡೆಗಳು ಕೂಡಾ ಕಟು ಧೋರಣೆ ಹೊಂದಿವೆ. ಇವುಗಳ ಭಾಗವಾಗಿಯೇ ಉಗ್ರರನ್ನು ಬೆನ್ನಟ್ಟಿ ದಾಳಿ ನಡೆಸುವ ಕಾರ್ಯಾಚರಣೆಗಳು ಜೋರಾಗಿ ನಡೆಯುತ್ತಿವೆ.
ಬಾರಾಮುಲ್ಲಾದಲ್ಲಿ ಬಂಧನಈ ನಡುವೆ, ಬಾರಾಮುಲ್ಲಾದಲ್ಲಿ ನಡೆದ ಭದ್ರತಾ ಪಡೆಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರೆ ತಯ್ಬಾ (ಎಲ್‌ಇಟಿ) ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಬಂಧಿತರನ್ನು ಅಹಮದ್ ಮೀರ್ ಮತ್ತು ಜಾಹಿದ್ ಬಶೀರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ| ಜಮ್ಮು-ಕಾಶ್ಮೀರದ ಕುಲಗಾಂವ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಹಿಂದು ಶಿಕ್ಷಕಿ ಬಲಿ