Site icon Vistara News

ಅಸ್ಸಾಂನಲ್ಲಿ ʼವಿಐಪಿ ಸಂಸ್ಕೃತಿʼಗೆ ಬ್ರೇಕ್‌ ಹಾಕಲು ಮುಂದಾದ ಸಿಎಂ ಹಿಮಂತ ಬಿಸ್ವಾ; ತಮ್ಮ ವಿದ್ಯುತ್‌ ಬಿಲ್‌ ತಾವೇ ಪಾವತಿಸುವುದಾಗಿ ಘೋಷಣೆ

Himanta Biswa Sarma

Himanta Biswa Sarma

ದಿಸ್ಪುರ: ಅಸ್ಸಾಂನಲ್ಲಿ ಕೆಲವು ʼವಿಐಪಿ ಸಂಸ್ಕೃತಿʼ (VIP culture)ಯನ್ನು ತೊಡೆದು ಹಾಕುವುದಾಗಿ ಹೇಳಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು, ಇದರ ಮೊದಲ ಹೆಜ್ಜೆಯಾಗಿ ತಾವು ಮತ್ತು ಮುಖ್ಯ ಕಾರ್ಯದರ್ಶಿ ಜುಲೈ 1ರಿಂದ ತಮ್ಮ ವಿದ್ಯುತ್ ಬಿಲ್ ಅನ್ನು ತಾವೇ ಪಾವತಿಸುವುದಾಗಿ ಪ್ರಕಟಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ʼʼತೆರಿಗೆದಾರರ ಹಣವನ್ನು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳ ವಿದ್ಯುತ್ ಬಿಲ್ ಪಾವತಿಸುವ ʼವಿಐಪಿ ಸಂಸ್ಕೃತಿʼಯ ನಿಯಮವನ್ನು ನಾವು ಕೊನೆಗೊಳಿಸುತ್ತಿದ್ದೇವೆ. ನಾನು ಮತ್ತು ಮುಖ್ಯ ಕಾರ್ಯದರ್ಶಿ ಜುಲೈ 1ರಿಂದ ನಮ್ಮ ವಿದ್ಯುತ್ ಬಿಲ್‌ಗಳನ್ನು ನಾವೇ ಪಾವತಿಸಲು ಪ್ರಾರಂಭಿಸುತ್ತೇವೆ” ಎಂದು ಘೋಷಿಸಿದ್ದಾರೆ.

ಜತೆಗೆ “ಜುಲೈಯಿಂದ ಎಲ್ಲ ಸರ್ಕಾರಿ ನೌಕರರು ತಮ್ಮ ಸ್ವಂತ ವಿದ್ಯುತ್ ಬಳಕೆಗೆ ತಾವೇ ಪಾವತಿಸಬೇಕಾಗುತ್ತದೆ” ಎಂದೂ ತಿಳಿಸಿದ್ದಾರೆ. “ಸಚಿವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳ ನಿವಾಸಗಳ ವಿದ್ಯುತ್ ಬಿಲ್‌ಗಳನ್ನು ಸರ್ಕಾರವೇ ಇಷ್ಟು ದಿನ ಪಾವತಿಸುತ್ತ ಬಂದಿದೆ. ಈ ವ್ಯವಸ್ಥೆ ಇಂದು ನಿನ್ನೆಯದ್ದಲ್ಲ. ಸುಮಾರು 75 ವರ್ಷಗಳ ಸುದೀರ್ಘ ಕಾಲದಿಂದ ನಡೆದುಕೊಂಡು ಬಂದಿದೆʼʼ ಎಂದು ಅವರು ಹೇಳಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸುವುದಾಗಿ ನುಡಿದಿದ್ದಾರೆ.

ಕಾರಣವೇನು?

ಅಸ್ತಿತ್ವದಲ್ಲಿರುವ ವಿಐಪಿ ಸಂಸ್ಕೃತಿಯಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಿದರೆ ವಿದ್ಯುತ್ ಮಂಡಳಿಗೆ ವಿದ್ಯುತ್ ಶುಲ್ಕವನ್ನು ಹೆಚ್ಚಿಸಬೇಕಾದ ಪ್ರಮೇಯ ಎದುರಾಗುವುದಿಲ್ಲ. ಹೀಗಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎನ್ನಲಾಗಿದೆ. “ನಾನು ಕೂಡ ಮೂರು ವರ್ಷಗಳಿಂದ ಉಚಿತ ವಿದ್ಯುತ್ ಬಳಸಿದ್ದೇನೆ. ಈ ಬಗ್ಗೆ ನನಗೆ ತಿಳಿದಿರಲಿಲ್ಲ. ಇತ್ತೀಚೆಗೆ ಚರ್ಚೆಯ ಸಮಯದಲ್ಲಿ ಅದರ ಬಗ್ಗೆ ತಿಳಿದುಕೊಂಡೆ. ನಮ್ಮ ವಿದ್ಯುತ್‌ ಬಿಲ್‌ ನಾವೇ ಪಾವತಿಸುವುದಿಂದ ವಿದ್ಯುತ್ ಮಂಡಳಿಗೆ ಸಹಾಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಶರ್ಮಾ ಹೇಳಿದ್ದಾರೆ.

“ಸಿಎಂ ಕಾರ್ಯದರ್ಶಿ, ಗೃಹ ಮತ್ತು ಹಣಕಾಸು ಇಲಾಖೆಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾತ್ರಿ 8 ಗಂಟೆಗೆ ಸ್ವಯಂ ಚಾಲಿತವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಇದರಿಂದ ನಾವು ವಿದ್ಯುತ್ ಉಳಿಸಬಹುದು. ಈ ಕ್ರಮವು ಈಗಾಗಲೇ ರಾಜ್ಯದಾದ್ಯಂತ 8,000 ಸರ್ಕಾರಿ ಕಚೇರಿಗಳು, ಶಾಲೆಗಳಲ್ಲಿ ಜಾರಿಯಲ್ಲಿದೆ” ಎಂದು ಹಿಮಂತ ಶರ್ಮಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಚಾರದ ವೇಳೆ ರಾಹುಲ್‌ ಗಾಂಧಿಯಿಂದ ಚೀನಾ ಸಂವಿಧಾನ ಪ್ರತಿ ಪ್ರದರ್ಶನ; ಹಿಮಂತ ಬಿಸ್ವಾ ಗಂಭೀರ ಆರೋಪ

ಇದಕ್ಕೂ ಮುನ್ನ ಗುವಾಹಟಿಯ ರಾಜ್ಯ ಸಚಿವಾಲಯ ಸಂಕೀರ್ಣದಲ್ಲಿ ನಡೆದ ಸಮಾರಂಭದಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು 2.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಗ್ರಿಡ್-ಸಂಪರ್ಕಿತ ಮೇಲ್ಛಾವಣಿ ಮತ್ತು ನೆಲ-ಮೌಂಟೆಡ್ ಸೌರ ಪಿವಿ ವ್ಯವಸ್ಥೆಯಾದ ಜನತಾ ಭವನ ಸೌರ ಯೋಜನೆಯನ್ನು ಅನಾವರಣಗೊಳಿಸಿದರು. ಈ ವೇಳೆ ಅವರು, ಪ್ರತಿ ಸರ್ಕಾರಿ ಕಚೇರಿಗಳು ಹಂತಹಂತವಾಗಿ ಸೌರಶಕ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಆರಂಭಿಕ ಹಂತದಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸೌರ ಶಕ್ತಿಗೆ ಪರಿವರ್ತಿಸಲು ಕರೆ ನೀಡಿದರು.

Exit mobile version