ದಿಸ್ಪುರ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಬಿಡುಗಡೆ ಮಾಡಿದೆ. ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಹಣಕಾಸು ನೆರವು ಸೇರಿ ಪಂಚ ನ್ಯಾಯಗಳ ತತ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಒಂದೊಂದು ನ್ಯಾಯ ತತ್ವವೂ ಐದೈದು ಭರವಸೆ ಹೊಂದಿದೆ. ಅಲ್ಲಿಗೆ ಕಾಂಗ್ರೆಸ್ 25 ಭರವಸೆಗಳನ್ನು ನೀಡಿದಂತಾಗಿದೆ. ಅಷ್ಟೇ ಅಲ್ಲ, ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ಪ್ರಣಾಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಟಾಂಗ್ ನೀಡಿದ್ದು, “ಇದು ಭಾರತಕ್ಕೆ ಅಲ್ಲ, ಪಾಕಿಸ್ತಾನದ ಚುನಾವಣೆಗಾಗಿ ಘೋಷಿಸಿದ ಪ್ರಣಾಳಿಕೆ” ಎಂದು ಟೀಕಿಸಿದ್ದಾರೆ.
“ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯು ಓಲೈಕೆ ರಾಜಕಾರಣದ ಕನ್ನಡಿಯಾಗಿದೆ. ಅದು ಹಿಂದು ಇರಲಿ, ಮುಸ್ಲಿಂ ಇರಲಿ, ಭಾರತದಲ್ಲಿ ಯಾರೂ ತ್ರಿವಳಿ ತಲಾಕ್, ಬಹುಪತ್ನಿತ್ವವನ್ನು ಬೆಂಬಲಿಸುವುದಿಲ್ಲ. ತ್ರಿವಳಿ ತಲಾಕ್‌ಅನ್ನು ಮತ್ತೆ ಜಾರಿಗೊಳಿಸಬೇಕು ಎಂದು ಬಯಸುವುದಿಲ್ಲ. ಆದರೆ, ಕಾಂಗ್ರೆಸ್ ಮಾತ್ರ ಓಲೈಕೆಗಾಗಿ ಸಮಾಜವನ್ನು ವಿಂಗಡಣೆ ಮಾಡಲು ಮುಂದಾಗಿದೆ. ವಿಭಜಿಸುವ ಮೂಲಕವೇ ಅಧಿಕಾರಕ್ಕೆ ಬರಬೇಕು ಎಂದು ಅವರು ಶಪಥ ಮಾಡಿದ್ದಾರೆ. ಅಷ್ಟಕ್ಕೂ, ಕಾಂಗ್ರೆಸ್ ಪ್ರಣಾಳಿಕೆಯು ಭಾರತಕ್ಕೆ ಅಲ್ಲ, ಪಾಕಿಸ್ತಾನದ ಚುನಾವಣೆಗಾಗಿ ರೂಪಿಸಿದಂತಿದೆ” ಎಂದು ಹೇಳಿದ್ದಾರೆ.
#WATCH | Sivasagar, Assam: On Congress' manifesto, CM Himanta Biswa Sarma says, "Their manifesto is all about appeasement…They want to divide the society and come to power. We condemn their appeasement politics. By looking at Congress' manifesto it seems that they have released… https://t.co/ajrPA1pG0D pic.twitter.com/JH7Ao5WDC1
— ANI (@ANI) April 6, 2024
ತಿರುಗೇಟು ಕೊಟ್ಟ ಕಾಂಗ್ರೆಸ್
ಹಿಮಂತ ಬಿಸ್ವಾ ಶರ್ಮಾ ಟೀಕೆಗೆ ಅಸ್ಸಾಂ ಕಾಂಗ್ರೆಸ್ ತಿರುಗೇಟು ನೀಡಿದೆ. “ಹಿಮಂತ ಬಿಸ್ವಾ ಶರ್ಮಾ ಅವರಂತಹ ಪಕ್ಷಾಂತರಿಗಳಿಗೆ (ಹಿಮಂತ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರು) ಜಾತ್ಯತೀತ ಹಾಗೂ ಒಳಗೊಳ್ಳುವಿಕೆಯ ತತ್ವದ ಆಧಾರದ ಮೇಲೆ ನಿಂತಿರುವ ಕಾಂಗ್ರೆಸ್ ಪಕ್ಷದ ಕುರಿತು ಅರ್ಥವಾಗುವುದಿಲ್ಲ. ಕಾಂಗ್ರೆಸ್‌ನಲ್ಲೇ ಇದ್ದ ಅವರು ಬಿಜೆಪಿ ಸೇರಿದ ಬಳಿಕ ಕಮಲ ಪಾಳಯಕ್ಕೆ ಅವರು ನಿಷ್ಠೆ ತೋರಿಸುತ್ತಿದ್ದಾರೆ. ಇದು ಅಧಿಕಾರದ ಲಾಲಸೆಗಾಗಿ ಅವರು ಮಾಡುತ್ತಿರುವ ತಂತ್ರ” ಎಂದು ಅಸ್ಸಾಂ ಕಾಂಗ್ರೆಸ್ ವಕ್ತಾರ ಬೇದಬ್ರತಾ ಬೋರಾ ಕುಟುಕಿದ್ದಾರೆ.
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಘೋಷಿಸಿದ ಕೊಡುಗೆಗಳು
- ಸಂವಿಧಾನದ 15, 16, 25, 26, 28, 29 ಮತ್ತು 30 ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಖಾತರಿಪಡಿಸಿದ ಹಕ್ಕುಗಳು ಹಾಗೂ ನಂಬಿಕೆಯನ್ನು ಆಚರಿಸುವ ಮೂಲಭೂತ ಹಕ್ಕನ್ನು ನೀಡುತ್ತೇವೆ
- ಶಿಕ್ಷಣ, ಉದ್ಯೋಗ, ವ್ಯಾಪಾರ, ಸೇವೆಗಳು, ಕ್ರೀಡೆ, ಕಲೆ ಮತ್ತು ಇತರ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಅವಕಾಶಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅಲ್ಪಸಂಖ್ಯಾತರಿಗೆ ಸೇರಿದ ವಿದ್ಯಾರ್ಥಿಗಳು ಮತ್ತು ಯುವಕರನ್ನು ನಾವು ಪ್ರೋತ್ಸಾಹಿಸುತ್ತೇವೆ ಮತ್ತು ಸಹಾಯ ಮಾಡುತ್ತೇವೆ
- ನಾವು ವಿದೇಶದಲ್ಲಿ ಅಧ್ಯಯನಕ್ಕಾಗಿ ಮೌಲಾನಾ ಆಜಾದ್ ವಿದ್ಯಾರ್ಥಿ ವೇತನವನ್ನು ಮರು ಸ್ಥಾಪಿಸುತ್ತೇವೆ ಮತ್ತು ವಿದ್ಯಾರ್ಥಿವೇತನದ ಸಂಖ್ಯೆಯನ್ನು ಹೆಚ್ಚಿಸುತ್ತೇವೆ
- ಅಲ್ಪಸಂಖ್ಯಾತರ ಆರ್ಥಿಕ ಸಬಲೀಕರಣವು ಭಾರತವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಅಗತ್ಯವಾದ ಹೆಜ್ಜೆಯಾಗಿದೆ
- ಅಲ್ಪಸಂಖ್ಯಾತರಿಗೆ ಯಾವುದೇ ತಾರತಮ್ಯವಿಲ್ಲದೆ ಬ್ಯಾಂಕುಗಳು ಸಾಂಸ್ಥಿಕ ಸಾಲವನ್ನು ಒದಗಿಸುವುದನ್ನು ಖಚಿತಪಡಿಸುತ್ತೇವೆ
- ಅಲ್ಪಸಂಖ್ಯಾತರು ಶಿಕ್ಷಣ, ಆರೋಗ್ಯ, ಸಾರ್ವಜನಿಕ ಉದ್ಯೋಗ, ಲೋಕೋಪಯೋಗಿ ಗುತ್ತಿಗೆಗಳು, ಕೌಶಲ್ಯ ಅಭಿವೃದ್ಧಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಾರತಮ್ಯವಿಲ್ಲದೆ ಅವರ ನ್ಯಾಯಯುತ ಪಾಲನ್ನು ಪಡೆಯುವುದನ್ನು ನಾವು ಖಚಿತಪಡಿಸುತ್ತೇವೆ
- ಪ್ರತಿಯೊಬ್ಬ ನಾಗರಿಕರಂತೆ ಅಲ್ಪಸಂಖ್ಯಾತರಿಗೂ ಉಡುಗೆ, ಆಹಾರ, ಭಾಷೆ ಮತ್ತು ವೈಯಕ್ತಿಕ ಕಾನೂನುಗಳ ಆಯ್ಕೆಯ ಸ್ವಾತಂತ್ರ್ಯವಿದೆ ಎಂದು ಕಾಂಗ್ರೆಸ್ ಖಚಿತಪಡಿಸುತ್ತದೆ
- ನಾವು ವೈಯಕ್ತಿಕ ಕಾನೂನುಗಳ ಸುಧಾರಣೆಯನ್ನು ಪ್ರೋತ್ಸಾಹಿಸುತ್ತೇವೆ ಅಂತಹ ಸುಧಾರಣೆಯನ್ನು ಸಂಬಂಧಿಸಿದ ಸಮುದಾಯಗಳ ಭಾಗವಹಿಸುವಿಕೆ ಮತ್ತು ಒಪ್ಪಿಗೆಯೊಂದಿಗೆ ಕೈಗೊಳ್ಳಬೇಕು
- ಸಂವಿಧಾನದ ಎಂಟನೇ ಶೆಡ್ಯೂಲ್ನಲ್ಲಿ ಹೆಚ್ಚಿನ ಭಾಷೆಗಳನ್ನು ಸೇರಿಸಲು ದೀರ್ಘಕಾಲದ ಬೇಡಿಕೆಗಳನ್ನು ಪೂರೈಸಲು ಕಾಂಗ್ರೆಸ್ ಭರವಸೆ ನೀಡುತ್ತದೆ
ಇದನ್ನೂ ಓದಿ: Narendra Modi: ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಚಿಂತನೆಯ ಪ್ರತಿಬಿಂಬ; ಮೋದಿ ವಾಗ್ದಾಳಿ