Site icon Vistara News

ಪ್ರಚಾರದ ವೇಳೆ ರಾಹುಲ್‌ ಗಾಂಧಿಯಿಂದ ಚೀನಾ ಸಂವಿಧಾನ ಪ್ರತಿ ಪ್ರದರ್ಶನ; ಹಿಮಂತ ಬಿಸ್ವಾ ಗಂಭೀರ ಆರೋಪ

Constitution

Himanta Biswa Sarma vs Opposition Over Rahul Gandhi's Red Constitution Copy

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳ ನಾಯಕರ ಹೇಳಿಕೆಗಳು ಮೊನಚಾಗಿವೆ. ಆರೋಪ, ಪ್ರತ್ಯಾರೋಪ, ವಾಗ್ದಾಳಿ, ವಾಗ್ಬಾಣಗಳ ಜತೆಗೆ ವೈಯಕ್ತಿಕ ನಿಂದನೆ, ಆರೋಪಗಳು ಕೂಡ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ರಾಹುಲ್‌ ಗಾಂಧಿ ಅವರು ಸಭೆ-ಸಮಾವೇಶಗಳಲ್ಲಿ ಜನರಿಗೆ ಚೀನಾ ಸಂವಿಧಾನ ಪ್ರದರ್ಶಿಸುತ್ತಿದ್ದಾರೆ” ಎಂದು ಸಿಎಂ ಆರೋಪಿಸಿದ್ದಾರೆ. ಇದು ಈಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

“ರಾಹುಲ್‌ ಗಾಂಧಿ ಅವರು ತಾವು ಭಾಗವಹಿಸುವ ಸಮಾವೇಶ, ಸಭೆಗಳಲ್ಲಿ ಜನರಿಗೆ ಚೀನಾ ಸಂವಿಧಾನದ ಪ್ರತಿ ಪ್ರದರ್ಶಿಸುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಪ್ರತಿಯು ನೀಲಿ ಕವರ್‌ ಹೊಂದಿದೆ. ಚೀನಾ ಸಂವಿಧಾನದ ಮೂಲ ಪ್ರತಿಯು ಕೆಂಪು ಕವರ್‌ ಹೊಂದಿದೆ. ರಾಹುಲ್‌ ಗಾಂಧಿ ಅವರು ಚೀನಾ ಸಂವಿಧಾನವನ್ನು ಜನರಿಗೆ ಪ್ರದರ್ಶಿಸುತ್ತಿದ್ದಾರೆಯೇ? ಈ ಕುರಿತು ಪರಿಶೀಲನೆ ಆಗಬೇಕು” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಅಸ್ಸಾಂ ಮುಖ್ಯಮಂತ್ರಿ ಪೋಸ್ಟ್‌ ಮಾಡಿದ್ದಾರೆ.

“ನಮ್ಮ ಸಂವಿಧಾನವು ನೀಲಿ ಕವರ್‌ ಹೊಂದಿದ್ದು, ಮೂಲಭೂತ ಕರ್ತವ್ಯಗಳ ಬಗ್ಗೆ ಉಲ್ಲೇಖವಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂಬುದಾಗಿ ಮೂಲಭೂತ ಕರ್ತವ್ಯವು ತಿಳಿಸುತ್ತದೆ. ಆದರೆ, ರಾಹುಲ್‌ ಗಾಂಧಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರು ಚೀನಾ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ತಿರುಗಾಡುತ್ತಿರಬಹುದು” ಎಂದು ಕೂಡ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.

ಕಾಂಗ್ರೆಸ್‌ ತಿರುಗೇಟು

ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ಕಾಂಗ್ರೆಸ್‌ ಶಾಸಕ ಅಬ್ದುಲ್‌ ರಶೀದ್‌ ಮೊಂಡಲ್‌ ತಿರುಗೇಟು ನೀಡಿದ್ದಾರೆ. “ಭಾರತ ಸಂವಿಧಾನದ ಕವರ್‌ಗಳ ಬಣ್ಣವು ಬೇರೆ ಬೇರೆ ಇದೆ. ಕವರ್‌ ಬಣ್ಣ ಬೇರೆಯಾದರೂ ಸಂವಿಧಾನದ ಆಶಯಗಳು ಒಂದೇ ಆಗಿವೆ. ಅಷ್ಟಕ್ಕೂ ನಾವು ಬಣ್ಣವನ್ನು ಓದುವುದಿಲ್ಲ. ಸಂವಿಧಾನದ ಆಶಯ, ಉದ್ದೇಶಗಳನ್ನು ಪಾಲಿಸುತ್ತೇವೆ” ಎಂದಿದ್ದಾರೆ. “ಭಾರತ ಸಂವಿಧಾನದ ಪಾಕೆಟ್‌ ಎಡಿಷನ್‌ನ ಪ್ರತಿಯು ನೀಲಿ ಬಣ್ಣದ ಕವರ್‌ ಹೊಂದಿದೆ” ಎಂದು ಕೂಡ ಕೆಲ ಜಾಲತಾಣಿಗರು ಹಿಮಂತ ಬಿಸ್ವಾ ಶರ್ಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Himanta Biswa Sarma: ಬಿಜೆಪಿಗೆ ಏಕೆ 400 ಸೀಟುಗಳು ಬೇಕೇಬೇಕು? ಹಿಮಂತ ಬಿಸ್ವ ಶರ್ಮಾ ಉತ್ತರ ಹೀಗಿದೆ!

Exit mobile version