ಬೆಂಗಳೂರು: ರಾಷ್ಟ್ರೀಯ ಭಾಷೆ ಕುರಿತ ವಿವಾದದಲ್ಲಿ ಇದೀಗ ರಾಜ್ಯದ ರಾಜಕಾರಣಿಗಳೂ ಪ್ರವೇಶಿಸಿದ್ದು, ಈಗಲೇ ಮುಕ್ತಾಯವಾಗುವ ಸಾಧ್ಯತೆ ಕಾಣುತ್ತಿಲ್ಲ.
ಕಿಚ್ಚ ಸುದೀಪ್ ಅವರು ಸಂದರ್ಶನವೊಂದರಲ್ಲಿ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದರು. ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಬಾಲಿವುಡ್ ನಟ ಅಜಯ್ ದೇವಗನ್, ಹಿಂದಿಯಲ್ಲೇಕೆ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಬಿಡುಗಡೆ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದರು.
ಹೆಚ್ಚಿನ ಓದಿಗಾಗಿ | ನಾವೆಲ್ಲರೂ ಭಾರತೀಯರೇ ಅಲ್ವಾ ಸರ್ !: ಹಿಂದಿಗೇಕೆ ಡಬ್ ಮಾಡುತ್ತೀರ ಎಂದ ಅಜಯ್ ದೇವಗನ್‌ಗೆ ಕಿಚ್ಚ ಉತ್ತರ
ನಂತರ ಇಬ್ಬರೂ ನಟರು ಈ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದರು. ಆದರೆ ಇದೀಗ ಕರ್ನಾಟಕ ಸೇರಿ ಎಲ್ಲೆಡೆ ಅನೇಕ ರಾಜಕಾರಣಿಗಳು ಈ ಕುರಿತು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಗುರುವಾರ ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಹಿಂದಿ ಹಿಂದೆಹಾಗೂ ಮುಂದೆಯೂ ನಮ್ಮ ರಾಷ್ಟ್ರೀಯ ಭಾಷೆಯಲ್ಲ. ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಪ್ರತಿಯೊಂದು ಭಾಷೆಯೂ ಅದರ ಜನರು ಹೆಮ್ಮೆ ಪಡಲು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ನಾನೂ ಹೆಮ್ಮೆಪಡುತ್ತೇನೆ. ನಾನು ಒಬ್ಬ ಕನ್ನಡಿಗʼ ಎಂದು ಟ್ವೀಟ್ ಮಾಡಿದ್ದರು.
ಶುಕ್ರವಾರ ಈ ಕುರಿತು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ ಬಿಜೆಪಿ ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ. ಈ ಸ್ವಾರ್ಥ ರಾಜಕಾರಣಕ್ಕೆ ಸ್ವಾಭಿಮಾನಿ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ. ಭಾಷೆ, ಪ್ರದೇಶಗಳ ನಮ್ಮ ನೀತಿ-ನಿಲುವು “ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ… ಎನ್ನುವ ಕುವೆಂಪು ಅವರ ಕವಿ ನುಡಿಯಿಂದ ಪ್ರೇರಿತವಾದುದು. ಕನ್ನಡ ಭಾಷೆ ನಮಗೆ ರಾಜಕಾರಣದ ಆಯುಧ ಅಲ್ಲ, ಇದು ನಮ್ಮ ಜೀವದ ಉಸಿರು. ಇಂಗ್ಲೀಷ್, ಹಿಂದಿ ಎಲ್ಲ ಭಾಷೆಗಳ ಬಗ್ಗೆ ನಮಗೆ ಗೌರವ ಇದೆ, ಇವೆಲ್ಲವೂ ಬೇಕು. ಈ ಭಾಷೆಗಳ ಮೂಲಕ ಹರಿದು ಬರುವ ಜ್ಞಾನದ ಅಮೃತವೂ ಬೇಕು. ಆದರೆ ಕನ್ನಡಕ್ಕೆ ಮೊದಲ ಆದ್ಯತೆ, ಮಾತೃಭಾಷೆಗೆ ಮೊದಲ ಪೂಜೆ.
ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಪ್ರತಿಯೊಂದು ರಾಜ್ಯಭಾಷೆಯೂ ನಮ್ಮ ರಾಷ್ಟ್ರಭಾಷೆ, ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನವೂ ಅಂಗೀಕರಿಸಿದೆ. ಸಂವಿಧಾನವನ್ನೇ ವಿರೋಧಿಸುವ ದೇಶದ್ರೋಹಿಗಳಿಗೆ ಈ ಸಾಮಾನ್ಯ ಜ್ಞಾನದ ಅರಿವಿರಲಿ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಭಾಷಾವಾರು ರಾಜ್ಯಗಳನ್ನು ರಚಿಸಿತು, ಆದ್ದರಿಂದ ಯಾವುದೇ ಭಾಷೆ ಮತ್ತೊಂದು ಭಾಷೆಗೆ ಪ್ರಾಬಲ್ಯ ನೀಡುವುದಿಲ್ಲ ಎಂದು ಹೇಳಿದರು. “ಭಾರತದಲ್ಲಿ ಸರಿಸುಮಾರು 19,500 ಮಾತೃಭಾಷೆಗಳಿವೆ. ಭಾರತದೆಡೆಗಿನ ಪ್ರೀತಿ ಪ್ರತಿಯೊಂದು ಭಾಷೆಯಲ್ಲಿಯೂ ಏಕರೀತಿಯಲ್ಲಿ ವ್ಯಕ್ತವಾಗುತ್ತದೆ. ಯಾವುದೇ ಭಾಷೆಯು ಮತ್ತೊಂದರ ಮೇಲೆ ಪ್ರಾಬಲ್ಯ ಸಾಧಿಸದಂತೆ ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ಹೆಮ್ಮೆಯ ಕನ್ನಡಿಗನಾಗಿ ಮತ್ತು ಕಾಂಗ್ರೆಸ್ಸಿಗನಾಗಿ ನೆನಪಿಸಬಯಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಏಳು ಟ್ವೀಟ್‌ಗಳ ಮೂಲಕ ತಮ್ಮ ಆಕ್ರೋಶ ಹಾಗೂ ಭಾವನೆಯನ್ನು ಹೊರಹಾಕಿದ್ದಾರೆ. “ಚಿತ್ರನಟ ಕಿಚ್ಚ ಸುದೀಪ್ ಅವರು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅಜಯ್ ದೇವಗನ್ ಅತಿರೇಕದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ. ದೇಶ ಭಾಷೆಗಳಲ್ಲಿ ಹಿಂದಿಯೂ ಒಂದಷ್ಟೇ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿಯಂತೆ ಅದೂ ಒಂದು ಭಾಷೆ ಮಾತ್ರ. ಭಾರತ ಬಹು ಭಾಷೆಗಳ ತೋಟ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಗಳ ಬೀಡು. ಇದನ್ನು ಕದಡುವ ಪ್ರಯತ್ನ ಬೇಡ. ಒಂದೇ ಪಕ್ಷ, ಒಂದೇ ತೆರಿಗೆ, ಒಂದೇ ಭಾಷೆ, ಒಂದೇ ಸರಕಾರ ಎನ್ನುವ ಸರ್ವಾಧಿಕಾರಿ ಮನಃಸ್ಥಿತಿಯ ಬಿಜೆಪಿ ಮತ್ತು ಅದರ ಹಿಂದಿ ರಾಷ್ಟ್ರೀಯವಾದದ ಮುಖವಾಣಿ ರೀತಿಯಲ್ಲಿ ದೇವಗನ್ ಬಡಬಡಿಸಿದ್ದಾರೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಹಿಂದಿ ಕಲಿಯುವುದರಲ್ಲಿ ತಪ್ಪಿಲ್ಲ
ರಾಜ್ಯ ಉನ್ನತ ಶಿಕ್ಷಣ ಮತ್ತು ಐಟಿಬಿಟಿ ಸಚಿವಡಾ. ಸಿ.ಎನ್. ಅಶ್ವತ್ಥನಾರಾಯಣ, ಏಕಕಾಲದಲ್ಲಿ ಹಿಂದಿ ಮತ್ತು ಕನ್ನಡವನ್ನು ಕಲಿಯುವುದು ಅಗತ್ಯವಾಗಿದೆ. ಹಿಂದಿ ರಾಷ್ಟ್ರೀಯ ಮಟ್ಟದಲ್ಲಿ ಸಂವಹನ ಭಾಷೆಯಾಗಿದೆ. ಅದರೆ ಅವರು ನಮ್ಮದೇ ಭಾಷೆಯನ್ನು ಬಲಪಡಿಸಲು ಯಾವುದೇ ಭಾಷೆಯನ್ನು ದ್ವೇಷಿಸುವ ಅಗತ್ಯವಿಲ್ಲ. ಕನ್ನಡವನ್ನು ಬೆಳೆಸಲು ರಚನಾತ್ಮಕ ರೀತಿಯಲ್ಲಿ ನಾವು ಎಲ್ಲವನ್ನೂ ಮಾಡಬೇಕಾಗಿದೆ. ಆದರೆ ಇಂಗ್ಲಿಷ್ ಕಲಿಯಲು ನಾವು ಹೆಚ್ಚು ಒತ್ತು ನೀಡುತ್ತಿರುವಾಗ ಹಿಂದಿ ಕಲಿಯುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ಹಿಂದಿಯವರಿಗೆ ಹೊಟ್ಟೆಕಿಚ್ಚು ಎಂದ ಆರ್‌ಜಿವಿ
ರಾಷ್ಟ್ರೀಯ ಭಾಷೆ ಕುರಿತ ವಿವಾದದಲ್ಲಿ ದಕ್ಷಿಣ ಭಾರತದ ಇತರೆ ರಾಜ್ಯಗಳ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿಮಾ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಈ ಕುರಿತು ಟ್ವೀಟ್ ಮಾಡಿದ್ದಾರೆ. ಹಿಂದಿಗೆ ಡಬ್ ಆದ ಕನ್ನಡ ಹಾಗೂ ತೆಲುಗು ಸಿನಿಮಾಗಳು ಹಿಂದಿ ಸಿನಿಮಾಗಳನ್ನೂ ಮೀರಿ ಹಣ ಗಳಿಸುತ್ತಿವೆ. ಉತ್ತಮ ಚಲನಚಿತ್ರಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ಮುಖ್ಯವಾಗಿಸದೆ ಜನರು ಸ್ವೀಕರಿಸುತ್ತಿದ್ದಾರೆ. ಇದು ಬಾಲಿವುಡ್ ಚಿತ್ರಜಗತ್ತನ್ನು ಆಘಾತಕ್ಕೆ ಈಡು ಮಾಡಿದೆ. ಅದಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.