ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಂಹಿಣಿಯೊಂದಕ್ಕೆ ಸೀತೆ (Lioness Sita) ಎಂದು ಹೆಸರಿಟ್ಟಿರುವುದು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದ (West Bengal) ಸಿಲಿಗುರಿಯಲ್ಲಿರುವ ಸಫಾರಿ ಪಾರ್ಕ್‌ನಲ್ಲಿ ಸಿಂಹಿಣಿಗೆ ಸೀತೆ (Lioness Sita) ಎಂದು ಹೆಸರಿಟ್ಟಿದ್ದು, ಇದನ್ನು ಪ್ರಶ್ನಿಸಿ ವಿಶ್ವ ಹಿಂದು ಪರಿಷತ್ (VHP) ಕೋಲ್ಕೊತಾ ಹೈಕೋರ್ಟ್‌ಗೆ (Calcutta High Court) ಅರ್ಜಿ ಸಲ್ಲಿಸಿದೆ. ಕೋಲ್ಕೊತಾ ಹೈಕೋರ್ಟ್ ಮಂಗಳವಾರ (ಫೆಬ್ರವರಿ 20) ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.
ಸಫಾರಿ ಪಾರ್ಕ್‌ನಲ್ಲಿರುವ ಗಂಡು ಸಿಂಹಕ್ಕೆ ಅಕ್ಬರ್ ಎಂದು, ಸಿಂಹಿಣಿಗೆ ಸೀತೆ ಎಂದು ಹೆಸರಿಟ್ಟಿರುವ ಕಾರಣ ವಿಎಚ್‌ಪಿ ಕೋರ್ಟ್ ಮೊರೆ ಹೋಗಿದೆ. ಎರಡೂ ಸಿಂಹಗಳು ಜತೆಯಾಗಿರುವ ಕಾರಣ ಹಾಗೂ ಒಂದು ಸಿಂಹಕ್ಕೆ ಅಕ್ಬರ್ ಎಂದು, ಸಿಂಹಿಣಿಗೆ ಸೀತೆ ಎಂದು ಹೆಸರಟ್ಟಿರುವುದು ಹಿಂದು ಸಂಘಟನೆಗಳನ್ನು ಕೆರಳಿಸಿದೆ. ನ್ಯಾಯಮೂರ್ತಿ ಸೌಗಾತ ಭಟ್ಟಾಚಾರ್ಯ ನೇತೃತ್ವದ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.
VHP Moves Calcutta High Court Over Lioness Named 'Sita' Being Housed With Lion Named 'Akbar' At Siliguri Safari Parkhttps://t.co/03fw2OZqyc
— Live Law (@LiveLawIndia) February 17, 2024
“ಪಶ್ಚಿಮ ಬಂಗಾಳದ ಅರಣ್ಯ ಇಲಾಖೆ ಅಧಿಕಾರಿಗಳು ಎರಡೂ ಸಿಂಹಗಳಿಗೆ ಹೆಸರಿಟ್ಟಿದ್ದಾರೆ. ಎರಡೂ ಸಿಂಹಗಳು ಒಟ್ಟಿಗೆ ವಾಸಿಸುತ್ತವೆ. ಒಂದು ಸಿಂಹಕ್ಕೆ ಅಕ್ಬರ್ ಎಂದು, ಸಿಂಹಿಣಿಗೆ ಸೀತೆ ಎಂದು ಹೆಸರಿಡುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕೂಡಲೇ ಸಿಂಹಿಣಿಯ ಹೆಸರನ್ನು ಬದಲಾಯಿಸಬೇಕು ಎಂಬುದಾಗಿ ನಿರ್ದೇಶನ ನೀಡಬೇಕು” ಎಂದು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಿಎಚ್‌ಪಿ ಮನವಿ ಮಾಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವುದೇನು?
ಒಟ್ಟಿಗೇ ವಾಸಿಸುವ ಸಿಂಹ ಹಾಗೂ ಸಿಂಹಿಣಿಗೆ ಹೆಸರಿಟ್ಟಿರುವ ಆರೋಪವನ್ನು ಪಶ್ಚಿಮ ಬಂಗಾಳ ಅರಣ್ಯ ಇಲಾಖೆ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಫೆಬ್ರವರಿ 12ರಂದು ಎರಡೂ ಸಿಂಹಗಳನ್ನು ತ್ರಿಪುರದ ಸೆಪಾಹಿಜಾಲ ಜೂಲಾಜಿಕಲ್ ಪಾರ್ಕ್‌ನಿಂದ ತರಿಸಲಾಗಿದೆ. ಇದಕ್ಕೂ ಮೊದಲೇ ಎರಡೂ ಸಿಂಹಗಳಿಗೆ ನಾಮಕರಣ ಮಾಡಲಾಗಿತ್ತು. ನಾವು ಅವುಗಳಿಗೆ ಹೆಸರಿಟ್ಟಿಲ್ಲ ಎಂಬುದಾಗಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳಿಗೆ ನಿರ್ಬಂಧ: ಹಿಂದು ವಿರೋಧಿ ನಿಲುವು?
ಮೊಘಲ್ ದೊರೆಯಾದ ಅಕ್ಬರ್ ಹೆಸರನ್ನು ಗಂಡು ಸಿಂಹಕ್ಕೆ ಇಟ್ಟಿರುವುದು ಹಿಂದು ಸಂಘಟನೆಯ ಆಕ್ಷೇಪಕ್ಕೆ ಕಾರಣವಾಗಿದೆ. ಶ್ರೀರಾಮಚಂದ್ರನ ಪತ್ನಿ ಸೀತೆಯನ್ನು ಆರಾಧಿಸುವವರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ, ಒಂದು ಸಿಂಹಕ್ಕೆ ಮುಸ್ಲಿಂ ಅರಸನ ಹೆಸರಿಟ್ಟು, ಮತ್ತೊಂದಕ್ಕೆ ಸೀತೆ ಎಂದು ಹೆಸರಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ