Site icon Vistara News

Mohan Bhagwat: ದಕ್ಷಿಣದಲ್ಲಿ ಕ್ರೈಸ್ತ ಮಿಷನರಿಗಳಿಗಿಂತ ಹಿಂದು ಗುರುಗಳ ಕೊಡುಗೆ ಹೆಚ್ಚು: ಮೋಹನ್‌ ಭಾಗವತ್

Hindu spiritual community in South does much more than missionaries: Says Mohan Bhagwat

Hindu spiritual community in South does much more than missionaries: Says Mohan Bhagwat

ಜೈಪುರ: ದಕ್ಷಿಣ ಭಾರತದಲ್ಲಿ ಕ್ರೈಸ್ತ ಮಿಷನರಿಗಳಿಗಿಂತ ಹಿಂದು ಧಾರ್ಮಿಕ ಗುರುಗಳ ಸಮಾಜ ಸೇವೆ ಅಪಾರವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಹೇಳಿದರು. ರಾಜಸ್ಥಾನದ ಜೈಪುರ ಬಳಿಯ ಜಮ್‌ದೋಲಿಯಲ್ಲಿ ಆರ್‌ಎಸ್‌ಎಸ್‌ ಅಂಗಸಂಸ್ಥೆ ಕೇಶವ ವಿದ್ಯಾಪೀಠ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು ಧಾರ್ಮಿಕ ಗುರುಗಳ ಸೇವೆಯನ್ನು ಪ್ರಸ್ತಾಪಿಸಿದರು.

“ದೇಶದಲ್ಲಿರುವ ಬುದ್ಧಿಜೀವಿಗಳು ಎಲ್ಲಿಯೇ ಮಾತನಾಡಲಿ, ಸಮಾಜಕ್ಕೆ ಕ್ರೈಸ್ತ ಮಿಷನರಿಗಳು ನೀಡಿದ ಕೊಡುಗೆಯನ್ನು ಮಾತ್ರ ಸ್ಮರಿಸುತ್ತಾರೆ. ಕ್ರೈಸ್ತ ಮಿಷನರಿಗಳು ಜಗತ್ತಿನಾದ್ಯಂತ ಶಾಲೆಗಳು, ಆಸ್ಪತ್ರೆಗಳು ಸೇರಿ ಹಲವು ಸಂಸ್ಥೆಗಳನ್ನು ಮುನ್ನಡೆಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ದಕ್ಷಿಣ ಭಾರತದಲ್ಲಿ ಕನ್ನಡ, ಮಲಯಾಳಂ, ತೆಲುಗು, ತಮಿಳು ಮಾತನಾಡುವ ಆಚಾರ್ಯರು, ಸನ್ಯಾಸಿಗಳು, ಮುನಿಗಳು ಮಿಷನರಿಗಳಿಗಿಂತ ಹಲವು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ” ಎಂದರು.

ಇದು ಸ್ಪರ್ಧೆಯ ವಿಷಯ ಅಲ್ಲ

“ನಾನೇನು ಹಿಂದು ಧಾರ್ಮಿಕ ಗುರುಗಳು ಹಾಗೂ ಕ್ರೈಸ್ತ ಮಿಷನರಿಗಳ ಸೇವೆಯ ಸ್ಪರ್ಧೆ ಬಗ್ಗೆ ಮಾತನಾಡುತ್ತಿಲ್ಲ. ಅವರಿಗಿಂತ ಇವರು ಹೆಚ್ಚು, ಇವರಿಗಿಂತ ಅವರು ಕಡಿಮೆ ಎಂಬ ಅರ್ಥದಲ್ಲಿ ಹೇಳುತ್ತಿಲ್ಲ. ಯಾವುದೇ ಕಾರಣಕ್ಕೂ ಸೇವೆಯನ್ನು ಅಳೆಯಬಾರದು. ಸೇವೆ ಸೇವೆಯೇ, ಸೇವೆಯು ಎಂದಿಗೂ ಸ್ಪರ್ಧೆಯ ವಿಷಯವಾಗುವುದಿಲ್ಲ. ಸೇವೆಯು ಮನುಷ್ಯರ ಮಾನವೀಯತೆಯ ಅಭಿವ್ಯಕ್ತಿ” ಎಂದು ಹೇಳಿದರು.

“ನಾವೆಲ್ಲರೂ ಸಮಾಜದ ಭಾಗವಾಗಿದ್ದೇವೆ. ನಾವೆಲ್ಲ ಒಗ್ಗೂಡಿ ಒಂದು ಸಮಾಜವಾಗಿದೆ. ನಾವು ಒಂದಾಗದಿದ್ದರೆ, ಸಮಾಜ ಎಂಬ ಕಲ್ಪನೆಯೇ ಅಪೂರ್ಣವಾಗುತ್ತದೆ. ಆದರೆ, ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿದ್ದು, ಇದರ ಅಗತ್ಯವೇ ಇಲ್ಲ. ಇಂತಹ ಪರಿಸ್ಥಿತಿ ಎದುರಾಗಿರುವುದು ದುರದೃಷ್ಟಕರ. ನಮಗೆ ಇಂತಹ ಅಸಮಾನತೆ ಎಂಬ ಕಲ್ಪನೆಯೇ ಬೇಕಾಗಿಲ್ಲ” ಎಂದು ತಿಳಿಸಿದರು.

ಸೇವೆಯು ಮನುಷ್ಯನ ದೇಹಕ್ಕೆ ಹೋಲಿಸಿದ ಮೋಹನ್‌ ಭಾಗವತ್‌, “ನಮ್ಮ ದೇಹದ ಭಾಗವಾಗಿರುವ ಕಾಲಿಗೆ ನೋವಾದರೆ, ಉಳಿದ ಎಲ್ಲ ಅಂಗಗಳು ಕಾಲಿನ ಬೆಂಬಲಕ್ಕೆ ನಿಲ್ಲುತ್ತವೆ, ಕಾಲಿನ ಮೇಲೆಯೇ ಹೆಚ್ಚು ಗಮನ ಹರಿಸುತ್ತವೆ. ಹಾಗೆಯೇ, ಸಮಾಜದಲ್ಲಿ ದಮನಿತರ ಸೇವೆಗೆ ಎಲ್ಲರೂ ಒಗ್ಗೂಡಬೇಕು. ಅವರ ನೋವುಗಳಿಗೆ ಸ್ಪಂದಿಸಬೇಕು. ಇಂತಹ ಸೇವೆಯಿಂದ ಆರೋಗ್ಯಯುತ ಸಮಾಜದ ನಿರ್ಮಾಣ ಸಾಧ್ಯ” ಎಂದರು. ರಾಷ್ಟ್ರೀಯ ಸೇವಾ ಸಂಗಮ ಕಾರ್ಯಕ್ರಮವು ಮೂರು ದಿನ ನಡೆಯಲಿದ್ದು, ಶುಕ್ರವಾರ ಚಾಲನೆ ದೊರೆತಿದೆ.

ಇದನ್ನೂ ಓದಿ: Mohan Bhagwat: ಪಾಕ್ ಜನಕ್ಕೆ ನೆಮ್ಮದಿ ಇಲ್ಲ, ದೇಶ ವಿಭಜನೆ ಪ್ರಮಾದ ಎಂಬ ಭಾವನೆ ಇದೆ: ಮೋಹನ್‌ ಭಾಗವತ್‌

Exit mobile version