Site icon Vistara News

Canada Hindu Temple: ಕೆನಡಾದಲ್ಲಿ ಮತ್ತೊಂದು ಹಿಂದು ದೇಗುಲ ಮೇಲೆ ಖಲಿಸ್ತಾನಿಗಳ ದಾಳಿ; ಖಂಡಿಸಿದ ಹಿಂದುಗಳು

Hindu Temple Attack In Canada

ಒಟ್ಟಾವ: ಕೆನಡಾದಲ್ಲಿ ಹಿಂದುಗಳ ದೇವಾಲಯಗಳ ಮೇಲೆ ಖಲಿಸ್ತಾನಿ ಉಗ್ರರ ದಾಳಿ ಮುಂದುವರಿದಿದೆ. ಕೆನಡಾದ ಬ್ರಿಟಿಷ್‌ ಕೊಲಂಬಿಯಾದಲ್ಲಿರುವ ಹಿಂದು ದೇವಾಲಯದ ಮೇಲೆ ಶನಿವಾರ ರಾತ್ರಿ (ಆಗಸ್ಟ್‌ 12) ಖಲಿಸ್ತಾನಿ ಉಗ್ರರು (Khalistan Terrorists) ದಾಳಿ (Canada Hindu Temple) ಮಾಡಿ, ದೇವಾಲಯಕ್ಕೆ ಹಾನಿಗೊಳಿಸಿದ್ದಾರೆ. ಹಾಗೆಯೇ, ಭಾರತದ ಕಾನ್ಸುಲೇಟ್‌ ಅಧಿಕಾರಿಗಳ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಉದ್ಧಟತನ ಮೆರೆದಿದ್ದಾರೆ.

ಸರ‍್ರೆಯಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯದ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. “ಜೂನ್‌ 18ರಂದು ಕೆನಡಾದಲ್ಲಿ ಹತ್ಯೆಗೀಡಾದ ಖಲಿಸ್ತಾನಿಗಳ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ. ಇದರ ಕುರಿತು ಕೆನಡಾ ತನಿಖೆ ನಡೆಸುತ್ತದೆ” ಎಂಬ ಬರಹವುಳ್ಳ ಪೋಸ್ಟರ್‌ಅನ್ನು ದೇವಾಲಯದ ಗೇಟ್‌ಗೆ ಅಂಟಿಸಲಾಗಿದೆ.

ಖಲಿಸ್ತಾನಿ ಉಗ್ರರ ಕೃತ್ಯ

ಅಷ್ಟೇ ಅಲ್ಲ, ಕೆನಡಾದ ಒಟ್ಟಾವದಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಕಾನ್ಸುಲ್‌ ಜನರಲ್‌ ಆಗಿರುವ ಅಪೂರ್ವ ಶ್ರೀವಾಸ್ತವ, ಹೈಕಮಿಷನ್‌ ಸಂಜಯ್‌ ಕುಮಾರ್‌ ವರ್ಮಾ ಹಾಗೂ ಕಾನ್ಸುಲ್‌ ಜನರಲ್‌ ಮನೀಶ್‌ ಅವರ ಫೋಟೊಗಳನ್ನು ಕೂಡ ಅಂಟಿಸಲಾಗಿದ್ದು, ವಾಂಟೆಡ್‌ ಎಂದು ಬರೆದಿದ್ದಾರೆ. ದೇವಾಲಯದ ಆಡಳಿತ ಮಂಡಳಿಯು ಉಗ್ರರ ಕೃತ್ಯವನ್ನು ಖಂಡಿಸಿದೆ. ಕೆನಡಾ, ಬ್ರಿಟನ್‌ ಸೇರಿ ಹಲವೆಡೆ ಇತ್ತೀಚೆಗೆ ಖಲಿಸ್ತಾನಿ ನಾಯಕರ ಹತ್ಯೆಯಾಗಿದೆ. ಭಾರತದ ಪಂಜಾಬ್‌ನಲ್ಲೂ ಖಲಿಸ್ತಾನಿ ನಾಯಕರ ಬಂಧನವಾಗಿದೆ. ಇದಕ್ಕೆ ಸೇಡು ತೀರಿಸಿಕೊಳ್ಳಲು ಕೆನಡಾದಲ್ಲಿ ಖಲಿಸ್ತಾನಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Hindu Temples In India: ಭಾರತದಲ್ಲಿ ಎಷ್ಟಿವೆ ಹಿಂದು ದೇವಾಲಯಗಳು? ಅತೀ ಕಡಿಮೆ ದೇವಸ್ಥಾನ ಇರುವುದು ಯಾವ ರಾಜ್ಯದಲ್ಲಿ?

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಪ್ರಮುಖ ಹಿಂದು ದೇವಾಲಯವನ್ನು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೆಲ ತಿಂಗಳ ಹಿಂದೆ ವಿರೂಪಗೊಳಿಸಿದ್ದರು. ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆಯುವ ಮೂಲಕ ಉದ್ಧಟತನದ ವರ್ತನೆ ತೋರಿದ್ದರು. ಕೃತ್ಯದ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಮತ್ತು ಇತರ ಖಲಿಸ್ತಾನಿ ಗುಂಪುಗಳ ಕೈವಾಡವಿರಬಹುದು ಎಂದು ಶಂಕಿಸಲಾಗಿತ್ತು. ಎಸ್‌ಎಫ್‌ಜೆ ಸಂಘಟನೆಯು ಮಂದಿರವನ್ನು ವಿರೂಪಗೊಳಿಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದೆ ಎಂದೂ ವರದಿಯಾಗಿದೆ. ಹಾಗೆಯೇ, ಇನ್ನೂ ಕೆಲ ತಿಂಗಳ ಹಿಂದೆ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದರು.

Exit mobile version