ಕುಲಗಾಂವ್: ಜಮ್ಮು-ಕಾಶ್ಮೀರದ ಸಾಂಬಾ ನಿವಾಸಿಯಾಗಿದ್ದ ಹಿಂದೂ ಶಿಕ್ಷಕಿಯೊಬ್ಬರು ಭಯೋತ್ಪಾದಕ ಗುಂಡೇಟಿಗೆ ಬಲಿ (Hindu Woman teacher shot dead)ಯಾಗಿದ್ದಾರೆ. ಇವರ ಹೆಸರು ರಜನಿ ಎಂದಾಗಿದ್ದು, ರಾಜ್ ಕುಮಾರ್ ಎಂಬುವರ ಪತ್ನಿ. ಕುಲಗಾಂವ್‌ನ ಗೋಪಾಲ್‌ಪೋರಾ ಏರಿಯಾದಲ್ಲಿರುವ ಹೈಸ್ಕೂಲ್‌ವೊಂದರ ಶಿಕ್ಷಕಿಯಾಗಿದ್ದರು. ಉಗ್ರರ ಗುಂಡಿನಿಂದ ತೀವ್ರವಾಗಿ ಗಾಯಗೊಂಡಿದ್ದ ರಜನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಿ ಅವರಲ್ಲಿ ಜೀವ ಹೋಗಿತ್ತು. ಈ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಹಾಗೇ, ದಾಳಿ ನಡೆಸಿದ ಉಗ್ರರನ್ನು ಶೀಘ್ರದಲ್ಲೇ ಹತ್ಯೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಹಿಂದು ಶಿಕ್ಷಕಿಯ ಹತ್ಯೆಯನ್ನು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಮುಗ್ಧ ನಾಗರಿಕರ ಮೇಲೆ ನಡೆಯುತ್ತಿರುವ ದಾಳಿ ಹೆಚ್ಚುತ್ತಿದೆ. ಉಗ್ರರ ಗುಂಡಿಗೆ ಜೀವ ತೆರುವವರ ಪಟ್ಟಿ ಬೆಳೆಯುತ್ತಲೇ ಇದೆ. ಪರಿಸ್ಥಿತಿ ಸರಿಯಾಗುವವರೆಗೆ ತಾವು ವಿಶ್ರಮಿಸುವುದಿಲ್ಲ ಎಂಬ ಸರ್ಕಾರದ ಭರವಸೆ ಸುಳ್ಳಾಗಿದೆ. ಕೇಂದ್ರ ಸರ್ಕಾರದ ಖಂಡನೆ, ಸಂತಾಪದ ಮಾತುಗಳೆಲ್ಲ ಬರೀ ಟೊಳ್ಳು ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಮೇಲಿನ ಉಗ್ರದಾಳಿ ಹೆಚ್ಚುತ್ತಿದೆ. ಕೆಲವೇ ದಿನಗಳ ಹಿಂದೆ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ (35 ) ಎಂಬುವರನ್ನು ಉಗ್ರರು ಹತ್ಯೆ ಮಾಡಿದ್ದರು. ಬುಡ್ಗಾಮ್ ಜಿಲ್ಲೆಯಲ್ಲಿರುವ ಚಡೂರಾದಲ್ಲಿ ಸರ್ಕಾರಿ ಕಚೇರಿಯಲ್ಲಿ ಕಂದಾಯ ವಿಭಾಗದ ಉದ್ಯೋಗಿಯಾಗಿದ್ದ ರಾಹುಲ್ ಭಟ್‌ರನ್ನು ಅವರ ಕಚೇರಿಯಲ್ಲೇ ಲಷ್ಕರ್ ಇ ತೊಯ್ಬಾ ಸಂಘಟನೆ ಉಗ್ರರು ಹತ್ಯೆ ಮಾಡಿದ್ದರು. ಏಪ್ರಿಲ್‌ನಲ್ಲಿ ಶಂಕಿತ ಉಗ್ರನೊಬ್ಬ ದಕ್ಷಿಣ ಕಾಶ್ಮೀರದ ಶೋಪಿಯಾನ್‌ದಲ್ಲಿ ಕಾಶ್ಮೀರಿ ಪಂಡಿತ್ ಕುಟುಂಬಕ್ಕೆ ಸೇರಿದ ಬಾಲ ಕೃಷ್ಣ ಎಂಬುವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಬರೀ ಅಲ್ಪಸಂಖ್ಯಾತರ ಮೇಲೆ ಎಂದಲ್ಲ, ಜಮ್ಮು-ಕಾಶ್ಮೀರದಲ್ಲಿ ಒಟ್ಟಾರೆ ನಾಗರಿಕರ ಮೇಲಿನ ಉಗ್ರದಾಳಿ ಮಿತಿಮೀರಿದೆ. ಇದನ್ನು ಖಂಡಿಸಿ ವ್ಯಾಪಕ ಪ್ರತಿಭಟನೆಗಳೂ ನಡೆಯುತ್ತಿವೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್; ಪಾಕಿಸ್ತಾನದ ಮೂವರು ಉಗ್ರರ ಹತ್ಯೆ