Site icon Vistara News

Horlicks Label: ಹಾರ್ಲಿಕ್ಸ್‌ ಇನ್ನು ಹೆಲ್ತ್‌ ಡ್ರಿಂಕ್ಸ್‌ ಅಲ್ಲ ಎಂದ ಹಿಂದುಸ್ತಾನ್‌ ಯುನಿಲಿವರ್;‌ ಕಾರಣ ಏನು?

Horlicks Label

Hindustan Unilever drops 'health' label from Horlicks, calls its functional nutritional drink

ನವದೆಹಲಿ: ಭಾರತದಲ್ಲಿ ಹಾರ್ಲಿಕ್ಸ್‌ ಕುಡಿಯದವರೇ ಇರಲಿಕ್ಕಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರವರೆಗೆ ಕುಡಿಯುತ್ತಾರೆ. ಅದರಲ್ಲೂ, ಯಾರು ಬಾಲ್ಯದಲ್ಲಿ ಹಾರ್ಲಿಕ್ಸ್‌ ಕುಡಿದಿಲ್ಲವೋ, ಅಷ್ಟರಮಟ್ಟಿಗೆ ಅವರ ಬಾಲ್ಯ ‘ಸಪ್ಪೆ’ ಎಂದೇ ಹೇಳಲಾಗುತ್ತಿದೆ. ಇಂತಹ ನೆನಪುಗಳ ಹಿನ್ನೆಲೆ ಹೊಂದಿರುವ ಹಾರ್ಲಿಕ್ಸ್‌ ಬಾಟಲಿ ಮೇಲಿನ ಹೆಲ್ತ್‌ ಫುಡ್‌ ಡ್ರಿಂಕ್ಸ್‌ (Health Food Drinks) ಎಂಬ ಲೇಬಲ್‌ಅನ್ನು (Horlicks Label) ಹಿಂದುಸ್ತಾನ್‌ ಯುನಿಲಿವರ್‌ (HUL) ತೆಗೆದುಹಾಕಿದೆ. ಇತ್ತೀಚಿನ ನಿಯಮಗಳ ಬದಲಾವಣೆ ಭಾಗವಾಗಿ ಲೇಬಲ್‌ಅನ್ನು ತೆಗೆದುಹಾಕಿದೆ ಎಂದು ಹೇಳಲಾಗುತ್ತಿದೆ.

ಹಾರ್ಲಿಕ್ಸ್‌ ಬಾಟಲಿ ಮೇಲಿನ ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಲೇಬೆಲ್‌ ತೆಗೆದುಹಾಕಲಾಗಿದ್ದು, ಈಗ ಹಾರ್ಲಿಕ್ಸ್‌ ಸೇರಿ ಹಲವು ರೀತಿಯ ಪಾನೀಯಗಳನ್ನು ಕ್ರಿಯಾತ್ಮಕ ಪೌಷ್ಟಿಕ ಪಾನೀಯ (Functional Nutritional Drinks) ಎಂಬ ಹೊಸ ಕೆಟಗರಿಗೆ ಸೇರಿಸಲಾಗಿದೆ. ಪಾನೀಯಗಳನ್ನು ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಕೆಟಗರಿಯಿಂದ ತೆಗೆದು, ಕ್ರಿಯಾತ್ಮಕ ಪೌಷ್ಟಿಕ ಪಾನೀಯಗಳ ಪಟ್ಟಿಗೆ ಸೇರಿಸಬೇಕು. ವೆಬ್‌ಸೈಟ್‌ ಸೇರಿ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲೂ ಇದನ್ನೇ ನಮೂದಿಸಬೇಕು ಎಂಬುದಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹಿಂದುಸ್ತಾನ್‌ ಯುನಿಲಿವರ್‌ ಈ ಕ್ರಮ ತೆಗೆದುಕೊಂಡಿದೆ.

“ಸಚಿವಾಲಯದ ಸೂಚನೆಯಂತೆ ನಾವು ಹೆಲ್ತ್‌ ಫುಡ್‌ ಡ್ರಿಂಕ್ಸ್‌ ಕೆಟಗರಿಯನ್ನು ಕ್ರಿಯಾತ್ಮಕ ಪೌಷ್ಟಿಕ ಪಾನೀಯ ಎಂಬುದಾಗಿ ಬದಲಾಯಿಸಿದ್ದೇವೆ. ಈ ಹೆಸರಿನಿಂದಲೇ ಕರೆಯುವುದು ಸಮಂಜಸ ಎಂಬ ನಿರ್ಧಾರಕ್ಕೆ ಬರಲಾಗಿದೆ. ಹಾಗೆಯೇ, ಹೊಸ ಹೆಸರು ಪಾರ್ದರ್ಶಕವಾಗಿಯೂ ಇದೆ. ಹಾಗಾಗಿ, ಹೊಸ ಹೆಸರನ್ನು ಇಡಲಾಗಿದೆ” ಎಂದು ಹಿಂದುಸ್ತಾನ್‌ ಯುನಿಲಿವರ್‌ನ ಚೀಫ್‌ ಫೈನಾನ್ಶಿಯಲ್‌ ಆಫೀಸರ್‌ ರಿತೇಶ್‌ ತಿವಾರಿ ಮಾಹಿತಿ ನೀಡಿದ್ದಾರೆ. ಇದರಿಂದ ದಾರಿತಪ್ಪಿಸುವ ಜಾಹೀರಾತುಗಳ ತಡೆಯಾಗುವುದರ ಜತೆಗೆ ಗ್ರಾಹಕರಿಗೂ ಗೊಂದಲ ಇರುವುದಿಲ್ಲ ಎಂಬುದು ಸಚಿವಾಲಯದ ಚಿಂತನೆಯಾಗಿದೆ ಎಂದು ತಿಳಿದುಬಂದಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಕಾಯ್ದೆ ಅಡಿಯಲ್ಲಿ ಹೆಲ್ತ್‌ ಡ್ರಿಂಕ್ಸ್‌ ಎಂಬ ಪದಕ್ಕೆ ಸರಿಯಾದ ವ್ಯಾಖ್ಯಾನ ಸಿಗದ ಕಾರಣ ಹೊಸ ಹೆಸರು ಸೂಚಿಸಲಾಗಿದೆ. ಇದೇ ಕಾರಣಕ್ಕಾಗಿ ಇತ್ತೀಚೆಗೆ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು (FSSAI) ಇತ್ತೀಚೆಗೆ ಎಲ್ಲ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಿಗೆ ಹೆಲ್ತ್‌ ಡ್ರಿಂಕ್ಸ್‌ ಅಥವಾ ಎನರ್ಜಿ ಡ್ರಿಂಕ್ಸ್‌ ಎಂಬ ಕೆಟಗರಿಯನ್ನು ತೆಗೆದುಹಾಕಬೇಕು ಎಂದು ಸೂಚಿಸಿತ್ತು. ಡೇರಿ, ಸಿರೀಲ್‌ ಅಥವಾ ಮಾಲ್ಟ್‌ ಆಧಾರಿತ ಪಾನೀಯಗಳ ಮೇಲಿನ ಲೇಬೆಲ್‌ ತೆಗೆದುಹಾಕಲು ಸೂಚಿಸಿತ್ತು. ಅದರಂತೆ, ಕೆಟಗರಿಯನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ

Exit mobile version