Site icon Vistara News

Hit And Run Case: ಹಿಟ್‌ ಆ್ಯಂಡ್‌ ರನ್‌ ಕೇಸ್‌; ಶಿವಸೇನಾ ಉಪ ನಾಯಕ ಸ್ಥಾನದಿಂದ ರಾಜೇಶ್ ಶಾ ಔಟ್‌

Hit And Run Case

Hit And Run Case

ಮುಂಬೈ: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಹಿಟ್‌ ಆ್ಯಂಡ್‌ ರನ್‌ (Hit And Run Case) ಕೇಸ್‌ ಭಾರೀ ಚರ್ಚೆಯಾಗುತ್ತಿದೆ. ಭಾನುವಾರ (ಜುಲೈ 7) ಬೆಳಗ್ಗೆ ಪ್ರದೀಪ್‌ ಎನ್ನುವವರು ಪತ್ನಿ ಕಾವೇರಿ ನಖ್ವಾ ಜತೆ ವರ್ಲಿಯಿಂದ ಕೋಳಿವಾಡಕ್ಕೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬಿಎಂಡಬ್ಲ್ಯು ಕಾರು ಓಡಿಸಿಕೊಂಡು ಬಂದ ಶಿವಸೇನೆ ನಾಯಕ ರಾಜೇಶ್‌ ಶಾ (Rajesh Shah) ಅವರ ಪುತ್ರ ಮಿಹಿರ್‌ ಶಾ (Mihir Shah) ಹಿಂದಿನಿಂದ ಡಿಕ್ಕಿ ಹೊಡೆದಿದ್ದ. ಇದರಿಂದ ಕಾವೇರಿ ಮೃತಪಟ್ಟಿದ್ದರು. ಘಟನೆ ವೇಳೆ ಮಿಹಿರ್‌ ಶಾ ಕುಡಿದಿದ್ದ ಎನ್ನಲಾಗಿದ್ದ, ಬಳಿಕ ತಲೆ ಮರೆಸಿಕೊಂಡಿದ್ದ. ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ (Eknath Shinde) ಅವರು ಶಿವಸೇನೆಯ ಉಪ ನಾಯಕ ಸ್ಥಾನದಿಂದ ರಾಜೇಶ್‌ ಶಾ ಅವರನ್ನು ಬುಧವಾರ ವಜಾಗೊಳಿಸಿದ್ದಾರೆ.

ಪೊಲೀಸ್‌ ವಶದಲ್ಲಿ ಮಿಹಿರ್‌ ಶಾ

ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಮಿಹಿರ್‌ ಶಾ ಎರಡು ದಿನಗಳ ಬಳಿಕ ಅಂದರೆ ಮಂಗಳವಾರ ವಿರಾರ್‌ನಲ್ಲಿ ಸಿಕ್ಕಿ ಬಿದ್ದಿದ್ದ. ಸದ್ಯ ಆತನನ್ನು ಮುಂಬೈ ಮೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ಪತ್ತೆ ಹಚ್ಚಲು ಪೊಲೀಸರು 14 ತಂಡ ಹಗಲಿರುಳು ಶ್ರಮಿಸಿತ್ತು. ಅಪಘಾತದ ವೇಳೆ ಕಾರಿನಲ್ಲಿದ್ದ ರಾಜೇಶ್‌ ಶಾ ಮತ್ತು ಕಾರಿನ ಚಾಲಕ ರಾಜಋಷಿ ಸಿಂಗ್ ಬಿದಾವತ್‌ನನ್ನೂ ಪೊಲೀಸರು ಬಂಧಿಸಿದ್ದರು. ಬಳಿಕ ರಾಜೇಶ್‌ ಶಾಗೆ ಜಾಮೀನು ಮಂಜೂರಾಗಿತ್ತು.

ಆರೋಪಿ ತಮ್ಮ ನಾಯಕನ ಮಗನಾಗಿರುವುದರಿಂದ ಶಿವಸೇನೆ ಏನೂ ಮಾಡುವುದಿಲ್ಲ ಎಂದು ಸಂತ್ರಸ್ತೆಯ ಪತಿ ಪ್ರದೀಪ್ ನಖ್ವಾ ಆರೋಪಿಸಿದ್ದರು. ವರ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ಮೊದಲ ದಿನದಿಂದಲೇ ಪ್ರಾರಂಭವಾಗಿವೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಮತ್ತು ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದರು. “ಆರೋಪಿಗಳನ್ನು ರಕ್ಷಿಸಲು ಸರ್ಕಾರವು ಪ್ರಯತ್ನಗಳನ್ನು ಮಾಡುತ್ತಿದೆ. ಇದು ಸಾಮಾನ್ಯ ಹಿಟ್‌ ಆ್ಯಂಡ್‌ ರನ್‌ ಅಲ್ಲ, ಕೆಲವು ದಿನಗಳ ಹಿಂದೆ ಪುಣೆಯಲ್ಲಿ ನಡೆದ ಘಟನೆಯಂತೆಯೇ ಇದೆ” ಎಂದು ಹೇಳಿದ್ದರು.

ಆರೋಪಿ ರಾಜೇಶ್ ಶಾ ಕ್ರಿಮಿನಲ್ ದಾಖಲೆಯನ್ನು ಪೊಲೀಸರು ಪರಿಶೀಲಿಸಬೇಕು ಎಂದು ಸಂಜಯ್ ರಾವುತ್ ಆಗ್ರಹಿಸಿದ್ದರು. ರಾಜೇಶ್ ಶಾಗೂ ಭೂಗತ ಪಾತಕಿ ಗ್ಯಾಂಗ್‌ಗೂ ಸಂಬಂಧವಿದೆ ಎಂದು ಹೇಳಿರುವ ಅವರು ಶಾ ಮುಖ್ಯಮಂತ್ರಿಗೆ ಹೇಗೆ ವಿಶೇಷ ವ್ಯಕ್ತಿಯಾದರು? ಎಂದು ಪ್ರಶ್ನಿಸಿದ್ದರು. ಸದ್ಯ ಶಿವಸೇನೆ ಕ್ರಮ ಕೈಗೊಂಡಿದ್ದೂ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

ಪ್ರಕರಣದ ಹಿನ್ನೆಲೆ

ಜುಲೈ 7ರಂದು ಕಾವೇರಿ ನಖ್ವಾ ಮತ್ತು ಪ್ರದೀಕ್‌ ನಖ್ವಾ ದಂಪತಿ ಹೋಗುತ್ತಿದ್ದ ಬೈಕ್‌ಗೆ ಮಿಹಿರ್‌ ಶಾ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದಿತ್ತು. ಬಳಿಕ ಆತ ಪರಾರಿಯಾಗಿದ್ದ. ಬೆಳಿಗ್ಗೆ 5:30ರ ಸಮಯದಲ್ಲಿ ದಂಪತಿ ಸಾಸಾನ್‌ ಡಾಕ್‌ ಮಾರುಕಟ್ಟೆಯಿಂದ ಮೀನು ಖರೀದಿಸಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಈ ದಂಪತಿ ಪ್ರದೀಕ್‌ ನಖ್ವಾ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದಾರೆ. ಕಾರು ಡಿಕ್ಕಿಯಗುತ್ತಿದ್ದಂತೆ ರಸ್ತೆಗೆ ಬಿದ್ದಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಕಾವೇರಿ ಮತ್ತು ಪ್ರದೀಪ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾವೇರಿ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ: Mumbai Hit And Run: ಮುಂಬೈನಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ಮಹಿಳೆ ಬಲಿ; ಶಿವಸೇನೆ ನಾಯಕನ ಬಂಧನ!

ಪೊಲೀಸರ ಪ್ರಕಾರ ಮಿಹಿರ್‌ ಶನಿವಾರ ರಾತ್ರಿ ಜೂಹೂ ಪ್ರದೇಶದಲ್ಲಿರುವ ಬಾರ್‌ನಲ್ಲಿ ಕಂಠಪೂರ್ತಿ ಕುಡಿದಿದ್ದ. ಮನೆಗೆ ಹಿಂದಿರುಗುವ ವೇಳೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗುವಂತೆ ಡ್ರೈವರ್‌ಗೆ ಹೇಳಿದ್ದಾನೆ. ವರ್ಲಿಗೆ ತಲುಪುತ್ತಿದ್ದಂತೆ ತಾನು ಕಾರು ಚಲಾಯಿಸುವುದಕ್ಕೆ ಮುಂದಾಗಿದ್ದಾನೆ. ಆಗ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಮಿಹಿರ್, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದ.

Exit mobile version