Site icon Vistara News

Amit Shah: ನಿಯಂತ್ರಣ ಕಳೆದುಕೊಂಡ ಅಮಿತ್‌ ಶಾ ಇದ್ದ ಹೆಲಿಕಾಪ್ಟರ್;‌ ಸ್ವಲ್ಪದರಲ್ಲೇ ಪಾರಾದ ವಿಡಿಯೊ ಇಲ್ಲಿದೆ

Amit Shah

Home Minister Amit Shah's Narrow Escape As Chopper Briefly Loses Control In Bihar

ಪಟನಾ: ಬಿಹಾರದ ಬೆಗುಸರಾಯ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರಿದ್ದ ಹೆಲಿಕಾಪ್ಟರ್‌ ನಿಯಂತ್ರಣ ಕಳೆದುಕೊಂಡಿದ್ದು, ಅವರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ. ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರು ಬಿಹಾರದಲ್ಲಿ ರ‍್ಯಾಲಿ ನಡೆಸಿ, ಬೆಗುಸರಾಯ್‌ನಿಂದ ತೆರಳುವ ವೇಳೆ ಹೆಲಿಕಾಪ್ಟರ್‌ ನಿಯಂತ್ರಣ ಕಳೆದುಕೊಂಡಿದೆ. ಅಮಿತ್‌ ಶಾ ಅವರಿದ್ದ ಹೆಲಿಕಾಪ್ಟರ್‌ ಇನ್ನೇನು ಟೇಕ್ಆಫ್‌ ಆಗಬೇಕು ಎನ್ನುವಷ್ಟರಲ್ಲಿಯೇ ಅದು ನಿಯಂತ್ರಣ ಕಳೆದುಕೊಡಿದೆ ಎಂದು ತಿಳಿದುಬಂದಿದೆ.

ಅಮಿತ್‌ ಶಾ ಅವರಿದ್ದ ಹೆಲಿಕಾಪ್ಟರ್‌ ಮೊದಲು ಟೇಕ್‌ಆಫ್‌ ಆಗಿದೆ. ಭೂಮಿಯಿಂದ ಕೆಲವೇ ಅಡಿ ಮೇಲೆ ಹೋಗಿ, ಬಲಕ್ಕೆ ತಿರುಗುತ್ತಲೇ ನಿಯಂತ್ರಣ ಕಳೆದುಕೊಂಡಿದೆ. ಹೆಲಿಕಾಪ್ಟರ್‌ ಮೆಲ್ಲಗೆ ಅಲುಗಾಡಿದ ದೃಶ್ಯಗಳು ಕೂಡ ವಿಡಿಯೊದಲ್ಲಿ ಸೆರೆಯಾಗಿವೆ. ಇನ್ನೇನು ಹೆಲಿಕಾಪ್ಟರ್‌ ನಿಯಂತ್ರಣ ಕಳೆದುಕೊಂಡಿತು ಎನ್ನುವಷ್ಟರಲ್ಲೇ ಅದು ಸರಿಯಾದ ದಿಕ್ಕಿಗೆ ಹಾರಾಟ ಆರಂಭಿಸಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜನ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಅಮಿತ್‌ ಶಾ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.

ಸರ್ಕಾರ ಹೇಳುವುದೇನು?

ಅಮಿತ್‌ ಶಾ ಅವರಿದ್ದ ಹೆಲಿಕಾಪ್ಟರ್‌ ನಿಯಂತ್ರಣ ತಪ್ಪಿರುವ ಕುರಿತ ವಿಡಿಯೊ ವೈರಲ್‌ ಆಗುತ್ತಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. “ಹೆಲಿಕಾಪ್ಟರ್‌ ಸುರಕ್ಷಿತವಾಗಿಯೇ ಹಾರಾಟ ನಡೆಸಿದೆ. ಯಾವುದೇ ತಾಂತ್ರಿಕ ದೋಷ ಕಾಣಿಸಿಕೊಂಡಿಲ್ಲ” ಎಂಬುದಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಆದರೂ, ಹೆಲಿಕಾಪ್ಟರ್‌ ಸುಗಮವಾಗಿ ಹಾರಾಟ ಆರಂಭಿಸದ ದೃಶ್ಯವು ಸೆರೆಯಾದ ಕಾರಣ ಜನ ಆತಂಕ ವ್ಯಕ್ತಪಡಿಸಿದ್ದರು.

ಬಿಹಾರದಲ್ಲಿ ಬಿಜೆಪಿ, ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹಾಗೂ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ (ರಾಮ್‌ ವಿಲಾಸ್‌ ಪಾಸ್ವಾನ್)‌ ಮೈತ್ರಿ ಮಾಡಿಕೊಂಡಿವೆ. ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಬಿಜೆಪಿ 17, ಜೆಡಿಯು 16, ಎಲ್‌ಜೆಪಿ 5, ಎನ್‌ಡಿಎ ಮೈತ್ರಿಕೂಟದ ಹಿಂದುಸ್ತಾನಿ ಅವಾಮ್‌ ಮೋರ್ಚಾ ಹಾಗೂ ಆರ್‌ಎಲ್‌ಡಿ ತಲಾ 1 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿದಿವೆ. ಮೊದಲ ಹಾಗೂ ಎರಡನೇ ಹಂತದಲ್ಲಿ 9 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಉಳಿದ 31 ಕ್ಷೇತ್ರಗಳ ಮತದಾನ ಬಾಕಿ ಇದೆ. ಹಾಗಾಗಿ, ನರೇಂದ್ರ ಮೋದಿ, ಅಮಿತ್‌ ಶಾ ಸೇರಿ ಹಲವು ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಇದನ್ನೂ ಓದಿ: Revanth Reddy : ಅಮಿತ್​ ಶಾ ತಿರುಚಿದ ವಿಡಿಯೊ ಪ್ರಕರಣ; ತೆಲಂಗಾಣ ಸಿಎಂಗೆ ಡೆಲ್ಲಿ ಪೊಲೀಸರಿಂದ ಸಮನ್ಸ್​

Exit mobile version