ಹೊಸ ದಿಲ್ಲಿ: ಸಲಿಂಗ ವಿವಾಹದ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಹಿಳಾ ವಿಭಾಗ ಇನ್ನೊಂದು ಚರ್ಚಾಸ್ಪದ ವರದಿ ನೀಡಿದೆ. ಸಲಿಂಗಕಾಮ ಒಂದು ಅಸ್ವಸ್ಥತೆ; ಸಲಿಂಗ ಪ್ರೇಮಿಗಳ ವಿವಾಹಗಳನ್ನು (Same Sex Marriage) ಕಾನೂನುಬದ್ಧಗೊಳಿಸಿದರೆ ಈ ಕಾಯಿಲೆ ಮತ್ತಷ್ಟು ಹೆಚ್ಚುತ್ತದೆ ಎಂದು ಅದು ಹೇಳಿದೆ.
ಆರ್‌ಎಸ್‌ಎಸ್‌ನ ಮಹಿಳಾ ವಿಭಾಗವಾದ ರಾಷ್ಟ್ರ ಸೇವಿಕಾ ಸಮಿತಿ (RSS) ನಡೆಸಿರುವ ಸಮೀಕ್ಷೆಯ ಫಲಿತಾಂಶವಾಗಿ ಈ ವರದಿ ಹೊರಹೊಮ್ಮಿದೆ. ದೇಶದಾದ್ಯಂತ ಅಲೋಪಥಿಯಿಂದ ಆಯುರ್ವೇದದವರೆಗೆ ಎಂಟು ವಿಭಿನ್ನ ಚಿಕಿತ್ಸಾ ಮಾರ್ಗಗಳ 318 ವೈದ್ಯಕೀಯ ವೃತ್ತಿಪರರನ್ನು ಈ ಸಮೀಕ್ಷೆಗಾಗಿ ಮಾತನಾಡಿಸಲಾಗಿದ್ದು, ಫಲಿತಾಂಶದ ವರದಿಯನ್ನು ನೀಡಿದೆ. ಏಕಲಿಂಗೀಯ ಸಂಬಂಧಗಳು ಲೈಂಗಿಕ ರೋಗಗಳ ಹರಡುವಿಕೆಗೆ ಕಾರಣವಾಗಬಹುದು ಎಂದೂ ಸಮೀಕ್ಷೆ ಹೇಳಿದೆ.
“ಸುಮಾರು 70 ಪ್ರತಿಶತ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರು, ಸಲಿಂಗಕಾಮವು ಒಂದು ಅಸ್ವಸ್ಥತೆ ಎಂದು ಹೇಳಿದ್ದಾರೆ. ಅವರಲ್ಲಿ 83 ಪ್ರತಿಶತ ಜನರು ಇದರಿಂದ ಲೈಂಗಿಕ ಕಾಯಿಲೆಯ ಹರಡುವಿಕೆಯನ್ನು ದೃಢಪಡಿಸಿದ್ದಾರೆ. ಅಂತಹ ವಿವಾಹಗಳನ್ನು ಕಾನೂನುಬದ್ಧಗೊಳಿಸುವ ನಿರ್ಧಾರ ಅಪಾಯಕಾರಿ. ಇದರಿಂದ ರೋಗಿಗಳನ್ನು ಗುಣಪಡಿಸಿ ಸಹಜ ಸ್ಥಿತಿಗೆ ತರುವ ಬದಲು ಸಮಾಜದಲ್ಲಿ ಅಸ್ವಸ್ಥತೆಯನ್ನು ಉತ್ತೇಜಿಸುವಂತಾಗಲಿದೆ ಎಂದು ಸಮೀಕ್ಷೆ ದೃಢಪಡಿಸಿದೆʼʼ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿ ಸಂವರ್ಧಿನಿ ನ್ಯಾಸ್ ಹೇಳಿದ್ದಾರೆ.
ಸಲಿಂಗ ಪ್ರೇಮದಂತಹ ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸಲು ವೈದ್ಯಕೀಯಹ ಕೌನ್ಸೆಲಿಂಗ್ ಉತ್ತಮ ಆಯ್ಕೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಬೇಡಿಕೆಯ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾರ್ವಜನಿಕ ಸಮೀಕ್ಷೆ ಮಾಡಬೇಕು ಎಂದು ಸಮೀಕ್ಷೆ ಶಿಫಾರಸು ಮಾಡಿದೆ.
ಇದನ್ನೂ ಓದಿ: Same Sex Marriage: ಸಲಿಂಗಿಗಳ ಸಮಸ್ಯೆ ಪರಿಶೀಲನೆಗೆ ಸಮಿತಿ ರಚಿಸಲು ಕೇಂದ್ರ ಒಪ್ಪಿಗೆ; ಆಮದು ಮಾಡಿಕೊಂಡಿದ್ದಲ್ಲ ಎಂದ ಸಿಜೆಐ
ಹಲವಾರು ಧಾರ್ಮಿಕ ಸಂಸ್ಥೆಗಳು ಸಲಿಂಗ ವಿವಾಹವನ್ನು ಮಾನ್ಯ ಮಾಡುವುದನ್ನು ತೀವ್ರವಾಗಿ ವಿರೋಧಿಸಿವೆ. ಕೆಲವರು ಇದನ್ನು “ಮಾನವ ಅಸ್ತಿತ್ವಕ್ಕೆ ಹಾನಿಕಾರಕ” ಎಂದೂ ಕರೆದಿದ್ದಾರೆ. ಕಳೆದ ವಾರ, ಹಿಂದೂ ಧಾರ್ಮಿಕ ಸಂಘಟನೆ ʼಹಿಂದೂ ಧರ್ಮ ಆಚಾರ್ಯ ಸಭೆʼ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದು, ʼʼಇಂತಹ ಸಂಬಂಧಗಳು ಮಾನವ ಅಸ್ತಿತ್ವಕ್ಕೆ ಹಾನಿಕಾರಕ. ಈ ದೇಶ 146 ಕೋಟಿ ವಿಭಿನ್ನ ಸಂಸ್ಕೃತಿಯ ಜನರ ನೆಲೆಯಾಗಿದೆ. ಜತೆಗೆ ಸನಾತನ ಧರ್ಮ-ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರಾಚೀನ ಮಾನವ ಸಂವೇದನೆಗಳ ಪರಂಪರೆಯಾಗಿದೆ. ಇಲ್ಲಿ ಮದುವೆಯು ಅತ್ಯಂತ ಪವಿತ್ರವಾದ ಆಚರಣೆ. ಅದು ಕುಟುಂಬದ ಬೆಳವಣಿಗೆ, ಕೌಟುಂಬಿಕ ಮೌಲ್ಯಗಳ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ ಹೊರಲು ಪುರುಷರು ಮತ್ತು ಮಹಿಳೆಯರನ್ನು ಒಟ್ಟುಗೂಡಿಸುತ್ತದೆ” ಎಂದು ಹೇಳಿದೆ.
ʼʼಹಿಂದೂ ಜೀವನ ಪದ್ಧತಿಯು ಮದುವೆಯನ್ನು ʼಸಂಸ್ಕಾರ’ ಎಂದು ಪರಿಗಣಿಸುತ್ತದೆ. ಅದು ದೈಹಿಕ ಸಂತೋಷಕ್ಕಾಗಿ ಇರುವುದಲ್ಲ; ಸಾಮಾಜಿಕ ಒಳಿತಿಗಾಗಿ ಇದೆʼʼ ಎಂದು ಆರ್‌ಎಸ್‌ಎಸ್ ಈ ಮೊದಲು ಹೇಳಿತ್ತು.
ಇದನ್ನೂ ಓದಿ: Same Sex Marriage: ಸಲಿಂಗ ವಿವಾಹ ಕೇವಲ ನಗರ ಮೇಲ್ ಸ್ತರದ ದೃಷ್ಟಿಕೋನ ಎಂಬುದಕ್ಕೆ ಡೇಟಾಗಳಿಲ್ಲ; ಸುಪ್ರೀಂ