ನವದೆಹಲಿ: ಜೂನ್ 21ರಿಂದ 24ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 22ರಂದು ಅಮೆರಿಕ ಸಂಸತ್ ಉದ್ದೇಶಿಸಿ ಮಾತನಾಡಲಿದ್ದಾರೆ. ಶ್ವೇತಭವನದ ಸೌತ್‌ಲಾನ್‌ನಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇನ್ನು, ಅಮೆರಿಕದ ಆಹ್ವಾನವನ್ನು ಸ್ವೀಕರಿಸಿದ ಮೋದಿ, “ನಿಮ್ಮ ಆಮಂತ್ರಣವನ್ನು ಸ್ವೀಕರಿಸುವುದು ಗೌರವದ ಸಂಗತಿ” ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರಿಗೆ ನೀಡಿರುವ ಆಮಂತ್ರಣದ ಫೋಟೊವನ್ನು ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನನ್ನು ಆಹ್ವಾನಿಸಿದ ಮೆಕಾರ್ಥಿ ಸೇರಿ ಎಲ್ಲ ನಾಯಕರಿಗೆ ಧನ್ಯವಾದ. ಅಮೆರಿಕ ಸಂಸತ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮತ್ತೆ ಭಾಗವಹಿಸಲು, ಭಾಷಣ ಮಾಡಲು ನನಗೆ ಸಂತಸ ಎನಿಸುತ್ತದೆ. ಭಾರತ-ಅಮೆರಿಕ ಸಂಬಂಧ ವೃದ್ಧಿ, ಪ್ರಜಾಪ್ರಭುತ್ವ ಮೌಲ್ಯಗಳ ವಿಚಾರದಲ್ಲಿ ಎರಡೂ ದೇಶಗಳ ನಡುವಿನ ಬಾಂಧವ್ಯ, ಜಾಗತಿಕ ಶಾಂತಿ ಹಾಗೂ ಸಮೃದ್ಧಿ ಕುರಿತು ಎರಡೂ ದೇಶಗಳು ಹೊಂದಿರುವ ಸಂಬಂಧದ ಬಗ್ಗೆ ಹೆಮ್ಮೆ ಎನಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.
ಅಮೆರಿಕದ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನ ಉಭಯಪಕ್ಷೀಯ ನಾಯಕತ್ವದ ಪರವಾಗಿ ಜೂನ್ 22ರ ಗುರುವಾರ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿಯನ್ನು ಆಹ್ವಾನಿಸುವುದು ನಮ್ಮ ಗೌರವವಾಗಿದೆ ಎಂದು ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ, ಸೆನೆಟ್ ನಾಯಕ ಚಕ್ ಶುಮರ್, ಸೆನೆಟ್ ರಿಪಬ್ಲಿಕನ್ ನಾಯಕ ಮಿಚ್ ಮೆಕ್‌ಕಾನ್ನೆಲ್ ಮತ್ತು ಹೌಸ್ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರೀಸ್ ಅವರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಆಹ್ವಾನಕ್ಕೆ ನರೇಂದ್ರ ಮೋದಿ ಪ್ರತಿಕ್ರಿಯೆ
Thank you @SpeakerMcCarthy, @LeaderMcConnell, @SenSchumer, and @RepJeffries for the gracious invitation. I am honored to accept and look forward to once again address a Joint Meeting of the Congress. We are proud of our Comprehensive Global Strategic Partnership with the US,… https://t.co/yeg6XaGUH2
— Narendra Modi (@narendramodi) June 6, 2023
ಭಾರತದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆ
ನರೇಂದ್ರ ಮೋದಿ ಅವರು ಜೂನ್ 22ರಂದು ಅಮೆರಿಕ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಮೆರಿಕ ಸಂಸತ್‌ನಲ್ಲಿ ಮೋದಿ ಮಾಡುತ್ತಿರುವ ಎರಡನೇ ಭಾಷಣ ಇದಾಗಿದೆ. ಆ ಮೂಲಕ ಮೋದಿ ಅವರು ಅಮೆರಿಕ ಸಂಸತ್‌ನಲ್ಲಿ ಭಾಷಣ ಮಾಡಿದ ಭಾರತದ ಎರಡನೇ ಪ್ರಧಾನಿ ಎನಿಸಲಿದ್ದಾರೆ. ಮೋದಿ ಭಾಷಣದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಜತೆ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ.
ನಿಮ್ಮ ಭಾಷಣದ ಸಮಯದಲ್ಲಿ, ಭಾರತದ ಭವಿಷ್ಯದ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಮತ್ತು ಉಭಯ ರಾಷ್ಟ್ರಗಳು ಎದುರಿಸುತ್ತಿರುವ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಲು ನಿಮಗೆ ಅವಕಾಶವಿದೆ. ನಿಮ್ಮ ಈ ಭಾಷಣವು ಅಮೆರಿಕ ಮತ್ತು ಭಾರತದ ನಡುವಿನ ನಿರಂತರ ಸ್ನೇಹವನ್ನು ಕಾಪಿಡಲಿದೆ ಎಂದು ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Narendra Modi: ವಿಶ್ವದ ಗೌರವಕ್ಕೆ ಮೋದಿ ಅರ್ಹ; ಸಾಗರೋತ್ತರ ಕಾಂಗ್ರೆಸ್ ನಾಯಕನಿಂದಲೇ ಬಂತು ಮೆಚ್ಚುಗೆ