Site icon Vistara News

ಭಾರತಕ್ಕೆ ಹೊರಟಿದ್ದ ಹಡಗು ಅಪಹರಿಸಿದ ಹೌತಿ ಬಂಡುಕೋರರು! ಶಿಪ್ ನಮ್ಮದಲ್ಲ ಎಂದ ಇಸ್ರೇಲ್

Houthi Rebels hijacked india bound ship in red sea

ನವದೆಹಲಿ: ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ (India bound Ship) ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು (Yemen Houthi Rebels) ಕೆಂಪು ಸಮುದ್ರದಲ್ಲಿ ಅಪಹರಿಸಿದ್ದಾರೆ(Ship Hijack). ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದಾರೆ. ಇಸ್ರೇಲ್‌ ಹಡಗನ್ನು ಹೈಜಾಕ್ ಮಾಡಿರುವುದಾಗಿ ಹೌತಿಗಳು ಹೇಳಿದ್ದರು. ಆದರೆ, ಕ್ಲೇಮ್ ನಿರಾಕರಿಸಿದ ಇಸ್ರೇಲ್ ಸರ್ಕಾರವು(Israel Government), ಅಪಹರಣಕ್ಕೊಳಗಾದ ಗ್ಯಾಲಕ್ಸಿ ಲೀಡರ್ (Galaxy Leader) ಹಡಗಿನಲ್ಲಿ ಯಾವುದೇ ಭಾರತೀಯರು(Indians) ಇಲ್ಲ ಎಂದು ಸ್ಪಷ್ಟಪಡಿಸಿದೆ.

ಅಪಹರಣವನ್ನು ದೃಢೀಕರಿಸಿದ ಇಸ್ರೇಲಿ ರಕ್ಷಣಾ ಪಡೆಗಳು ಎಕ್ಸ್‌ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದು, ದಕ್ಷಿಣ ಕೆಂಪು ಸಮುದ್ರದಲ್ಲಿ ಯೆಮೆನ್ ಬಳಿ ಹೌತಿಗಳು ಸರಕು ಹಡಗನ್ನು ಅಪಹರಿಸಿದ್ದಾರೆ. ಜಾಗತಿಕ ಪರಿಣಾಮದ ಅತ್ಯಂತ ಗಂಭೀರ ಘಟನೆಯಾಗಿದೆ. ಹಡಗು ಭಾರತಕ್ಕೆ ಟರ್ಕಿಯಿಂದ ಹೊರಟಿತ್ತು. ಇಸ್ರೇಲಿಗಳನ್ನು ಒಳಗೊಂಡಂತೆ ವಿವಿಧ ರಾಷ್ಟ್ರಗಳ ನಾಗರಿಕ ಸಿಬ್ಬಂದಿ ಇದ್ದಾರೆ. ಆದರೆ ಈ ಹಡುಗು ಇಸ್ರೇಲ್‌ಗೆ ಸೇರಿಲ್ಲ ಅಲ್ಲ ಎಂದು ಹೇಳಿದೆ.

ಹೌತಿಗಳು ಅಪಹರಿಸಿರುವ ಹಡಗು ಇಸ್ರೇಲ್‌ಗೆ ಸೇರಿದ್ದಲ್ಲ. ಬ್ರಿಟಿಷ್ ಕಂಪನಿಯ ಒಡೆತನದ ಮತ್ತು ಜಪಾನ್ ಸಂಸ್ಥೆಯ ನಿರ್ವಹಣೆ ಮಾಡುತ್ತಿರುವ ಹಡಗನ್ನು ಯೆಮೆನ್ ಹೌತಿ ಬಂಡುಕೋರರು ಇರಾನ್ ಮಾರ್ಗದರ್ಶನದಲ್ಲಿ ಅಪಹರಿಸಿದ್ದಾರೆ. ಇರಾನ್ ಮುಂದೆ ನಿಂತು ಅಂತಾರಾಷ್ಟ್ರೀಯ ಹಡಗು ಅಪರಹರಣಕ್ಕೆ ಸಹಕರಿಸಿರುವುದು ಖಂಡನಾರ್ಹವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾರ್ಯಾಲಯವು ಟ್ವೀಟ್ ಮಾಡಿದೆ.

ನಾವು ಇಸ್ರೇಲಿ ಸರಕು ಹಡಗನ್ನು ಯೆಮೆನ್ ಕರಾವಳಿಗೆ ತೆಗೆದುಕೊಂಡು ಹೋಗಿದ್ದೇವೆ ಎಂದು ಹೌತಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಹಡಗನ್ನು ಬಂದರು ನಗರವಾದ ಸಾಲಿಫ್‌ಗೆ ಕೊಂಡೊಯ್ಯಲಾಗಿದೆ ಎಂದು ಮೂಲವೊಂದು ತಿಳಿಸಿದೆ. ಉಕ್ರೇನ್, ಬಲ್ಗೇರಿಯಾ ಫಿಲಿಪ್ಪಿನ್ಸ್ ಮತ್ತು ಮೆಕ್ಸಿಕೋದ ದೇಶದ ಸುಮಾರು 25 ಸಿಬ್ಬಂದಿಗಳು ಹಡಗಿನಲ್ಲಿದ್ದಾರೆ. ಆದರೆ, ಇಸ್ರೇಲ್ ಮೂಲದ ಯಾವ ಸಿಬ್ಬಂದಿಯೂ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಕಾರ್ಯಾಲಯವು ಎಕ್ಸ್ ವೇದಿಕೆಯಲ್ಲಿ ತಿಳಿಸಿದೆ.

ಬಹಮಾನ್ ಧ್ವಜವುಳ್ಳ ಹಡಗನ್ನು ಬ್ರಿಟಿಷ್ ಕಂಪನಿಯ ಅಡಿಯಲ್ಲಿ ನೋಂದಾಯಿಸಲಾಗಿದೆ. ಭಾಗಶಃ ಇಸ್ರೇಲಿ ಉದ್ಯಮಿ ಅಬ್ರಹಾಂ ಉಂಗರ್ ಅವರ ಮಾಲೀಕತ್ವದಲ್ಲಿದೆ. ಅಪಹರಣದ ಸಮಯದಲ್ಲಿ ಹಡಗನ್ನು ಜಪಾನಿನ ಕಂಪನಿಗೆ ಗುತ್ತಿಗೆಗೆ ನೀಡಲಾಗಿತ್ತು ಎಂದು ಇಸ್ರೇಲ್‌ನ ಟೈಮ್ಸ್ ವರದಿ ಮಾಡಿದೆ.

ಇರಾನ್ ಬೆಂಬಲಿತ ಹೌತಿಗಳು ಇಸ್ರೇಲ್‌ಗೆ ಸೇರಿದ ಹಡಗುಗಳನ್ನು ಟಾರ್ಗೆಟ್ ಮಾಡುವ ಪಣ ತೊಟ್ಟಿದ್ದಾರೆ. ಯೆಮೆನ್ ಸಶಸ್ತ್ರ ಪಡೆಗಳು ಇಸ್ರೇಲಿ ಆಕ್ರಮಣವು ನಿಲ್ಲುವವರೆಗೂ, ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂದಿಗೆ ದಾಳಿಗಳನ್ನು ನಡೆಸುವುದನ್ನು ಮುಂದುವರಿಸಲಾಗುವುದು ಎಂಬ ಹೌತಿ ಮಿಲಿಟರಿ ಹೇಳಿಕೆಯನ್ನು ತಿಂಗಳ ಹಿಂದೆ ಬಂಡುಕೋರರ ಅಲ್-ಮಸಿರಾ ಟಿವಿಯಲ್ಲಿ ಪ್ರಸಾರವಾಗಿತ್ತು.

ಈ ಸುದ್ದಿಯನ್ನೂ ಓದಿ:Israel Palestine War: ಹಮಾಸ್ ರಾಜಕೀಯ ಮುಖ್ಯಸ್ಥನ ಮನೆ ಮೇಲೆ ಬಾಂಬ್ ದಾಳಿ!

Exit mobile version