ಭೋಪಾಲ್: ಸಿನಿಮಾಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿ ನಡೆಯುವ ಅಪರಾಧಗಳು, ಕೊಲೆಗಳು, ಪೊಲೀಸರು ಅವುಗಳನ್ನು ಭೇದಿಸುವುದು ಕೂಡ ಅಷ್ಟೇ ರೋಚಕವಾಗಿರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ (Madhya Pradesh) ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದು, ಆತನ ಮನೆಯ ವಾಷಿಂಗ್ ಮಷೀನ್‌ನಲ್ಲಿ (Washing Machine) ಸಿಕ್ಕ ಬೆಡ್‌ಶೀಟ್, ಹತ್ಯೆಗೀಡಾದ ಮಹಿಳೆಯ ಬಟ್ಟೆಗಳೇ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದೆ. ಹಾಗೆಯೇ, ಕೊಲೆಗಾರ ಸೃಷ್ಟಿಸಿದ ಕತೆಯೂ ಸಿನಿಮಾದಷ್ಟೇ ರೋಚಕವಾಗಿದೆ.
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಶಾಹ್‌ಪುರದಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (SDM) ಆಗಿರುವ ನಿಶಾ ನಪಿತ್ ಅವರನ್ನು ಪತಿ ಮನೀಶ್ ಶರ್ಮಾ ಭಾನುವಾರ (ಜನವರಿ 28) ಕೊಲೆ ಮಾಡಿದ್ದಾನೆ. ನಿಶಾ ನಪಿತ್ ಅವರ ಮುಖಕ್ಕೆ ತಲೆದಿಂಬಿನಿಂದ ಒತ್ತಿ ಹಿಡಿದು, ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಇದಾದ ಬಳಿಕ ಪತ್ನಿಯ ಬಟ್ಟೆ ಬದಲಾಯಿಸಿದ್ದಾನೆ. ನನ್ನ ಪತ್ನಿಯ ಮೂಗು ಹಾಗೂ ಬಾಯಿಯಿಂದ ರಕ್ತ ಬರುತ್ತಿದೆ ಎಂದು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ನಿಶಾ ನಪಿತ್ ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.
ಅಧಿಕಾರಿಯಾಗಿದ್ದ ನಿಶಾ ನಪಿತ್ ಅವರು ಮೃತಪಟ್ಟಿರುವ ಕುರಿತು ಪೊಲೀಸರು ತನಿಖೆ ನಡೆಸಿದಾಗ ಅಚ್ಚರಿಯ ಮಾಹಿತಿ ಲಭ್ಯವಾಗಿದೆ. ನಿಶಾ ನಪಿತ್ ಅವರ ಮನೆ ವಾಷಿಂಗ್ ಮಷೀನ್‌ನಲ್ಲಿ ರಕ್ತ ಸಿಕ್ತವಾದ ತಲೆದಿಂಬು, ಬೆಡ್‌ಶೀಟ್ ಹಾಗೂ ಬಟ್ಟೆಗಳು ಸಿಕ್ಕಿದ್ದು, ಮನೀಶ್ ಶರ್ಮಾನೇ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಸೋಮವಾರ (ಜನವರಿ 29) ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Attempt to murder: ಕುಡಿತಕ್ಕೆ ಕೊಡಲಿಲ್ಲ ಹಣ; ಪತ್ನಿ ತಲೆಗೆ ಕಲ್ಲು ಎತ್ತಿಹಾಕಿ ಕೋಮಾಗೆ ಕಳಿಸಿದ ಕುಡುಕ ಪತಿ
ಪತ್ನಿಯನ್ನು ಕೊಂದಿದ್ದು ಏಕೆ?
ಮೂಲಗಳ ಪ್ರಕಾರ, ಮನೀಶ್ ಶರ್ಮಾ ನಿರುದ್ಯೋಗಿಯಾಗಿದ್ದ. ದಿಂಡೋರಿ ಜಿಲ್ಲೆಯ ಶಾಹ್‌ಪುರಕ್ಕೆ ನಿಶಾ ನಪಿತ್ ಅವರನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನಿಯೋಜಿಸಲಾಗಿದೆ. ಆದರೆ, ನಿಶಾ ನಪಿತ್ ಅವರು ಅವರ ಸರ್ವಿಸ್ ಬುಕ್, ವಿಮೆ ಹಾಗೂ ಬ್ಯಾಂಕ್ ಅಕೌಂಟ್‌ನಲ್ಲಿ ಪತಿಯ ಹೆಸರನ್ನು ನಾಮಿನಿಯಾಗಿ ನೀಡಿರಲಿಲ್ಲ. ಇದರಿಂದಾಗಿ ದಂಪತಿ ಮಧ್ಯೆ ಜಗಳ ನಡೆದಿತ್ತು. ಇದೇ ವೇಳೆ ಕುಪಿತಗೊಂಡ ಮನೀಶ್ ಶರ್ಮಾ, ಪತ್ನಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ