ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ (Assembly Election Results 2023) ಪ್ರಕಟವಾಗಿದ್ದು, ತೆಲಂಗಾಣ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಭರಪೂರ ಉಚಿತ ಕೊಡುಗೆಗಳ ‘ಗ್ಯಾರಂಟಿ’ ನೀಡಿದ್ದರೂ ಜನ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಬಿಜೆಪಿ ಮೂರೂ ರಾಜ್ಯಗಳಲ್ಲಿ ಗೆಲುವು ಸಾಧಿಸಲು ನಾನಾ ಕಾರಣಗಳಿದ್ದರೂ, ಹೆಣ್ಣುಮಕ್ಕಳ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುವುದು ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಗೃಹಿಣಿಯರು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಮತ ನೀಡಿದ್ದು ಚುನಾವಣೆಯಲ್ಲಿ ಟರ್ನಿಂಗ್ ಪಾಯಿಂಟ್ ಆಗಿದೆ ಎಂದು ವಿಶ್ಲೇಷಿಸಲಾಗಿದೆ. ಹಾಗಾದರೆ, ಮೂರೂ ರಾಜ್ಯಗಳಲ್ಲಿ ಬಿಜೆಪಿಯು ಹೆಣ್ಣುಮಕ್ಕಳನ್ನು ಸೆಳೆದಿದ್ದು ಹೇಗೆ? ಯಾವ ಯೋಜನೆಗಳು ಸ್ತ್ರೀಯರ ಮತಗಳನ್ನು ವಾಲಿಸಿದವು ಎಂಬುದರ ಕಿರು ಮಾಹಿತಿ ಇಲ್ಲಿದೆ.
ಲಾಡ್ಲಿ ಬೆಹ್ನಾ ಯೋಜನೆ
ಮಧ್ಯಪ್ರದೇಶದಲ್ಲಿ ಬಡ ಹೆಣ್ಣುಮಕ್ಕಳಿಗೆ ಮಾಸಿಕ 1 ಸಾವಿರ ರೂ. ಸಹಾಯ ಧನ ನೀಡುವುದೇ ಲಾಡ್ಲಿ ಬೆಹನಾ ಯೋಜನೆಯಾಗಿದೆ. ಕಾಂಗ್ರೆಸ್ ಉಚಿತ ಕೊಡುಗೆಗಳ ಘೋಷಣೆಯನ್ನು ಮೊದಲೇ ಅರಿತಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು 2023ರ ಮಾರ್ಚ್‌ನಲ್ಲಿಯೇ ಲಾಡ್ಲಿ ಬೆಹನಾ ಯೋಜನೆಯನ್ನು ಜಾರಿಗೆ ತಂದರು. ಯೋಜನೆ ಜಾರಿಗೆ ತಂದು, ಬಡ ಹೆಣ್ಣುಮಕ್ಕಳ ಖಾತೆಗಳಿಗೆ ಮಾಸಿಕ 1 ಸಾವಿರ ರೂ. ಜಮೆ ಮಾಡಿಸಿದರು. ಆ ಮೂಲಕ ಸರ್ಕಾರವು ಮಹಿಳೆಯರ ಪರ ಇದೆ ಎಂಬ ಸಂದೇಶ ರವಾನಿಸಿದರು. ಅಲ್ಲದೆ, ಹೆಣ್ಣುಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.35ರಷ್ಟು ಮೀಸಲಾತಿ ಘೋಷಿಸಿದರು. 450 ರೂ.ಗೆ ಅಡುಗೆ ಅನಿಲ ಸಿಲಿಂಡರ್ ನೀಡಿದರು. ಇದು ಮಧ್ಯಪ್ರದೇಶದಲ್ಲಿ ಹೆಣ್ಣುಮಕ್ಕಳು ಬಜೆಪಿ ಪರ ವಾಲಲು ಸಾಧ್ಯವಾಯಿತು ಎಂದು ವಿಶ್ಲೇಷಿಸಲಾಗಿದೆ.
ರಾಜಸ್ಥಾನದಲ್ಲಿ ಕೈ ಹಿಡಿದ ಭರವಸೆ
ರಾಜಸ್ಥಾನದಲ್ಲಿ ಹೆಣ್ಣುಮಕ್ಕಳ ಸಮಸ್ಯೆಗಳನ್ನು, ಆ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದನ್ನು ಪ್ರಚಾರದ ಅಸ್ತ್ರವಾಗಿಸಿಕೊಂಡ ಬಿಜೆಪಿಯು, ಚುನಾವಣೆ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನೂ ನೀಡಿತು. ಇದು ಚುನಾವಣೆಯಲ್ಲಿ ಹೆಣ್ಣುಮಕ್ಕಳು ಬಿಜೆಪಿಗೆ ಮತ ಹಾಕಲು ಸಾಧ್ಯವಾಯಿತು. ಪ್ರಣಾಳಿಕೆಯಲ್ಲಿ ಬಿಜೆಪಿಯು, ಹೆಣ್ಣು ಮಕ್ಕಳಿಗಾಗಿ ಲಾಡೋ ಪ್ರೋತ್ಸಾಹ್ ಯೋಜನೆಯನ್ನು ಪರಿಚಯಿಸುವುದಾಗಿ ತಿಳಿಸಿತು. ಇದರ ಅಡಿಯಲ್ಲಿ ಮಧ್ಯಪ್ರದೇಶದ ಲಾಡ್ಲಿ ಲಕ್ಷ್ಮಿ ಯೋಜನೆಯಂತೆಯೇ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ 2 ಲಕ್ಷ ರೂ. ಉಳಿತಾಯ ಬಾಂಡ್ ನೀಡಲಾಗುವುದು ಎಂದು ಹೇಳಿತು.
ಇನ್ನು ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಸ್ವಾವಲಂಬಿ ಮಾಡುವುದಕ್ಕಾಗಿ ಬಿಜೆಪಿಯು ಸುಮಾರು 6 ಲಕ್ಷ ಮಹಿಳೆಯರಿಗೆ ಲಕಪತಿ ದೀದಿ ಸ್ಕೀಮ್‌ನಲ್ಲಿ ತರಬೇತಿ ಮತ್ತು ಆರ್ಥಿಕ ಬೆಂಬಲ ನೀಡುವುದಾಗಿ ಘೋಷಿಸಿತು. ಅಲ್ಲದೆ, ಉಜ್ವಲಾ ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಮೇಲೆ 450 ರೂ. ಸಬ್ಸಿಡಿ ನೀಡಲಾಗುವುದು. ಮಾತೃ ವಂದನಾ ಯೋಜನೆಯ ಮೊತ್ತವನ್ನು 5000 ರೂ.ನಿಂದ 8000 ರೂ.ವರೆಗೆ ಹೆಚ್ಚಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಬಿಜೆಪಿಗೆ ವರದಾನವಾಯಿತು. ಕಾಂಗ್ರೆಸ್ ಕೂಡ ಇಂತಹ ಉಚಿತ ಕೊಡುಗೆಗಳ ಭರವಸೆ ನೀಡಿದರೂ ಆಡಳಿತ ವಿರೋಧಿ ಅಲೆಯು ಆ ಪಕ್ಷಕ್ಕೆ ಮುಳುವಾಯಿತು.
ಛತ್ತೀಸ್‌ಗಢದಲ್ಲೂ ನಾರಿ ಶಕ್ತಿ ಬಲ
ಕರ್ನಾಟಕದಲ್ಲಿ ಹೆಣ್ಣುಮಕ್ಕಳಿಗೆ ಭರವಸೆ ನೀಡಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದನ್ನು ಮನಗಂಡಿದ್ದ ಬಿಜೆಪಿಯು ಛತ್ತೀಸ್‌ಗಢದಲ್ಲೂ ಮಹಿಳಾ ಕೇಂದ್ರಿತವಾಗಿಯೇ ಭರವಸೆಗಳನ್ನು ನೀಡಿತು. ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12 ಸಾವಿರ ರೂ. ಆರ್ಥಿಕ ನೆರವು, ಗ್ಯಾಸ್ ಸಬ್ಸಿಡಿ ಸೇರಿ ಹಲವು ಘೋಷಣೆ ಮಾಡಲಾಯಿತು. ಚುನಾವಣೆಯಲ್ಲಿ ಇವುಗಳ ಕುರಿತು ಭಾರಿ ಪ್ರಚಾರ ನಡೆಸಲಾಯಿತು. ಸಾಮಾಜಿಕ ಜಾಲತಾಣಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಇದು ಬಿಜೆಪಿಯು ಹೆಣ್ಣುಮಕ್ಕಳ ಮತಗಳನ್ನು ಪಡೆಯುವಲ್ಲಿ, ಆ ಮೂಲಕ ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು.
ಇದನ್ನೂ ಓದಿ: ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?
ಛತ್ತೀಸ್‌ಗಢದಲ್ಲಿ ಮೋದಿ ಸರ್ಕಾರ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ತೆಗೆದುಕೊಂಡ ಕ್ರಮಗಳು ಕೂಡ ಅವರ ಒಲವು ಗಳಿಸಲು ನೆರವಾಗಿವೆ. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ (ನ.15ರಂದು) ಪ್ರಧಾನಿ ಮೋದಿ, ʼವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳʼ (particularly vulnerable tribal groups – PVTG) ಅಭಿವೃದ್ಧಿಗಾಗಿ ನೂತನ ಕಾರ್ಯಕ್ರಮವೊಂದನ್ನು ಘೋಷಿಸಿದ್ದರು. ಈ ಯೋಜನೆಯು 24,000 ಕೋಟಿ ರೂ. ವೆಚ್ಚದಲ್ಲಿ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳವರಿಗೆ ತಲುಪುವಂಥ ರಸ್ತೆ, ಟೆಲಿಕಾಂ ಸಂಪರ್ಕ, ಶಿಕ್ಷಣ, ಆರೋಗಹ್ಯ ಸೇವೆ, ಪೌಷ್ಟಿಕತೆಯ ಮತ್ತಿತ ಸೌಲಭ್ಯಗಳನ್ನು ತಲುಪಿಸುವ ಕಾರ್ಯಕ್ರಮವಾಗಿದೆ. ಇದು ಕೂಡ ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ