Site icon Vistara News

ವಿಸ್ತಾರ Explainer | 22 ವರ್ಷದ ಬಳಿಕ ನಾಳೆ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ, ಹೇಗಿರಲಿದೆ ಪ್ರಕ್ರಿಯೆ?

Kharge Tharoor

ಕಾಂಗ್ರೆಸ್‌ ಅಧ್ಯಕ್ಷರ (Congress President) ಆಯ್ಕೆಗೆ ೨೨ ವರ್ಷದ ಬಳಿಕ ಚುನಾವಣೆ ನಡೆಯುತ್ತಿದೆ. ಸೋಮವಾರ (ಅ.೧೭) ಮತದಾನ ನಡೆಯಲಿದ್ದು, ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್‌ ಅವರು ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಹಾಗಾದರೆ, ೨೨ ವರ್ಷದ ಬಳಿಕ ನಡೆಯುತ್ತಿರುವ ಚುನಾವಣೆಯ ಪ್ರಕ್ರಿಯೆ ಹೇಗಿರಲಿದೆ? ಯಾರು ಮತ ಚಲಾಯಿಸಬಹುದು? ಮತ ಎಣಿಕೆ ಹೇಗೆ ನಡೆಯುತ್ತದೆ? ಎಷ್ಟು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂಬುದು ಸೇರಿ ಹಲವು ವಿಷಯಗಳ ಕುರಿತು (ವಿಸ್ತಾರ Explainer) ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮತ ಚಲಾಯಿಸಲು ಯಾರು ಅರ್ಹರು?

ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ), ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಸಿಸಿ) ಸೇರಿ ಪಕ್ಷದ ಹಲವು ನಾಯಕರು, ಗಣ್ಯರನ್ನು ಒಳಗೊಂಡ ಒಟ್ಟು ೯,೧೦೦ ಜನ (ಡೆಲಿಗೇಟ್ಸ್‌) ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ. ಕಾಂಗ್ರೆಸ್‌ ಶಾಸಕರು, ಸಂಸದರು, ಪದಾಧಿಕಾರಿಗಳು, ಕಾರ್ಯಕರ್ತರು, ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು, ಅಧ್ಯಕ್ಷರು ಸೇರಿ ನಿಯಮಿತವಾಗಿ ಆಯ್ಕೆ ಮಾಡಲಾದ ೯,೧೦೦ ಮಂದಿ ಮತ ಚಲಾಯಿಸುತ್ತಾರೆ. ದೆಹಲಿಯ ೨೪, ಅಕ್ಬರ್‌ ರೋಡ್‌ನಲ್ಲಿರುವ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಹಲವು ಗಣ್ಯರು ಮತದಾನ ಮಾಡಲಿದ್ದಾರೆ.

ಹೀಗೆ ನಡೆಯಲಿದೆ ಮತದಾನ

ಕಾಂಗ್ರೆಸ್‌ ಸಂವಿಧಾನದ ೧೮ನೇ ಕಲಂ ಪ್ರಕಾರ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಬ್ಯಾಲೆಟ್‌ ಪೇಪರ್‌ ಮಾದರಿಯಲ್ಲಿ ಮತದಾನ ನಡೆಯಲಿದ್ದು, ದೆಹಲಿಯಲ್ಲಿರುವ ಕೇಂದ್ರ ಕಚೇರಿ ಹಾಗೂ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರದೇಶ ಕಾಂಗ್ರೆಸ್‌ ಸಮಿತಿ ಕಚೇರಿಗಳಲ್ಲಿ ಮತದಾನಕ್ಕೆ ಅವಕಾಶ ಮಾಡಲಾಗುತ್ತದೆ. ಇದಕ್ಕಾಗಿ ರಹಸ್ಯ ಮತದಾನದ ವ್ಯವಸ್ಥೆ ಮಾಡಲಾಗಿದೆ. ‌ಮತದಾನಕ್ಕಾಗಿ ೩೬ ಪೋಲಿಂಗ್‌ ಸ್ಟೇಷನ್‌ಗಳನ್ನು ರಚಿಸಲಾಗಿದೆ. ಪಿಸಿಸಿ ಹಾಗೂ ಪ್ರದೇಶ ಕಾಂಗ್ರೆಸ್‌ ಕಚೇರಿಗಳಲ್ಲಿ ಒಟ್ಟು ೬೭ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೨೦೦ ಮತಗಳಿಗೆ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ.

ಅಕ್ಟೋಬರ್‌ ೧೯ರಂದು ಫಲಿತಾಂಶ

ಅಕ್ಟೋಬರ್‌ ೧೯ರಂದು ಮತಎಣಿಕೆ ನಡೆಯಲಿದ್ದು, ಇದೇ ದಿನ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಅತಿ ಹೆಚ್ಚು ಮತ ಪಡೆದವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ. ಅಕ್ಟೋಬರ್‌ ೧೭ ಅಥವಾ ೧೮ರಂದು ಚುನಾವಣೆ ಅಧಿಕಾರಿಗಳು ವಿಮಾನದಲ್ಲಿ ಬ್ಯಾಲೆಟ್‌ ಬಾಕ್ಸ್‌ಗಳನ್ನು ದೆಹಲಿಗೆ ತರಲಿದ್ದಾರೆ. ಬಿಗಿ ಭದ್ರತೆಯಲ್ಲಿಯೇ ಬ್ಯಾಲೆಟ್‌ ಬಾಕ್ಸ್‌ಗಳನ್ನು ಸೀಲ್‌ ಮಾಡಿ ದೆಹಲಿಗೆ ಕೊಂಡೊಯ್ಯಲಾಗುತ್ತದೆ. ಆದಾಗ್ಯೂ, ರಾಜ್ಯವಾರು ಚಲಾವಣೆಯಾದ ಮತಗಳನ್ನು ಬಹಿರಂಗಗೊಳಿಸುವುದಿಲ್ಲ. ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸ್ಟ್ರಾಂಗ್‌ ರೂಮ್‌ ರಚಿಸಲಾಗಿದ್ದು, ಇಲ್ಲಿಯೇ ಬ್ಯಾಲೆಟ್‌ ಬಾಕ್ಸ್‌ಗಳನ್ನು ಇಡಲಾಗುತ್ತದೆ.

ಮತ ಚಲಾಯಿಸುವರೇ ರಾಹುಲ್‌ ಗಾಂಧಿ?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೊ ಯಾತ್ರೆ ಕೈಗೊಳ್ಳುತ್ತಿರುವುದರಿಂದ ಅವರು ಮತ ಚಲಾಯಿಸುವರೇ ಎಂಬ ಪ್ರಶ್ನೆ ಮೂಡಿದೆ. ಹಾಗಾಗಿ, ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಸ್ಪಷ್ಟನೆ ನೀಡಿದ್ದು, ರಾಹುಲ್‌ ಮತ ಚಲಾಯಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. “ಕರ್ನಾಟಕದಲ್ಲಿ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೊ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಹಾಗಾಗಿ, ಹಲವರು ಮತದಾನದ ಕುರಿತು ಪ್ರಶ್ನೆ ಕೇಳುತ್ತಿದ್ದಾರೆ. ಆದರೆ, ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೊ ಯಾತ್ರೆ ಮಧ್ಯೆಯೇ, ಬಳ್ಳಾರಿಯ ಸಂಗನಕಲ್ಲುವಿನಲ್ಲಿ ೪೦ ಗಣ್ಯರ (ಮತ ಚಲಾಯಿಸುವ ಹಕ್ಕಿರುವ ಡೆಲಿಗೇಟ್ಸ್) ಜತೆ ತೆರಳಿ ಮತದಾನ ಮಾಡಲಿದ್ದಾರೆ” ಎಂದು ತಿಳಿಸಿದ್ದಾರೆ.

ಮೊದಲ ಬಾರಿಗೆ ಕ್ಯೂಆರ್‌ ಕೋಡ್‌ ಇರುವ ಐಡಿ ಕಾರ್ಡ್‌

ಕಾಂಗ್ರೆಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಹೊಂದಿರುವ ಎಲ್ಲ ಡೆಲಿಗೇಟ್ಸ್‌ಗೆ ಕ್ಯೂಆರ್‌ ಕೋಡ್‌ ಇರುವ ಮತದಾನದ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಐಡಿಗಳಲ್ಲಿ ಫೋಟೊ, ಹೆಸರು, ಎನ್ರಾಲ್‌ಮೆಂಟ್‌ ಸಂಖ್ಯೆ ಸೇರಿ ಹಲವು ಮಾಹಿತಿ ಇದೆ. ಪಾರದರ್ಶಕವಾಗಿ ಮತದಾನ ಪ್ರಕ್ರಿಯೆ ಕೈಗೊಳ್ಳಲು ಕ್ಯೂಆರ್‌ ಕೋಡ್‌ ಆಧಾರಿತ ಗುರುತಿನ ಚೀಟಿಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

೧೩೭ ವರ್ಷದಲ್ಲಿ ೬ನೇ ಬಾರಿ ಚುನಾವಣೆ

ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ೧೩೭ ವರ್ಷದ ಇತಿಹಾಸದಲ್ಲಿ ಆರನೇ ಬಾರಿ ಆಂತರಿಕ ಚುನಾವಣೆ ನಡೆಯುತ್ತಿದೆ. ಕಳೆದ ೫೦ ವರ್ಷದಲ್ಲಿ ಚುನಾವಣೆ ನಡೆಯುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ೧೯೯೭, ೨೦೦೦ನೇ ಇಸವಿಯಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿತ್ತು. ೨೦೦೦ನೇ ಇಸವಿಯಲ್ಲಿ ಜಿತಿನ್‌ ಪ್ರಸಾದ್‌ (ಈಗ ಉತ್ತರ ಪ್ರದೇಶದಲ್ಲಿ ಕ್ಯಾಬಿನೆಟ್‌ ದರ್ಜೆಯ ಸಚಿವ) ಅವರನ್ನು ಸೋಲಿಸುವ ಮೂಲಕ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಚುನಾವಣೆಯೇ ನಡೆದಿರಲಿಲ್ಲ.

ಸೋನಿಯಾ ಗಾಂಧಿ, ಸೀತಾರಾಮ ಕೇಸರಿ.

ಇದನ್ನೂ ಓದಿ | Congress President | ಖರ್ಗೆ ಸ್ಪರ್ಧೆ ಹಿಂದಿನ ಲೆಕ್ಕಾಚಾರ ಏನು? ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭ?

Exit mobile version