ಜಾಗತಿಕವಾಗಿ ಯುದ್ಧದ ಶೈಲಿಗಳು, ಆಕ್ರಮಣದ ಮಾದರಿಗಳು ಬದಲಾಗಿವೆ. ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಲಭ್ಯವಿರುವ ಹಾಗೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಕಾರಣ ಯಾವುದೇ ದೇಶದ ಸೇನೆಯಲ್ಲಿ ಬದಲಾವಣೆ, ಶತ್ರುಗಳ ಮೇಲೆ ನಿಗಾ ಇಡುವ ಮಾದರಿ ಮಾರ್ಪಾಡಾಗುವುದು ಅನಿವಾರ್ಯವಾಗಿದೆ. ಹೀಗೆ, ಆಧುನಿಕ ತಂತ್ರಜ್ಞಾನ, ವಿಭಿನ್ನ ಕೌಶಲಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತೀಯ ಸೇನೆಯೂ ಹಿಂದೆ ಬಿದ್ದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಈಗ ವೈರಿಗಳ ಡ್ರೋನ್‌ಗಳನ್ನು ಹೊಡೆದುರುಳಿಸಲು, ಗಡಿಯಲ್ಲಿ ಹೆಚ್ಚಿನ ನಿಗಾ ಇಡಲು ಗಿಡುಗಗಳನ್ನು ಬಳಸಿಕೊಳ್ಳಲು ಮುಂದಾಗಿದೆ.
ಉತ್ತರಾಖಂಡದ ಔಲಿಯಲ್ಲಿ ನಡೆದ ಭಾರತ-ಅಮೆರಿಕ ಜಂಟಿ ತರಬೇತಿ ಪ್ರದರ್ಶನ ‘ಯುದ್ಧ ಅಭ್ಯಾಸ’ದ ಸಮಯದಲ್ಲಿ ಭಾರತೀಯ ಸೇನೆಯು ಶತ್ರು ಡ್ರೋನ್‌ಗಳನ್ನು ಬೇಟೆಯಾಡಲು ಗಿಡುಗಗಳ ಬಳಕೆಯನ್ನು ಪ್ರದರ್ಶಿಸಿದೆ. ಆ ಮೂಲಕ ದೇಶದ ಸೇನೆಯಲ್ಲಿ ಗಿಡುಗಗಳನ್ನೂ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಹಾಗಾದರೆ, ವೈರಿಗಳ ದಮನಕ್ಕಾಗಿ ಗಿಡುಗಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ? ಅವುಗಳಿಗೆ ಹೇಗೆ ತರಬೇತಿ ನೀಡಲಾಗುತ್ತದೆ? ಗಿಡುಗಗಳು ಹೇಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತವೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಗಿಡುಗಗಳಿಗೆ ಹೇಗೆ ತರಬೇತಿ?
ಶತ್ರುಗಳ ಡ್ರೋನ್‌ಗಳನ್ನು ಪತ್ತೆಹಚ್ಚುವ, ನಿಗದಿತ ಗುರಿಯನ್ನು ಹೊಡೆದುರುಳಿಸುವ, ಡ್ರೋನ್‌ಗಳ ಮೇಲೆ ನಿಗಾ ಇಡುವುದನ್ನು ಗಿಡುಗಗಳಿಗೆ ತರಬೇತಿ ನೀಡಲಾಗುತ್ತದೆ. ಶ್ವಾನಗಳ ನೆರವಿನಿಂದ ಗಿಡುಗಗಳು ಡ್ರೋನ್‌ಗಳನ್ನು ಹೊಡೆದುರುಳಿಸುತ್ತವೆ. ಡ್ರೋನ್‌ಗಳ ಶಬ್ದವನ್ನು ಗ್ರಹಿಸುವ ಶ್ವಾನಗಳು ಗಿಡುಗಗಳಿಗೆ ಸೂಚನೆ ನೀಡುತ್ತವೆ. ಆಗ ಗುರಿಯನ್ನು ಆಧರಿಸಿ ಗಿಡುಗಗಳು ವೈರಿರಾಷ್ಟ್ರದ ಡ್ರೋನ್‌ಗಳನ್ನು ಹೊಡೆದುರುಳಿಸುತ್ತವೆ. ಈ ದಿಸೆಯಲ್ಲಿ ಶ್ವಾನಗಳು ಹಾಗೂ ಗಿಡುಗಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಶಬ್ದ ಗ್ರಹಿಸಿ, ನಿಗದಿತ ಗುರಿಯೆಡೆಗೆ ಸಾಗಿ, ಗುರಿಯನ್ನು ಹೊಡೆದುರುಳಿಸುವ ತರಬೇತಿಯನ್ನು ಗಿಡುಗಗಳಿಗೆ ನೀಡಲಾಗುತ್ತದೆ. ಇದರ ಅನ್ವಯ ಅವು ವೈರಿಗಳ ಡ್ರೋನ್‌ಗಳನ್ನು ನಾಶಪಡಿಸುತ್ತವೆ.
ಪ್ರಾಯೋಗಿಕ ಪರೀಕ್ಷೆ ಹೇಗಾಯಿತು?
ಉತ್ತರಾಖಂಡದಲ್ಲಿ ಗಿಡುಗಗಳ ಕಾರ್ಯನಿರ್ವಹಣೆ ಕುರಿತು ನಡೆಸಿದ ಪ್ರಾಯೋಗಿಕ ಪ್ರದರ್ಶನವು ಯಶಸ್ವಿಯಾಗಿದೆ. ಡ್ರೋನ್‌ಗಳನ್ನು ಹೊಡೆದುರುಳಿಸುವ ಸಂದರ್ಭವನ್ನು ಸೃಷ್ಟಿಸಿ, ಶ್ವಾನಗಳ ಸಹಾಯದಿಂದ ಗಿಡುಗಗಳು ನಿಗದಿತ ಗುರಿಯನ್ನು ಯಶಸ್ವಿಯಾಗಿ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಭಾರತ ಸೇನೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಸಲಾಗಿದ್ದು, ಮೊದಲ ಯತ್ನದಲ್ಲಿಯೇ ಯಶಸ್ವಿಯಾಗಿದೆ. ಇದರಿಂದ ಗಡಿಯಲ್ಲಿ ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಮಹತ್ವದ ಮುನ್ನಡೆ ಸಿಕ್ಕಂತಾಗಿದೆ.
ಸದ್ಯ ಎಲ್ಲಿ ಗಿಡುಗಗಳಿಗೆ ತರಬೇತಿ?
ಉತ್ತರ ಪ್ರದೇಶದ ಮೀರತ್‌ನಲ್ಲಿರುವ ರಿಮೌಂಟ್ ವೆಟರಿನರಿ ಕಾರ್ಪ್ಸ್ (RVC)ನಲ್ಲಿ ಗಿಡುಗಗಳು ಹಾಗೂ ಗರುಡಗಳಿಗೆ ಗೌಪ್ಯವಾಗಿ ತರಬೇತಿ ನೀಡಲಾಗುತ್ತಿದೆ. ಸದ್ಯ ಕ್ವಾಡ್‌ಕಾಪ್ಟರ್‌ಗಳನ್ನು ಹೊಡೆದುರುಳಿಸುವ ತರಬೇತಿ ನೀಡಲಾಗುತ್ತಿದ್ದು, ಇದರಲ್ಲಿ ಗಿಡುಗಗಳು ಯಶಸ್ವಿಯೂ ಆಗಿವೆ. ತರಬೇತಿ ವೇಳೆ ನೂರಾರು ಡ್ರೋನ್‌ಗಳನ್ನು ಗಿಡುಗಗಳು ಹೊಡೆದುರುಳಿಸಿದ್ದು, ಇದರಲ್ಲಿ ಗಿಡುಗಗಳಿಗೆ ಸಣ್ಣ ಗಾಯವೂ ಆಗಿಲ್ಲ ಎಂದು ತಿಳಿದುಬಂದಿದೆ. ಅಷ್ಟರಮಟ್ಟಿಗೆ, ಸೇನೆಯಲ್ಲಿ ಗಿಡುಗಗಳ ಉಪಯೋಗವು ಯಶಸ್ವಿಯಾದಂತಾಗಿದೆ.
ಭಾರತದಲ್ಲೇ ಮೊದಲಲ್ಲ?
ವೈರಿಗಳ ಡ್ರೋನ್‌ಗಳನ್ನು ಹೊಡೆದುರುಳಿಸಲು ಗಿಡುಗಗಳ ಬಳಕೆಯು ಭಾರತದಲ್ಲೇ ಮೊದಲಲ್ಲ. ನೆದರ್ಲೆಂಡ್ಸ್‌ನಲ್ಲಿ ಡಚ್ ಪೊಲೀಸರು ೨೦೧೬ರಿಂದಲೂ ಗಿಡುಗಗಳನ್ನು ಬಳಸುತ್ತಿದ್ದಾರೆ. ಆಗಸದಲ್ಲಿಯೇ ಮಾನವರಹಿತ ವೆಹಿಕಲ್‌ಗಳನ್ನು (ಡ್ರೋನ್) ಹೊಡೆದುರುಳಿಸುವ ರೀತಿ ತರಬೇತಿ ನೀಡಿ, ಗಿಡುಗಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಡ್ರೋನ್‌ಗಳನ್ನು ಗುರುತಿಸಲು ಮಷೀನ್‌ಗಳನ್ನು ಕಂಡು ಹಿಡಿಯಲಾಯಿತು. ಬಳಿಕ ಅವುಗಳನ್ನು ಹೊಡೆದುರುಳಿಸಲು ಗಿಡುಗಗಳನ್ನು ಬಳಸಿಕೊಳ್ಳಲಾಯಿತು ಎಂದು ವರದಿಗಳು ತಿಳಿಸಿವೆ.
ಭಾರತದ ಸೇನೆಗೆ ಅವಶ್ಯ ಏಕೆ?
ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರನ್ನು ಛೂಬಿಡುವ ಪಾಕಿಸ್ತಾನ, ಅವರಿಗೆ ಡ್ರೋನ್‌ಗಳ ಮೂಲಕವೇ ಶಸ್ತ್ರಾಸ್ತ್ರ ಪೂರೈಸುತ್ತಿದೆ. ಜಮ್ಮು-ಕಾಶ್ಮೀರ ಹಾಗೂ ಪಂಜಾಬ್ ಗಡಿಗಳಲ್ಲಿ ಶಸ್ತ್ರಾಸ್ತ್ರ, ಸ್ಫೋಟಕ ಸಾಧನ, ಡ್ರಗ್ಸ್ ಸೇರಿ ಹಲವು ವಸ್ತುಗಳನ್ನು ಡ್ರೋನ್‌ಗಳ ಮೂಲಕವೇ ಸರಬರಾಜು ಮಾಡುತ್ತಿದೆ. ಇದನ್ನು ನಿಗ್ರಹಿಸಲು ಗಿಡುಗಗಳು ನಿರ್ಣಾಯಕ ಪಾತ್ರ ನಿರ್ವಹಿಸಲಿವೆ. ಅಷ್ಟೇ ಏಕೆ, ವೈರಿರಾಷ್ಟ್ರದ ಗಡಿಗಳಲ್ಲಿ ಯಾವ ಕುತಂತ್ರ ನಡೆಯುತ್ತದೆ ಎಂಬುದನ್ನೂ ಗಿಡುಗಗಳ ಮೂಲಕ ನಿಗಾ ಇಡಬಹುದಾಗಿದೆ. ಗಿಡುಗಗಳಿಗೆ ವಿಡಿಯೊ ಕ್ಯಾಮೆರಾ ಅಳವಡಿಸಿದರೆ, ಅವು ನೆರೆರಾಷ್ಟ್ರದ ಗಡಿಗಳಿಗೆ ತೆರಳಿ, ಅಲ್ಲಿನ ಪರಿಸ್ಥಿತಿಯನ್ನು ರೆಕಾರ್ಡ್ ಮಾಡಿಕೊಂಡು ಬರಬಹುದಾಗಿದೆ. ಡ್ರೋನ್ ಸೇರಿ ಯಾವುದೇ ಉಪಕರಣವನ್ನು ಬೇರೆ ದೇಶದ ಗಡಿಯಾಚೆ ಕಳುಹಿಸಲು ರೇಡಾರ್ ಅಡ್ಡಿಯಾಗುತ್ತದೆ. ಆದರೆ, ಪಕ್ಷಿಗಳು ರೇಡಾರ್ ಕಣ್ಣು ತಪ್ಪಿಸಿ ಹಾರಾಟ ನಡೆಸಿ, ವಾಪಸ್ ಬರಬಹುದಾಗಿದೆ. ಇದರಿಂದಾಗಿ ಗಿಡುಗಗಳ ತರಬೇತಿ, ಅವುಗಳ ಬಳಕೆಯು ಭಾರತದ ಸೇನೆಗೆ ಅತ್ಯವಶ್ಯವಾಗಿದೆ.
ಇದನ್ನೂ ಓದಿ | Indian Army Kite | ಪಾಕ್ ಡ್ರೋನ್ ಬೇಟೆಯಾಡಲು ನಮ್ಮ ಸೇನೆಯ ‘ಗಿಡುಗ’ ಸಜ್ಜು!