Site icon Vistara News

ಈಗ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿಗೆ ರಾಜ್ಯದಲ್ಲಿ 23 ಸೀಟಂತೆ, ಕಾಂಗ್ರೆಸ್‌ಗೆ ನಾಲ್ಕು, ಉಳಿದದ್ದು ಜೆಡಿಎಸ್‌

BJP CONGRESS FLAGS

ನವ ದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅಂದರೆ ಮುಂದಿನ ಚುನಾವಣೆ ನಡೆಯಲಿರುವುದು ೨೦೨೪ರ ಏಪ್ರಿಲ್‌-ಮೇ ತಿಂಗಳಲ್ಲಿ. ಅದರ ನಡುವೆ ಕರ್ನಾಟಕವೂ ಸೇರಿದಂತೆ ಹಲವು ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಈ ನಡುವೆ, ಒಂದು ವೇಳೆ ಈಗಲೇ ಲೋಕಸಭೆಗೆ ಚುನಾವಣೆ ನಡೆದರೆ ಯಾರ ಬಲಾಬಲ ಹೇಗಿರಬಹುದು ಎನ್ನುವ ಬಗ್ಗೆ ಕುತೂಹಲಕಾರಿ ಸಮೀಕ್ಷೆಯೊಂದು ನಡೆದಿದೆ. ಈ ಸಮೀಕ್ಷೆ ನಡೆಸಿದ್ದು ಇಂಡಿಯಾ ಟೀವಿ ಚಾನೆಲ್‌. ದೇಶ್‌ ಕಿ ಆವಾಜ್‌ ಎನ್ನುವ ಹೆಸರಿನಲ್ಲಿ ಅದು ಸಮೀಕ್ಷೆ ಮಾಡಿದೆ. ಅದರ ಪ್ರಕಾರ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಮೂರನೇ ಬಾರಿ ಅಧಿಕಾರಕ್ಕೇರುವುದರಲ್ಲಿ ಯಾವ ಸಂಶಯವೂ ಇಲ್ಲ.

ಸಮೀಕ್ಷೆಯ ಪ್ರಕಾರ, ೫೪೩ ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿ ಕೂಟ ೩೬೨ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅಂದರೆ ಇದು ಕಳೆದ ೨೦೧೯ಕ್ಕಿಂತಲೂ ೧೩ ಹೆಚ್ಚು. ಇದರಲ್ಲಿ ಬಿಜೆಪಿ ಪಾಲು ೩೨೬ ಆಗಿರಲಿದೆ. ೨೦೧೯ರಲ್ಲಿ ಇದು ೩೦೩ ಆಗಿತ್ತು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಕಳೆದ ಬಾರಿ ೯೧ ಸ್ಥಾನಗಳಲ್ಲಿ ಗೆದ್ದಿದ್ದರೆ ಈ ಬಾರಿ ಈ ಸಂಖ್ಯೆ ೯೭ಕ್ಕೇರಲಿದೆ. ಇದರಲ್ಲಿ ಕಾಂಗ್ರೆಸ್‌ ಪಾಲು ೩೯ (ಕಳೆದ ಬಾರಿ ೫೩). ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ೨೫ ಸ್ಥಾನಗಳಲ್ಲಿ ಜಯ ಸಾಧಿಸಲಿದೆ.

ಎನ್‌ಡಿಎಗೆ ೩೬೨, ಯುಪಿಎಗೆ ೯೭ ಆಗಿ ಉಳಿದ ೮೪ ಸ್ಥಾನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ೨೬, ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ-೬, ಅಖಿಲೇಶ್‌ ಯಾದವ್‌ ಅವರ ಎಸ್‌ಪಿ-೨, ಆಮ್‌ ಆದ್ಮಿ ಪಾರ್ಟಿ-೫, ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಸಿ)-೮ ಸ್ಥಾನ ಪಡೆಯಲಿದೆಯಂತೆ.

ಉತ್ತರ ಪ್ರದೇಶದಲ್ಲಿ ಎಷ್ಟು?
ಎತ್ತರ ಕುತೂಹಲದ ಕೇಂದ್ರ ಬಿಂದುವಾಗಿರುವ ಉತ್ತರ ಪ್ರದೇಶದಲ್ಲಿ ೮೦ ಸ್ಥಾನಗಳ ಪೈಕಿ ಬಿಜೆಪಿ ಈ ಬಾರಿ ೭೦ ಸ್ಥಾನಗಳನ್ನು ಗೆಲ್ಲಲಿದೆಯಂತೆ. ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್‌ ತಲಾ ಎರಡು ಸ್ಥಾನಗಳನ್ನು ಪಡೆಯಲಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ೬೪ ಸ್ಥಾನ ಗೆದ್ದಿದ್ದರೆ ಸಮಾಜವಾದಿ ಪಾರ್ಟಿ ೫, ಬಿಎಸ್‌ಪಿ ೧೦, ಕಾಂಗ್ರೆಸ್‌ ೧ ಸ್ಥಾನದಲ್ಲಿ ಗೆದ್ದಿತ್ತು. ಈ ಬಾರಿ ಬಿಎಸ್‌ಪಿ ಶೂನ್ಯಕ್ಕೆ ಇಳಿಯಲಿದೆಯಂತೆ.

ಒಡಿಶಾದಲ್ಲಿ ಏನಾಗುತ್ತದೆ?
ಇಲ್ಲಿ ಕಳೆದ ಬಾರಿ ೧೨ ಸ್ಥಾನ ಪಡೆದಿದ್ದ ಬಿಜೆಡಿ ಸ್ಥಾನ ಬಲ ೮ಕ್ಕೆ ಕುಸಿದರೆ, ಬಿಜೆಪಿ ೮ರಿಂದ ೧೧ಕ್ಕೇರಲಿದೆ. ಕಾಂಗ್ರೆಸ್‌ ೧ರಿಂದ ೨ಕ್ಕೆ ಜಿಗಿಯಲಿದೆ.

ಪಶ್ಚಿಮ ಬಂಗಾಳ ಕುತೂಹಲ
ಇಲ್ಲಿ ಟಿಎಂಸಿ ಕಳೆದ ಬಾರಿ ೨೨ ಸ್ಥಾನಗಳನ್ನು ಈ ಬಾರಿ ೨೬ಕ್ಕೇರಿಸಿಕೊಳ್ಳಲಿದೆ. ಬಿಜೆಪಿ ೧೮ರಿಂದ ೧೪ಕ್ಕೆ ಇಳಿಯಲಿದೆ. ಕಾಂಗ್ರೆಸ್‌ ಆಗಲೂ ಈಗಲೂ ಎರಡೇ. ಅಂದರೆ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಇನ್ನೂ ತಮ್ಮ ಖದರು ಉಳಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಎಷ್ಟು?
ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಕರ್ನಾಟಕದ ೨೮ ಸ್ಥಾನಗಳ ಪೈಕಿ ಈ ಬಾರಿ ಬಿಜೆಪಿ ೨೩ರಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ನಾಲ್ಕರಲ್ಲಿ ವಿಜಯ ಸಾಧಿಸಲಿದೆ. ಕಳೆದ ಬಾರಿ ಇಲ್ಲಿ ಬಿಜೆಪಿ ೨೫ ಸ್ಥಾನಗಳಲ್ಲಿ ಗೆದ್ದಿತ್ತು. ಬಿಜೆಪಿ ಬೆಂಬಲಿತರಾಗಿ ಚಿತ್ರ ನಟಿ ಸುಮಲತಾ ಪಕ್ಷೇತರರಾಗಿ ಗೆದ್ದಿದ್ದರು. ಉಳಿದ ೨ ಸ್ಥಾನಗಳಲ್ಲಿ ಒಂದೊಂದನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಂಚಿಕೊಂಡಿತ್ತು. ಹಾಗಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಕಳೆದುಕೊಳ್ಳುವ ಮೂರು ಕ್ಷೇತ್ರಗಳು ಯಾವುವು ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ| ದ್ರೌಪದಿ ಮುರ್ಮು ರಾಷ್ಟ್ರಪತಿ | ಸ್ಫೂರ್ತಿದಾಯಕ ವ್ಯಕ್ತಿ ಎಂದ ಮೋದಿ

Exit mobile version