Site icon Vistara News

ವಿಸ್ತಾರ Explainer | ಮೋದಿ ಅವಧಿಯಲ್ಲಿ ಅಧಿಕಾರಶಾಹಿ ವ್ಯವಸ್ಥೆ ಕ್ರಾಂತಿಕಾರಕವಾಗಿ ಬದಲಾಗಿದ್ದು ಹೇಗೆ? ಏನಿದು 360 ಡಿಗ್ರಿ ಪ್ರಯೋಗ?

Narendra Modi To Visit US

Narendra Modi To Address Sold-Out Diaspora Event In Washington

ಘಟನೆ 1
ಅದು 2001. ನರೇಂದ್ರ ಮೋದಿ ಅವರು ಆಗತಾನೆ ಮುಖ್ಯಮಂತ್ರಿಯಾಗಿದ್ದರು. ಸರ್ಕಾರದ ಎಲ್ಲ ಕಾರ್ಯಭಾರವನ್ನು ವೀಕ್ಷಿಸುವ, ಕಲಿತುಕೊಳ್ಳುವ ಹಂತದಲ್ಲಿದ್ದರು. ಇಂತಹ ಸಂದರ್ಭದಲ್ಲಿಯೇ ಗುಜರಾತ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿತು. ರಾಜ್ಯದ 23 ಜಿಲ್ಲೆಗಳು ಭೂಕಂಪನದಿಂದ ಸಂಕಷ್ಟಕ್ಕೆ ಸಿಲುಕಿದವು. ಜನರ ರಕ್ಷಣೆ, ಪರಿಹಾರ ಕಾರ್ಯವು ಕ್ಷಿಪ್ರವಾಗಿ ಸಾಗಬೇಕಿತ್ತು. ರಾಜ್ಯದ ಬಹುತೇಕ ಭಾಗದಲ್ಲಿ ಪರಿಹಾರ ಕಾರ್ಯ ಆಗಬೇಕಿತ್ತು.

ಸಂಘ ಪರಿವಾರದ ಮೋದಿ ಅವರು ಆರ್‌ಎಸ್‌ಎಸ್‌ನಲ್ಲಿ ತಾವು ಕಲಿತಿದ್ದ ಸಂಘಟನೆ, ಆಡಳಿತ ಕೌಶಲ, ಶಿಸ್ತನ್ನು ಅಧಿಕಾರಶಾಹಿ ಮೇಲೆ ಪ್ರಯೋಗ ಮಾಡಿದರು. ಒಂದು ತಹಸೀಲ್‌ಗೆ (ತಾಲೂಕು) ಒಬ್ಬ ಅಧಿಕಾರಿಯನ್ನು ನಿಯೋಜಿಸಿದರು. ಉನ್ನತ ಅಧಿಕಾರಿಗಳು ನಿಂತು ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ಮಾಡಿದರು. ಅಧಿಕಾರಿಗಳು ವಾರಾಂತ್ಯದ ವೇಳೆ, ರಜೆಯ ವೇಳೆಯೂ ಕಾರ್ಯನಿರ್ವಹಿಸಬೇಕು, ಜನರ ಸಂಕಷ್ಟ ನಿವಾರಿಸಬೇಕು ಎಂದು ಸೂಚಿಸಿದರು. ಪರಿಣಾಮವಾಗಿ, ಭೂಕಂಪ ಸಂಭವಿಸಿದ ಒಂದೇ ವರ್ಷದಲ್ಲಿ ಗುಜರಾತ್‌ನ 23 ಜಿಲ್ಲೆಗಳು ಚೇತರಿಸಿಕೊಂಡಿದ್ದವು. ಪರಿಹಾರ ಕಾರ್ಯ ಪೂರ್ಣಗೊಂಡಿತ್ತು.

ಘಟನೆ 2
ಅದು 2018, ಡಿಸೆಂಬರ್.‌ ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ವೇಳೆ 3,600 ಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಕ್ರಿಶ್ಟಿಯನ್‌ ಮೈಕೆಲ್‌ನನ್ನು ಭಾರತಕ್ಕೆ ಕರೆತಂದ ಸುದ್ದಿ ಎಲ್ಲರಿಗೂ ಗೊತ್ತಿದೆ. ಆದರೆ, ಅದರ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಶ್ರಮ ಅಪಾರವಾಗಿದೆ ಎಂಬುದು ತುಂಬ ಜನರಿಗೆ ಗೊತ್ತಿಲ್ಲ. ಹೌದು, ಕ್ರಿಶ್ಟಿಯನ್‌ ಮೈಕೆಲ್‌ನನ್ನು ಭಾರತಕ್ಕೆ ಕರೆತರುವ ಮುನ್ನ ‘ಜೇಮ್ಸ್‌ ಬಾಂಡ್’‌ ಖ್ಯಾತಿಯ ಅಜಿತ್‌ ದೋವಲ್‌ ಅವರು ಯುಎಇ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಹಲವು ಬಾರಿ ಭೇಟಿ ನೀಡಿದ್ದರು. ಪ್ರಕರಣದಲ್ಲಿ ಕ್ರಿಶ್ಟಿಯನ್‌ ಮೈಕೆಲ್‌ ಪಾತ್ರದ ಕುರಿತು ದಾಖಲೆ ಒದಗಿಸಿದರು. ಯುಎಇ ಹತ್ತಾರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಇದಾದ ಬಳಿಕವೇ ಯುಎಇಯು ಭಾರತಕ್ಕೆ ಕ್ರಿಶ್ಟಿಯನ್‌ ಮೈಕೆಲ್‌ನನ್ನು ಹಸ್ತಾಂತರಿಸಲು ಸಮ್ಮತಿ ಸೂಚಿಸಿತು. ಅಷ್ಟೇ ಅಲ್ಲ, ಮೈಕೆಲ್‌ನನ್ನು ಹಸ್ತಾಂತರಕ್ಕೆ ಒಪ್ಪಿದ ಕೆಲವೇ ಗಂಟೆಗಳಲ್ಲಿ, ರಾತ್ರೋರಾತ್ರಿ ಯುಎಇಗೆ ವಿಶೇಷ ವಿಮಾನ ಕಳುಹಿಸಿ, ಆರೋಪಿಯನ್ನು ಭಾರತಕ್ಕೆ ಕರೆತರುವ ತನಕವೂ ಅಜಿತ್‌ ದೋವಲ್‌ ಎಂಬ ಮಾಸ್ಟರ್‌ ಮೈಂಡ್‌ ನಿರ್ಣಾಯಕ ಕೆಲಸ ಮಾಡಿತು.

ಅಧಿಕಾರಶಾಹಿಗಳು, ಅದರಲ್ಲೂ, ಸರ್ಕಾರದ ಉನ್ನತ ಹುದ್ದೆಗಳಲ್ಲಿರುವವರು, ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವವರು, ರಾಜ್ಯಗಳಿಗೆ ನಿಯೋಜನೆಗೊಂಡ ಐಎಎಸ್‌ ಅಧಿಕಾರಿಗಳು ಐಷಾರಾಮಿ ಜೀವನ ನಡೆಸುತ್ತಾರೆ. ಇವರು ಸರ್ಕಾರದ ಕಾರುಗಳಲ್ಲಿ ಓಡಾಡುವವರು, ಸರ್ಕಾರಿ ಬಂಗಲೆಗಳಲ್ಲಿ ವಾಸಿಸುವವರು, ಸರ್ಕಾರದಿಂದ ಲಕ್ಷ ಲಕ್ಷ ರೂ. ಸಂಬಳ ಎಣಿಸಿಕೊಂಡು ಸುಖವಾಗಿ ಇರುವವರು ಎಂಬ ಮಾತಿತ್ತು. ಬಹುತೇಕ ಅಧಿಕಾರಿಗಳೂ ಹಾಗೆಯೇ ವರ್ತಿಸುತ್ತಿದ್ದರು. ಕಚೇರಿಗಳಲ್ಲಿ ಕುರ್ಚಿ ಬಿಸಿ ಮಾಡಿ ಸಮಯವಾಗುತ್ತಲೇ ಮನೆಗೆ ಹೊರಟುಬಿಡುತ್ತಿದ್ದರು. ಇದೇ ಕಾರಣದಿಂದಾಗಿಯೇ ವ್ಯವಸ್ಥೆಯ ಲೋಪದ ವಿಚಾರಕ್ಕೆ ಬಂದಾಗ ಅಧಿಕಾರಶಾಹಿಯ ವೈಫಲ್ಯವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು.

ಆದರೆ…

ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಅಧಿಕಾರಶಾಹಿ ವ್ಯವಸ್ಥೆಯೇ ಬದಲಾಗಿದೆ. ಪ್ರಧಾನಿಗೋ, ಸಚಿವರಿಗೋ ಪಿಪಿಟಿ ಪ್ರೆಸೆಂಟೇಷನ್‌ ತೋರಿಸಿ, ನಾಲ್ಕು ಸಲಹೆ ಕೊಟ್ಟು ಸುಮ್ಮನಾಗುವ ಕಾಲಕ್ಕೆ, ಬ್ರಿಟಿಷ್‌ ಕಾಲದ ಶಿಷ್ಟಾಚಾರದ ಆಡಳಿತ ಶೈಲಿಗೆ ಮೋದಿ ಅವರು ತಿಲಾಂಜಲಿ ಇಟ್ಟು ವರ್ಷಗಳೇ ಕಳೆದಿವೆ. ಇದಕ್ಕೆ ಈ ಮೇಲಿನ ಎರಡು ನಿದರ್ಶನಗಳೇ ಸಾಕ್ಷಿಯಾಗಿವೆ. ಹಾಗಾದರೆ, ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದ ಅಧಿಕಾರಶಾಹಿ ವ್ಯವಸ್ಥೆಯು ಹೇಗೆ ಬದಲಾಗಿದೆ? ಇದರ ದಿಸೆಯಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ದಿಟ್ಟ ಕ್ರಮಗಳು ಯಾವವು? ಸರ್ಕಾರದ ಉನ್ನತ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ? ಕಾರ್ಯನಿರ್ವಹಿಸದವರ ಪರಿಸ್ಥಿತಿ ಏನಾಗಿದೆ? ಇದರಿಂದ ಕಾರ್ಯದಕ್ಷತೆ ಎಷ್ಟರಮಟ್ಟಿಗೆ ಸುಧಾರಣೆಯಾಗಿದೆ ಎಂಬುದರ ವಿಸ್ತೃತ ಮಾಹಿತಿ ಇಲ್ಲಿದೆ.

1. ದಕ್ಷತೆಯೇ ಮೊದಲು, ಬಡ್ತಿ ನಿಯಮ ಬದಲು
ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ವಯಸ್ಸು, ಅನುಭವ ಸೇರಿ ಕೆಲವೇ ಮಾನದಂಡಗಳ ಆಧಾರದ ಮೇಲೆ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗುತ್ತಿತ್ತು. ವಾರ್ಷಿಕ ಗೌಪ್ಯ ವರದಿಗಳು (Annual Confidential Reports-ACR) ಹಾಗೂ ಸಾಧಾರಣ, ಉತ್ತಮ, ಅತ್ಯುತ್ತಮ ಹಾಗೂ ಶ್ರೇಷ್ಠ ಎಂಬ ಮೌಲ್ಯಾಂಕ ಆಧರಿಸಿ ಮುಂಬಡ್ತಿ ನೀಡಲಾಗುತ್ತಿತ್ತು. ಆದರೆ, ನರೇಂದ್ರ ಮೋದಿ ಅವರು 2015ರಲ್ಲಿ ಎಸಿಆರ್‌ಅನ್ನು ರದ್ದುಗೊಳಿಸಿದರು. ಇದರ ಬದಲಾಗಿ ಅಧಿಕಾರಿಗಳನ್ನು 360 ಡಿಗ್ರಿ ಆಯಾಮದಲ್ಲಿ ಪರಿಶೀಲಿಸುವ ವಾರ್ಷಿಕ ಕ್ಷಮತೆ ಮೌಲ್ಯಮಾಪನ ವರದಿ (Annual Performance Appraisal Report-APAR) ವ್ಯವಸ್ಥೆ ಜಾರಿಗೊಳಿಸಿದರು. ಅಧಿಕಾರಿಗಳ ಕಾರ್ಯನಿರ್ವಹಣೆ, ಕಾರ್ಯಕ್ಷಮತೆ, ದಕ್ಷತೆ, ಚಾಣಾಕ್ಷತನ, ಕೌಶಲ ಸೇರಿ ಸಕಲ ಅಂಶಗಳನ್ನು ಪರಿಗಣಿಸಿ, 360 ಡಿಗ್ರಿಯಲ್ಲಿ ಪರಿಶೀಲನೆ ನಡೆಸಿ, 0-10 ಅಂಕ ನೀಡುವ ವ್ಯವಸ್ಥೆ ಜಾರಿಗೆ ತಂದರು. ಇದರ ಅನ್ವಯವೇ ಬಡ್ತಿ ನೀಡುವುದರಿಂದ ಅಧಿಕಾರಿಗಳ ಮಧ್ಯೆಯೇ ಸ್ಪರ್ಧೆ ಏರ್ಪಡುತ್ತಿದೆ. ಕೆಲಸದಲ್ಲಿ ದಕ್ಷತೆ, ಕಾರ್ಯಕ್ಷಮತೆ ಅಳವಡಿಸಿಕೊಳ್ಳಲಾಗುತ್ತಿದೆ.

2. ಇದ್ದರೆ ಕೆಲಸಕ್ಕೆ ಬದ್ಧತೆ, ಯುವಕರಿಗೂ ಉನ್ನತ ಹುದ್ದೆ ನೀಡಲು ಆದ್ಯತೆ
ಮೋದಿ ಅವರಿಗೆ ‘ಗುಜರಾತ್‌ ದಿನ’ಗಳಿಂದಲೂ ಯುವಕರಿಗೆ, ಯುವ ಮನಸ್ಸುಗಳಿಗೆ ಸಕಲ ಕ್ಷೇತ್ರಗಳಲ್ಲಿ ಆದ್ಯತೆ ನೀಡುವುದು ರೂಢಿ. ಇದನ್ನು ಪ್ರಧಾನಿಯಾದ ಮೇಲೂ, ಅಧಿಕಾರಶಾಹಿ ಮೇಲೂ ಮೋದಿ ಪ್ರಯೋಗಿಸಿದ್ದಾರೆ. ದೇಹಕ್ಕಾದ ವಯಸ್ಸನ್ನೇ ಅನುಭವ ಎಂದಷ್ಟೇ ಪರಿಗಣಿಸದೆ, ದಶಕಗಳವರೆಗೆ ಕುರ್ಚಿ ಬಿಸಿ ಮಾಡಿದವರನ್ನು, ತಲೆಕೂದಲು ಬೆಳ್ಳಗಾಗಿದ್ದನ್ನೇ ಕಾರ್ಯಕ್ಷಮತೆ ಎಂದು ಪರಿಗಣಿಸದೆ ಕಿರಿಯ ವಯಸ್ಸಿನ ಐಎಎಸ್‌ ಅಧಿಕಾರಿಗಳಿಗೆ ಕ್ಷಿಪ್ರವಾಗಿ ಬಡ್ತಿ ನೀಡುವ ರೂಢಿ ಜಾರಿಗೆ ಬಂದಿದೆ. ಒಬ್ಬ ಜಂಟಿ ಕಾರ್ಯದರ್ಶಿ (ಐಎಎಸ್)‌ಯು ಸಮರ್ಥವಾಗಿದ್ದರೆ, ಚಾಣಾಕ್ಷನಾಗಿದ್ದರೆ ಅವರಿಗಾದ ವಯಸ್ಸನ್ನೂ ಪರಿಗಣಿಸದೆ, ಕೇವಲ ಮೂರೇ ವರ್ಷದಲ್ಲಿ ಅವರಿಗೆ ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ನೀಡಲಾಗುತ್ತಿದೆ. ಇದರಿಂದ ಅಧಿಕಾರಶಾಹಿಯಲ್ಲಿ ನವಚೈತನ್ಯ ಮೂಡುತ್ತಿದೆ.

3. ಧೂಳು ತಿನ್ನುವಂತಿಲ್ಲ ಫೈಲು
ಸರ್ಕಾರದ ಕಚೇರಿಗಳಲ್ಲಿ, ತಿಜೋರಿಗಳಲ್ಲಿ, ಟೇಬಲ್‌ಗಳ ಮೇಲೆ ವರ್ಷಗಟ್ಟಲೆ ಫೈಲ್‌ಗಳು ಧೂಳು ತಿನ್ನುವ ವ್ಯವಸ್ಥೆಯನ್ನು ಮೋದಿ ಅವರು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಅದರಲ್ಲೂ, ಬ್ರಿಟಿಷ್‌ ಕಾಲದ ಏಳು ಹಂತಗಳ ಕಡತಗಳ ಸಂಚಾರಕ್ಕೆ ಇತಿಶ್ರೀ ಹಾಡಿದ್ದಾರೆ. ಸೆಕ್ಷನ್‌ ಆಫೀಸರ್‌, ಕಾರ್ಯದರ್ಶಿ, ಉಪ ಕಾರ್ಯದರ್ಶಿ, ನಿರ್ದೇಶಕ, ಜಂಟಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ ಅವರ ಬಳಿ ಫೈಲ್‌ಗಳು ಸಂಚರಿಸದಂತೆ ಮಾಡಿದ್ದಾರೆ. ಕೇಂದ್ರ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿಯನ್ನೇ ಹೆಚ್ಚುವರಿ ಕಾರ್ಯದರ್ಶಿಯನ್ನಾಗಿ ಬಡ್ತಿ ನೀಡುವುದರಿಂದ ಒಂದು ಹಂತದಲ್ಲಿ ಫೈಲ್‌ ವಿಲೇವಾರಿಯಾಗುವಂತೆ ಮಾಡಲಾಗಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರು “ನಾನು ಕೆಲವೇ ಗಂಟೆಯಲ್ಲಿ ರೈಲ್ವೆ ಯೋಜನೆಗೆ ಅನುಮೋದನೆ ಪಡೆದೆ” ಎಂದು ಹೇಳಿರುವುದು ಕಡತಗಳ ವಿಲೇವಾರಿಗೆ ವೇಗ ನೀಡಿರುವುದಕ್ಕೆ ಸಾಕ್ಷಿಯಾಗಿದೆ.

4. ತಂತ್ರಜ್ಞಾನ ಅಳವಡಿಕೆ, ತಜ್ಞರಿಗೆ ಬೇಡಿಕೆ
ಐಎಎಸ್‌ ಅಧಿಕಾರಿಗಳನ್ನು ಮಾತ್ರವೇ ಉನ್ನತ ಹುದ್ದೆಗಳಿಗೆ ನೇಮಕ ಮಾಡಬೇಕು ಎಂಬ ಅಲಿಖಿತ ನಿಯಮಕ್ಕೆ ಮೋದಿ ಅಂತ್ಯ ಹಾಡಿದ್ದಾರೆ. ಅದರಲ್ಲೂ ಟೆಲಿಕಾಂ, ಆರೋಗ್ಯ, ಪರಿಸರ, ಅರಣ್ಯ ಹಾಗೂ ತ್ಯಾಜ್ಯ ನಿರ್ವಹಣೆ ಇಲಾಖೆಗಳಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಈ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವವರು ಐಎಎಸ್‌ ಅಧಿಕಾರಿಗಳಾಗಿರುವ ಜತೆಗೆ ತಂತ್ರಜ್ಞರೂ ಆಗಿರಬೇಕು. ತಂತ್ರಜ್ಞಾನ ಬಳಸುವುದು, ಅಳವಡಿಸಿಕೊಳ್ಳುವುದು ಅವಶ್ಯವಾಗಿರುತ್ತದೆ. ಹಾಗಾಗಿ ಐಆರ್‌ಎಸ್‌ ಸೇರಿ ಉನ್ನತ ಪರೀಕ್ಷೆ ಬರೆದು ಉತ್ತೀರ್ಣರಾದವರು, ತಂತ್ರಜ್ಞರು, ಚಾಣಾಕ್ಷರನ್ನು ಉನ್ನತ ಹುದ್ದೆಗಳಿಗೆ ನೇಮಿಸಲಾಗುತ್ತಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರಾಗಿದ್ದ ಸಂದೀಪ್‌ ಪ್ರಧಾನ್‌ ಅವರನ್ನು ಖೇಲೋ ಇಂಡಿಯಾದ ಸಿಇಒ ಆಗಿ ಮಾಡಿದ್ದು, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಜಗದೀಶ್‌ ಠಕ್ಕರ್‌ ಅವರನ್ನು ಗುಜರಾತ್‌ ಮಾಹಿತಿ ಇಲಾಖೆಯ ಉನ್ನತ ಹುದ್ದೆಗೆ ನೇಮಿಸಿದ್ದೇ ಇದಕ್ಕೆ ನಿದರ್ಶನವಾಗಿದೆ. ಅಷ್ಟೇ ಏಕೆ, ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎಸ್‌.ಜೈಶಂಕರ್‌ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವರನ್ನಾಗಿ ಮಾಡಿದ್ದು ಕೂಡ ಅರ್ಹತೆಗೆ ಆದ್ಯತೆ ಎಂಬುದಕ್ಕೆ ಉದಾಹರಣೆಯಾಗಿದೆ.

5. ಮಾಡು ಇಲ್ಲವೇ ಮನೆಗೆ ನಡಿ
ಸಮರ್ಪಕವಾಗಿ ಕಾರ್ಯನಿರ್ವಹಿಸದವರು, ಭ್ರಷ್ಟಾಚಾರದಲ್ಲಿ ತೊಡಗಿದವರು, ನಿರ್ಲಕ್ಷಿಸಿದವರನ್ನು ಮನೆಗೆ ಕಳುಹಿಸುವುದು ಕಳೆದ ಎಂಟು ವರ್ಷದಲ್ಲಿ ಹೆಚ್ಚಾಗಿದೆ. 2014ರಿಂದ 2022ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಹಲವು ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 400ಕ್ಕೂ ಅಧಿಕಾರಿಗಳಿಗೆ ಒತ್ತಾಯಪೂರ್ವಕ ನಿವೃತ್ತಿ ನೀಡಿ, ಮನೆಗೆ ಕಳುಹಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಷ್ಟೇ ಟೆಲಿಕಾಂ ಇಲಾಖೆಯ 10 ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದ ವೇಳೆ ನಿದ್ದೆಗೆ ಜಾರಿದರು ಎಂಬ ಕಾರಣಕ್ಕಾಗಿ ಅಧಿಕಾರಿಯೊಬ್ಬರಿಗೆ ಬಲವಂತದ ನಿವೃತ್ತಿ ನೀಡಿದ್ದು ದಕ್ಷತೆಗೆ ಎಷ್ಟರಮಟ್ಟಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ.

ಇವುಗಳ ಜತೆಗೆ, ನರೇಂದ್ರ ಮೋದಿ ಅವರು ಖುದ್ದು ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುವುದು, ಅವರಿಗೆ ಶಹಬ್ಬಾಶ್‌ ಎನ್ನುವುದು, ಹೊಸ ಹೊಸ ಐಡಿಯಾಗಳನ್ನು ನೀಡಲು ಸ್ವಾತಂತ್ರ್ಯ ಕೊಟ್ಟಿರುವುದು, ಕಾರ್ಯಭಾರದಲ್ಲಿ ಮುಕ್ತ ವಾತಾವರಣ ಇರುವುದು ಕೂಡ ಬ್ಯೂರೋಕ್ರಸಿಯ ಸಾಮರ್ಥ್ಯ ಹೆಚ್ಚಾಗಲು ಕಾರಣವಾಗಿದೆ.

ಮೋದಿ ಸರ್ಕಾರದ ‘ಮೆದುಳು’ ಇವರೇ ನೋಡಿ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದಕ್ಷ ಅಧಿಕಾರಿಗಳನ್ನು ಗುರುತಿಸಿ, ಅವರಿಗೆ ಉನ್ನತ ಹುದ್ದೆ ನೀಡಿ, ಯಾವುದೇ ಸಮಸ್ಯೆ ಎದುರಾದರೂ ತತ್‌ಕ್ಷಣದಲ್ಲಿ ಬಗೆಹರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲಾಗಿದೆ. ಹಾಗಾಗಿಯೇ, ಕೊರೊನಾ ಬಿಕ್ಕಟ್ಟು, ಉಗ್ರರ ದಾಳಿಗೆ ಪ್ರತಿದಾಳಿ, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ಬಳಿಕ ಭಾರತದ ವಿದ್ಯಾರ್ಥಿಗಳ ರಕ್ಷಣೆ, ರಾಜತಾಂತ್ರಿಕ ಪರಿಹಾರ ಸೇರಿ ಎಲ್ಲ ವಿಷಮ ಪರಿಸ್ಥಿತಿಯಲ್ಲೂ ಅಧಿಕಾರಿಗಳು ದಕ್ಷತೆ ಮೆರೆದಿದ್ದಾರೆ. ಅಂತಹ ದಕ್ಷ ಅಧಿಕಾರಿಗಳು, ಅವರ ಕಿರು ಪರಿಚಯ ಇಲ್ಲಿದೆ.

ಸ್ಪೈ ಮಾಸ್ಟರ್‌

ಸಮಂತ್‌ ಕುಮಾರ್‌ ಗೋಯಲ್‌, 1984ರ ಶ್ರೇಣಿಯ ಐಪಿಎಸ್‌ ಅಧಿಕಾರಿ, ಪಂಜಾಬ್‌ ಕೇಡರ್‌
ಭಾರತೀಯ ಗುಪ್ತಚರ ಸಂಸ್ಥೆ ರಿಸರ್ಚ್‌ & ಅನಾಲಿಸಿಸ್ ವಿಂಗ್‌ನ (ರಾ) ಪ್ರಧಾನ ಕಾರ್ಯದರ್ಶಿಯಾಗಿ 2019ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ದೊವೆಲ್‌ ಅವರ ನೆಚ್ಚಿನ ಸಹವರ್ತಿ. ಬಾಲಾಕೋಟ್‌ ದಾಳಿಯಲ್ಲಿ ತಮ್ಮ ಛಾಪು ಮೂಡಿಸಿದವರು. ಜಮ್ಮು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಪಾಕ್‌ ಪ್ರಾಯೋಜಿತ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಆಳವಾಗಿ ಬಲ್ಲವರು. ಜಾಗತಿಕ ಖಾಲಿಸ್ತಾನ್‌ ನೆಟ್‌ ವರ್ಕ್‌ ಅನ್ನು ಹತ್ತಿಕ್ಕುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಪ್ರತಿಭಾನ್ವಿತ ಅಧಿಕಾರಿ
ತಪನ್‌ ಡೇಕಾ, 1988ರ ಶ್ರೇಣಿಯ ಐಪಿಎಸ್‌ ಅಧಿಕಾರಿ, ಹಿಮಾಚಲ ಪ್ರದೇಶ ಕೇಡರ್‌
ಇಂಟಲಿಜೆನ್ಸ್‌ ಬ್ಯೂರೋದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹೊಸ ಜವಾಬ್ದಾರಿಯನ್ನು ವಹಿಸಿ ಕೆಲವು ತಿಂಗಳುಗಳಾಗಿವೆ. ಇತರ ಹಲವು ಕಾನುನು ಸುವ್ಯವಸ್ಥೆ ಮತ್ತು ಭದ್ರತಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದು, ವಿಚಕ್ಷಣ ವಿಭಾಗದ ಜತೆ ಅಮಿತ ಸಹಕಾರ ನೀಡಿದ್ದಾರೆ. ಎಲ್ಲಕ್ಕಿಂತ ಮೇಲಿನದ್ದು ಪ್ರತಿಭೆ ಎಂಬ ಸಂದೇಶವನ್ನು ಅವರ ನೇಮಕಾತಿ ರವಾನಿಸಿದೆ.

ಭವಿಷ್ಯದ ಬ್ಯೂರೋಕ್ರಟ್
ಪರಮೇಶ್ವರನ್‌ ಅಯ್ಯರ್‌, 1981ರ ಶ್ರೇಣಿಯ ಐಎಎಸ್‌ ಅಧಿಕಾರಿ, ಉತ್ತರ ಪ್ರದೇಶ ಕೇಡರ್
ನೀತಿ ಆಯೋಗದ ಸಿಇಒ. ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ದುಡಿದ ಅನುಭವ ಇದೆ. ತಳಮಟ್ಟದಲ್ಲಿ ತಂತ್ರಜ್ಞಾನದ ಮೂಲಕ ಆಡಳಿತವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ನಿಷ್ಣಾತರು. ಸ್ವಚ್ಛ ಭಾರತ ಅಭಿಯಾನವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ದವರು. ಇದಕ್ಕಾಗಿ ಟಾಯ್ಲೆಟ್‌ ಮ್ಯಾನ್‌ ಎಂದು ಖ್ಯಾತಿ ಗಳಿಸಿದವರು. ನೀತಿ ನಿರೂಪಣೆಯಲ್ಲಿ ಮೋದಿಯವರ ನೆಚ್ಚಿನ ಬಂಟ.

ಬೆಳವಣಿಗೆಯ ವ್ಯವಸ್ಥಾಪಕ
ಟಿ. ವಿ. ಸೋಮನಾಥನ್‌, 1987ರ ಶ್ರೇಣಿಯ ಐಎಎಸ್‌ ಅಧಿಕಾರಿ, ತಮಿಳುನಾಡು ಕೇಡರ್
ಹಣಕಾಸು ಮತ್ತು ವೆಚ್ಚ ಕಾರ್ಯದರ್ಶಿಯಾಗಿ ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಸರ್ಕಾರದ ವೆಚ್ಚಗಳನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಮುಖ್ಯವಾಗಿ ಬೆಳವಣಿಗೆ, ಹೂಡಿಕೆಗೆ ಪೂರಕವಾಗಿ ನಿಯಮಾವಳಿಗಳನ್ನು ಸರಳಗೊಳಿಸಿದ್ದಾರೆ. ಪ್ರಧಾನಿ ಮೋದಿಯವರ ಮೆಚ್ಚುಗೆ ಗಳಿಸಿದ್ದಾರೆ.

ವಿಶ್ವಾಸಾರ್ಹ ಅನುಷ್ಠಾನಕ್ಕೆ ಹೆಸರಾಗಿರುವ ಅಧಿಕಾರಿ
ಭರತ್‌ ಲಾಲ್‌, 1988ರ ಶ್ರೇಣಿಯ ಭಾರತೀಯ ಅರಣ್ಯ ಸೇವಾ ಅಧಿಕಾರಿ, ಗುಜರಾತ್‌ ಕೇಡರ್
ನ್ಯಾಷನಲ್‌ ಸೆಂಟರ್‌ ಫಾರ್‌ ಗುಡ್‌ ಗವರ್ನೆನ್ಸ್‌ನ ಪ್ರಧಾನ ನಿರ್ದೇಶಕ. ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ, ದಿಲ್ಲಿಯಲ್ಲಿ ಗುಜರಾತ್‌ ರೆಸಿಡೆಂಟ್‌ ಕಮೀಶನರ್‌ ಆಗಿ ಸೇವೆ ಸಲ್ಲಿಸಿದ್ದರು. ಗುಜರಾತ್‌ಗೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್‌ ಮಾದರಿಯ ಅಭಿವೃದ್ಧಿಯನ್ನು ಕೇಂದ್ರದಲ್ಲೂ ವಿಸ್ತರಿಸಿದವರು. ಜಲ್‌ ಜೀವನ್‌ ಮಿಶನ್‌ ಅಭಿಯಾನದ ಯಶಸ್ಸಿನಿಂದ ಖ್ಯಾತಿ ಗಳಿಸಿದ್ದಾರೆ.

ಆಲ್‌ ರೌಂಡರ್‌

ಪ್ರಮೋದ್‌ ಕುಮಾರ್‌ ಮಿಶ್ರಾ, 1972ರ ಶ್ರೇಣಿಯ ಐಎಎಸ್‌ ಅಧಿಕಾರಿ, ಗುಜರಾತ್‌ ಕೇಡರ್
ಕಳೆದ 2019ರಿಂದ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ. ವಿಪತ್ತು ನಿರ್ವಹಣೆ, ವಿದ್ಯುತ್‌ ವಲಯ, ಆಹಾರ ಭದ್ರತೆ, ಕೃಷಿ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಮೂಲಸೌಕರ್ಯ ಹಣಕಾಸು ವಿಷಯಗಳಲ್ಲಿ ಅಪಾರ ಅನುಭವಿ. ಮೋದಿಯವರು ಗುಜರಾತ್‌ ಸಿಎಂ ಆಗಿದ್ದಾಗಲೂ ಅವರಿಗೆ ಪ್ರಧಾನ ಕಾರ್ಯದರ್ಶಿ ಆಗಿದ್ದವರು. 2008ರ ವೇಳೆಗೆ ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. 2014ರಲ್ಲಿ ಮೋದಿಯವರು ಪ್ರಧಾನಿಯಾದ ಬಳಿಕ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾದರು.

ಭದ್ರತಾ ವಲಯದ ದಿಗ್ಗಜ
ಅಜಿತ್ ದೊವಲ್‌, 1968ರ ಶ್ರೇಣಿಯ ಐಪಿಎಸ್‌ ಅಧಿಕಾರಿ, ಕೇರಳ ಕೇಡರ್

2014ರಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರ. ಕೀರ್ತಿಚಕ್ರ ಪುರಸ್ಕೃತ ಮೊದಲ ಪೊಲೀಸ್‌ ಅಧಿಕಾರಿ. ಆಂತರಿಕ ಸುರಕ್ಷತೆಗೆ ಬೆದರಿಕೆಯಾದಾಗ, ಅದರ ನಿರ್ವಹಣೆಯಿಂದ ಆರಂಭಿಸಿ ಗಡಿಯಾಚೆಗಿನ ಕಾರ್ಯಾಚರಣೆಯ ತನಕ ಎಲ್ಲ ವಿಧದ ಕಾರ್ಯಾಚರಣೆಗಳ ಮೇಲುಸ್ತುವಾರಿ ವಹಿಸಿದ ಹಿರಿಮೆ ಅವರಿಗಿದೆ. ರಾಷ್ಟ್ರೀಯ ಭದ್ರತೆ ಕುರಿತ ಪ್ರಮುಖ ತಂತ್ರಗಾರಿಕೆಯಲ್ಲಿ ನೇತೃತ್ವ ವಹಿಸಿದ್ದಾರೆ.

ಹಣಕಾಸು ವ್ಯವಸ್ಥಾಪಕ
ಶಕ್ತಿಕಾಂತ ದಾಸ್‌, 1980ರ ಶ್ರೇಣಿಯ ಐಎಎಸ್‌ ಅಧಿಕಾರಿ, ತಮಿಳುನಾಡು ಕೇಡರ್
ಆರ್‌ಬಿಐ ಗವರ್ನರ್‌ ಆಗಿ ದೇಶದ ಆರ್ಥಿಕತೆಯ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದ ಸವಾಲನ್ನು ಎದುರಿಸುವಲ್ಲಿ ಜವಾಬ್ದಾರಿಯುತ ಪಾತ್ರ ವಹಿಸಿದ್ದಾರೆ. ಜಿಎಸ್‌ಟಿ ಮತ್ತು ನೋಟು ಅಮಾನ್ಯತೆಯ ಜಾರಿಯಲ್ಲಿ ಮಹತ್ವದ ಹೊಣೆಗಳನ್ನು ನಿಭಾಯಿಸಿದ್ದರು. ಈಗ ಆರ್ಥಿಕತೆಯನ್ನು ಸಹಜ ಸ್ಥಿತಿಗೆ ತಂದು ಅಭಿವೃದ್ಧಿಪಥದಲ್ಲಿ ಮುನ್ನಡೆಸಲು ಮಾರ್ಗದರ್ಶನ ನೀಡುತ್ತಿದ್ದಾರೆ.

ವಿಪತ್ತಿನ ವ್ಯವಸ್ಥಾಪಕ
ರಾಜೀವ್‌ ಗೌಬಾ, 1982ರ ಶ್ರೇಣಿಯ ಐಎಎಸ್‌ ಅಧಿಕಾರಿ, ಜಾರ್ಖಂಡ್‌ ಕೇಡರ್

2019ರಿಂದ ಸಂಪುಟ ಕಾರ್ಯದರ್ಶಿ. ಸರ್ಕಾರದ ಕೋವಿಡ್-‌19 ನಿರ್ವಹಣೆಯ ಸೂತ್ರಗಳನ್ನು ಹೆಣೆದವರು. 2017-2019ರ ನಡುವೆ ಗೃಹ ಕಾರ್ಯದರ್ಶಿಯಾಗಿದ್ದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿಯಲ್ಲಿ ಪ್ರಮುಖ ಕಾರ್ಯತಂತ್ರಜ್ಞರಾಗಿ ಸೇವೆ ಸಲ್ಲಿಸಿದ್ದರು. ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸುವಲ್ಲಿ ಶ್ರಮಿಸಿದವರು.

ಗೃಹ-ವ್ಯವಸ್ಥಾಪಕ
ಅಜಯ್‌ ಕುಮಾರ್‌ ಭಾಲಾ, 1984ರ ಶ್ರೇಣಿಯ ಐಎಎಸ್‌ ಅಧಿಕಾರಿ, ಅಸ್ಸಾಂ-ಮೇಘಾಲಯ ಕೇಡರ್
2019ರಿಂದ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ( ನ್ಯಾಶನಲ್‌ ರಿಜಿಸ್ಟರ್‌ ಆಫ್‌ ಸಿಟಿಜನ್ಸ್)‌ ಅನುಷ್ಠಾನ, ಈಶಾನ್ಯ ರಾಜ್ಯಗಳಲ್ಲಿ ಎಎಫ್‌ಎಸ್‌ಪಿಎ ರದ್ದತಿಯ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನೀತಿ ನಿರ್ಧಾರಗಳ ಜಾರಿಗೆ ಸಾಥ್‌ ನೀಡಿದವರು.

ಇದನ್ನೂ ಓದಿ | Ashwini Vaishnaw | ಭ್ರಷ್ಟಾಚಾರಕ್ಕಿಲ್ಲ ಸಹಿಷ್ಣುತೆ, 10 ಅಧಿಕಾರಿಗಳಿಗೆ ಗೇಟ್‌ಪಾಸ್‌ ನೀಡಿದ ಸಚಿವ ಅಶ್ವಿನಿ ವೈಷ್ಣವ್

Exit mobile version