Site icon Vistara News

ಮಹಾರಾಷ್ಟ್ರ ರಾಜಕೀಯದಲ್ಲಿ ಮುಂದೇನಾಗಬಹುದು? ಸದನದಲ್ಲಿ ಬಲಾಬಲ ಏನು?

maharastra crises

ಮುಂಬಯಿ: ಮಹಾರಾಷ್ಟ್ರದ ರಾಜಕೀಯದಲ್ಲಿ ಮಂಗಳವಾರ ಬೆಳಗ್ಗೆಯಿಂದ ಹೈಡ್ರಾಮಾ ನಡೆಯುತ್ತಿದೆ. ಇದು ಇನ್ನೂ ಹಲವಾರು ದಿನಗಳ ಕಾಲ ಮುಂದುವರಿಯಬಹುದು. ಶಿವಸೇನಾದಿಂದ ಬಂಡಾಯವೆದ್ದಿರುವ ಸಚಿವ ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಹಲವಾರು ಶಾಸಕರು ಸೂರತ್‌ಗೆ ತೆರಳಿದ್ದು. ಅಲ್ಲಿಂದ ಗುವಾಹಟಿಗೆ ಸ್ಥಳಾಂತರವಾಗಿರುವ ಬಗ್ಗೆ ವರದಿಯಾಗಿದೆ. ಇದರೊಂದಿಗೆ ಮಹಾ ವಿಕಾಸ ಅಘಾಡಿ ನೇತೃತ್ವದ ಸರ್ಕಾರ ಅಲುಗಾಡುತ್ತಿದೆ. ಹಾಗಾದರೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ಹೇಗಿದೆ? ಇಲ್ಲಿದೆ ಲೆಕ್ಕಾಚಾರ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ೨೮೮ ಸ್ಥಾನಗಳ ಬಲವಿದೆ. ಇದರಲ್ಲಿ ಒಂದು ಸೀಟು ಖಾಲಿಯಾಗಿದೆ. ಹೀಗಾಗಿ ಸದನದ ಒಟ್ಟು ಬಲ ೨೮೭.

ಮಹಾ ವಿಕಾಸ ಅಘಾಡಿಗೆ ೧೬೬ ಸದಸ್ಯರ ಬಲ

ಶಿನಸೇನಾ ೫೫ ಶಾಸಕರನ್ನು ಹೊಂದಿದೆ. ಎನ್‌ಸಿಪಿ ೫೩ ಶಾಸಕರನ್ನು ಹೊಂದಿದೆ. (ಇವರಲ್ಲಿ ನವಾಬ್‌ ಮಲಿಕ್‌ ಮತ್ತು ಅನಿಲ್‌ ದೇಶ್‌ಮುಖ್‌ ಜೈಲಿನಲ್ಲಿದ್ದಾರೆ. ಆದ್ದರಿಂದ ಈ ಇಬ್ಬರಿಗೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗದು) ಕಾಂಗ್ರೆಸ್‌ ೪೪ ಶಾಸಕರನ್ನು ಹೊಂದಿದೆ. ಸಣ್ಣ ಪಕ್ಷಗಳ ೩ ಮತ್ತು ಸ್ವತಂತ್ರ ಸದಸ್ಯರು ೯ ಮಂದಿ ಇದ್ದಾರೆ. ಮಹಾ ವಿಕಾಸ ಅಘಾಡಿ ಒಟ್ಟು ೧೬೬ ಸದಸ್ಯರನ್ನು ಹೊಂದಿದೆ.

ಬಿಜೆಪಿ ಬಳಿ ೧೦೬ ಸದಸ್ಯರ ಬಲ

ಭಾರತೀಯ ಜನತಾ ಪಕ್ಷ ೧೦೬ ಶಾಸಕರನ್ನು ಹೊಂದಿದೆ. ಈ ಎರಡು ಬಣಗಳಲ್ಲದೆ ಇತರ ೬ ಪಕ್ಷಗಳಲ್ಲಿ ೯ ಶಾಸಕರು ಇದ್ದಾರೆ.

ಮುಂದೇನಾಗಬಹುದು?

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತದ ಮ್ಯಾಜಿಕ್‌ ನಂಬರ್‌ ೧೪೪ ಆಗಿದೆ. ಶಿವ ಸೇನಾದ ಒಬ್ಬರು ಶಾಸಕರು ಇತ್ತೀಚೆಗೆ ಮೃತಪಟ್ಟಿರುವುದರಿಂದ ಸದನದ ಬಲ ಈಗ ೨೮೭ ಆಗಿದೆ.

ಶಿವಸೇನಾದ ಮೂರನೇ ಎರಡರಷ್ಟು ಶಾಸಕರ ಬೆಂಬಲ ಸಿಗಬಹುದೇ?

ಈಗ ಶಿವಸೇನಾದಿಂದ ಬಂಡಾಯ ಎದ್ದಿರುವ ಏಕನಾಥ್‌ ಶಿಂಧೆ ಅವರು ತಮ್ಮ ಬಳಿ ೪೦ ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಕೆಲವು ಸ್ವತಂತ್ರ ಅಭ್ಯರ್ಥಿಗಳ ಬೆಂಬಲವೂ ಸಿಕ್ಕಿದೆ ಎಂದಿದ್ದಾರೆ. ಆದರೆ ವಾಸ್ತವವಾಗಿ ಶಿಂಧೆ ಬಳಿ ಎಷ್ಟು ಮಂದಿ ಇದ್ದಾರೆ ಎಂಬುದು ಖಚಿತವಾಗಿಲ್ಲ. ೩೦ ಮಂದಿ ಇರುವ ಸಾಧ್ಯತೆ ಇದೆ. ಪಕ್ಷಾಂತರ ನಿಷೇಧ ಕಾಯಿದೆ ಹಾಗೂ ಅನರ್ಹತೆಯಿಂದ ಪಾರಾಗಲು ಶಿವ ಸೇನಾದ ಮೂರನೇ ಎರಡರಷ್ಟು ಶಾಸಕರ ಬೆಂಬಲವನ್ನು ಶಿಂಧೆ ಗಳಿಸಬೇಕಾಗುತ್ತದೆ. ಅಂದರೆ ೩೭ ಶಾಸಕರ ಬೆಂಬಲ ಬೇಕಾಗುತ್ತದೆ. ಒಂದು ವೇಳೆ ೩೭ ಶಿವಸೇನಾ ಶಾಸಕರ ಬೆಂಬಲವನ್ನು ಗಳಿಸಿದರೆ ಶಿಂಧೆ ಬಣವು ಶಿವಸೇನಾದಿಂದ ಕಾನೂನುಬದ್ಧವಾಗಿ ಬೇರ್ಪಟ್ಟು ಬಿಜೆಪಿಯನ್ನು ಸರ್ಕಾರ ರಚನೆಗೆ ಬೆಂಬಲಿಸಲು ಸಾಧ್ಯವಾಗಲಿದೆ. ಆಗ ಸದನದಲ್ಲಿ ಮಹಾ ವಿಕಾಸ ಅಘಾಡಿಗೆ ಬಹುಮತ ಸಾಬೀತುಪಡಿಸುವುದು ಕಷ್ಟವಾಗಲಿದೆ. ಹಾಗೂ ಸರ್ಕಾರ ಪತನವಾದೀತು.

ಸಾಂವಿಧಾನಿಕ ಬಿಕ್ಕಟ್ಟು?

ಶಿಂಧೆ ಬಣ ಒಂದು ವೇಳೆ ಪಕ್ಷಾಂತರ ನಿಷೇಧ ಹಾಗೂ ಅನರ್ಹತೆ ಅಪಾಯದಿಂದ ತಪ್ಪಿಸಿಕೊಳ್ಳಲು ಅಗತ್ಯ ಬೆಂಬಲ ಗಳಿಸದಿದ್ದರೆ, ಶಾಸಕರಿಂದ ರಾಜೀನಾಮೆ ಕೊಡಿಸಿ ಸದನದಲ್ಲಿ ಸರ್ಕಾರದ ಬಲವನ್ನು ತಗ್ಗಿಸಬೇಕಾಗುತ್ತದೆ. ಈ ಹಿಂದೆ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಹೀಗೆ ಸರ್ಕಾರಗಳನ್ನು ಉರುಳಿಸಲಾಗಿತ್ತು. ಆದರೆ ಮಹಾರಾಷ್ಟ್ರದಲ್ಲಿ ಶಿವಸೇನಾದ ಮೂರನೇ ಒಂದರಷ್ಟು ಶಾಸಕರನ್ನು ಸೆಳೆದುಕೊಳ್ಳದಿದ್ದರೆ, ಸದನದಲ್ಲಿ ಬಹುಮತ ಸಾಬೀತುಪಡಿಸುವುದು ಬಿಜೆಪಿಗೂ ಕಷ್ಟವಾಗಲಿದೆ. ಆದರೆ ಸದನದಲ್ಲಿ ಸರ್ಕಾರದ ಬಲ ಕುಂದಿಸುವುದು ಕೂಡ ಅದರದ್ದೇ ರಾಜಕೀಯ ಪರಿಣಾಮ ಬೀರಬಹುದು. ಬೆಜೆಪಿ ಅಥವಾ ಎಂವಿಎ ಜತೆ ಶಿಂಧೆ ಒಪ್ಪಂದ ಮಾಡದಿದ್ದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಹುದು.

Exit mobile version