Site icon Vistara News

Mann Ki Baat: ಬೇಲೂರು, ಹಳೆಬೀಡು ದೇಗುಲಗಳಿಗೆ ವಿಶ್ವಮಾನ್ಯತೆ; ಮನ್‌ ಕಿ ಬಾತ್‌ನಲ್ಲಿ ಮೋದಿ ಸಂತಸ

Mann Ki Baat

PM Modi's monthly radio programme 'Mann Ki Baat' to resume today after hiatus of four months

ನವದೆಹಲಿ: ಕರ್ನಾಟಕದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣದವಾದ ಬೇಲೂರು (Beluru), ಹಳೆಬೀಡು (Halebidu) ಮತ್ತು ಸೋಮನಾಥಪುರದ (Somanathpur) ದೇಗುಲಗಳನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮನ್‌ ಕಿ ಬಾತ್‌ ರೇಡಿಯೊ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೊಯ್ಸಳರ ಕಾಲದ ದೇವಾಲಯಗಳಿಗೆ ವಿಶ್ವ ಮಾನ್ಯತೆ ಸಿಕ್ಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಅವರ ‘ಶಾಂತಿನಿಕೇತನ’ (ಪಟ್ಟಣ) ಹಾಗೂ ಕರ್ನಾಟಕದಲ್ಲಿ ನಿರ್ಮಾಣವಾದ ಹೊಯ್ಸಳರ ಕಾಲದ ದೇವಾಲಯಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದು ದೇಶದ ಪ್ರತಿಯೊಬ್ಬರೂ ಹೆಮ್ಮೆಪಡುವ ಸಂಗತಿಯಾಗಿದೆ. ಜಾಗತಿಕ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವಷ್ಟು ಭಾರತವು ಸಾಂಸ್ಕೃತಿಕವಾಗಿ ಸಿರಿತನವಾಗಿದೆ. ಇದರೊಂದಿಗೆ ಭಾರತದ 42 ತಾಣಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದಂತಾಗಿದೆ” ಎಂದು ಹೇಳಿದರು.

ಮನ್‌ ಕಿ ಬಾತ್‌ ಕೇಳಿ

ಜರ್ಮನಿ ಯುವತಿಯ ಕನ್ನಡ ಹಾಡು

ನರೇಂದ್ರ ಮೋದಿ ಅವರು ಮನ್‌ ಕಿ ಭಾಷಣದ ಮಧ್ಯೆ, ಜರ್ಮನಿ ಯುವತಿ ಕಸ್ಮಿ ಎಂಬುವರು ಹಾಡಿದ ಹಾಡನ್ನು ಪ್ಲೇ ಮಾಡಿದರು. “ಜರ್ಮನಿಯ ಕಸ್ಮಿ ಅವರು ಭಾರತ, ಭಾರತದ ಸಂಸ್ಕೃತಿ, ಸಂಗೀತದ ಬಗ್ಗೆ ಅಪಾರ ಕಾಳಜಿ, ಆಸಕ್ತಿ ಹೊಂದಿದ್ದಾರೆ. ಇವರು ಕನ್ನಡ, ಸಂಸ್ಕೃತ, ಅಸ್ಸಾಮಿ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಹಾಡು ಹಾಡಿದ್ದಾರೆ. ಇವರು ಇನ್‌ಸ್ಟಾಗ್ರಾಂನಲ್ಲೂ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಅವರು ಹಾಡಿರುವ “ನಮ್ಮ ವಚನ ಬಹುವಚನ” ಎಂಬ ಕನ್ನಡ ಹಾಡು ಕೇಳಿ” ಎಂದು ಪ್ಲೇ ಮಾಡಿದರು.

ಇದನ್ನೂ ಓದಿ: Special Parliament Session: ಹಳೆಯ ಸಂಸತ್‌ ಭವನ ಇನ್ನು ʼಸಂವಿಧಾನ ಸದನʼ: ಪಿಎಂ ನರೇಂದ್ರ ಮೋದಿ

ಜಿ20 ಶೃಂಗಸಭೆಯ ಯಶಸ್ಸು

ನವದೆಹಲಿಯಲ್ಲಿ ಎರಡು ದಿನಗಳ ಜಿ20 ಶೃಂಗಸಭೆಯ ಯಶಸ್ವಿ ಆಯೋಜನೆಯ ಕುರಿತು ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. “ಜಿ20 ಶೃಂಗಸಭೆಯು ಜಗತ್ತಿಗೆ ಭಾರತದ ದರ್ಶನ ಮಾಡಿಸುವ ಜತೆಗೆ ಹಲವು ಒಪ್ಪಂದ, ಆಫ್ರಿಕಾ ಒಕ್ಕೂಟವನ್ನು ಗ್ರೂಪ್‌ಗೆ ಸೇರಿಸಿಕೊಂಡಿದ್ದು, ಇಂಡಿಯಾ-ಮಿಡಲ್‌ ಈಸ್ಟ್‌-ಯುರೋಪ್‌ ಎಕನಾಮಿಕ್‌ ಕಾರಿಡಾರ್‌ ನಿರ್ಮಾಣ, ಜಿ20 ಸ್ಯಾಟಲೈಟ್‌ ಉಡಾವಣೆ ಸೇರಿ ಹಲವು ದಿಸೆಯಲ್ಲಿ ಇದು ಮಹತ್ವ ಪಡೆದಿದೆ. ಹಾಗೆಯೇ, ಚಂದ್ರಯಾನ 3 ಮಿಷನ್‌ ಯಶಸ್ಸು ಕೂಡ ಭಾರತದ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿದೆ” ಎಂದು ಮೋದಿ ಹೇಳಿದರು.

ದೇಶೀಯ ವಸ್ತುಗಳ ಖರೀದಿಗೆ ಕರೆ

ಮನ್‌ ಕಿ ಬಾತ್‌ನಲ್ಲಿ ನರೇಂದ್ರ ಮೋದಿ ಅವರು ದೇಶೀಯ ವಸ್ತುಗಳನ್ನು ಖರೀದಿಸಿ ಎಂದು ದೇಶದ ಜನರಿಗೆ ಕರೆ ನೀಡಿದರು. “ನವರಾತ್ರಿ ಸೇರಿ ಹಲವು ಸಾಲು ಸಾಲು ಹಬ್ಬಗಳು ಬರುತ್ತವೆ. ನಾಗರಿಕರು ದೇಶೀಯ ವಸ್ತುಗಳನ್ನು ಖರೀದಿಸಲು ಆದ್ಯತೆ ನೀಡಬೇಕು. ಸ್ಥಳೀಯ ಕರಕುಶಲ ಕರ್ಮಿಗಳು, ವಿಶ್ವಕರ್ಮ ಸಹೋದರರು ಸೇರಿ ನೇರವಾಗಿ ಸ್ಥಳೀಯರಿಂದ ಉತ್ಪನ್ನಗಳನ್ನು ಖರೀದಿಸಿದರೆ ಅವರಿಗೆ ಲಾಭವಾಗಲಿದೆ” ಎಂದು ಪ್ರಧಾನಿ ಕರೆ ನೀಡಿದರು.

Exit mobile version