Site icon Vistara News

Security Breach In Parliament: ಲೋಕಸಭೆ ಸದನದೊಳಗೆ ನುಗ್ಗಿ ಕಲರ್‌ ಬಾಂಬ್‌ ಸಿಡಿಸಿದ ದುಷ್ಕರ್ಮಿಗಳು!

security breach in parliament

ಹೊಸದಿಲ್ಲಿ: ಲೋಕಸಭೆಯಲ್ಲಿ ಭಾರಿ ಪ್ರಮಾಣದ ಭದ್ರತೆ ಉಲ್ಲಂಘನೆ ( Security Breach In Parliament) ನಡೆದಿರುವುದು ವರದಿಯಾಗಿದೆ. ಇದರಿಂದ ಆತಂಕಗೊಂಡ ಸಂಸತ್‌ ಸದಸ್ಯರು ಹೊರಬರಲಾರಂಭಿಸಿದರು.

ಲೋಕಸಭೆ ಕಲಾಪ ನಡೆಯುತ್ತಿದ್ದಾಗ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಕೆಳಗೆ ಜಿಗಿದು ಸದನದಲ್ಲಿ ಸುತ್ತಲೂ ಓಡಾಡಲಾರಂಭಿಸಿದರು. ಅವರು ತಮ್ಮ ಕೈಯಲ್ಲಿದ್ದ ಸಾಧನಗಳಿಂದ ಫ್ಲೋರೊಸೆಂಟ್ ಬಣ್ಣದ ಅನಿಲವನ್ನು ಸಿಂಪಡಿಸುತ್ತಾ ಸೆರೆಹಿಡಿಯುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದರು ಎಂದು ಕೆಲವು ಮೂಲಗಳು ತಿಳಿಸಿವೆ.

ಕೂಡಲೇ ಲೋಕಸಭೆಯ ಕಲಾಪವನ್ನು ಸ್ಥಗಿತಗೊಳಿಸಲಾಯಿತು ಮತ್ತು ಸಂಸದರು ಲೋಕಸಭೆಯಿಂದ ಹೊರಬರಲು ಪ್ರಾರಂಭಿಸಿದರು. ಒಳನುಗ್ಗಿದ ವ್ಯಕ್ತಿಗಳು ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಸಂಸದರು ಮತ್ತು ಭದ್ರತಾ ಸಿಬ್ಬಂದಿ ಆ ವ್ಯಕ್ತಿಗಳನ್ನು ಹಿಡಿದು ವಿಚಾರಣೆ ಆರಂಭಿಸಿದ್ದಾರೆ.

ಸದ್ಯ ಇಬ್ಬರು ತೆಲಂಗಾಣ ಮೂಲದವರು ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಪುರುಷ, ಇನ್ನೊಬ್ಬಳು ಮಹಿಳೆ. ಪುರುಷನ ಹೆಸರು ಸಾಗರ್‌ ಎಂದು ತಿಳಿದುಬಂದಿದೆ. ದಾಳಿಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಸಂಸತ್‌ ಭವನ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.

ಭದ್ರತೆ ಮುರಿದು ಒಳನುಗ್ಗಿದವರು ಇಬ್ಬರೋ ಅಥವಾ ಹಲವು ಮಂದಿ ಇದ್ದಾರೋ ಎಂಬುದು ಇನ್ನೂ ತಿಳಿದಿಲ್ಲ. ಗೊಂದಲದಲ್ಲಿ ಸಂಸದರು ಲೋಕಸಭೆಯಿಂದ ಹೊರಬಂದರು. ಗ್ಯಾಲರಿಯಿಂದ ಜಿಗಿದವರು ಯಾವುದೋ ಬಗೆಯ ರೀತಿಯ ಅನಿಲವನ್ನು ಸಿಂಪಡಿಸುತ್ತಿದ್ದಾರೆ ಎಂದು ಹೇಳಿದರು.

ಇಂದು ಸಂಸತ್‌ ಮೇಲಿನ ದಾಳಿ ಸಂಭವಿಸಿ 22 ವರ್ಷಗಳಾದ ದಿನ ಎಂಬುದು ಗಮನಾರ್ಹವಾಗಿದೆ. ಖಲಿಸ್ತಾನಿ ಉಗ್ರ ಸತ್ವಂತ್‌ ಸಿಂಗ್‌ ಪನ್ನುನ್‌ ಇತ್ತೀಚೆಗೆ, ʼʼಡಿಸೆಂಬರ್‌ 13ರಂದು ನಾವು ಭಾರತ ಬೆಚ್ಚಿಬೀಳುವಂತೆ ಮಾಡಲಿದ್ದೇವೆʼʼ ಎಂದು ಬೆದರಿಸಿದ್ದ.

Exit mobile version