Site icon Vistara News

Kumari Aunty: ಕಾಂಗ್ರೆಸ್ ‌ಸರ್ಕಾರದ ವಿರುದ್ಧ ನಿಲುವು; ‌’ವೈರಲ್ ಆಂಟಿ’ ಫುಡ್‌ ಸ್ಟಾಲ್‌ಗೆ ಬೀಗ!

Kumari Aunty

Hyderabad cops shut popular 'Kumari Aunty' food stall, Revanth Reddy intervenes

ಹೈದರಾಬಾದ್:‌ ಆಳುವ ಸರ್ಕಾರಗಳು ಯಾವ ಪಕ್ಷವೇ ಆಗಿರಲಿ, ಅವು ಎಲ್ಲರ ಪರವಾಗಿ ಕೆಲಸ ಮಾಡಬೇಕು. ಆದರೆ, ತೆಲಂಗಾಣದ ಹೈದರಾಬಾದ್‌ನಲ್ಲಿ ಬೀದಿ ಬದಿ ಫುಡ್‌ ಸ್ಟಾಲ್‌ ಇಟ್ಟುಕೊಂಡಿದ್ದ ಮಹಿಳೆಯೊಬ್ಬರು ರಾಜ್ಯ ಸರ್ಕಾರದ ವಿರುದ್ಧ ನಿಲುವು ತಾಳಿದ್ದಕ್ಕೆ, ಅವರ ಹೋಟೆಲ್‌ಅನ್ನು ಸ್ಥಗಿತಗೊಳಿಸಲಾಗಿದೆ. ಕುಮಾರಿ ಆಂಟಿ (Kumari Aunty) ಎಂದೇ ಖ್ಯಾತಿಯಾಗಿರುವ ಮಹಿಳೆಯ ಗೂಡಂಗಡಿ ವ್ಯಾಪಾರ ಸ್ಥಗಿತಗೊಳಿಸಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ, ಮಧ್ಯಪ್ರವೇಶಿಸಿರುವ ಮುಖ್ಯಮಂತ್ರಿ ರೇವಂತ್‌ ರೆಡ್ಡಿ (Revanth Reddy), ಗೂಡಂಗಡಿ ವ್ಯಾಪಾರ ಸ್ಥಗಿತಗೊಳಿಸದಂತೆ ಆದೇಶಿಸಿದ್ದಾರೆ.

ಹೈದರಾಬಾದ್‌ನ ಮಾಧಾಪುರದಲ್ಲಿರುವ ಐಟಿಸಿ ಕೊಹಿನೂರ್‌ ಜಂಕ್ಷನ್‌ನಲ್ಲಿ ಸಾಯಿ ಕುಮಾರಿ ಅವರು ಅನ್ನ, ಚಿಕನ್‌, ಮಟನ್‌ ಕರಿ ಸೇರಿ ಹಲವು ಬಗೆಯ ಆಹಾರ ತಯಾರಿಸುತ್ತಾರೆ. ಅವರು 13 ವರ್ಷದಿಂದ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಯುಟ್ಯೂಬರ್‌ ಒಬ್ಬರು ಕುಮಾರಿ ಆಂಟಿಯ ಹೋಟೆಲ್‌ ಬಗ್ಗೆ ವಿಡಿಯೊ ಮಾಡಿ, ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ ಬಳಿಕ ಕುಮಾರಿ ಆಂಟಿ ಹೋಟೆಲ್‌ ಖ್ಯಾತಿ ಗಳಿಸಿದೆ. ಜನ ಹುಡುಕಿಕೊಂಡು ಹೋಗಿ ಅವರ ಹೋಟೆಲ್‌ನಲ್ಲಿ ಚಿಕನ್‌ ಸವಿಯುತ್ತಿದ್ದರು.

ಆದರೆ ಆಗಿದ್ದೇನು?

ಆಂಟಿಯ ಹೋಟೆಲ್‌ ಬಗೆಗಿನ ವಿಡಿಯೊ ವೈರಲ್‌ ಆಗುತ್ತಲೇ ಮತ್ತೊಬ್ಬ ಯುಟ್ಯೂಬರ್‌ ಹೋಗಿ ಮಹಿಳೆ ಜತೆ ಮಾತನಾಡಿಸಿದ್ದಾರೆ. ಇದೇ ವೇಳೆ ಅವರು ರಾಜ್ಯ ಸರ್ಕಾರದ ವಿರುದ್ಧ ನಿಲುವು ತಾಳಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ರಾಯ್‌ದುರಂ ಸಂಚಾರ ಪೊಲೀಸರು ಮಹಿಳೆಯ ಗೂಡಂಗಡಿಯನ್ನು ಸ್ಥಗಿತಗೊಳಿಸಿದ್ದಾರೆ. ಟ್ರಾಫಿಕ್‌ ನಿಯಮ ಉಲ್ಲಂಘನೆ, ಸಂಚಾರಕ್ಕೆ ಅಡ್ಡಿ ನೆಪದಲ್ಲಿ ಸಾಯಿ ಕುಮಾರಿ ಅವರ ಗೂಡಂಗಡಿಯ ವ್ಯಾಪಾರ ನಿಲ್ಲಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Bangalore Hotels: ಹೋಟೆಲ್‌ಗಳಲ್ಲಿ ಗಂಟೆಗಟ್ಟಲೇ ಕೂರಂಗಿಲ್ಲ; ಟೈಮ್‌ಪಾಸ್‌ ಮಾಡೋರಿಗೆ ಬೀಳಲಿದೆ ಕಡಿವಾಣ

ಕುಮಾರಿ ಆಂಟಿಯ ಹೋಟೆಲ್‌ ಸ್ಥಗಿತದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಕುಮಾರಿ ಆಂಟಿ ವ್ಯಾಪಾರ ಸ್ಥಗಿತದ ಆದೇಶ ಹಿಂಪಡೆದಿದ್ದಾರೆ. ಅಲ್ಲದೆ, ಕುಮಾರಿ ಆಂಟಿಯ ಹೋಟೆಲ್‌ಗೆ ಭೇಟಿ ನೀಡುವುದಾಗಿ ರೇವಂತ್‌ ರೆಡ್ಡಿ ಅವರು ಘೋಷಿಸಿದ್ದಾರೆ. ಅಲ್ಲಿ ಊಟ ಮಾಡುವುದಾಗಿಯೂ ಹೇಳಿದ್ದಾರೆ. ಮುಖ್ಯಮಂತ್ರಿಯವರ ಮಾದರಿಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಿಂದ ಖ್ಯಾತಿಯಾಗಿ, ಅವುಗಳಿಂದಲೇ ವ್ಯಾಪಾರಕ್ಕೆ ಕುತ್ತು ಬಂದು, ಈಗ ಅದೇ ಸಾಮಾಜಿಕ ಜಾಲತಾಣಗಳಿಂದಲೇ ಕುಮಾರಿ ಆಂಟಿಯ ವ್ಯಾಪಾರ ಮುಂದುವರಿದಿದೆ. ಮುಖ್ಯಮಂತ್ರಿಯವರೇ ಅವರ ಹೋಟೆಲ್‌ಗೆ ಭೇಟಿ ನೀಡುವಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version