Site icon Vistara News

ಆಸ್ಟ್ರೇಲಿಯಾದಲ್ಲಿ ಹೈದರಾಬಾದ್‌ ಮಹಿಳೆಯ ಹತ್ಯೆ; ಕೊಂದು ಭಾರತಕ್ಕೆ ಬಂದನಾ ಪತಿ?

Chaithanya Madhagani

Hyderabad Woman Found Murdered in Australia, Body Found in Wheelie Bin

ಸಿಡ್ನಿ/ಹೈದರಾಬಾದ್: ಆಸ್ಟ್ರೇಲಿಯಾದಲ್ಲಿ ಹೈದರಾಬಾದ್‌ ಮೂಲದ ಮಹಿಳೆಯೊಬ್ಬರು (Hyderabad Woman) ದಾರುಣವಾಗಿ ಹತ್ಯೆಗೀಡಾಗಿದ್ದಾರೆ. ಹೈದರಾಬಾದ್‌ನ ಚೈತನ್ಯ ಮದಗಣಿ (Chaithanya Madhagani) ಎಂಬ 36 ವರ್ಷದ ಮಹಿಳೆಯ ಶವವು ಡಸ್ಟ್‌ಬಿನ್‌ನಲ್ಲಿ (Dustbin) ಪತ್ತೆಯಾಗಿದೆ. ಆಸ್ಟ್ರೇಲಿಯಾದ (Australia) ಬಕ್ಲೆಯಲ್ಲಿ (Buckley) ಮಾರ್ಚ್‌ 9ರಂದು ಮಹಿಳೆಯ ಶವ ಪತ್ತೆಯಾಗಿದೆ. ಈಗ ಮಹಿಳೆಯ ಪತಿಯೇ ಕೊಂದು, ಆತ ಭಾರತಕ್ಕೆ ಬಂದಿದ್ದಾನೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯಾದ ಪಾಯಿಂಟ್‌ ಕುಕ್‌ನಲ್ಲಿ ಚೈತನ್ಯ ಮದಗಣಿ ಹಾಗೂ ಅವರ ಪತಿ ಅಶೋಕ್‌ ರಾಜ್‌ ವಾರಿಕುಪ್ಪಳ ಅವರು ಮಗನೊಂದಿಗೆ ವಾಸಿಸುತ್ತಿದ್ದರು. ಅವರಿಗೆ ಆಸ್ಟ್ರೇಲಿಯಾದ ಪೌರತ್ವವೂ ಸಿಕ್ಕಿತ್ತು. ಆದರೆ, ಚೈತನ್ಯ ಮದಗಣಿಯನ್ನು ಕೊಲೆ ಮಾಡಿದ ಅಶೋಕ್‌ ರಾಜ್‌, ಹೈದರಾಬಾದ್‌ಗೆ ವಾಪಸಾಗಿದ್ದಾನೆ. ಅಷ್ಟೇ ಅಲ್ಲ, ತಮ್ಮ ಮಗನನ್ನು ಚೈತನ್ಯ ಅವರ ತಂದೆ-ತಾಯಿಗೆ ಕೊಟ್ಟಿದ್ದಾನೆ. “ಕೊಲೆ ಮಾಡಿರುವುದನ್ನು ಅಳಿಯ ಒಪ್ಪಿದ್ದಾನೆ” ಎಂಬುದಾಗಿ ಚೈತನ್ಯ ಮದಗಣಿಯ ತಂದೆ-ತಾಯಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಚೈತನ್ಯ ಮದಗಣಿ ಅವರ ಕೊಲೆಯಾಗಿದೆ ಎಂಬ ಮಾಹಿತಿ ದೊರೆಯುತ್ತಲೇ ಉಪ್ಪಳ್‌ ಶಾಸಕ ಭಂಡಾರಿ ಲಕ್ಷ್ಮ ರೆಡ್ಡಿ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. “ಚೈತನ್ಯ ಮದಗಣಿ ಅವರು ನಮ್ಮ ಕ್ಷೇತ್ರದ ಮಹಿಳೆಯಾಗಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಹತ್ಯೆಗೀಡಾಗಿದ್ದು, ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ನೆರವು ನೀಡಬೇಕು” ಎಂಬುದಾಗಿ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

“ಮಹಿಳೆಯ ತಂದೆ-ತಾಯಿಯು ನನ್ನನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಅಳಿಯನು ಕೊಲೆ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೈತನ್ಯ ಮದಗಣಿ ಅವರ ಶವವನ್ನು ಭಾರತಕ್ಕೆ ತರಲು ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ಪತ್ರ ಬರೆದಿದ್ದೇನೆ ಎಂದು ಶಾಸಕ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಕೋಲ್ಕೊತಾ ಮೂಲದ ನೃತ್ಯಪಟು ಹತ್ಯೆ; ಭಾರತೀಯರ ಪ್ರಾಣಕ್ಕಿಲ್ಲವೇ ಬೆಲೆ?

ಚೈತನ್ಯ ಮದಗಣಿ ಅವರನ್ನು ಪತಿ ಅಶೋಕ್‌ ರಾಜ್‌ ವಾರಿಕುಪ್ಪಳ ಏಕೆ ಕೊಲೆ ಮಾಡಿದ? ಆಸ್ಟ್ರೇಲಿಯಾದಲ್ಲಿ ಅವರ ಮಧ್ಯೆ ಏನು ನಡೆದಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಮಹಿಳೆಯ ಶವ ಪತ್ತೆಯಾಗುತ್ತಲೇ ಪ್ರಕರಣದ ಕುರಿತು ಆಸ್ಟ್ರೇಲಿಯಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version