Site icon Vistara News

Jagdeep Dhankhar:‌ ನನಗ್ಯಾಕೆ ಸಿಟ್ಟು, ಮದುವೆಯಾಗಿ 45 ವರ್ಷ ಆಯ್ತು; ಧನಕರ್‌ ಉತ್ತರಕ್ಕೆ ಬಿದ್ದು ಬಿದ್ದು ನಕ್ಕ ರಾಜ್ಯಸಭೆ

Jagdeep Dhankhar And Mallikarjun Kharge

I am a married man for over 45 years, never angry: Jagdeep Dhankhar to Mallikarjun Kharge

ನವದೆಹಲಿ: ಸಂಸತ್‌ ಮುಂಗಾರು ಅಧಿವೇಶನದ ರಾಜ್ಯಸಭೆ ಕಲಾಪದ ವೇಳೆ ರಾಜ್ಯಸಭೆ ಚೇರ್ಮನ್ ಜಗದೀಪ್‌ ಧನಕರ್‌ (Jagdeep Dhankhar) ಹಾಗೂ ಮೇಲ್ಮನೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಧ್ಯೆ ತಮಾಷೆಯ ವಾಗ್ವಾದ ನಡೆದಿದೆ. ಮಣಿಪುರ ಹಿಂಸಾಚಾರ, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಉಂಟಾದ ವಾಕ್ಸಮರವು ಮದುವೆ ವಿಚಾರದತನಕ ಹೋಯಿತು. “ನಿಮಗೆ ಬೇಗ ಸಿಟ್ಟು ಬರುತ್ತದೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಆಗ, “ನನಗೆ ಮದುವೆಯಾಗಿ 45 ವರ್ಷ ಆಗಿದೆ. ಎಂದಿಗೂ ಸಿಟ್ಟು ಮಾಡಿಕೊಂಡಿಲ್ಲ” ಎಂದು ಧನಕರ್‌ ತಮಾಷೆಯಾಗಿ ಉತ್ತರಿಸಿದ್ದಾರೆ.

ಮಣಿಪುರ ಹಿಂಸಾಚಾರದ ಕುರಿತು ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು. ಇದಕ್ಕೆ ಜಗದೀಪ್‌ ಧನಕರ್‌ ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಲ್ಲಿಕಾರ್ಜುನ ಖರ್ಗೆ ಅವರು, “ನೀವು ನಮ್ಮ ಸಣ್ಣ ಕೋರಿಕೆಯನ್ನೂ ಮನ್ನಿಸುವುದಿಲ್ಲ. ಪ್ರಧಾನಿಯವರ ಉಪಸ್ಥಿತಿಯನ್ನು ನಾವು ಬಯಸಿದರೆ, ನೀವು ಒಪ್ಪುವುದಿಲ್ಲ. ನೀವು ಪ್ರಧಾನಮಂತ್ರಿಯನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ” ಎಂದರು.

ಆಗ ಧನಕರ್‌ ಅವರು ಪ್ರತಿಕ್ರಿಯಿಸುತ್ತ, “ನಾನು ರಾಜಕೀಯ ಪಕ್ಷದ ನಾಯಕನಲ್ಲ. ನನಗೆ ದೇಶದ ಜನ ಹಾಗೂ ಅಭಿವೃದ್ಧಿಯ ಬಗ್ಗೆ, ಆಡಳಿತದ ಬಗ್ಗೆ ಕಾಳಜಿ ಇದೆಯೇ ಹೊರತು, ಯಾರನ್ನೂ ಸಮರ್ಥಿಸಿಕೊಳ್ಳುವುದಿಲ್ಲ” ಎಂದರು. “ನೀವು ಸಿಟ್ಟು ಮಾಡಿಕೊಳ್ಳಬಾರದು” ಎಂದು ಖರ್ಗೆ ಹೇಳಿದರು. ಆಗ ಜಗದೀಪ್‌ ಧನಕರ್‌ ಅವರು, “ನನಗೆ ಮದುವೆಯಾಗಿ 45 ವರ್ಷ ಆಗಿದೆ. ನನಗೆ ಸಿಟ್ಟು ಎಲ್ಲಿಂದ ಬರುತ್ತದೆ. ಯಾವುದೇ ಕಾರಣಕ್ಕೂ ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ” ಎಂದು ತಮಾಷೆಯಾಗಿ ಉತ್ತರಿಸಿದರು. ಆಗ, ಎಲ್ಲ ಸದಸ್ಯರು ನಗೆ ಕಡಲಲ್ಲಿ ತೇಲಿದರು.

ಇದನ್ನೂ ಓದಿ: Budget Session: ಪ್ರಧಾನಿ ಮೋದಿಯನ್ನು ಮೌನಿಬಾಬಾ ಎಂದ ಖರ್ಗೆ; ಇಂಥ ಮಾತು ಬೇಡ ಎಂದ ರಾಜ್ಯಸಭೆ ಅಧ್ಯಕ್ಷ ಜಗದೀಪ್​ ಧನಕರ್​

ಆಗ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ನೀವು ನಿಮ್ಮ ಸಿಟ್ಟನ್ನು ತೋರಿಸಿಕೊಳ್ಳುವುದಿಲ್ಲ. ಆದರೆ, ನಿಮಗೆ ಸಿಟ್ಟು ಬಂತು” ಎಂದರು. ಆಗ ಧನಕರ್‌ ಅವರು, “ನನ್ನ ಹೆಂಡತಿ ಈ ಸದನದ ಸದಸ್ಯೆ ಅಲ್ಲ. ಈ ಸದನದ ಸದಸ್ಯರಲ್ಲದವರ ಬಗ್ಗೆ ಚರ್ಚೆ ಬೇಡ. ಈ ವಿಷಯಕ್ಕೆ ಸಂಬಂಧವೂ ಪಟ್ಟಿಲ್ಲ. ಹಾಗಾಗಿ, ಆ ಬಗ್ಗೆ ಚರ್ಚೆ ಬೇಡ” ಎಂದರು. ಇಬ್ಬರ ನಡುವಿನ ತಮಾಷೆಯ ವಾಗ್ವಾದಕ್ಕೆ ಸದಸ್ಯರು ನಕ್ಕರು.

Exit mobile version