ನವದೆಹಲಿ: ಸಿನಿಮಾಗಳ ಮೂಲಕ ನಾನು ಯಾವುದೇ ರಾಜಕೀಯ ಪಕ್ಷದ (political Party) ಪರವಾಗಿ ಪ್ರಚಾರ ಮಾಡುತ್ತಿಲ್ಲ ಎಂದು ನಟ ಅಕ್ಷಯ್ ಕುಮಾರ್ (Actor Akshay Kumar) ಅವರು ಸ್ಪಷ್ಟಪಡಿಸಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಸಿನಿಮಾಗಳ ಮೂಲಕ ಆಡಳಿತಾರೂಢ ಬಿಜೆಪಿ (BJP Party) ಪರವಾಗಿ ಪ್ರಚಾರ ಮಾಡುತ್ತಾರೆಂಬ ಆರೋಪವಿದೆ. ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಮಿಷನ್ ಮಂಗಲ್‌ನಂಥ ಸಿನಿಮಾಗಳು ಬಿಜೆಪಿ ಸರ್ಕಾರದ ಯೋಜನೆಗಳನ್ನು ಪ್ರಮೋಟ್ ಮಾಡುತ್ತವೆ ಎಂದು ಮಾತುಗಳಿವೆ. ಈ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್ ಅವರು, ನಾನು ಯಾವುದೇ ಪಕ್ಷದ ಪರ ಚಿತ್ರಗಳ ಮೂಲಕ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸ್ವಚ್ಛ ಭಾರತ್ ಮಿಷನ್ ಅನ್ನು ಪ್ರಚಾರ ಮಾಡಲು ನಾನು ನಾನು ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರವನ್ನು ಮಾಡಿದೆ ಎಂದು ಬಹಳಷ್ಟು ಜನರು ಹೇಳುತ್ತಾರೆ. ಅವರು ಮಂಗಳಯಾನ ಮಾಡಿದ್ರು. ನಾನು ಮಿಷನ್ ಮಂಗಲ್ ಮಾಡಿದೆ. ಹಾಗಂತ ನಾನು ಬಿಜೆಪಿ ಪರವಾಗಿ ಮಾಡಿದ್ದೇನೆ ಎಂದಲ್ಲ. ನಾನು ಏರ್‌ಲಿಫ್ಟ್ ಚಿತ್ರ ಮಾಡಿದಾಗ ಕಾಂಗ್ರೆಸ್ ಆಡಳಿತದಲ್ಲಿತ್ತು. ಆದರೆ, ಆ ಬಗ್ಗೆ ಯಾರೂ ಮಾತನಾಡಲಿಲ್ಲ. ಮಿಷನ್ ರಾಣಿಗಂಜ್ ಕೂಡ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದಿರುವಂಥದ್ದು. ಯಾರು ಅಧಿಕಾರದಲ್ಲಿದ್ದರು ಎಂಬುದು ಮುಖ್ಯವಲ್ಲ. ದೇಶದ ಒಳಿತಿಗಾಗಿ ಏನು ಮಾಡಲಾಗಿದೆ ಎಂಬುದು ಮುಖ್ಯವಾಗುತ್ತದೆ ಎಂದು ಅಕ್ಷಯ್ ಕುಮಾರ್ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Akshay Kumar: ಕೊನೆಗೂ ಭಾರತೀಯ ನಾಗರಿಕರಾದ ಅಕ್ಷಯ್ ಕುಮಾರ್! ಇನ್ನು ‘ಕೆನಡಾ ಕುಮಾರ್’ ಅಂದ್ರೆ ಹುಷಾರ್!
ಇದೇ ವೇಳೆ, ಭಾರತ ಮತ್ತು ಕೆನಡಾ ಸಂಬಂಧದ ಬಗ್ಗೆ ಮಾತನಾಡಿ, ನಾನು ತುಂಬಾ ಆಶಾವಾದಿ ಮನುಷ್ಯ. ಎಲ್ಲವೂ ತಾನಾಗಿಯೇ ಬಗೆಹರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಮೊದಲು ಹೇಗಿತ್ತೋ ಹಾಗೆ ಆಗಲಿ ಎಂದು ಪ್ರಾರ್ಥಿಸುತ್ತೇನೆ. ನಾನು ನಕಾರಾತ್ಮಕ ಬದಿಯನ್ನು ನೋಡಲು ಬಯಸುವುದಿಲ್ಲ. ಎಲ್ಲವೂ ಒಳ್ಳೆಯದಾಗಲಿದೆ ಎಂದು ನಾನು ಆಶಿಸುತ್ತೇನೆ ಎಂದು ಅಕ್ಷಯ್ ಕುಮಾರ್ ಅವರು ಹೇಳಿದರು. ಕೆನಡಾದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ನಿರ್ಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವುದಾಗಿ ಅವರು ಇದೇ ವೇಳೆ ಹೇಳಿದರು.
ಅಕ್ಷಯ್ ಕುಮಾರ್ ಭಾರತದಲ್ಲಿ ಹುಟ್ಟಿದ್ದರೂ ಕೆನಡಾದ ನಾಗರಿಕತ್ವ ಸ್ವೀಕರಿಸಿದ್ದರು. ಇದರಿಂದಾಗಿ ಅವರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕೆನಡಿಯನ್ ಕುಮಾರ್ ಎಂದು ಟ್ರಾಲ್ ಮಾಡಲಾಗುತ್ತಿತ್ತು. ಕಳೆದ ಆಗಸ್ಟ್ 15ರಂದು ಅವರು ಮತ್ತೆ ಭಾರತದ ನಾಗರಿಕತ್ವವನ್ನು ಪಡೆದುಕೊಂಡಿದ್ದರು. ಈ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡಿದ್ದರು.