Site icon Vistara News

Amritpal Singh: ಪೊಲೀಸರಿಗೆ ನಾನು ಶರಣಾಗಲ್ಲ; ಯುಟ್ಯೂಬ್‌ ಲೈವ್‌ನಲ್ಲಿ ಅಮೃತ್ ಪಾಲ್ ಸಿಂಗ್ ಹೇಳಿಕೆ

I Am Not Surrendering, Amritpal singh says on youtube live

ನವದೆಹಲಿ: ತಲೆ ಮರೆಸಿಕೊಂಡು ಓಡಾಡುತ್ತಿರುವ ಖಲಿಸ್ತಾನಿ ಪ್ರತ್ಯೇಕತಾ ನಾಯಕ ಅಮೃತ್ ಪಾಲ್ ಸಿಂಗ್ (Amritpal Singh), ಯುಟ್ಯೂಬ್‌ನಲ್ಲಿ ಲೈವ್‌ಗೆ (YouTube Live) ಬಂದು, ಯಾವುದೇ ಕಾರಣಕ್ಕೂ ಪೊಲೀಸರಿಗೆ ಶರಣಾಗುವುದಿಲ್ಲ ಎಂದು ಹೇಳಿದ್ದಾನೆ. ಕೆಲವು ದಿನಗಳ ಹಿಂದೆ ಗುಪ್ತಚರ ಮಾಹಿತಿಗಳ ಪ್ರಕಾರ, ಆತ ಪೊಲೀಸರಿಗೆ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅದೇ ಕಾರಣಕ್ಕೆ ಆತ ಅಮೃತಸರ್ ಸೇರಿದಂತೆ ಕೆಲವು ಪ್ರದೇಶಗಳ ಗುರುದ್ವಾರಗಳ ಆಶ್ರಯ ಪಡೆಯಲಿದ್ದಾನೆಂದು ಗುಪ್ತಚರ ಸಂಸ್ಥೆಗಳು ಅಂದಾಜಿಸಿದ್ದವು. ಆ ನಂತರ, ವಿಡಿಯೋ ಬಿಡುಗಡೆ ಮಾಡಿದ್ದ ಅಮೃತ್ ಪಾಲ್ ಸಿಂಗ್, ಇದು ಸಿಖ್ಖರ ಮೇಲಿನ ದಬ್ಬಾಳಿಕೆ ಎಂದು ಆರೋಪಿಸಿದ್ದ.

30 ವರ್ಷದ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್ ಸಿಖ್ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಹಾದಿಯಲ್ಲಿದ್ದಾನೆ. ಮಾರ್ಚ್ 18 ರಂದು ಅವನ ಮತ್ತು ಅವನ ಖಲಿಸ್ತಾನ್ ಪರ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಸದಸ್ಯರ ವಿರುದ್ಧ ಪೊಲೀಸ್ ಕಾರ್ಯಾಚರಣೆ ನಡೆಸಿದ ಬಳಿಕ, ಆತ ನಾಪತ್ತೆಯಾಗಿದ್ದಾನೆ. ಸುಮಾರು ಮೂರು ವಾರಗಳ ಬಳಿಕ, ಅವನು ಮತ್ತು ಸಹಚರರು ಬಂಧನಕ್ಕೊಳಗಾದ ವ್ಯಕ್ತಿಯ ಬಿಡುಗಡೆಗಾಗಿ ಅಮೃತಸರ ಬಳಿಯ ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

ಪೊಲೀಸರಿಗೆ ಶರಣಾಗಿ ತನಿಖೆಗೆ ಸಹಕರಿಸುವಂತೆ ಸಿಖ್ಖ ಧಾರ್ಮಿಕ ಉನ್ನತ ಸಂಸ್ಥೆಯಾದ ಅಕಾಲ್ ತಖ್ತ್ ಜಾಥೇದಾರ್ ಸೂಚಿಸಿತ್ತು. ಮತ್ತೊಂದೆಡೆ, ಪಂಜಾಬ್ ಮತ್ತು ಹರ್ಯಾಣ ಕೋರ್ಟ್, ಪೊಲೀಸರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಸೂಚಿಸಿತ್ತು.

ಈ ಹಿಂದಿನ ವಿಡಿಯೋದಲ್ಲಿ Amritpal Singh ಹೇಳಿದ್ದೇನು?

“ನನ್ನನ್ನು ಬಂಧಿಸುವುದಷ್ಟೇ ಪೊಲೀಸರ ಗುರಿಯಾಗಿರಲಿಲ್ಲ. ದಬ್ಬಾಳಿಕೆಯ ಎಲ್ಲ ಇತಿಮಿತಿಗಳನ್ನು ಪಂಜಾಬ್‌ ಸರ್ಕಾರ ಮೀರಿತು. ಸಿಖ್‌ ಸಮುದಾಯದ ಯುವಕರನ್ನು ಜೈಲಿಗೆ ಕಳುಹಿಸಿದ್ದಾರೆ. ಅವರು ಮಹಿಳೆಯರು ಹಾಗೂ ಮಕ್ಕಳನ್ನೂ ಬಿಟ್ಟಿಲ್ಲ. ಹಾಗಾಗಿ, ಸಮುದಾಯದವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಪಂಜಾಬ್‌ ಸರ್ಕಾರಕ್ಕೆ ನನ್ನ ಬಂಧನ ಮಾತ್ರ ಗುರಿಯಾಗಿಲ್ಲ. ಅವರು ಇಡೀ ಸಿಖ್‌ ಸಮುದಾಯದ ಮೇಲೆ ದಬ್ಬಾಳಿ ಮಾಡುತ್ತಿದ್ದಾರೆ ಎಂಬುದನ್ನು ಅರಿಯಬೇಕು. ಎಲ್ಲ ಸಿಖ್ಖರು ಇಂತಹ ಷಡ್ಯಂತ್ರಗಳ ವಿರುದ್ಧ ಧ್ವನಿ ಎತ್ತಬೇಕು” ಎಂದು ಅಮೃತ್ ಪಾಲ್ ಸಿಂಗ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಹೇಳಿದ್ದ.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕೂಡ ಅಮೃತ್‌ಪಾಲ್‌ ಸಿಂಗ್‌ ಅಸಮಾಧಾನ ಹೊರಹಾಕಿದ್ದಾನೆ. “ಪಂಜಾಬ್‌ ನಾಗರಿಕರನ್ನು ಬಂಧಿಸುವ ಮೂಲಕ ರಾಜ್ಯಕ್ಕೆ ಪ್ರಧಾನಿಯವರು ದ್ರೋಹ ಮಾಡಿದ್ದಾರೆ. ನನ್ನ ಸಂಬಂಧಿಕರನ್ನು ಅಸ್ಸಾಂಗೆ ಕಳುಹಿಸಲಾಗಿದೆ. ಇದು ಅಕ್ಷಮ್ಯವಾಗಿದ್ದು, ಎಲ್ಲರನ್ನೂ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು” ಎಂದು ವಾರಿಸ್‌ ಪಂಜಾಬ್‌ ದೇ ಮುಖ್ಯಸ್ಥನೂ ಆದ ಅಮೃತ್‌ಪಾಲ್‌ ಸಿಂಗ್‌ ಹೇಳಿದ್ದಾನೆ.

ಇದನ್ನೂ ಓದಿ: Amritpal Singh: ಅಮೃತ್ ಪಾಲ್ ಸಿಂಗ್ ಪೊಲೀಸರಿಗೆ ಶರಣಾಗುವ ಸಾಧ್ಯತೆ! ಗುರುದ್ವಾರಗಳಲ್ಲಿ ಅಡಗಿರುವ ಶಂಕೆ

ಪಾಕಿಸ್ತಾನದ ಲಷ್ಕರೆ ತಯ್ಬಾ, ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ನಂಟು ಹೊಂದಿರುವ ಅಮೃತ್‌ಪಾಲ್‌ ಸಿಂಗ್‌ ಮಾರ್ಚ್‌ 18ರಿಂದಲೂ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾನೆ. ಈತನ ಬಂಧನಕ್ಕೆ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದರೂ, ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಿ ಯೋಜನೆ ರೂಪಿಸಿದರೂ ಆತನ ಬಂಧನ ಸಾಧ್ಯವಾಗಿಲ್ಲ. ಆದಾಗ್ಯೂ, ಅಮೃತ್‌ಪಾಲ್‌ ಸಿಂಗ್‌ ಶರಣಾಗುತ್ತಾನೆ ಎಂಬ ಮಾತುಗಳು ಕೇಳಿಬರುತ್ತಿವೆ.

Exit mobile version