EXPLAINER
ವಿಸ್ತಾರ Explainer: ಯಾರು ಈ ಖಲಿಸ್ತಾನಿ, ಪ್ರತ್ಯೇಕತಾವಾದಿ ನಾಯಕ ಅಮೃತ್‌ಪಾಲ್ ಸಿಂಗ್?
ಕ್ಲೀನ್ ಶೇವ್ ಮಾಡಿಕೊಂಡಿರುತ್ತಿದ್ದ ಅಮೃತ್‌ಪಾಲ್ ಉದ್ದ ಗಡ್ಡ ಬಿಟ್ಟು ಖಲಿಸ್ತಾನ್ ಚಳವಳಿಯ ಮುಖವಾಣಿಯಾದ ಬೆಳವಣಿಗೆ ಬಲು ಶೀಘ್ರವಾಗಿ ನಡೆದಿದೆ. ಆತ ಭಿಂದ್ರಾನ್‌ವಾಲೆಯಂತೆಯೇ ದಿರಿಸು ಧರಿಸಿಕೊಳ್ಳುತ್ತಾನೆ. ಕೆಲವರು ಅವನನ್ನು ಈಗಾಗಲೇ ʼಎರಡನೇ ಭಿಂದ್ರಾನ್‌ವಾಲೆʼ ಎಂದು ಕರೆಯಲಾರಂಭಿಸಿದ್ದಾರೆ.
ಖಲಿಸ್ತಾನಿಗಳ ನಾಯಕ, ಬೋಧಕ, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್‌ನನ್ನು ಪಂಜಾಬ್ ಪೊಲೀಸರು ಬೆನ್ನಟ್ಟಿದ್ದಾರೆ. ಈತನನ್ನು ನಾಕೋದರ್ನ ಬಳಿ ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿತ್ತಾದರೂ, ಆ ಬಳಿಕ ಆತ ಪರಾರಿಯಾದ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿದ್ದ, ರಕ್ಷಣಾ ವ್ಯವಸ್ಥೆಗೆ ಬೆದರಿಕೆಯೊಡ್ಡಿದ್ದ ಈ ಅಮೃತ್ ಪಾಲ್ ಸಿಂಗ್ ಯಾರು? ಅವನ ಹಿನ್ನೆಲೆ ಏನು..ಇಲ್ಲಿದೆ ವಿಸ್ತೃತ ಮಾಹಿತಿ.
ಫೆಬ್ರವರಿಯಲ್ಲಿ ಅಮೃತಸರದ ಬಳಿಯ ಅಜ್ನಾಲಾದಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ನಡೆದಿತ್ತು. ಪೊಲೀಸ್ ಠಾಣೆಗಳ ಮೇಲೆ ಗುಂಪು ದಾಳಿ ಭಾರತದಲ್ಲಿ ಹೊಸತಲ್ಲ. ಆದರೆ ಈ ಸಲ ಖಲಿಸ್ತಾನ್ ಪ್ರತಿಪಾದಕ ಅಮೃತ್‌ಪಾಲ್ ಸಿಂಗ್ ನೇತೃತ್ವದಲ್ಲಿ ದಾಳಿ ಈಗ ಹೊಸ ಆತಂಕಕ್ಕೆ ಕಾರಣವಾಗಿತ್ತು. ಅಲ್ಲಿಂದಲೂ ಆತನ ವಿರುದ್ಧದ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿತ್ತು.
ಈ ದಾಳಿಗೇನು ಕಾರಣ?
ಅಮೃತ್‌ಪಾಲ್ ಸಿಂಗ್‌ನ ಸಹಚರ ಲವ್‌ಪ್ರೀತ್ ಸಿಂಗ್ ತೂಫಾನ್ ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಅಮೃತ್‌ಪಾಲ್ ಸಿಂಗ್‌ನನ್ನು ಕಟುವಾಗಿ ಟೀಕಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ ಎಂಬುದು ಲವ್‌ಪ್ರೀತ್‌ನ ಮೇಲಿದ್ದ ದೂರು. ಇದರಿಂದ ಕೆರಳಿದ ಅಮೃತ್‌ಪಾಲ್ ಮತ್ತು ಆತನ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ದೊಣ್ಣೆ ಕತ್ತಿಗಳನ್ನು ಹಿಡಿದುಕೊಂಡು ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿದರು. ಇದರಿಂದ ಬೆದರಿದ ಪೊಲೀಸರು ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡಿದ್ದೂ ಅಲ್ಲದೇ, ಆತ ನಿರ್ದೋಷಿ ಎಂದು ಸಾಬೀತುಪಡಿಸುವ ಸಾಕ್ಷ್ಯಗಳು ದೊರೆತಿವೆ ಎಂದು ತಾವೇ ಘೋಷಿಸಿಯೂ ಬಿಟ್ಟರು. ಇದೀಗ ಅಮೃತ್‌ಪಾಲ್ ವಿಜಯದ ನಗು ನಗುತ್ತಿದ್ದಾನೆ. ಇದರಿಂದ ಅಭಿಮಾನಿಗಳ ಕಣ್ಣಿನಲ್ಲಿ ಆತನ ತೂಕ ಇನ್ನಷ್ಟು ಹೆಚ್ಚಿದೆ. ಸಮಾಜಘಾತುಕ ಶಕ್ತಿಯ ಮುಂದೆ ಪೊಲೀಸರು ಮಂಡಿಯೂರಿದ ಈ ಘಟನೆ ದೇಶದ ಚಿತ್ತ ಇತ್ತ ಹರಿಯುವಂತೆ ಮಾಡಿದೆ.
ಯಾರಿವನು ಅಮೃತ್‌ಪಾಲ್?
ಅಮೃತಸರದ ಜಲ್ಲುಪುರ್ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್, 12ನೇ ತರಗತಿವರೆಗೆ ಓದಿದ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಆರು ತಿಂಗಳ ಹಿಂದೆ- ʼವಾರಿಸ್ ಪಂಜಾಬ್ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ.
ಅಮೃತ್‌ಪಾಲ್ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ.
ಕಳೆದ ಸೆಪ್ಟೆಂಬರ್ 25ರಂದು ಆನಂದ್‌ಪುರ ಸಾಹಿಬ್‌ನಲ್ಲಿ ನಡೆದ ಸಿಖ್ ಧರ್ಮದ ಸಾಂಪ್ರದಾಯಿಕ ಬ್ಯಾಪ್ಟಿಸಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೃತ್‌ಪಾಲ್, ʼಅಮೃತಧಾರಿ ಸಿಖ್ʼ ಎನಿಸಿದ. ಈ ಕಾರ್ಯಕ್ರಮಕ್ಕೆ ಹರಿದುಬಂದ ಜನಸಾಗರ ನೋಡಿ ಪಂಜಾಬ್ ಅವಾಕ್ಕಾಯಿತು. ಇದಾದ ನಾಲ್ಕು ದಿನಗಳ ನಂತರ ಸೆ.29ರಂದು ಮಹತ್ವದ ಹೊಣೆ ಹೊರುವವರು ಈಡೇರಿಸುವ ಪೇಟ ಧರಿಸುವ ʼದಸ್ತರ್ ಬಂದಿʼ ಕಾರ್ಯಕ್ರಮ ನಡೆಯಿತು. ಇದಕ್ಕೂ ದಾಖಲೆ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಇದು ನಡೆದುದು ರೋಡೆ ಗ್ರಾಮದಲ್ಲಿ. ಅದು ಖಲಿಸ್ತಾನ್ ಚಳವಳಿಯ ರಾಕ್ಷಸ ಭಯೋತ್ಪಾದಕನಾಗಿದ್ದ ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆಯ ಜನ್ಮಸ್ಥಳ.
ಕ್ಲೀನ್ ಶೇವ್ ಮಾಡಿಕೊಂಡಿರುತ್ತಿದ್ದ ಅಮೃತ್‌ಪಾಲ್ ಉದ್ದ ಗಡ್ಡ ಬಿಟ್ಟು ಖಲಿಸ್ತಾನ್ ಚಳವಳಿಯ ಮುಖವಾಣಿಯಾದ ಬೆಳವಣಿಗೆ ಬಲು ಶೀಘ್ರವಾಗಿ ನಡೆದಿದೆ. ಆತ ಭಿಂದ್ರಾನ್‌ವಾಲೆಯಂತೆಯೇ ದಿರಿಸು ಧರಿಸಿಕೊಳ್ಳುತ್ತಾನೆ. ಕೆಲವರು ಅವನನ್ನು ಈಗಾಗಲೇ ʼಎರಡನೇ ಭಿಂದ್ರಾನ್‌ವಾಲೆʼ ಎಂದು ಕರೆಯಲಾರಂಭಿಸಿದ್ದಾರೆ. ದುಬೈಯಿಂದ ಮರಳುತ್ತಿದ್ದಾಗ ತನ್ನನ್ನು ಸಣ್ಣದೊಂದು ತನಿಖೆಗೊಳಪಡಿಸಿದ್ದ ತನಿಖಾ ಸಂಸ್ಥೆಗಳ ಕ್ರಮದ ಬಗ್ಗೆ ಅವನು ಹಿಂದೆಯೇ ಕಿಡಿಕಾರಿದ್ದ. ಸಿಖ್ ಯುವಕನೊಬ್ಬ ತನ್ನ ತಾಯ್ನಾಡಿಗೆ ಹಿಂದಿರುಗುತ್ತಿರುವುದನ್ನು ಪ್ರಶ್ನೆ ಮಾಡುವದುಉ ಗುಲಾಮಿ ಮನಸ್ಥಿತಿ ಎಂದು ಜರೆದಿದ್ದ.
ಖಲಿಸ್ತಾನ ಪರ ನಿಲುವು
ಹಲವು ಸಮಯದಿಂದ ಆತ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ. ಹಿಂದು ರಾಷ್ಟ್ರ ವಾದ ಸರಿ ಎಂದಾದರೆ ಖಲಿಸ್ತಾನ್ ಯಾಕೆ ತಪ್ಪು ಎಂದು ಪ್ರಶ್ನಿಸುತ್ತಾನೆ. ಇವನು ಪಾರಂಪರಿಕ ಧಾರ್ಮಿಕ ತರಬೇತಿ ಪಡೆದು ಮುಖ್ಯಸ್ಥನಾಗಿಲ್ಲ. ರಾಜಕೀಯ ವಿಚಾರದಿಂದ ಆರಂಭಿಸಿ ಮತೀಯ ಗುರು ಎನಿಸಿಕೊಂಡವನು. ಧಾರ್ಮಿಕ ವಿಷಯಗಳನ್ನು ಉಲ್ಲೇಖಿಸುವಾಗ ಈತನ ತಿಳಿವಳಿಕೆಯ ಪೊಳ್ಳುತನ ಎದ್ದು ಕಾಣಿಸುತ್ತದೆ. ಆದರೂ ಈತನ ಕಠೋರ ರಾಜಕೀಯ ನಿಲುವುಗಳಿಂದಾಗಿ ಅಭಿಮಾನಿಗಳು ಈತನನ್ನು ಸುತ್ತುವರಿಯುತ್ತಾರೆ.
2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. ಹೀಗಾಗಿ ದೀಪ್ ಸಿಧುವಿನ ಬೆಂಬಲಿಗರು ಈಗ ಈತನ ಕಡೆಗೆ ಸೇರಿಕೊಂಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಸಿಕ್ಖರ ಒಂದು ವರ್ಗದಲ್ಲಿ ಉಲ್ಬಣಿಸುತ್ತಿರುವ ವ್ಯಗ್ರತೆ ಈತನನ್ನು ಸೇರಿಕೊಳ್ಳುವಲ್ಲಿ ವ್ಯಕ್ತವಾಗುತ್ತಿದೆ. 2015ರ ಬೆಹ್ಬಲ್ ಕಾಲನ್ ಪೊಲೀಸ್ ಫೈರಿಂಗ್, ಬರ್ಗಾರಿ ಧರ್ಮನಿಂದನೆ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂಬ ಸಿಟ್ಟಿದೆ. ಪಂಜಾಬಿನ ಸ್ಥಳೀಯ ಚಾನೆಲೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಮೃತ್‌ಪಾಲ್ ಈ ಘಟನೆಗಳನ್ನು ಉಲ್ಲೇಖಿಸಿದ್ದಾನೆ. ಕ್ರೈಸ್ತ ಮಿಷನರಿಗಳ ಮೇಲೆ ಕಿಡಿ ಕಾರುತ್ತಾನೆ. ಇದೂ ಆತನ ಜನಪ್ರಿಯತೆಗೆ ಕಾರಣ. ಪಂಜಾಬ್ ಮೇಲ್ನೋಟಕ್ಕೆ ಶಾಂತವಾಗಿದ್ದರೂ 80-90ರ ದಶಕದ ಗಾಯಗಳು ಹಾಗೆಯೇ ಇವೆ.
ಖಾಲಿತನ ತಂದಿಟ್ಟ ನಾಯಕತ್ವ
ಸಿಖ್ ರಾಜಕೀಯದಲ್ಲೂ ಅಮೃತ್‌ಪಾಲ್ ಅಂಥವರ ಸೃಷ್ಟಿಗೆ ಕಾರಣವಾಗಬಹುದಾದ ಒಂದು ನಿರ್ವಾತವಿದೆ. ಸಿಖ್ ರಾಜಕಾರಣಕ್ಕೆ ಇನ್ನೊಂದು ಹೆಸರಾಗಿದ್ದ ಶಿರೋಮಣಿ ಅಕಾಲಿ ದಳ ನಿಧಾನವಾಗಿ ತನ್ನ ನೆಲೆಯನ್ನು ಕಳೆದುಕೊಂಡಿದೆ. ಅಕಾಲಿ ದಳದ ಆಡಳಿತದ ಅಡಿಯಲ್ಲಿಯೇ ಸಂಭವಿಸಿದ ಹಲವಾರು ಘಟನೆಗಳಲ್ಲಿ ತಮಗೆ ನ್ಯಾಯ ದೊರಕಿಲ್ಲ ಎಂಬ ಆಕ್ರೋಶ ಸಿಕ್ಖರಲ್ಲಿದೆ. ಕಳೆದ ವರ್ಷದ ರಾಜ್ಯ ಚುನಾವಣೆಯಲ್ಲಿ ಅಕಾಲಿ ದಳ ಕೇವಲ ಮೂರು ಸ್ಥಾನಕ್ಕೆ ಇಳಿದಿದೆ. ಸಿಖ್ಖರ ಶ್ರೇಷ್ಠ ಧಾರ್ಮಿಕ ಹುದ್ದೆಯಾದ ಅಖಾಲ್ ತಖ್ತ್‌ನ ಜತೇದಾರ್ ಹಾಗೂ ಗುರುದ್ವಾರ ಸಮಿತಿಗಳು ಕೂಡ ಸಿಕ್ಖರ ಮೇಲಿನ ತಮ್ಮ ಹಿಡಿತ ಕಳೆದುಕೊಳ್ಳುತ್ತಿವೆ. ಮಾಜಿ ಜತೇದಾರ್ ಗುರ್‌ಬಚನ್ ಸಿಂಗ್ ಅವರನ್ನು, ಡೇರಾ ಸಚ್ಚಾ ಸೌಧಾದ ಗುರ್ಮೀತ್ ರಾಮ್ ರಹೀಮ್‌ನನ್ನು ಮನ್ನಿಸಿದ್ದಕ್ಕಾಗಿ ಖಂಡಿಸಸಲಾಗಿತ್ತು. 70ರ ದಶಕದಲ್ಲಿ ಇಂಥದೇ ಬೆಳವಣಿಗೆಗಳು ಭೀಂದ್ರಾನ್‌ವಾಲೆಯ ಹುಟ್ಟಿಗೆ ಕಾರಣವಾಗಿದ್ದವು. 1978ರಲ್ಲಿ ಬಾದಲ್ ಸರ್ಕಾರ ಇದ್ದಾಗ ನಿರಂಕಾರಿಗಳ ಜತೆಗಿನ ಸಂಘರ್ಷದಲ್ಲಿ 13 ಸಿಕ್ಖರು ಬಲಿಯಾದ ಘಟನೆ ಸಿಕ್ಖರನ್ನು ಹತಾಶಗೊಳಿಸಿತ್ತು. ಇಂದೂ ಅಂಥದೇ ಹತಾಶೆ ಅಮೃತ್‌ಪಾಲ್‌ನ ಬೆಳವಣಿಗೆಗೆ ಮುನ್ನುಡಿ ಹಾಡುತ್ತಿದೆ.
ಇಂದು ಅಮೃತ್‌ಪಾಲ್‌ನಲ್ಲಿ ಆಯುಧ ಧರಿಸಿದ ಆತನ ಬೆಂಬಲಿಗರು ಸದಾ ಕಾಯುತ್ತಿರುತ್ತಾರೆ. ಆತನ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಶೇರ್ ಆಗುತ್ತವೆ, ಜನಪ್ರಿಯವಾಗುತ್ತವೆ. ಇವನ ಮಾತುಗಳು ಪಂಜಾಬಿ ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸುತ್ತವೆ. ಈತನನ್ನು ಹಿಡಿತದಲ್ಲಿಡಲು ಪಂಜಾಬಿನ ಪೊಲೀಸರಿಗಾಗಲೀ ಸರ್ಕಾರದ ಬಳಿಯಾಗಲೀ ಯಾವುದೇ ಯೋಜನೆ ಇದ್ದಂತಿಲ್ಲ. ಸದ್ಯಕ್ಕೆ ಇವನು ಏನಾದರೂ ಕಾಲು ಜಾರಿ ತಪ್ಪು ಮಾಡಿದರೆ ಹಿಡಿಯುವುದಷ್ಟೇ ಇವರಿಗೆ ಸಾಧ್ಯವಾಗಲಿದೆ.
ಇದನ್ನೂ ಓದಿ: Pak New Plan | ಲಾಹೋರ್ ಗುರುದ್ವಾರಗಳಲ್ಲಿ ಖಲಿಸ್ತಾನ್ ಉಗ್ರರು, ಭಾರತೀಯ ಭಕ್ತರಿಗೆ ಬ್ರೈನ್ ವಾಷ್?
EXPLAINER
Yogi Adityanath: ನಿರಂತರ 6 ವರ್ಷ ಸಿಎಂ, ಯೋಗಿ ಹೊಸ ದಾಖಲೆ; ಬುಲ್ಡೋಜರ್ ಬಾಬಾನಿಂದ ವಿಕಾಸ ಪುರುಷನವರೆಗೆ…
ಯೋಗಿ ಆದಿತ್ಯನಾಥ್ ಅವರು ತಮ್ಮ ಮೊದಲನೇ ಅವಧಿಯಲ್ಲಿ ನಡೆಸಿದ ಆಡಳಿತವೇ ದೇಶದಾದ್ಯಂತ ಜನಪ್ರಿಯತೆ ಗಳಿಸಿದೆ. ‘ಕಾನೂನು ಸುವ್ಯವಸ್ಥೆ ಕಾಪಾಡಲು, ಸಮಾಜ-ದೇಶ ವಿರೋಧಿ ಕೃತ್ಯಗಳನ್ನು ಹತ್ತಿಕ್ಕಲು ಅವರು ಜಾರಿಗೊಳಿಸಿದ ಕೆಲವು ಕ್ರಮಗಳನ್ನು ಬೇರೆ ರಾಜ್ಯಗಳ ಜನರೂ ಹೊಗಳುತ್ತಿದ್ದಾರೆ. ‘ಯೋಗಿ ಮಾದರಿ’ ಆಡಳಿತ ಎಂದೇ ಫೇಮಸ್ ಆಗಿದೆ.
ಉತ್ತರ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆಗೆ ಏರುವ ಮೂಲಕ ದಾಖಲೆ ಸೃಷ್ಟಿಸಿರುವ ಯೋಗಿ ಆದಿತ್ಯನಾಥ್ (Yogi Adityanath) ಕಳೆದ ವರ್ಷ ಇದೇ ದಿನ, ಅಂದರೆ 2022ನೇ ಇಸ್ವಿಯ ಮಾರ್ಚ್ 25ರಂದು 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅಲ್ಲಿನ ಅಟಲ್ ಬಿಹಾರಿ ವಾಜಪೇಯಿ ಇಕಾನಾ ಸ್ಟೇಡಿಯಂನಲ್ಲಿ ನಡೆದಿದ್ದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತಿತರ ಗಣ್ಯರೂ ಪಾಲ್ಗೊಂಡಿದ್ದರು. ಹೀಗೆ ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಸಿಎಂ ಆಗಿ ಇಂದಿಗೆ (ಮಾರ್ಚ್ 25) ಅವರು ಒಂದು ವರ್ಷ ಪೂರೈಸಿದ್ದಾರೆ. ಎರಡನೇ ಅವಧಿಯ ಯೋಗಿ ಆಡಳಿತದ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಉತ್ತರ ಪ್ರದೇಶ ಸರ್ಕಾರ ಸಜ್ಜಾಗಿದೆ.
ಯೋಗಿ ಆದಿತ್ಯನಾಥ್ ಅವರು ತಮ್ಮ ಮೊದಲನೇ ಅವಧಿಯಲ್ಲಿ ನಡೆಸಿದ ಆಡಳಿತವೇ ದೇಶದಾದ್ಯಂತ ಜನಪ್ರಿಯತೆ ಗಳಿಸಿದೆ. ‘ಕಾನೂನು ಸುವ್ಯವಸ್ಥೆ ಕಾಪಾಡಲು, ಸಮಾಜ-ದೇಶ ವಿರೋಧಿ ಕೃತ್ಯಗಳನ್ನು ಹತ್ತಿಕ್ಕಲು ಅವರು ಜಾರಿಗೊಳಿಸಿದ ಕೆಲವು ಕ್ರಮಗಳನ್ನು ಬೇರೆ ರಾಜ್ಯಗಳ ಜನರೂ ಹೊಗಳುತ್ತಿದ್ದಾರೆ. ‘ಯೋಗಿ ಮಾದರಿ’ ಆಡಳಿತ ಎಂದೇ ಫೇಮಸ್ ಆಗಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೂ ಈ ಹಿಂದೆ ಯೋಗಿ ಮಾದರಿ ಸರ್ಕಾರದ ಪ್ರಸ್ತಾಪ ಮಾಡಿದ್ದರು. ಕರ್ನಾಟಕದಲ್ಲೂ ಅದೇ ತರದ ಆಡಳಿತ ಜಾರಿ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಹೀಗೆ ಮೊದಲನೇ ಅವಧಿಯಲ್ಲಿ ಕಾನೂನು-ಸುವ್ಯವಸ್ಥೆ, ಕ್ರೈಂಗಳ ಹತ್ತಿಕ್ಕಲು ಹೆಚ್ಚಿನ ಗಮನ ಹರಿಸಿದ್ದ ಯೋಗಿ ಆದಿತ್ಯನಾಥ್, ಎರಡನೇ ಅವಧಿಯಲ್ಲಿ ‘ಹೂಡಿಕೆ’ ‘ಪ್ರವಾಸೋದ್ಯಮ ಅಭಿವೃದ್ಧಿ’ ಮತ್ತು ಇತರ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದೀಗ ಒಂದು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಸರ್ಕಾರ, ಈ ಒಂದು ವರ್ಷದಲ್ಲಿ ಏನೆಲ್ಲ ಆಯಿತು ಎಂಬುದನ್ನು ಹೈಲೈಟ್ ಮಾಡಿ ತೋರಿಸಲು ಮುಂದಾಗಿದೆ.
ಯೋಗಿ ಆದಿತ್ಯನಾಥ್ರನ್ನು ನಾಯಕ ಎಂದು ಬಿಂಬಿಸಲು ಯೋಜನೆ
ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಸದಾ ಸಿದ್ಧವಾಗಿರುತ್ತದೆ. ಯಾವುದೇ ಕೇಸ್ನಲ್ಲಿ ಅಪರಾಧಿ ಎನ್ನಿಸಿದವರ ಮನೆ, ಆಸ್ತಿ-ಪಾಸ್ತಿ ಧ್ವಂಸವಾಗುತ್ತದೆ. ಹೀಗಾಗಿ ಯೋಗಿ ಆದಿತ್ಯನಾಥ್ರನ್ನು ಇಷ್ಟುದಿನ ಇಡೀ ದೇಶ ಬುಲ್ಡೋಜರ್ ಬಾಬಾ, ಡೆಮೋಲಿಶನ್ ಮ್ಯಾನ್ ಎಂಬಿತ್ಯಾದಿ ಹೆಸರಲ್ಲೆಲ್ಲ ಕರೆಯುತ್ತಿದೆ ಮತ್ತು ಅವರನ್ನು ಜನರು ಹಾಗೇ ನೋಡುತ್ತಿದ್ದಾರೆ. ಆದರೆ ಇಷ್ಟುದಿನ ಅವರಿಗಿದ್ದ ಈ ಬುಲ್ಡೋಜರ್ ಬಾಬಾ ಇಮೇಜ್ನ್ನು ತೊಡೆದು ಹಾಕಿ, ಅವರನ್ನೊಬ್ಬ ‘ ಪ್ರಭಾವಿ ನಾಯಕ’ ಎಂದು ಬಿಂಬಿಸಲು ಸಿದ್ಧತೆ ನಡೆಯುತ್ತಿದೆ. ಯೋಗಿ ಅವರ ಅಭಿವೃದ್ಧಿ ಮಾದರಿಯು ‘ನಂಬಿಕೆಗೆ ಕೊಟ್ಟ ಗೌರವ’ ಎಂಬ ಅಜೆಂಡಾದಡಿ ಹೆಣೆಯಲ್ಪಟ್ಟಿದ್ದು ಎಂದು ಜನತೆಗೆ ತೋರಿಸುವ, ಈ ಮೂಲಕ ‘ನಿಮ್ಮ ನಂಬಿಕೆಯನ್ನು ಯೋಗಿ ಆದಿತ್ಯನಾಥ್ ಎಂದಿಗೂ ಹುಸಿ ಮಾಡುವುದಿಲ್ಲ, ಅಭಿವೃದ್ಧಿ ಕಾರ್ಯಕ್ಕೆ ಸದಾ ಬದ್ಧ’ ಎಂದು ಸಾರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಅಯೋಧ್ಯೆ ಅಭಿವೃದ್ಧಿಯಲ್ಲಿ ಸಿಂಹಪಾಲು
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾನೂನು ತೊಡಕುಗಳೆಲ್ಲ ಮೀರಿ ಅಲ್ಲಿ ಶ್ರೀರಾಮನ ದೇಗುಲ ಚೆಂದವಾಗಿ ರೂಪುಗೊಳ್ಳುತ್ತಿದೆ. ಇದು ಕೇಂದ್ರ ಸರ್ಕಾರದ ವೈಯಕ್ತಿಕ ಆಸಕ್ತಿಯೂ ಹೌದು. ಆದರೆ ಅದರ ಅಭಿವೃದ್ಧಿಯಲ್ಲಿ ಸಿಂಹಪಾಲು ಯೋಗಿಯವರದ್ದು. 2024ರ ಲೋಕಸಭೆ ಚುನಾವಣೆಯೊಳಗೆ ರಾಮಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗಬೇಕು ಎಂಬುದು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಮುಖ್ಯ ಉದ್ದೇಶ. ಅದರಲ್ಲೂ ಯೋಗಿ ಆದಿತ್ಯನಾಥ್ ಅವರು ಇಡೀ ಅಯೋಧ್ಯೆಯನ್ನೇ ಸಂಪೂರ್ಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಹೀಗಾಗಿ ಖುದ್ದಾಗಿ ತಾವೇ ನಿಂತು ಅಯೋಧ್ಯೆ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆಗಾಗ ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ಅಯೋಧ್ಯೆಯನ್ನು ಮಾದರಿ ಸೌರ ನಗರ ಎಂದು ರೂಪಿಸುವಲ್ಲಿಂದ ಹಿಡಿದು, ಅಲ್ಲಿನ ರಸ್ತೆ ಅಗಲೀಕರಣ, ಹೊಸ ಬಸ್ ಸ್ಟೇಶನ್, ಏರ್ಪೋರ್ಟ್ ನಿರ್ಮಾಣವೆಲ್ಲ ಕಾರ್ಯಸೂಚಿಯಲ್ಲಿ ಇದೆ. ಅವೆಲ್ಲವನ್ನೂ ನಿಗದಿತ ಸಮಯದೊಳಗೆ ಮುಗಿಸುವ ಧಾವಂತದಲ್ಲಿದ್ದಾರೆ ಯೋಗಿ ಆದಿತ್ಯನಾಥ್. ಅಯೋಧ್ಯೆ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ದೇಶದ ಜನರಿಗೆ ತೋರಿಸುವ ಸಿದ್ಧತೆಯನ್ನು ಅಲ್ಲಿನ ಸರ್ಕಾರ ಮಾಡಿಕೊಂಡಿದೆ ಎನ್ನಲಾಗಿದೆ.
ಬರೀ ಅಯೋಧ್ಯೆಯಷ್ಟೇ ಅಲ್ಲ, ಇನ್ನಿತರ ಧಾರ್ಮಿಕ ಪ್ರದೇಶಗಳ ಅಭಿವೃದ್ಧಿಯನ್ನೂ ಉತ್ತರ ಪ್ರದೇಶ ಸರ್ಕಾರ ತನ್ನ ಎರಡನೇ ಅವಧಿ ಕಾರ್ಯಸೂಚಿಯಲ್ಲಿ ಸೇರಿಸಿಕೊಂಡಿದೆ. ಪ್ರಯಾಗ್ರಾಜ್ನಲ್ಲಿ 2025ರಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಈಗಾಗಲೇ ಸಿದ್ಧತೆಯನ್ನು ಶುರು ಮಾಡಿಕೊಂಡಿದೆ. ಅದರೊಂದಿಗೆ ಸೀತಾಪುರದಲ್ಲಿ ನೈಮಿಶರಣ, ಯುಪಿ ಪಶ್ಚಿಮ ಭಾಗದಲ್ಲಿರುವ ಬ್ರಜ್, ಪೂರ್ವದಲ್ಲಿರುವ ವಿಂದ್ಯಾ ಮತ್ತು ಚಿತ್ರಕೂಟ ಧಾಮಗಳ ಅಭಿವೃದ್ಧಿಯತ್ತಲೂ ಗಮನ ಹರಿಸುತ್ತಿದೆ.
ಉತ್ತಮ ಪ್ರದೇಶದಿಂದ ನಿವೇಶ್ ಪ್ರದೇಶದತ್ತ
ಆಗಲೇ ಹೇಳಿದಂತೆ ಉತ್ತರ ಪ್ರದೇಶ ಸರ್ಕಾರ ಮೊದಲ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆಯೇ ಹೆಚ್ಚಿನ ಗಮನಹರಿಸಿತ್ತು. ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವನ್ನಾಗಿ ರೂಪಿಸುವುದು ಮೊದಲ ಆದ್ಯತೆ ಎಂದು ಹೇಳಿತ್ತು. ಅದರಂತೆ ಮಾಡಿದೆ ಕೂಡ. ಈಗ ಎರಡನೇ ಅವಧಿಗೆ ಉತ್ತರ ಪ್ರದೇಶವನ್ನು ನಿವೇಶ್ ಪ್ರದೇಶ (ಹೂಡಿಕೆ ಪ್ರದೇಶ)ವನ್ನಾಗಿ ಬದಲಿಸುವತ್ತ ಗಮನ ಹರಿಸಿದೆ. ಉತ್ತರ ಪ್ರದೇಶದಲ್ಲಿ ಹೂಡಿಕೆಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಇತ್ತೀಚೆಗೆ ಲಖನೌನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ 35 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಹೂಡಿಕೆ ಪ್ರಸ್ತಾವನೆಯನ್ನು ಸ್ವೀಕರಿಸಿದ್ದಾಗಿ ಯುಪಿ ಗವರ್ನ್ಮೆಂಟ್ ಹೇಳಿಕೊಂಡಿದೆ. ‘ಉತ್ತರ ಪ್ರದೇಶ, ರಾಷ್ಟ್ರರಾಜಧಾನಿ ಪ್ರದೇಶವನ್ನೂ ಮೀರಿ, ಬೇರೆ ಪ್ರದೇಶಗಳ ಹೂಡಿಕೆದಾರರನ್ನೂ ಸೆಳೆಯುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ ಎಂದು ತಿಳಿಸಿದೆ. ಅದರೊಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ಐದು ದಿನಗಳ ಯುಪಿ ಅಂತಾರಾಷ್ಟ್ರೀಯ ವ್ಯಾಪಾರ -2023 (UP International Trade 2023) ಸಮಾವೇಶ ನಡೆಸಲೂ ಸಿದ್ಧತೆಗಳು ಪ್ರಾರಂಭವಾಗಿವೆ.
ಇದನ್ನೂ ಓದಿ: Best Chief Minister | ಈ ಬಾರಿಯೂ ಯೋಗಿ ಆದಿತ್ಯನಾಥ್ ದೇಶದ ಬೆಸ್ಟ್ ಸಿಎಂ, ನಂತರದ ಸ್ಥಾನ ಯಾರಿಗೆ?
ಒಟ್ಟಾರೆ ಈ ಎರಡನೇ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ, ಕೃಷಿ ಉತ್ಪನ್ನ, ಸಾಮಾಜಿಕ ಭದ್ರತೆ, ಮೂಲ ಸೌಕರ್ಯ ಮತ್ತು ಉದ್ಯಮ, ನಗರ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ, ವೈದ್ಯಕೀಯ ಮತ್ತು ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಸಾಂಸ್ಕೃತಿಕ, ಆದಾಯ ಸಂಗ್ರಹ ಕ್ಷೇತ್ರಗಳಲ್ಲಿ ಸುಧಾರಣೆ ಮತ್ತು ಅಭಿವೃದ್ಧಿ ಮಾಡಲು ಉತ್ತರ ಪ್ರದೇಶ ಸರ್ಕಾರ ಮುಂದಡಿ ಇಡುತ್ತಿದ್ದು, ಇದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೇ, ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಯೋಗಿ ಆಯ್ಕೆಯೇ ಒಂದು ಅಚ್ಚರಿಯಾಗಿತ್ತು
ಉತ್ತರ ಪ್ರದೇಶದಲ್ಲಿ 2017ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಲ್ಲಿನ ಮುಖ್ಯಮಂತ್ರಿಯನ್ನಾಗಿ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದ್ದೇ ಬಹುದೊಡ್ಡ ಅಚ್ಚರಿಯಾಗಿತ್ತು. ಗೋರಖ್ನಾಥ್ ಪೀಠದ ಮುಖ್ಯಸ್ಥ, ಸನ್ಯಾನಿ ರಾಜ್ಯಾಭಾರ ಮಾಡುತ್ತಾನಾ? ಎಂದು ವ್ಯಂಗ್ಯವಾಡಿದವರೂ ಅನೇಕರು. ಆದರೆ ಬರುಬರುತ್ತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ಯೋಗಿ, ಉತ್ತರ ಪ್ರದೇಶದಲ್ಲಿ ಇದುವರೆಗೆ ಅತ್ಯಂತ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 1954ರಿಂದ 1960ರವರೆಗೆ ಒಟ್ಟು 5ವರ್ಷ 345 ದಿನಗಳ ಕಾಲ ಕಾಂಗ್ರೆಸ್‌ನ ಡಾ. ಸಂಪೂರ್ಣಾನಂದ ಅವರು ಸಿಎಂ ಆಗಿ ಆಡಳಿತ ನಡೆಸಿದ್ದರು. ಅವರ ದಾಖಲೆಯನ್ನು ಆದಿತ್ಯನಾಥ್ ಮುರಿದಿದ್ದಾರೆ. 2023ರ ಮಾರ್ಚ 1ರ ಲೆಕ್ಕಾಚಾರದಂತೆ ಯೋಗಿಯವರು ಐದು ವರ್ಷ, 346 ದಿನಗಳ ಕಾಲ ಸಿಎಂ ಆಗಿ ಆಡಳಿತ ಮಾಡಿದ್ದಾರೆ ಮತ್ತು ಅವರ ಆಡಳಿತ ಮುಂದುವರಿದಿದೆ.
2017ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸಿಎಂ ಯೋಗಿ ಆದಿತ್ಯನಾಥ್ ಅವರು ಹಿಂದು ತ್ವ ಸ್ಥಾಪನೆ, ಕ್ರೈಂ/ಮಾಫಿಯಾ, ಸಂಘಟಿತ ಅಪರಾಧಗಳಿಗೆ ಕಡಿವಾಣ ಹಾಕುವಲ್ಲಿ ಅತ್ಯಂತ ಹೆಚ್ಚು ಶ್ರಮಿಸಿದ್ದಾರೆ. ಗೋಹತ್ಯೆ ನಿಷೇಧ, ಅಕ್ರಮ ಕಸಾಯಿ ಖಾನೆಗಳ ಮುಚ್ಚುವಿಕೆಯಂಥ ನಿರ್ಧಾರಗಳನ್ನು ಅಧಿಕಾರ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಅವರು ಜಾರಿಗೊಳಿಸಿದ್ದಾರೆ. ಅವರ ಈ ಆಡಳಿತವೇ ಅವರಿಗೆ ಅಪಾರ ಸಂಖ್ಯೆಯ ಅನುಯಾಯಿಗಳನ್ನು ತಂದುಕೊಟ್ಟಿದೆ.
ಯುವಜನರ ಮೇಲೆ ಫೋಕಸ್
ಉತ್ತರ ಪ್ರದೇಶದಲ್ಲಿ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಲ್ಲಿನ ಪ್ರತಿಪಕ್ಷಗಳು ಒಂದೇ ಸಮನೆ ಆರೋಪ ಮಾಡುತ್ತಿವೆ. ಅದರ ಬೆನ್ನಲ್ಲೇ ಯೋಗಿ ಸರ್ಕಾರ ಯುವಜನರ ಮೇಲೆ ಹೆಚ್ಚಿನ ಫೋಕಸ್ ಮಾಡುತ್ತಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳುತ್ತಿದೆ. ಕ್ರೀಡೆ, ಕೌಶಲಾಭಿವೃದ್ಧಿ, ಹಳ್ಳಿಗಳ ಮಟ್ಟದಲ್ಲಿ ವ್ಯಾಯಾಮ ಶಾಲೆಗಳನ್ನು ತೆರೆಯಲು ಉತ್ತೇಜಿಸುತ್ತಿದೆ.
ಸದ್ಯ ಉತ್ತರ ಪ್ರದೇಶವನ್ನು ಒಂದು ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಅವರ ಪ್ರಯತ್ನ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಕಾನೂನು ಸುವ್ಯವಸ್ಥೆ ಸುಧಾರಿಸಿದೆ, ಪ್ರವಾಸಿ ತಾಣಗಳ ಅಭಿವೃದ್ಧಿಯೂ ಶರವೇಗದಿಂದ ಆಗುತ್ತಿದ್ದು, ಹೂಡಿಕೆ ಕ್ಷೇತ್ರದಲ್ಲೂ ದಾಪುಗಾಲು ಹಾಕುತ್ತಿದೆ. ಉತ್ತರ ಪ್ರದೇಶ ಹೂಡಿಕೆಗೆ ಯೋಗ್ಯವಲ್ಲ ಎಂಬ ಮಾತನ್ನು ಸುಳ್ಳು ಮಾಡಲು ಯೋಗಿ ಆದಿತ್ಯನಾಥ್ ಪಣತೊಟ್ಟು ಅದರಂತೆ ರೂಪುರೇಷೆಗಳನ್ನು ಹೆಣೆಯುತ್ತಿದ್ದಾರೆ. ಆರು ವರ್ಷಗಳಲ್ಲಿ ಮಾಡಿದ ಈ ಸಾಧನೆಗಳನ್ನೆಲ್ಲ ಜನರ ಮುಂದಿಡಲು ಅಲ್ಲಿನ ಸರ್ಕಾರ ಪ್ಲ್ಯಾನ್ ಮಾಡಿದೆ.
EXPLAINER
ವಿಸ್ತಾರ Explainer: ರಾಹುಲ್ ಗಾಂಧಿ ಅನರ್ಹತೆ: ಏನಿದು? ಮುಂದೇನಾಗಲಿದೆ?
ಕಾಂಗ್ರೆಸ್ ಮುಖಂಡ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರಿಗೆ ವಿಧಿಸಲಾಗಿರುವ ಅನೂರ್ಹತೆ ಎಲ್ಲಿಯವರೆಗೆ ಊರ್ಜಿತ? ಯಾವಾಗ, ಹೇಗೆ ತೆರವಾಗಬಹುದು? ಈಗ ಅವರ ಮುಂದಿರುವ ದಾರಿಯೇನು? ಇಲ್ಲಿದೆ ವಿವರ.
ಕಾಂಗ್ರೆಸ್ ಮುಖಂಡ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಂತರ ತಮ್ಮ ಲೋಕಸಭಾ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಮುಂದೆ ಯಾವ ಸನ್ನಿವೇಶಗಳು ಉಂಟಾಗಬಹುದು? ಒಂದು ವಿಶ್ಲೇಷಣೆ ಇಲ್ಲಿದೆ.
ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಸೂರತ್‌ನ ಸ್ಥಳೀಯ ನ್ಯಾಯಾಲಯವು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ ನಂತರ ಸಂಸತ್ತಿನ ಸದಸ್ಯತ್ವವನ್ನು ಗುರುವಾರ ರದ್ದುಗೊಳಿಸಲಾಗಿದೆ. ಲೋಕಸಭೆಯ ಕಾರ್ಯಾಲಯ ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ “ಸಂವಿಧಾನದ 102 (1) (ಇ) ವಿಧಿಯ ನಿಬಂಧನೆಗಳ ಪ್ರಕಾರ, ಹಾಗೂ ಭಾರತ ಪ್ರಜಾಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8ರ ಪ್ರಕಾರ, 2023ರ ಮಾರ್ಚ್ 23ರಿಂದ, ಅವರ ಅಪರಾಧ ಸಾಬೀತಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹರಾಗಿದ್ದಾರೆ” ಎಂದಿದೆ.
ಏಕೆ ಈ ಅಧಿಸೂಚನೆ?
ಇದು ಲೋಕಸಭೆ ಕಾರ್ಯಾಲಯದ ಪ್ರಕ್ರಿಯೆಯ ಒಂದು ಭಾಗ. ಹಾಲಿ ಸಂಸದರು ಅಥವಾ ಶಾಸಕರು ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರೆ ಅದನ್ನು ಸ್ಪೀಕರ್ ಅಥವಾ ಸಭಾಪತಿಯವರ ಹಾಗೂ ಆಯಾ ರಾಜ್ಯದ ಚುನಾವಣಾ ಆಯೋಗ ಮುಖ್ಯಸ್ಥರ ಗಮನಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳುವಂತೆ ಆಯಾ ಇಲಾಖೆಗಳಿಗೆ ಅಕ್ಟೋಬರ್ 13, 2015ರಂದು, ಭಾರತೀಯ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಿತ್ತು. ಇದು ಶಿಕ್ಷೆಯ ಆದೇಶ ಬಂದು ಏಳು ದಿನಗಳಲ್ಲಿ ಆಗಬೇಕಿದೆ.
ಪ್ರಜಾಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8(3) ಹೀಗೆ ಹೇಳುತ್ತದೆ: “ಯಾವುದೇ ಅಪರಾಧದಲ್ಲಿ ತಪ್ಪಿತಸ್ಥರೆಂದು ನಿರ್ಣಯವಾಗಿ ಎರಡು ವರ್ಷಕ್ಕಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ. ಹಾಗೂ ಆತನ ಬಿಡುಗಡೆಯ ನಂತರದ ಮುಂದಿನ ಆರು ವರ್ಷಗಳ ಅವಧಿಯವರೆಗೂ ಅನರ್ಹತೆ ಮುಂದುವರಿಯುತ್ತದೆ.
ಇದರ ಪ್ರಕಾರ, ಅನರ್ಹತೆಯು ಉಂಟಾಗುವುದು ನ್ಯಾಯಾಲಯ ನೀಡಿರುವ ಶಿಕ್ಷೆಯಿಂದಲೇ ಹೊರತು ಲೋಕಸಭೆಯ ಅಧಿಸೂಚನೆಯಿಂದಲ್ಲ. ಹೀಗಾಗಿ ಶುಕ್ರವಾರ ಲೋಕಸಭೆಯಲ್ಲಿದ್ದ ರಾಹುಲ್‌ಗೆ ಈ ಸೂಚನೆ ನೀಡಿರುವುದು ಸದನವನ್ನು ಮುಂದೂಡುವ ಮುನ್ನದ ಒಂದು ಔಪಚಾರಿಕ ಸೂಚನೆ.
ಅನರ್ಹಗೊಂಡ ಶಾಸಕರ ಪ್ರಕರಣದಲ್ಲಿ ಸಂಬಂಧಿಸಿದ ವಿಧಾನಸಭೆಯಿಂದ ನೋಟಿಸ್ ನೀಡಲಾಗುತ್ತದೆ. ಉದಾಹರಣೆಗೆ, ಸಮಾಜವಾದಿ ಪಕ್ಷದ ಶಾಸಕ ಅಜಂ ಖಾನ್ ಪ್ರಕರಣದಲ್ಲಿ, ಉತ್ತರ ಪ್ರದೇಶ ವಿಧಾನಸಭೆಯ ಸೆಕ್ರೆಟರಿಯೇಟ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅರಿಗೆ ಅನರ್ಹತೆಯ ಸೂಚನೆಯನ್ನು ನೀಡಿತ್ತು.
ಈ ನಿಟ್ಟಿನಲ್ಲಿ ಸ್ಪೀಕರ್ ಅಧಿಕಾರ ಅಂತಿಮವೇ?
ಲೋಕ್ ಪ್ರಹರಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2018) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿದೆ. ಅದರ ಪ್ರಕಾರ, ಮೇಲಿನ ನ್ಯಾಯಾಲಯವು ಅಪರಾಧ ನಿರ್ಣಯಕ್ಕೆ ತಡೆ ನೀಡಿದರೆ, ಈ ಅನರ್ಹತೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. “ಮೇಲ್ಮನವಿಯ ವಿಚಾರಣೆ ಬಾಕಿ ಇರುವಾಗ, ಶಿಕ್ಷೆಯನ್ನು ತಡೆಹಿಡಿಯಲಾಗುತ್ತದೆ. ಹಾಗಾಗಿ ಶಿಕ್ಷೆಯ ಪರಿಣಾಮವಾಗಿ ಜಾರಿಗೆ ಬರುವ ಅನರ್ಹತೆಯು ಜಾರಿಯಲ್ಲಿರಲು ಅಥವಾ ಉಳಿಯಲು ಸಾಧ್ಯವಿಲ್ಲ” ಎಂದು ತೀರ್ಪು ಹೇಳಿದೆ.
ಅಂದರೆ, ಕೋರ್ಟ್ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ, ಸದನ ಸಚಿವಾಲಯದ ಅಧಿಸೂಚನೆಯು ರದ್ದಾಗುತ್ತದೆ.
ಅನರ್ಹತೆಗೆ ಕಾರಣವಾದ ಕಾನೂನುಗಳ್ಯಾವುದು?
ಸಂವಿಧಾನದ ಆರ್ಟಿಕಲ್ 102(1)(ಇ) ಮತ್ತು ಜನಪ್ರತಿನಿಧಿ ಕಾಯಿದೆಯ (ಆರ್‌ಪಿ ಕಾಯಿದೆ) ಸೆಕ್ಷನ್ 8 ಸಂಸದೀಯ ಸದಸ್ಯರ ಅನರ್ಹತೆಗೆ ಕಾರಣಗಳನ್ನು ನೀಡುತ್ತದೆ. ಸಂವಿಧಾನದ 102ನೇ ವಿಧಿಯ ಉಪ ಕಲಂ (ಇ) ಹೇಳುವಂತೆ ಸಂಸದರೊಬ್ಬರು “ಸಂಸತ್ ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹರಾಗಿದ್ದರೆ” ಅವರು ಸದನದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಈ ಪ್ರಕರಣದಲ್ಲಿರುವುದು ಆರ್‌ಪಿ ಕಾಯಿದೆ.
RP ಕಾಯಿದೆಯ ಸೆಕ್ಷನ್ 8 ಕೆಲವು ಅಪರಾಧಗಳಲ್ಲಿ ಶಾಸಕರು ಶಿಕ್ಷೆ ಪಡೆದರೆ ಅವರ ಅನರ್ಹತೆಯ ಬಗ್ಗೆ ತಿಳಿಸುತ್ತದೆ. “ರಾಜಕೀಯದ ಅಪರಾಧೀಕರಣವನ್ನು ತಡೆಗಟ್ಟುವುದು ಮತ್ತು ʼಕಳಂಕಿತ’ ಶಾಸಕರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಗುರಿಯನ್ನುʼ ಈ ಕಾಯಿದೆ ಹೊಂದಿದೆ.
ರಾಹುಲ್ ಕಳೆದುಕೊಳ್ಳುವುದೇನು?
ಲೋಕಸಭಾ ಸಂಸದರಾಗಿ ರಾಹುಲ್ ಅವರು ಲ್ಯುಟೆನ್ಸ್ ದೆಹಲಿಯಲ್ಲಿ ಮನೆಯನ್ನು ಹೊಂದಿದ್ದರು. ಅವರ ಅನರ್ಹತೆಯ ನಂತರ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳ ಪ್ರಕಾರ, ಅವರ 12 ತುಘಲಕ್ ಲೇನ್ ಮನೆಯನ್ನು ಖಾಲಿ ಮಾಡಬೇಕು. ಇದಕ್ಕೆ ಅವರಿಗೆ ಒಂದು ತಿಂಗಳ ಕಾಲಾವಕಾಶವಿದೆ. 2004ರಲ್ಲಿ ಅಮೇಠಿಯಿಂದ ಸಂಸದರಾಗಿ ಆಯ್ಕೆಯಾದ ಬಳಿಕ ರಾಹುಲ್‌ಗೆ ಮನೆ ಮಂಜೂರು ಮಾಡಲಾಗಿತ್ತು.
ಮುಂದಿನ ಕ್ರಮಕ್ಕಾಗಿ ಲೋಕಸಭಾ ಸಚಿವಾಲಯವು ಅನರ್ಹತೆಯ ಅಧಿಸೂಚನೆಯ ಪ್ರತಿಯನ್ನು ಎಸ್ಟೇಟ್ ನಿರ್ದೇಶನಾಲಯದ ಸಂಪರ್ಕ ಅಧಿಕಾರಿಗೆ ಕಳುಹಿಸಿದೆ. ಬಂಗಲೆಯು ಲೋಕಸಭೆಯ ವಸತಿ ಆಸ್ತಿಗಳಿಗೆ ಸೇರಿರುವುದರಿಂದ, ಇದನ್ನು ತೆರವು ಮಾಡುವ ಕ್ರಮವನ್ನು ಲೋಕಸಭೆ ಸಚಿವಾಲಯ ನಿರ್ವಹಿಸಬೇಕಾಗುತ್ತದೆ. ಸಂಸದರು ಅನುಭವಿಸುವ ಎಲ್ಲಾ ಇತರ ಸವಲತ್ತುಗಳನ್ನು ಸಹ ರಾಹುಲ್ ಕಳೆದುಕೊಳ್ಳುತ್ತಾರೆ.
ಈಗ ವಯನಾಡ್ ಕ್ಷೇತ್ರದ ಗತಿಯೇನು?
ಚುನಾವಣಾ ಆಯೋಗವು ರಾಹುಲ್ ಪ್ರತಿನಿಧಿಸುತ್ತಿದ್ದ ವಯನಾಡ್ ಸಂಸತ್ ಸ್ಥಾನಕ್ಕೆ ಉಪಚುನಾವಣೆಯನ್ನು ಘೋಷಿಸಬಹುದು. ಅಜಮ್ ಖಾನ್ ಅವರ ಪ್ರಕರಣದಲ್ಲಿ, ಖಾನ್ ಅವರ 37-ರಾಮ್‌ಪುರ ಸ್ಥಾನಕ್ಕೆ (ದೇಶದಾದ್ಯಂತ ನಾಲ್ಕು ಇತರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉಪಚುನಾವಣೆಗಳ ಜೊತೆಗೆ) ಉಪಚುನಾವಣೆಯನ್ನು ಕೆಲವೇ ದಿನಗಳಲ್ಲಿ ಘೋಷಿಸಲಾಗಿತ್ತು.
ಇದನ್ನೂ ಓದಿ: Rahul Gandhi Disqualified: ‘ನಾನು ಎಲ್ಲದಕ್ಕೂ ಸಿದ್ಧ’, ಅನರ್ಹತೆ ಬಳಿಕ ರಾಹುಲ್ ಗಾಂಧಿ ಹೇಳಿದ್ದೇನು?
ಆದರೂ ಲಕ್ಷದ್ವೀಪ ಸಂಸದ ಪಿಪಿ ಮೊಹಮ್ಮದ್ ಫೈಸಲ್ ಅವರ ಇತ್ತೀಚಿನ ಪ್ರಕರಣದಲ್ಲಿ, ಸಂಸದರಿಗೆ ಶಿಕ್ಷೆಯಾದ ನಂತರ ಜನವರಿ 18ರಂದು ಉಪಚುನಾವಣೆ ಘೋಷಿಸಲಾಗಿತ್ತು. ಜನವರಿ 30ರಂದು ಕೇರಳ ಹೈಕೋರ್ಟ್ ಫೈಸಲ್ ಅವರ ಶಿಕ್ಷೆಯನ್ನು ರದ್ದುಗೊಳಿಸಿದ ಬಳಿಕ ಚುನಾವಣೆ ಆಯೋಗವು ಈ ಘೋಷಣೆಯನ್ನು ಹಿಂಪಡೆಯಬೇಕಾಯಿತು.
ಇಲ್ಲಿ ರಾಹುಲ್ ಗಾಂಧಿಗೆ ಯಾವ ಆಯ್ಕೆಗಳಿವೆ?
ಒಂದು ವೇಳೆ ಉನ್ನತ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಿದರೆ ಅಥವಾ ಅವರ ಪರವಾಗಿ ಮೇಲ್ಮನವಿಯನ್ನು ನಿರ್ಧರಿಸಿದರೆ ಅವರ ಅನರ್ಹತೆಯನ್ನು ರದ್ದುಗೊಳಿಸಬಹುದು. ಮೊದಲು ಅವರು ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಮಾಡಬೇಕಾಗುತ್ತದೆ. ಅಲ್ಲಿ ಆಗದಿದ್ದರೆ ಮುಂದೆ ಗುಜರಾತ್ ಹೈಕೋರ್ಟಿನ ಮುಂದೆ ಹೋಗಬೇಕಾಗುತ್ತದೆ.
ನ್ಯಾಯಾಲಯದಿಂದ ಅವರು ಪರಿಹಾರ ಪಡೆಯದಿದ್ದರೆ ಎಂಟು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಅಂದರೆ ಅವರ ಶಿಕ್ಷೆಯ ಎರಡು ವರ್ಷಗಳು, ಜೊತೆಗೆ RP ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನಂತರದ ಆರು ವರ್ಷಗಳು. ಒಟ್ಟು ಎಂಟು.
ಈಗಾಗಲೇ ಮೇಲ್ಮನವಿ ಸಲ್ಲಿಸಲು ಸಮಯ ಕೋರಿ ಅವರ ವಕೀಲ ಕಿರಿತ್ ಪನ್ವಾಲಾ ಶುಕ್ರವಾರ ಸೂರತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
EXPLAINER
ವಿಸ್ತಾರ Explainer: ಮರಳಿ ಸುದ್ದಿಯಲ್ಲಿರುವ ಲೋಕಾಯುಕ್ತ; ಎಷ್ಟಿದೆ ಇದರ ಅಧಿಕಾರ, ಆಳ ಮತ್ತು ಅಗಲ?
ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಲಂಚ ಪ್ರಕರಣ ಲೋಕಾಯುಕ್ತದ ಸಾಮರ್ಥ್ಯವನ್ನು ಮತ್ತೆ ಮುನ್ನಲೆಗೆ ತಂದು ನಿಲ್ಲಿಸಿದೆ. ಲೋಕಾಯುಕ್ತದ ವ್ಯಾಪ್ತಿ, ಅಧಿಕಾರ ಎಷ್ಟು? ಯಾರು ಇದನ್ನು ಕಟ್ಟಿದರು, ಯಾರು ನಾಶ ಮಾಡಲು ಯತ್ನಿಸಿದರು? ಇಲ್ಲಿದೆ ಒಂದು ನೋಟ.
ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಯ ಮೇಲಿನ ಲೋಕಾಯುಕ್ತ ದಾಳಿ (Lokayukta Raid) , ಅಲ್ಲಿ ಸಿಕ್ಕಿದ ಎಂಟು ಕೋಟಿ ರೂಪಾಯಿ ಅಕ್ರಮ ಹಣಕಾಸು ಪ್ರಕರಣ ಇದೀಗ ಲೋಕಾಯುಕ್ತದ ಮುಂದೆ ವಿಚಾರಣೆಯ ಪ್ರಕ್ರಿಯೆಯಲ್ಲಿದೆ. ಚುನಾವಣೆಗೆ ಮುನ್ನ ನಡೆದ ಈ ಘಟನೆ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕವನ್ನು ಕಂಗೆಡಿಸಿದೆ ಕೂಡ.
ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ನ ಅಧ್ಯಕ್ಷರೂ ಆಗಿದ್ದರು. ಅವರ ಪುತ್ರ ಪ್ರಶಾಂತ್ ಮಾಡಾಳು ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಯ ಹಣಕಾಸು ಸಲಹೆಗಾರರಾಗಿದ್ದರು. ಇದೀಗ, ತಮಗೆ ಬೇಕಾದವರಿಗೆ ಟೆಂಡರ್ ನೀಡಲು ದೊಡ್ಡ ಮೊತ್ತದ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.
ಇದಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ʼʼಈ ಹಿಂದಿನ ಕಾಂಗ್ರೆಸ್ ಸರ್ಕಾರ ಶಿಥಿಲಗೊಳಿಸಿದ್ದ ಲೋಕಾಯುಕ್ತವನ್ನು ನಮ್ಮ ಪಕ್ಷವೇ ಮರಳಿ ತಂದಿದೆ. ಕಾಂಗ್ರೆಸ್‌ನ ಅವಧಿಯಲ್ಲಿ ಎಷ್ಟೋ ಭ್ರಷ್ಟಾಚಾರ ಪ್ರಕರಣಗಳು ಹಾಗೆಯೇ ಮುಚ್ಚಿಹೋಗಿದ್ದವುʼʼ ಎಂದು ಆರೋಪಿಸಿದ್ದಾರೆ. ʼʼಲೋಕಾಯುಕ್ತ ಸ್ವಾಯತ್ತ ಸಂಸ್ಥೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆʼʼ ಎಂದಿದ್ದಾರೆ.
ಲೋಕಾಯುಕ್ತ ಎಷ್ಟು ಸ್ವಾಯತ್ತ?
ಹೌದೆ? ಲೋಕಾಯುಕ್ತ ಅಷ್ಟೊಂದು ಸ್ವಾಯತ್ತವೇ? ಲೋಕಾಯುಕ್ತ ಎಂದರೇನು?
ಕೇಂದ್ರದ ಲೋಕಪಾಲ್‌ನ ಸಮಾನಾಂತರ ಸಂಸ್ಥೆಗಳು ರಾಜ್ಯದ ಲೋಕಾಯುಕ್ತಗಳು. ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ- 2013 ಹೇಳುವಂತೆ ʼʼಪ್ರತಿ ರಾಜ್ಯವೂ ಆಯಾ ರಾಜ್ಯದಲ್ಲಿ ಅಲ್ಲಿನ ಶಾಸನಸಭೆಯಲ್ಲಿ ರೂಪಿಸಲಾದ ಕಾಯಿದೆಯಡಿ ಕಾರ್ಯಾಚರಿಸುವ ಸಂಸ್ಥೆಯನ್ನು ಈ ಕಾಯಿದೆ ಬಂದ ಒಂದು ವರ್ಷದ ಒಳಗಾಗಿ ಸ್ಥಾಪಿಸಬೇಕು. ಅದು ಅಲ್ಲಿನ ಸಾರ್ವಜನಿಕ ಆಡಳಿತಗಾರರ ಮೇಲೆ ಬರುವ ಭ್ರಷ್ಟಾಚಾರದ ದೂರುಗಳನ್ನು ತನಿಖೆಗೊಳಪಡಿಸಬೇಕು.ʼʼ
ಇದನ್ನು ಲೋಕಪಾಲ್ ಹೇಳಿದ್ದು 2013ರಲ್ಲಿ. ಪ್ರತಿ ರಾಜ್ಯದಲ್ಲೂ ಲೋಕಾಯುಕ್ತವನ್ನು ಕಡ್ಡಾಯಗೊಳಿಸುವುದು ಅದರ ಗುರಿಯಾಗಿತ್ತು. ಆದರೆ ಆಗಿನ ಪ್ರತಿಪಕ್ಷಗಳು, ಬಿಜೆಪಿಯೂ ಸೇರಿದಂತೆ, ಇದು ಒಕ್ಕೂಟ ವ್ಯವಸ್ಥೆಯ ಚೈತನ್ಯಕ್ಕೆ ವಿರುದ್ಧ ಎಂದು ಗಲಾಟೆ ಎಬ್ಬಿಸಿದವು. ಹೀಗಾಗಿ, ಆಗ ರಚನೆಯಾದ ಕಾಯಿದೆಯು, ಲೋಕಾಯುಕ್ತ ರಚನೆಯ ಹೊಣೆಯನ್ನು ಆಯಾ ರಾಜ್ಯಗಳಿಗೆ ಬಿಟ್ಟುಬಿಟ್ಟಿತು.
ಕೇಂದ್ರದ ಲೋಕಪಾಲ್ ಕಾಯಿದೆ 2014ರ ಜನವರಿ ಒಂದರಂದು ರಾಷ್ಟ್ರಪತಿಗಳ ಅಂಕಿತ ಪಡೆದು ಜನವರಿ 16ರಂದು ಜಾರಿಗೆ ಬಂತು. ಈ ಕಾಯಿದೆ ಅಣ್ಣಾ ಹಜಾರೆಯಂಥವರು ಮಾಡಿದ ಲೋಕಪಾಲ್ ಚಳವಳಿ ಮುಂತಾದ ಹಲವಾರು ಹೋರಾಟಗಳ ಫಲವಾಗಿತ್ತು.
ಈ ಕಾಯಿದೆಯಿಂದಾಗಿ ಆಗಿದ್ದು ಎಂದರೆ ಲೋಕಪಾಲ್ ಸೃಷ್ಟಿ. ಇದರ ಅಧ್ಯಕ್ಷರು ದೇಶದ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ, ಅಥವಾ ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರುವ ಉನ್ನತ ಹುದ್ದೆಯ ವ್ಯಕ್ತಿಯಾಗಿರಬೇಕು. ಇದು 8 ಸದಸ್ಯರನ್ನು ಹೊಂದಿರಬೇಕು. ಇವರು ನ್ಯಾಯಾಂಗದವರಾಗಿರಬೇಕು. ಇದರಲ್ಲಿ 50% ಸದಸ್ಯರು ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ವರ್ಗ ಮತ್ತು ಮಹಿಳೆಯರಾಗಿರಬೇಕು. ಆದರೆ ಸದ್ಯಕ್ಕೆ ಕೇಂದ್ರದ ಲೋಕಾಯುಕ್ತ ಸಕ್ರಿಯವಾಗಿಲ್ಲ. ನಾಮಕಾವಸ್ಥೆ ಎಂಬಂತಿದೆ.
ಕರ್ನಾಟಕದ ಮಾದರಿ
ಈ ಕಾಯಿದೆ ಜಾರಿಗೆ ಬಂದಾಗ ಆಗಲೇ ಹಲವು ರಾಜ್ಯಗಳಲ್ಲಿ ಲೋಕಾಯುಕ್ತವಿತ್ತು ಮತ್ತು ಚುರುಕಾಗಿಯೇ ಅವು ಕಾರ್ಯ ನಿರ್ವಹಿಸುತ್ತಿದ್ದವು. ಮಧ್ಯಪ್ರದೇಶ ಹಾಗೂ ಕರ್ನಾಟಕಗಳಲ್ಲಿತ್ತು. ಲೋಕಪಾಲ್ ಕಾಯಿದೆ ಹಾಗೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕ ಇಂದು ಎಲ್ಲ ರಾಜ್ಯಗಳಲ್ಲೂ ಲೋಕಾಯುಕ್ತ ಸೃಷ್ಟಿಯಾಗಿದೆ. ಆದರೆ ಚುರುಕಾಗಿರುವುದು ಕೆಲವೇ ಕಡೆ ಮಾತ್ರ.
ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ, ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ವಿಧೇಯಕವನ್ನು ವಿಧಾನಸಭೆಯಲ್ಲಿ (1983) ಮಂಡಿಸಲಾಯಿತು. ಅದು ಅವರ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ-1984 ಜಾರಿಗೆ ಬಂದದ್ದು 1986, ಜನವರಿ 15ರಂದು. ಸಾರ್ವಜನಿಕ ಆಡಳಿತದ ಗುಣಮಟ್ಟವನ್ನು ಉತ್ತಮಗೊಳಿಸುವುದು, ಆಡಳಿತಗಾರರ ಭ್ರಷ್ಟಾಚಾರ ಪತ್ತೆ ಹಚ್ಚುವುದು ಮತ್ತು ತನಿಖೆಗೊಳಪಡಿಸುವುದು ಇದರ ಗುರಿ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಶಿಸ್ತಿಗೆ ಶಿಕ್ಷೆ ಕೂಡ ಇದರ ವ್ಯಾಪ್ತಿ. 1908ರ ಕೋಡ್ ಆಫ್ ಸಿವಿಲ್ ಪ್ರೊಸೀಜರ್ ಪ್ರಕಾರ ಸರ್ಚ್ ವಾರಂಟ್ ಹೊರಡಿಸುವ, ವಿಚಾರಣೆ ನಡೆಸುವ, ಸಿವಿಲ್ ಕೋರ್ಟ್‌ಗಳ ಅಧಿಕಾರ ಲೋಕಾಯುಕ್ತಕ್ಕೂ ದತ್ತವಾಗಿದೆ.
ಕರ್ನಾಟಕದ ಮೊದಲ ಲೋಕಾಯುಕ್ತರಾದವರು ಏ.ಡಿ. ಕೋಶಲ್. ಅವರು ಜನವರಿ 1986ರಿಂದ 1991ರವರೆಗೆ ಅಧಿಕಾರದಲ್ಲಿದ್ದರು. ಬಳಿಕ ರವೀಂದ್ರನಾಥ ಪೈ, ಅಬ್ದುಲ್ ಹಕೀಮ್ ಅವರು ಅಧಿಕಾರಕ್ಕೆ ಬಂದರು. ಕರ್ನಾಟಕದಲ್ಲಿ ಲೋಕಾಯುಕ್ತರಾಗಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ಮಾಜಿ ನ್ಯಾಯಮೂರ್ತಿಗಳಾದ ಎನ್. ವೆಂಕಟಾಚಲ(2001-2006), ಸಂತೋಷ್ ಹೆಗ್ಡೆ (2006-2011) ಭ್ರಷ್ಟರಲ್ಲಿ ಇನ್ನಿಲ್ಲದ ನಡುಕ ಹುಟ್ಟಿಸಿದರು. ಅವರ ಆಗಮನವಾದರೆ ಸಾಕು, ಸರ್ಕಾರಿ ಅಧಿಕಾರಿಗಳು ಗಡಗಡ ನಡುಗುತ್ತಿದ್ದರು. ಇವರು ದಾಳಿ ನಡೆಸಿದ ವೇಳೆ ಬೆದರಿ ಮೂರ್ಛೆ ಹೋದ ಅಧಿಕಾರಿಗಳೂ ಇದ್ದರು. ಹಲವರು ರಾಜಕಾರಣಿಗಳಿಗೂ ಲೋಕಾಯುಕ್ತ ತನಿಖೆಯ ಬಿಸಿ ಮುಟ್ಟಿತು. ಲೋಕಾಯುಕ್ತದ ಪರಿಣಾಮಕಾರಿ ಕಾರ್ಯತಂತ್ರ, ಹೆಚ್ಚುತ್ತಿದ್ದ ಲೋಕಪಾಲ ಚಳವಳಿಯ ಬಿಸಿ ರಾಜಕಾರಣಿಗಳಿಗೂ ಮುಟ್ಟಿತು. ಬಳಿಕ ಶಿವರಾಜ್ ಪಾಟೀಲ್, ವೈ.ಭಾಸ್ಕರ್ ರಾವ್, ಪಿ. ವಿಶ್ವನಾಥ ಶೆಟ್ಟಿ, ನ್ಯಾ. ಬಿ ಎಸ್ ಪಾಟೀಲ್ ಅಧಿಕಾರ ನಿರ್ವಹಿಸಿದ್ದಾರೆ.
ಎಸಿಬಿ ರಚನೆ
ಇದರಿಂದೆಲ್ಲ ಬೆದರಿದ ರಾಜಕಾರಣಿಗಳು ಲೋಕಾಯುಕ್ತವನ್ನು ಶಿಥಿಲಗೊಳಿಸುವ ತಂತ್ರದ ಮೊರೆ ಹೋದರು. ಅಂಥ ಒಂದು ಪ್ರಯತ್ನವೆಂದರೆ 2016ರ ಮಾರ್ಚ್ 14ರಂದು ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ). ಭ್ರಷ್ಟಾಚಾರ ತಡೆ ಕಾಯಿದೆ-1988ರ ಬಹುತೇಕ ಎಲ್ಲಾ ಅಧಿಕಾರಗಳನ್ನು ಲೋಕಾಯುಕ್ತದಿಂದ ಎಸಿಬಿಗೆ ಸರ್ಕಾರ ವರ್ಗಾಯಿಸಿತು.
ಎಸಿಬಿ ರಚನೆಗೂ ಮುನ್ನ ಲೋಕಾಯುಕ್ತ ತನಗೆ ಬಂದ ದೂರುಗಳ ತನಿಖೆಯನ್ನು ತನ್ನದೇ ಪೊಲೀಸ್ ವಿಭಾಗದಿಂದ ಮಾಡುತ್ತಿತ್ತು. ಸಂಸ್ಥೆಗೆ 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಕಾರ ಈ ಅಧಿಕಾರ ಇತ್ತು. ಆದರೆ ಈ ಬಳಿಕ ಸಂಸ್ಥೆಗೆ ತನಿಖೆ ನಡೆಸುವ ಅಧಿಕಾರ ಇಲ್ಲವಾಯ್ತು. ಅದು ಕೇವಲ ದೂರುಗಳನ್ನು ಮಾತ್ರ ಸ್ವೀಕರಿಸಿ ಎಸಿಬಿಗೆ ತನಿಖೆ ನಡೆಸಲು ಸೂಚಿಸಬೇಕಾಯಿತು. ಇದು ಲೋಕಾಯುಕ್ತದ ಶಕ್ತಿಗುಂದಿಸಿತು. ಆದರೆ ಇತ್ತೀಚೆಗೆ ಹೈ ಕೋರ್ಟ್ ತೀರ್ಪಿನಿಂದಾಗಿ ಮತ್ತೆ ಲೋಕಾಯುಕ್ತಕ್ಕೆ ಕಳೆದುಹೋಗಿದ್ದ ಸ್ಥಾನಮಾನ ಮತ್ತೆ ಪ್ರಾಪ್ತವಾಗಿದೆ. 2022ರಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ (ಚಿದಾನಂದ ಅರಸ್ V/S ಕರ್ನಾಟಕ ರಾಜ್ಯ ಸರ್ಕಾರ) ಒಂದು ತೀರ್ಪು ನೀಡಿ, ಏಸಿಬಿಯನ್ನು ರದ್ದುಗೊಳಿಸಿ, ಲೋಕಾಯುಕ್ತದ ಅಧಿಕಾರಗಳನ್ನು ಮರುಸ್ಥಾಪಿಸಿತು.
ಲೋಕಾಯುಕ್ತ ತನಿಖೆಯ ವ್ಯಾಪ್ತಿ ಎಷ್ಟು?
ಹತ್ತು ವರ್ಷಗಳ ಅವಧಿಗೆ ಹೈಕೋರ್ಟ್‌ನ ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿದ ಯಾವುದೇ ವ್ಯಕ್ತಿಯನ್ನು ಲೋಕಾಯುಕ್ತ ಮತ್ತು ಐದು ವರ್ಷ ಉಪ ಲೋಕಾಯುಕ್ತನನ್ನಾಗಿ ನೇಮಿಸಬಹುದು. ಲೋಕಾಯುಕ್ತವು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ಸಂಸ್ಥೆ. ಕರ್ನಾಟಕ ರಾಜ್ಯಪಾಲರು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ನೇಮಕ ಮಾಡಲಾಗುತ್ತದೆ. ಇವರು ಐದು ವರ್ಷಗಳ ಅಧಿಕಾರ ಹೊಂದಿರುತ್ತಾರೆ. ಇವರ ಅವಧಿಯನ್ನು ಅಗತ್ಯ ಬಿದ್ದರೆ ವಿಸ್ತರಿಸಬಹುದು.
ಇದನ್ನೂ ಓದಿ: Lokayukta raid : ಕೊನೆಗೂ ಲೋಕಾಯುಕ್ತ ಮುಂದೆ ಹಾಜರಾದ ಶಾಸಕ ಮಾಡಾಳ್; ಮೂರು ತಾಸು ವಿಚಾರಣೆ, ಪ್ರಶ್ನೆಗಳ ಸುರಿಮಳೆ
ಲೋಕಾಯುಕ್ತವು ಮುಖ್ಯಮಂತ್ರಿ, ಯಾವುದೇ ಸಚಿವ ಅಥವಾ ಕಾರ್ಯದರ್ಶಿ, ರಾಜ್ಯ ಶಾಸಕಾಂಗದ ಸದಸ್ಯ ಅಥವಾ ಯಾವುದೇ ಇತರ ಸಾರ್ವಜನಿಕ ಸೇವಕ (ಅಧಿಕಾರಿ) ಕೈಗೊಂಡ ಕ್ರಮಗಳ ಕುಂದುಕೊರತೆಯ ಬಗ್ಗೆ ಅಥವಾ ಅವರ ಮೇಲೆ ಬಂದ ಭ್ರಷ್ಟಾಚಾರದ ಆರೋಪವನ್ನು ತನಿಖೆ ಮಾಡಬಲ್ಲ ಅಧಿಕಾರವನ್ನು ಹೊಂದಿದೆ. 1988ರಲ್ಲಿ ಮಾಡಲಾದ ತಿದ್ದುಪಡಿಯ ಪ್ರಕಾರ, ಆರೋಪಿ ಮಾಡಿದ ಕೃತ್ಯದ ದೂರು ಆರು ತಿಂಗಳ ನಂತರ ಬಂದರೆ, ಅದನ್ನು ಸ್ವೀಕರಿಸಬೇಕಿಲ್ಲ. ಭ್ರಷ್ಟಾಚಾರದ ಕೇಸ್‌ಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬಹುದು. ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದ್ದಾರೆ. ಭ್ರಷ್ಟಾಚಾರ ಅಥವಾ ದುರಾಡಳಿತದ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಬಹುದು. ಅಗತ್ಯವಿದ್ದರೆ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಉಲ್ಲೇಖಿಸುವ ಅಧಿಕಾರವನ್ನು ಹೊಂದಿದೆ. ಇದು ನೇರವಾಗಿ ರಾಜ್ಯ ಶಾಸಕಾಂಗಕ್ಕೆ ವರದಿ ಮಾಡಿಕೊಳ್ಳುತ್ತದೆ. ಯಾವುದೇ ಕಾರ್ಯಕಾರಿ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಆದರೆ ಇವರು ಶಿಕ್ಷೆ ಘೋಷಿಸುವ ಅಧಿಕಾರವನ್ನು ಹೊಂದಿಲ್ಲ.
ಈ ಹಿಂದೆ ಹಲವು ಹೈ ಪ್ರೊಫೈಲ್ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ಕೈಗೆತ್ತಿಕೊಂಡು ತನಿಖೆ ನಡೆಸಿ ನ್ಯಾಯ ಒದಗಿಸಿದೆ. ಅಕ್ರಮ ಗಣಿಗಾರಿಕೆ ಕುರಿತ ತನಿಕೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅಧಿಕಾರ ಕಳೆದುಕೊಂಡದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಮಾಜಿ ಸಚಿವರು ಭಾಗಿಯಾಗಿದ್ದ ಭೂ ಹಗರಣ, ವಸತಿ ಹಗರಣ, ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಅಧಿಕಾರಿಗಳ ಬಂಧನವಾಗಿದೆ. 2015ರಲ್ಲಿ ಅಂದಿನ ಲೋಕಾಯುಕ್ತರ ವಿರುದ್ಧವೇ ಅಧಿಕಾರಿಗಳಿಗೆ ಅನುಕೂಲಕರ ಹುದ್ದೆ ನೀಡಲು ಲಂಚ ಪಡೆದ ಆರೋಪ ಬಂದು, ಅವರ ರಾಜೀನಾಮೆಗೂ ಮೂಲವಾಯಿತು.
ಇದನ್ನೂ ಓದಿ: Lokayukta raid : ಮಾಡಾಳು ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ರದ್ದು ಕೋರಿ ಸು.ಕೋರ್ಟ್‌ಗೆ ಲೋಕಾಯುಕ್ತ ಮೊರೆ
EXPLAINER
OPS vs NPS : ಎನ್‌ಪಿಎಸ್ vs ಒಪಿಎಸ್, ಅಂತಿಮವಾಗಿ ಯಾವುದು ಬೆಸ್ಟ್
ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಘಟನೆಗಳು ಹಳೆಯ ಪಿಂಚಣಿ ಪದ್ಧತೆ ಅಥವಾ ಒಪಿಎಸ್ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿವೆ. ಹಾಗಾದರೆ ಎನ್‌ಪಿಎಸ್ ಮತ್ತು ಒಪಿಎಸ್ ಯಾವುದು ಉತ್ತಮ? ಅಂತಿಮವಾಗಿ ಜನತೆ ತಮ್ಮ ಆರ್ಥಿಕ ಭದ್ರತೆಗೆ ( OPS vs NPS) ಏನು ಮಾಡಬೇಕು? ಇಲ್ಲಿದೆ ವಿವರ.
OPS VS NPS ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಘಟನೆಗಳು ಇತ್ತೀಚೆಗೆ ಒಪಿಎಸ್ , ಓಲ್ಡ್ ಪೆನ್ಷನ್ ಸ್ಕೀಮ್ ಅಥವಾ ಹಳೆಯ ಪಿಂಚಣಿ ಪದ್ಧತಿಯನ್ನು (Old penstion scheme) ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿವೆ. ದಿನ ಕಳೆದಂತೆ ಇದು ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜಕೀಯದ ಬಣ್ಣವೂ ಇದಕ್ಕಿದೆ. ಹಿಮಾಚಲಪ್ರದೇಶ, ಜಾರ್ಖಂಡ್, ಪಂಜಾಬ್, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಗೆ ಮರಳಿವೆ. ( New pension scheme ) ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲೂ ಒಪಿಎಸ್‌ಗೆ ಕೂಗು ಕೇಳಿ ಬರುತ್ತಿದೆ. ಸರ್ಕಾರದ ಮಟ್ಟದಲ್ಲಿ ಸಮಾಲೋಚನೆ ನಡೆಯುತ್ತಿದೆ. ಮತ್ತೊಂದು ಕಡೆ ಆರ್‌ಬಿಐ ಕೂಡ ಒಪಿಎಸ್ ಜಾರಿಗೆ ತರುವುದರಿಂದ ರಾಜ್ಯಗಳ ಆರ್ಥಿಕತೆಗೆ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಎಚ್ಚರಿಸಿದೆ. ಹಾಗಾದರೆ ಏನಿದು ಒಪಿಎಸ್ ವರ್ಸಸ್ ಎನ್‌ಪಿಎಸ್ ವಿವಾದ? ಸರ್ಕಾರಿ ನೌಕರರ ಸಂಘಟನೆಗಳು ಏಕೆ ಒಪಿಎಸ್‌ಗೆ ಒತ್ತಾಯಿಸುತ್ತಿವೆ. ಈ ವಿವಾದ ಹುಟ್ಟಿದ್ದು ಹೇಗೆ?
ಭಾರತದಲ್ಲಿ ಹೆಚ್ಚುತ್ತಿರುವ ಹಿರಿಯ ನಾಗರಿಕರ ಸಂಖ್ಯೆ:
ಭಾರತದಲ್ಲಿ 1961ರಿಂದೀಚೆಗೆ ಹಿರಿಯ ನಾಗರಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. 2011ರ ಜನಗಣತಿಯ ಪ್ರಕಾರ ದೇಶದಲ್ಲಿ 60 ವರ್ಷ ದಾಟಿದವರ ಸಂಖ್ಯೆ ಆಗ 10 ಕೋಟಿ ಇತ್ತು. ವಿಶ್ವಸಂಸ್ಥೆಯ ವರದಿಯ ಪ್ರಕಾರ 2026ಕ್ಕೆ ಹಿರಿಯ ನಾಗರಿಕರ ಸಂಖ್ಯೆ 17 ಕೋಟಿಗೆ ಏರಿಕೆಯಾಗಲಿದೆ. ಹಿರಿಯರ ಸಂಖ್ಯೆ ಭವಿಷ್ಯದ ದಿನಗಳಲ್ಲಿ ಹೀಗೆ ಏರಿಕೆಯಾಗುತ್ತಾ ಹೋಗಲಿದೆ. ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಪಂಜಾಬ್‌ನಲ್ಲಿ ಜನಸಂಖ್ಯೆಯ 16%ರಿಂದ 20% ತನಕ ಹಿರಿಯ ನಾಗರಿಕರು ಇದ್ದಾರೆ. ಆದ್ದರಿಂದ ನಿವೃತ್ತರಿಗೆ ಸಾಮಾಜಿಕ ಭದ್ರತೆ ನಿರ್ಣಾಯಕ.
ಏನಿದು ಒಪಿಎಸ್?
ಭಾರತ ಅತ್ಯಂತ ಸಂಕೀರ್ಣವಾಗಿರುವ ಪಿಂಚಣಿ ವ್ಯವಸ್ಥೆಯನ್ನು ಹೊಂದಿದೆ. ಮುಖ್ಯವಾಗಿ ಹಿರಿಯ ನಾಗರಿಕರಿಗೆ, ಬಡವರಿಗೆ ಪಿಂಚಣಿ ನೀಡುವ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನ್ಯಾಶನಲ್ ಸೋಶಿಯಲ್ ಅಸಿಸ್ಟೆನ್ಸ್ ಪ್ರೋಗ್ರಾಮ್ (NSAP̧) OSP ಮತ್ತು ಎನ್‌ಪಿಎಸ್ ಹಾಗೂ ಇಪಿಎಫ್‌ಒ ಅಡಿಯಲ್ಲಿನ ಪಿಂಚಣಿ ಯೋಜನೆ. ಹೀಗಿದ್ದರೂ, ಈ ಎಲ್ಲ ಪಿಂಚಣಿ ಯೋಜನೆಗಳ ಸುತ್ತಮುತ್ತ ವಿವಾದಗಳು, ಸಾಧ್ಯಾಸಾಧ್ಯತೆಯ ಪ್ರಶ್ನೆಗಳು ಮತ್ತು ಹೋರಾಟಗಳು ನಡೆಯುತ್ತಿವೆ. ಸದ್ಯಕ್ಕೆ ಒಪಿಎಸ್ ಅತ್ಯಂತ ವಿವಾದದಲ್ಲಿದೆ.
ಓಪಿಸ್‌ನಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಮೊದಲೇ ನಿರ್ಧರಿಸಿದ ಲೆಕ್ಕಾಚಾರದ ಅಡಿಯಲ್ಲಿ ಡಿಫೈನ್ಡ್ ಪಿಂಚಣಿ ಸಿಗುತ್ತದೆ. ನಿವೃತ್ತಿಗೆ ಮುನ್ನ ಕೊನೆಯ ತಿಂಗಳಿನ ವೇತನದ 50% ಮೊತ್ತದಷ್ಟು ಪಿಂಚಣಿಯನ್ನು ಪಡೆಯುತ್ತಾರೆ. ಉದಾಹರಣೆಗೆ ನಿವೃತ್ತಿಯ ಕೊನೆಯ ತಿಂಗಳು 1 ಲಕ್ಷ ರೂ. ವೇತನ ಇದ್ದರೆ ಮಾಸಿಕ 50,000 ರೂ. ಪಿಂಚಣಿ ಸಿಗುತ್ತದೆ. ವರ್ಷಕ್ಕೆ ಎರಡಿ ಸಲ ಡಿಎ ಪರಿಷ್ಕರಣೆಯಾದಾಗ ಅದರ ಪ್ರಯೋಜನವೂ ಸಿಗುತ್ತದೆ. ಆದರೆ ಈ ವೆಚ್ಚದ ಬಹುಪಾಲು ವೆಚ್ಚವನ್ನು ಆಯಾ ಸರ್ಕಾರಗಳೇ ಭರಿಸಬೇಕಾಗುತ್ತದೆ. ಇಲ್ಲೂ ಜನರಲ್ ಪ್ರಾವಿಡೆಂಟ್ ಫಂಡ್ (GPF) ಖಾತೆ ಕೂಡ ಇರುತ್ತದೆ. ಇದರಲ್ಲಿ ಸರ್ಕಾರಿ ಉದ್ಯೋಗಿಗಳೂ ವೇತನದಲ್ಲಿ ಭವಿಷ್ಯನಿಧಿ ಅಥವಾ ಪ್ರಾವಿಡೆಂಡ್ ಫಂಡ್‌ಗೆ ತಮ್ಮ ಪಾಲು ನೀಡುತ್ತಾರೆ. ನಿವೃತ್ತಿಯಾಗುವಾಗ ಉದ್ಯೋಗಿಗೆ ಎಲ್ಲವೂ ಸೇರಿ ನೀಡುತ್ತಾರೆ.
ಒಪಿಎಸ್ ರದ್ದಾಗಿದ್ದು ಯಾವಾಗ? ಅದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆಯೇ?
2004ರಲ್ಲಿ ಒಪಿಎಸ್ ಅನ್ನು ಅಂದಿನ ಎನ್‌ಡಿಎ ಸರ್ಕಾರ ತೆರವುಗೊಳಿಸಿತು. ಈಗಿನ ನ್ಯಾಶನಲ್ ಪೆನ್ಷನ್ ಸ್ಕೀಮ್ ಅಥವಾ ಎನ್‌ಪಿಎಸ್‌ಗೆ ಬದಲಾಯಿತು. ಆದರೆ ಎನ್‌ಪಿಎಸ್ ಮಾದರಿಯ ಯೋಜನೆ ಬೇಕು ಎಂಬ ಪರಿಕಲ್ಪನೆ 1998ರಲ್ಲಿ ಆಗಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿರುವ ವರದಿಯಲ್ಲಿ ಪ್ರಸ್ತಾಪವಾಗಿತ್ತು.
ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಒಪಿಎಸ್ ಹೊರೆ ಎಷ್ಟು?
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ (CMIE) ಅಂಕಿ ಅಂಶಗಳ ಪ್ರಕಾರ, ಪಿಂಚಣಿ ಸಲುವಾಗಿ ರಾಜ್ಯ ಸರ್ಕಾರಗಳ ವೆಚ್ಚ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಆರಂಭದಲ್ಲಿ ರಾಜ್ಯದ ಆದಾಯದ 10% ಇದ್ದ ವೆಚ್ಚ 2020-21ರ ವೇಳೆಗೆ 25% ಕ್ಕೆ ಏರಿಕೆಯಾಗಿದೆ.
ಹಿಮಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ಒಪಿಎಸ್‌ಗೆ ಮರಳಿವೆ. ಎಸ್‌ಬಿಐ ಎಕೋರಾಪ್ ವರದಿಯ ಪ್ರಕಾರ ಇದರಿಂದಾಗಿ ಈ ರಾಜ್ಯಗಳಿಗೆ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಖರ್ಚಾಗಲಿದೆ. ಎಲ್ಲ ರಾಜ್ಯಗಳೂ ಒಪಿಎಸ್‌ಗೆ ಹಿಂತಿರುಗಿದರೆ ಸರ್ಕಾರಗಳ ಬೊಕ್ಕಸಕ್ಕೆ 31 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಇದನ್ನು ಭರಿಸುವುದು ಹೇಗೆ ಎಂಬುದು ಈಗಿನ ಪ್ರಶ್ನೆಯಾಗಿದೆ. ಎರಡನೆಯದಾಗಿ 20 ವರ್ಷ ಉದ್ಯೋಗದಲ್ಲಿ ಇದ್ದವರಿಗೆ ಮಾತ್ರ ಒಪಿಎಸ್ ಸಿಗುತ್ತದೆ.
ಸರ್ಕಾರ ಪಿಂಚಣಿಯನ್ನು ಹೇಗೆ ಪಾವತಿಸುತ್ತದೆ?
ಸರ್ಕಾರಗಳು ಪಿಂಚಣಿಗೋಸ್ಕರ ನಿರ್ದಿಷ್ಟ ನಿಧಿಯನ್ನು ಹೊಂದಿಲ್ಲ. ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯ ಹಣದಿಂದಲೇ ನೀಡುತ್ತವೆ. ಸುಮಾರು 77 ಲಕ್ಷ ಪಿಂಚಣಿದಾರರು ಹಾಗೂ ಹಾಲಿ ಕರ್ತವ್ಯದಲ್ಲಿರುವ ಉದ್ಯೋಗಿಗಳ ಸಂಖ್ಯೆ 50 ಲಕ್ಷ ಇದೆ. ಭಾರತದಲ್ಲಿ ಸುಮಾರು 31 ಕೋಟಿ ಉದ್ಯೋಗದಲ್ಲಿದ್ದಾರೆ. ಇವರಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಇರುವವರು ಕಡಿಮೆ. ಬಹುತೇಕ ಮಂದಿ ಖಾಸಗಿ ವಲಯದಲ್ಲಿ ಹಾಗೂ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟು 31 ಕೋಟಿ ದುಡಿಯುವ ವರ್ಗದಲ್ಲಿ ಕೇವಲ 11% ಮಂದಿ ಮಾತ್ರ ಅಂದರೆ 3.4 ಕೋಟಿಗೆ ಮಾತ್ರ ವೃದ್ಧಾಪ್ಯದಲ್ಲಿ ಪಿಂಚಣಿ ಆದಾಯ ಸಿಗುತ್ತಿದೆ.
ಏನಿದು ಎನ್‌ಪಿಎಸ್?
ಕೇಂದ್ರ ಸರ್ಕಾರ 2003ರಲ್ಲಿ ಪರಿಚಯಿಸಿದ ಎನ್‌ಪಿಎಸ್ ಅನ್ನು 2004ರ ಜನವರಿ 1ರ ಬಳಿಕ ಎಲ್ಲ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸಲಾಗಿದೆ. ಪೆನ್ಷನ್ ಫಂಡ್ ರೆಗ್ಯುಲೇಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ ಇದನ್ನು ವಿನ್ಯಾಸಗೊಳಿಸಿದೆ. 2009ರಲ್ಲಿ ಎಲ್ಲ ನಾಗರಿಕರಿಗೂ ಇದನ್ನು ವಿಸ್ತರಿಸಲಾಯಿತು. ಖಾಸಗಿ ವಲಯದ ಉದ್ಯೋಗಿಗಳೂ, ಸ್ವ ಉದ್ಯೋಗಿಗಳೂ ಇದರಲ್ಲಿ ಹೂಡಿಕೆ ಮಾಡಬಹುದು. ಸರ್ಕಾರ ಉದ್ಯೋಗಿಗಳಾದರೆ ಮೂಲವೇತನದ 10% ಅನ್ನು ಉದ್ಯೋಗಿ ತನ್ನ ವೇತನದಲ್ಲಿ ನೀಡಬೇಕು. ಸರ್ಕಾರ ಇದಕ್ಕೆ 14% ಸೇರಿಸುತ್ತದೆ. ಇದು ಮಾರುಕಟ್ಟೆ ಆಧರಿತವಾಗಿದ್ದು, ನಿರ್ದಿಷ್ಟ ಪಾಲನ್ನು ಷೇರು, ಬಾಂಡ್ ಸೇರಿದಂತೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಎಸ್‌ಬಿಐ, ಎಲ್‌ಐಸಿ ಮತ್ತು ಯುಟಿಐ ಮತ್ತು ಇತರ ಸಂಸ್ಥೆಗಳು ಇದರ ಫಂಡ್ ಮ್ಯಾನೇಜರ್‌ಗಳಾಗಿವೆ.
ಎನ್‌ಪಿಎಸ್‌ನಲ್ಲಿ ಟೈರ್ 1 ಮತ್ತು ಟೈರ್ 2 ಎಂಬ ಎರಡು ಆಯ್ಜೆಗಳಿದೆ. ಟೈರ್ 1 ಪ್ರೈಮರಿ ಖಾತೆಯಾಗಿದ್ದು, ಹೂಡಿಕೆಯ ಖಾತೆಯಾಗಿದೆ. ಟೈರ್ 1 ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ 1000 ರೂ. ಹೂಡಿಕೆ ಅಗತ್ಯ. ವಾರ್ಷಿಕ 1.5 ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಟೈರ್-2 ಖಾತೆಯಲ್ಲಿ ಹೂಡಿಕೆಗೆ ಮಿತಿ ಇಲ್ಲ. ಇದು ಮ್ಯೂಚುವಲ್ ಫಂಡ್‌ನಂತೆ ಕಾರ್ಯನಿರ್ವಹಿಸುತ್ತದೆ.
ಸರ್ಕಾರಿ ಉದ್ಯೋಗಿಗಳು ಒಪಿಎಸ್ ಬೇಕು ಎಂದು ಒತ್ತಾಯಿಸುತ್ತಿರುವುದೇಕೆ?
ಒಪಿಎಸ್‌ನಂತೆ ಎನ್‌ಪಿಎಸ್‌ನಲ್ಲಿ ಪಿಂಚಣಿ ಹಣ ಎಷ್ಟು ಬರುತ್ತದೆ ಎಂದು ಖಾತರಿಯಲ್ಲಿ ಹೇಳಲು ಸಾಧ್ಯ ಇಲ್ಲ. ಏಕೆಂದರೆ ಇದು ಮಾರುಕಟ್ಟೆ ಆಧಾರಿತ. ಹೀಗಾಗಿ ಅಪಾಯಕಾರಿ ಎನ್ನುತ್ತಾರೆ. ಎನ್‌ಪಿಎಸ್‌ನಲ್ಲಿ ಉದ್ಯೋಗಿಗಳು ತಮ್ಮ ಮೂಲವೇತನದ 10% ಪಾಲನ್ನು ನೀಡಬೇಕಾಗುತ್ತದೆ. ಒಪಿಎಸ್‌ನಲ್ಲಿ ಉದ್ಯೋಗಿಗಳು ಪಿಂಚಣಿಗೆ ಏನನ್ನೂ ಕೊಡಬೇಕಿಲ್ಲ.
ಒಪಿಎಸ್‌ಗೆ ತೆರಳುವುದರಿಂದ ಸದ್ಯಕ್ಕೆ ರಾಜ್ಯಗಳಿಗೆ ಲಾಭ ಇದೆಯೇ?
ಇದೆ. ಎನ್‌ಪಿಎಸ್ 2004ರಿಂದ ಜಾರಿಗೆ ಬಂದಿದೆ. ಆಗ ಉದ್ಯೋಗಿಯೊಬ್ಬನ ವಯಸ್ಸು 30 ವರ್ಷ ಎಂದರೆ ಆತ ನಿವೃತ್ತಿಯಾಗುವುದು 2034ರಲ್ಲಿ. ಅಲ್ಲಿಯವರೆಗೆ ಒಪಿಎಸ್ ಅಡಿಯಲ್ಲಿ ಸರ್ಕಾರಕ್ಕೆ ಯಾವುದೇ ವೆಚ್ಚ ಇರುವುದಿಲ್ಲ. ಆದರೆ ಎನ್‌ಪಿಎಸ್ ಅಡಿಯಲ್ಲಿ ಪ್ರತಿ ವರ್ಷ ತನ್ನ ಪಾಲಿನ ದೇಣಿಗೆಯನ್ನು ಸರ್ಕಾರ ನೀಡಬೇಕಾಗುತ್ತದೆ. ಆದರೆ ಒಪಿಎಸ್ ಅಡಿಗೆ ಸೇರಿದರೆ 2034ರ ಬಳಿಕ ಸರ್ಕಾರದ ಪಿಂಚಣಿ ವೆಚ್ಚ ಗಣನೀಯ ಏರಿಕೆಯಾಗಲಿದೆ.
ಎನ್‌ಪಿಎಸ್ vs ಒಪಿಎಸ್ ವಿವಾದಕ್ಕೆ ರಾಜಕೀಯ ಆಯಾಮ ಇದೆಯೇ?
ಸರ್ಕಾರಿ ಉದ್ಯೋಗಿಗಳು ದೊಡ್ಡ ಮತ ಬ್ಯಾಂಕ್ ಆಗಿರುವುದರಿಂದ ರಾಜಕೀಯ ಪಕ್ಷಗಳು ಕಡೆಗಣಿಸುವಂತಿಲ್ಲ. ಅವರ ವಿವಾದಗಳು ಚುನಾವಣೆಯ ವಿಷಯವಾಗುತ್ತವೆ. ಹೀಗಾಗಿ ಒಪಿಎಸ್ ಹಿಂತೆಗೆತ ದೊಡ್ಡ ರಾಜಕೀಯ ವಿಷಯವಾಗಿದೆ. ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆ ವೇಳೆ ಕಾಂಗ್ರೆಸ್ ಒಪಿಎಸ್ ಜಾರಿಗೊಳಿಸುವ ಭರವಸೆ ನೀಡಿತ್ತು.
ಒಪಿಎಸ್ ಬಗ್ಗೆ ಆರ್‌ಬಿಐ ಏನೆನ್ನುತ್ತದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿಲುವು ಏನು?
ಕೆಲವು ರಾಜ್ಯಗಳು ಒಪಿಎಸ್‌ಗೆ ಹಿಂತಿರುವುತ್ತಿರುವುದಕ್ಕೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಇದರಿಂದಾಗಿ ಆರೋಗ್ಯ, ಶಿಕ್ಷಣ, ಹಸಿರು ಇಂಧನ ಅಭಿವೃದ್ಧಿಗೆ ಸರ್ಕಾರದ ಹೂಡಿಕೆ ಕಡಿಮೆಯಾಗಬಹುದು. ಪಿಂಚಣಿಗೋಸ್ಕರ ಹೆಚ್ಚು ಹಣವನ್ನು ಸರ್ಕಾರವೇ ವ್ಯಯಿಸುವುದು ದೀರ್ಘಕಾಲೀನವಾಗಿ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ. ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಸೇರಿದಂತೆ ಆರ್ಥಿಕ ತಜ್ಞರೂ ಒಪಿಎಸ್ ಅನ್ನು ವಿರೋಧಿಸಿದ್ದಾರೆ.
ಕೇಂದ್ರ ಸರ್ಕಾರ ಈಗ ಎನ್‌ಪಿಎಸ್ ವ್ಯಾಪ್ತಿಯಲ್ಲಿರುವ ಉದ್ಯೋಗಿಗಳು ಒಪಿಎಸ್‌ಗೆ ಮರಳಲು 2023ರ ಆಗಸ್ಟ್ 31 ತನಕ ಒಂದು ಸಲದ ಅವಕಾಶ ನೀಡಿದೆ. ಒಪಿಎಸ್‌ನಲ್ಲಿ ಇದ್ದು, ತಡವಾಗಿ ಸೇವೆಗೆ ಸೇರಿದವರಿಗೆ ಹಾಗೂ 2004ರಿಂದ ಎನ್‌ಪಿಎಸ್‌ಗೆ ಬಂದವರಿಗೆ ಇದು ಅನ್ವಯವಾಗಲಿದೆ. ಏಕೆಂದರೆ ತಡವಾಗಿ ಉದ್ಯೋಗಕ್ಕೆ ಸೇರಿದವರಿಗೆ ಎನ್‌ಪಿಎಸ್‌ನಲ್ಲಿ ಬರಬಹುದಾದ ಪಿಂಚಣಿಯೂ ಕಡಿಮೆಯಾಗಿರುತ್ತದೆ. ಹಣಕಾಸು ತಜ್ಞರ ವಿಶ್ಲೇಷಣೆ ಪ್ರಕಾರ ದೀರ್ಘಾವಧಿಗೆ ಹೂಡಿದರೆ ಎನ್‌ಪಿಎಸ್ ಉಳಿದೆಲ್ಲ ಪಿಂಚಣಿಗಿಂತ ಹೆಚ್ಚು ಆದಾಯವನ್ನು ನೀಡಬಲ್ಲುದು.
ಒಪಿಎಸ್ vs ಎನ್‌ಪಿಎಸ್ ಗೊಂದಲ ಇರುವುದರಿಂದ ಸಾರ್ವಜನಿಕರು, ಉದ್ಯೋಗಿಗಳು ಏನು ಮಾಡಬಹುದು?
ಒಪಿಎಸ್ ಬರಲಿ ಅಥವಾ ಬರದಿರಲಿ, ಅವರವರ ನಿವೃತ್ತಿ ಕಾಲದ ಹಣಕಾಸು ಭದ್ರತೆಯ ಜವಾಬ್ದಾರಿಯನ್ನು ಅವರವರೇ ವಹಿಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಎನ್‌ಪಿಎಸ್, ಅಟಲ್ ಪೆನ್ಷನ್ ಸ್ಕೀಮ್, ಮ್ಯೂಚುಯಲ್ ಫಂಡ್, ಷೇರು, ಬಾಂಡ್, ಚಿನ್ನ, ರಿಯಾಲ್ಟಿ ಹೀಗೆ ವೈವಿಧ್ಯಮ ಹೂಡಿಕೆಯ ಸಾಧನಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ವಿಧಾನವಾಗಿದೆ. ಯಾವುದೇ ಒಂದು ಪಿಂಚಣಿ ಮಾತ್ರ ಈಗಿನ ಹಣದುಬ್ಬರ ಮತ್ತು ಖರ್ಚುವೆಚ್ಚಗಳ ಏರಿಕೆಯ ದಿನಗಳಲ್ಲಿ ಸಾಕು ಎನ್ನಿಸದಿರುವುದು ಇದಕ್ಕೆ ಕಾರಣ. ಸರ್ಕಾರಗಳ ನೀತಿಗಳು ನಾನಾ ಕಾರಣಗಳಿಂದ ಬದಲಾಗಬಹುದು. ಬಹುಶಃ ಒಪಿಎಸ್ ಸುಧಾರಿತ ರೂಪದಲ್ಲಿ ಜಾರಿಗೆ ಬರಬಹುದು, ಅಥವಾ ಎನ್‌ಪಿಎಸ್ ಅನ್ನು ಮತ್ತಷ್ಟು ಆಕರ್ಷಕಗೊಳಿಸಬಹುದು. ಆದರೆ ಈ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಹೀಗಾಗಿ ಜನ ಸಾಮಾನ್ಯರು, ಮಧ್ಯಮ ವರ್ಗದ ಜನತೆ ಕಾಯುತ್ತಾ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಲಭ್ಯವಿರುವ ವಿಧಾನಗಳಲ್ಲಿಯೇ ಇಳಿ ವಯಸ್ಸಿನ ಅಗತ್ಯದ ಹಣಕಾಸು ಭದ್ರತೆ ಮತ್ತು ಸ್ವಾವಲಂಬನೆಯನ್ನು ಅವರವರೇ ಮಾಡಿಕೊಳ್ಳುವುದು ನಿರ್ಣಾಯಕವಾಗುತ್ತದೆ.
-
ಸುವಚನ2 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಅಂಕಣ21 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ22 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ21 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ23 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ19 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ19 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ15 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ