ಪಟನಾ: “ಹೆಣ್ಣುಮಕ್ಕಳು ಕಲಿತರೆ ಗರ್ಭಿಣಿಯಾಗಲು ನಿರಾಕರಿಸುತ್ತಾರೆ, ಗಂಡನಿಗೆ ಅವಕಾಶವೇ ನೀಡುವುದಿಲ್ಲ” ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಹೇಳಿಕೆ ನೀಡಿದ ಬಳಿಕ ಭಾರಿ ವಿವಾದ ಸೃಷ್ಟಿಯಾಗಿದೆ. ಹಾಗಾಗಿ, ನಿತೀಶ್ ಕುಮಾರ್ ಅವರು ಬುಧವಾರ (ನವೆಂಬರ್ 8) ಕ್ಷಮೆ ಕೇಳಿದ್ದಾರೆ. “ನಾನು ನೀಡಿದ ಹೇಳಿಕೆಯನ್ನು ಹಿಂಪಡೆಯುತ್ತೇನೆ ಹಾಗೂ ಕ್ಷಮೆಯಾಚಿಸುತ್ತೇನೆ” ಎಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಬಿಹಾರ ಮುಖ್ಯಮಂತ್ರಿ (Bihar Chief Minister) ಹೇಳಿದ್ದಾರೆ.
ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ಖಂಡನೆ ವ್ಯಕ್ತಪಡಿಸಿದ್ದರು. ಹಾಗೆಯೇ, ಕ್ಷಮೆಯಾಚಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ (NCW) ಹಾಗೂ ದೆಹಲಿ ಮಹಿಳಾ ಆಯೋಗ (DCW) ಪಟ್ಟು ಹಿಡಿದಿದ್ದವು. “ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಅವರು ನೀಡಿದ ಹೇಳಿಕೆಯು ಮಹಿಳೆಯರ ಘನತೆಗೆ ಧಕ್ಕೆ ತರುವಂತಿದೆ. ಪ್ರತಿಯೊಬ್ಬ ಮಹಿಳೆಯೂ ಗೌರವ ಸಿಗಬೇಕು. ಆದರೆ, ನಿತೀಶ್ ಕುಮಾರ್ ಅವರು ನೀಡಿದ ಹೇಳಿಕೆಯು ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ. ಹಾಗಾಗಿ, ನಿತೀಶ್ ಕುಮಾರ್ ಅವರು ದೇಶದ ಎಲ್ಲ ಹೆಣ್ಣುಮಕ್ಕಳ ಕ್ಷಮೆಯಾಚಿಸಬೇಕು” ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಒತ್ತಾಯಿಸಿದ್ದಾರು. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಕೂಡ ಕ್ಷಮೆಯಾಚನೆಗೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ನಿತೀಶ್ ಕುಮಾರ್ ಅವರು ಕ್ಷಮೆ ಕೇಳಿದ್ದಾರೆ.
#WATCH | Bihar CM Nitish Kumar says, "I apologise & I take back my words…" pic.twitter.com/wRIB1KAI8O
— ANI (@ANI) November 8, 2023
ನಿತೀಶ್ ಕುಮಾರ್ ಹೇಳಿದ್ದೇನು?
ಬಿಹಾರ ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತಿದ್ದ ಸಿಎಂ ನಿತೀಶ್ ಕುಮಾರ್ ಅವರು ಮಹಿಳೆ ಸುಶಿಕ್ಷಿತಳಾಗಿದ್ದರೆ ಹೇಗೆ ಜನನ ನಿಯಂತ್ರಣ ಸಾಧ್ಯವಾಗುತ್ತದೆ ಎಂಬುದನ್ನು ವಿವರಿಸುತ್ತಾ, ಮಹಿಳೆ ಒಂದೊಮ್ಮೆ ಜ್ಞಾನವಂತಳು, ಸುಶಿಕ್ಷಿತಳಾಗಿದ್ದರೆ ಗಂಡನ ಜತೆ ಮಿಲನಗೊಂಡಾಗಲೂ ತುಂಬ ಎಚ್ಚರವಾಗಿರುತ್ತಾಳೆ ಮತ್ತು ತಾನು ಗರ್ಭಿಣಿಯಾಗುವುದನ್ನು ತಪ್ಪಿಸುತ್ತಾಳೆ ಎಂದು ಹೇಳುತ್ತಾರೆ. ಆದರೆ, ಈ ವೇಳೆ ಬಳಸುವ ಕೈ ಸನ್ನೆಗಳು ಮತ್ತು ಭಾಷೆಯು ಅಪಾರ್ಥಕ್ಕೆ ಎಡೆ ಮಾಡಿಕೊಟ್ಟಿದೆ. ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
#WATCH | Bihar CM Nitish Kumar uses derogatory language to explain the role of education and the role of women in population control pic.twitter.com/4Dx3Ode1sl
— ANI (@ANI) November 7, 2023
ಇದನ್ನೂ ಓದಿ: ಹೆಣ್ಣು ಕಲಿತರೆ ಗರ್ಭಿಣಿಯಾಗಲು ಗಂಡನಿಗೆ ಅವಕಾಶವೇ ನೀಡಲ್ಲ, ಆದರೆ…! ಬಿಹಾರ ಸಿಎಂ ನಿತೀಶ್ ಎಡವಟ್ಟು!
ಸಿಎಂ ನಿತೀಶ್ ಕುಮಾರ್ ಅವರ ಮಾತುಗಳು ವೈರಲ್ ಆಗುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದ ಡಿಸಿಎಂ ತೇಜಸ್ವಿ ಯಾದವ್ ಅವರು, ಸಿಎಂ ಅವರ ಮಾತುಗಳು ಅಶ್ಲೀಲವಲ್ಲ, ಅವು ಲೈಂಗಿಕ ಶಿಕ್ಷಣದ್ದಾಗಿವೆ ಎಂದು ಹೇಳಿಕೊಂಡಿದ್ದರು. ಸಿಎಂ ಮಾತುಗಳ ಕುರಿತು ನಾನು ಸ್ಪಷ್ಪಪಡಿಸಲು ಇಚ್ಛಿಸುತ್ತೇನೆ. ಮುಖ್ಯಮಂತ್ರಿಗಳು ಲೈಂಗಿಕ ಶಿಕ್ಷಣದ ಹೇಳಿದ್ದಾರೆ, ಜನರು ಈ ವಿಷಯದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಶಾಲೆಗಳಲ್ಲಿ ವಿಜ್ಞಾನ, ಜೀವಶಾಸ್ತ್ರದಲ್ಲಿ ಇವುಗಳನ್ನು ಕಲಿಸಲಾಗುತ್ತದೆ. ಮಕ್ಕಳು ಇದನ್ನು ಕಲಿಯುತ್ತಾರೆ. ಅವರು ಪ್ರಾಯೋಗಿಕವಾಗಿ ಏನು ಮಾಡಬೇಕೆಂದು ಹೇಳಿದರು. ಜನಸಂಖ್ಯೆಯನ್ನು ನಿಯಂತ್ರಿಸಿ, ಇದನ್ನು ತಪ್ಪಾದ ರೀತಿಯಲ್ಲಿ ತೆಗೆದುಕೊಳ್ಳಬಾರದು, ಆದರೆ ಲೈಂಗಿಕ ಶಿಕ್ಷಣ ಎಂದು ತೆಗೆದುಕೊಳ್ಳಬೇಕು ತೇಜಸ್ವಿ ಯಾದವ್ ಅವರು ಹೇಳಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ