ಹೈದರಾಬಾದ್: ರಾಜಕೀಯ ವಿರೋಧಿಗಳ ಟೀಕೆ, ವ್ಯಂಗ್ಯಗಳನ್ನೇ ಅಸ್ತ್ರಗಳನ್ನಾಗಿ ಮಾಡಿಕೊಳ್ಳುವಲ್ಲಿ ನಿಸ್ಸೀಮರಾಗಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೀಗ ತಮ್ಮತ್ತ ಸುಳಿದು ಬರುವ ಬೈಗುಳಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ತೆಲಂಗಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿದ ಮಾತನಾಡಿದ ಅವರು, “ನನ್ನತ್ತ ಬರುವ ಬೈಗುಳಗಳಿಂದ ನೀವು ದಾರಿ ತಪ್ಪದಿರಿ” ಎಂದೂ ಎಚ್ಚರಿಸಿದ್ದಾರೆ.
“ನಾನು ನಿತ್ಯ 2-3 ಕೆ.ಜಿ ಬೈಗುಳ ತಿನ್ನುತ್ತೇನೆ. ಆದರೆ, ದೇವರು ನನಗೆ ವಿಶೇಷ ಶಕ್ತಿ ನೀಡಿದ್ದಾರೆ. ಬೈಗುಳಗಳೇ ನನಗೆ ಪೌಷ್ಟಿಕಾಂಶವಾಗಿ ಬದಲಾಗುತ್ತಿದೆ” ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರಿಗೆ ತಿರುಗೇಟು ನೀಡಿದ್ದಾರೆ. “ಹತಾಶೆ, ಭಯ ಹಾಗೂ ಮೌಢ್ಯದಿಂದಾಗಿ ಒಂದಷ್ಟು ಜನ ನನಗೆ ಬೈಯುತ್ತಾರೆ. ನನ್ನನ್ನು ನಿಂದಿಸಿದ ಮಾತ್ರಕ್ಕೆ ಕಾರ್ಯಕರ್ತರು ದಾರಿ ತಪ್ಪಬಾರದು. ಬೈಗುಳಗಳ ತಂತ್ರಕ್ಕೆ ಯಾರೂ ಬಲಿಯಾಗಬಾರದು” ಎಂದು ಹೇಳಿದ್ದಾರೆ.
“ನರೇಂದ್ರ ಮೋದಿ, ಬಿಜೆಪಿಯನ್ನು ಯಾರು ಬೇಕಾದರೂ ನಿಂದಿಸಲಿ. ಆದರೆ, ತೆಲಂಗಾಣದ ಜನರನ್ನು ನಿಂದಿಸಿದರೆ, ಅವರು ಸರಿಯಾದ ಬೆಲೆಯನ್ನೇ ತೆರಬೇಕಾಗುತ್ತದೆ. ತೆಲಂಗಾಣವು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿದೆ. ಆದರೆ, ಸ್ವಹಿತಾಸಕ್ತಿ, ಕುಟುಂಬ ರಾಜಕಾರಣದಿಂದಾಗಿ ಅಭಿವೃದ್ಧಿಯಾಗುತ್ತಿಲ್ಲ. ರಾಜ್ಯದಲ್ಲಿ ಕುಟುಂಬಕ್ಕಿಂತ ಜನರು ಮೇಲು ಎಂಬ ಪಕ್ಷ ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ” ಎಂದಿದ್ದಾರೆ. 2023ರಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ | Modi In Bengaluru | ಕುಲ ಕುಲ ಕುಲವೆಂದು ಹೊಡೆದಾಡದಿರಿ ಎನ್ನುತ್ತಲೇ ʼಗೌಡʼರ ಕೋಟೆಯ ಮೇಲೆ ಕಣ್ಣಿಟ್ಟ ನರೇಂದ್ರ ಮೋದಿ