ಪಟನಾ: ಬಿಹಾರದಲ್ಲಿ ಜೆಡಿಯು-ಆರ್ಜೆಡಿ-ಕಾಂಗ್ರೆಸ್ ಮೈತ್ರಿಯ ಮಹಾ ಘಟ್ ಬಂಧನ್ ಸರ್ಕಾರ ಮತ್ತೆ ಅಧಿಕಾರ ಹಿಡಿದಿದೆ. ಶೀಘ್ರವೇ ಸಂಪುಟ ವಿಸ್ತರಣೆ ನಡೆಯಲಿದ್ದು, ಕಾಂಗ್ರೆಸ್ಗೆ ನಾಲ್ಕು ಸಚಿವ ಸ್ಥಾನ ಕೊಡುವ ನಿರ್ಧಾರವಾಗಿದೆ ಎನ್ನಲಾಗಿದೆ. ಮಹಾ ಘಟ್ ಬಂಧನ್ದ ಮುಖ್ಯಪಕ್ಷಗಳಾದ ಜೆಡಿಯು 45, ಆರ್ಜೆಡಿ 79 ಮತ್ತು ಕಾಂಗ್ರೆಸ್ 19 ಶಾಸಕರ ಬಲ ಹೊಂದಿದೆ. ಹಾಗೇ, 12 ಸ್ಥಾನಗಳನ್ನು ಹೊಂದಿರುವ ಸಿಪಿಐ(ಎಂಎಲ್), ತಲಾ ಇಬ್ಬರು ಶಾಸಕರ ಬಲ ಇರುವ ಸಿಪಿಐ ಮತ್ತು ಸಿಪಿಐ (ಎಂ), ನಾಲ್ವರು ಶಾಸಕರು ಇರುವ ಎಚ್ಎಎಂಗಳು ಈ ಸರ್ಕಾರಕ್ಕೆ ಬೆಂಬಲ ಕೊಟ್ಟಿವೆ. ಅಂಕಿ-ಸಂಖ್ಯೆ ಹೀಗಿರುವಾಗ ಇಲ್ಲಿ ಮೈತ್ರಿಕೂಟದ ಮೂರು ಪಕ್ಷಗಳು, ಅಂದರೆ ಕಾಂಗ್ರೆಸ್, ಆರ್ಜೆಡಿ ಮತ್ತು ಜೆಡಿಯು ಮಧ್ಯೆ ಸಚಿವ ಸ್ಥಾನ ಹಂಚಿಕೆಯಾಗುತ್ತದೆ. ಅದರಲ್ಲೂ ಕಡಿಮೆ ಶಾಸಕ ಬಲ ಇರುವ ಕಾಂಗ್ರೆಸ್ಗೆ ನಾಲ್ಕು ಸ್ಥಾನ ಮಾತ್ರ ಸಿಗುತ್ತದೆ ಎನ್ನಲಾಗಿದೆ.
ಇದೆಲ್ಲದರ ಮಧ್ಯೆ ಇದೀಗ ಖಗಾರಿಯಾ ಸಾದರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಛತ್ರಪತಿ ಯಾದವ್, ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಪತ್ರ ಬರೆದ ಅವರು ‘ನನ್ನ ಜಾತಿಯನ್ನು ಪರಿಗಣಿಸಿ ಬಿಹಾರ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು’ ಎಂದು ಕೇಳಿದ್ದಾರೆ. ಬಳಿಕ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ನಾನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಪತ್ರ ಬರೆದು, ನನ್ನನ್ನು ಬಿಹಾರ ಸಂಪುಟದಲ್ಲಿ ಸೇರ್ಪಡೆಗೊಳಿಸುವಂತೆ ಮನವಿ ಮಾಡಿದ್ದೇನೆ. ನನಗೆ ಸಚಿವ ಸ್ಥಾನ ಕೊಟ್ಟರೆ, ಒಬಿಸಿ (ಇತರ ಹಿಂದುಳಿದ ವರ್ಗ) ಸಮುದಾಯದವರಿಗೆ, ಅದರಲ್ಲೂ ಯಾದವ ಸಮಾಜಕ್ಕೆ ಒಂದು ಬಲವಾದ ಸಂದೇಶ, ಭರವಸೆ ಕೊಟ್ಟಂತಾಗುತ್ತದೆ. ಯಾಕೆಂದರೆ, ಬಿಹಾರದ ಕಾಂಗ್ರೆಸ್ ಪಕ್ಷದಲ್ಲಿ ಇರುವ ಏಕೈಕ ಯಾದವ ಜನಾಂಗದ ಶಾಸಕ ನಾನು’ ಎಂದು ತಿಳಿಸಿದರು. ನನ್ನ ತಂದೆ ರಾಜೇಂದ್ರ ಪ್ರಸಾದ್ ಯಾದವ್ ಅವರು ಈ ಹಿಂದೆ ಮೂರು ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದ್ದಾರೆ. ಬಿಂದೇಶ್ವರಿ ದುಬೆ, ಭಗವತ್ ಝಾ ಆಜಾದ್ ಮತ್ತು ಜಗನ್ನಾಥ್ ಮಿಶ್ರಾ ಸಂಪುಟದಲ್ಲಿ ಸಚಿವರಾಗಿದ್ದರು. ಈ ಸಲ ನನಗೂ ಅವಕಾಶ ಕೊಡಬೇಕು ಎಂದಿದ್ದಾರೆ.
ಆಗಸ್ಟ್ 10ರಂದು ರಚನೆಯಾದ ಮಹಾ ಘಟ್ ಬಂಧನ್ದ ಸಂಪುಟ ರಚನೆ ಆಗಸ್ಟ್ 16ರಂದು ನಡೆಯಲಿದೆ ಎನ್ನಲಾಗಿದೆ. ಪ್ರಮುಖ ಖಾತೆಗಳನ್ನು ಜೆಡಿಯು ಮತ್ತು ಆರ್ಜೆಡಿ ಪಕ್ಷಗಳೇ ಉಳಿಸಿಕೊಳ್ಳಲಿವೆ ಎಂದೂ ಹೇಳಲಾಗಿದೆ. ಇನ್ನು ಈ ಸರ್ಕಾರದ ಮೊದಲ ಅಧಿವೇಶನ ಆಗಸ್ಟ್ 24ಕ್ಕೆ ನಡೆಯಲಿದ್ದು, ಅಂದು ನಿತೀಶ್ ಕುಮಾರ್ ಬಹುಮತ ಸಾಬೀತುಪಡಿಸಬೇಕು. ಇನ್ನು ಕಾಂಗ್ರೆಸ್ನಲ್ಲಿ ಯಾರು ಸಚಿವರಾಗಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರದ್ದೇ ಆಗಿದೆ. ಅವರು ಯಾರ ಹೆಸರು ಹೇಳುತ್ತಾರೆ ಎಂಬ ಕುತೂಹಲ ನಮ್ಮೆಲ್ಲರಿಗೂ ಇದೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮದನ್ ಮೋಹನ್ ಝಾ ತಿಳಿಸಿದ್ದಾರೆ.
ಇದನ್ನೂ ಓದಿ: Bihar Politics | ಸಿಎಂ ನಿತೀಶ್ ಕುಮಾರ್ ಬಹುಮತ ಸಾಬೀತು ಆಗಸ್ಟ್ 24ಕ್ಕೆ; ಯಾಕಿಷ್ಟು ವಿಳಂಬ?