Site icon Vistara News

Nitish Kumar | ಕರೆದರೂ ಕೆಸಿಆರ್‌ ಸಭೆಗೆ ಹೋಗುತ್ತಿರಲಿಲ್ಲ ಎಂದ ನಿತೀಶ್‌, ‘ಲೋಕ’ ಸಮರಕ್ಕೂ ಮೊದಲೇ ಪ್ರತಿಪಕ್ಷಗಳಲ್ಲಿ ಒಡಕು?

KCR Meeting Row

ಪಟನಾ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೇರಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೆಲ ದಿನಗಳ ಹಿಂದೆ ಖಮ್ಮಮ್‌ನಲ್ಲಿ ಭಾರತ್‌ ರಾಷ್ಟ್ರ ಸಮಿತಿ (BRS Mega Meeting) ಸಭೆ ಆಯೋಜಿಸುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ಶಕ್ತಿ ಪ್ರದರ್ಶಿಸಿರುವುದು ಪ್ರತಿಪಕ್ಷಗಳಲ್ಲೇ ಒಡಕು ಮೂಡಿಸುವ ಲಕ್ಷಣಗಳು ಗೋಚರಿಸಿವೆ. ಕೆಸಿಆರ್‌ ಸಭೆ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಪ್ರತಿಕ್ರಿಯಿಸಿದ್ದು, “ನನ್ನನ್ನು ಕರೆದರೂ ಸಭೆಗೆ ಹೋಗುತ್ತಿರಲಿಲ್ಲ” ಎಂದಿದ್ದಾರೆ. ಇದು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

“ಪ್ರತಿಪಕ್ಷಗಳ ಸಭೆಗಳು ವೈಯಕ್ತಿಕ ಹಿತಾಸಕ್ತಿಯಿಂದ ಆಯೋಜನೆಯಾಗದೆ, ರಾಷ್ಟ್ರದ ಹಿತಾಸಕ್ತಿಯಿಂದ ಆಯೋಜನೆಯಾಗಬೇಕು. ತೆಲಂಗಾಣದಲ್ಲಿ ನಡೆದ ಸಭೆಯು ಪಕ್ಷದ ಸಭೆಯಾಗಿದೆಯೇ ಹೊರತು, ಅದು ಕಾಂಗ್ರೆಸ್‌ ಅಥವಾ ಬಿಜೆಪಿಯೇತರವಾಗಿ ಒಗ್ಗಟ್ಟು ಮೂಡಿಸುವ ಸಭೆಯಾಗಿರಲಿಲ್ಲ” ಎಂದು ಹೇಳಿದ್ದಾರೆ.

“ನನಗೆ ಕೆಸಿಆರ್‌ ಸಭೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ತುಂಬ ಕೆಲಸವಿದೆ. ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ನನ್ನನ್ನು ಆಹ್ವಾನಿಸಿದ್ದರೂ ನಾನು ಹೋಗಲು ಆಗುತ್ತಿರಲಿಲ್ಲ” ಎಂದಿದ್ದಾರೆ. ಇದು ಪ್ರತಿಪಕ್ಷಗಳಲ್ಲೇ ಒಗ್ಗಟ್ಟು ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ.

ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷವನ್ನು ಭಾರತ್‌ ರಾಷ್ಟ್ರ ಸಮಿತಿ (BRS) ಎಂಬುದಾಗಿ ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆಸಿಆರ್‌ ಅವರು ಸಾರ್ವಜನಿಕ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಪಂಜಾಬ್‌ ಸಿಎಂ ಭಗವಂತ್‌ ಮಾನ್‌, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪಾಲ್ಗೊಂಡಿದ್ದರು. ಈ ಸಭೆಗೆ ಕರ್ನಾಟಕದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವರು ಗೈರಾಗಿದ್ದರು.

ಇದನ್ನೂ ಓದಿ | BRS Public Meeting | ಕೆಸಿಆರ್‌ ನೇತೃತ್ವದಲ್ಲಿ ಸಭೆ, 3 ರಾಜ್ಯಗಳ ಸಿಎಂಗಳು ಭಾಗಿ, ತೃತೀಯ ರಂಗಕ್ಕೆ ಸಭೆ ಮುನ್ನುಡಿ?

Exit mobile version