Site icon Vistara News

ಭಾರತ ಸೇರಿ 4 ರಾಷ್ಟ್ರಗಳನ್ನೊಳಗೊಂಡ I2U2 ಮೊದಲ ಶೃಂಗಸಭೆ ಇಂದು; ಅಷ್ಟಕ್ಕೂ ಏನಿದು ಹೊಸ ಗುಂಪು?

I2U2

ನವ ದೆಹಲಿ: ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ, ಸಹಕಾರ, ದ್ವಿಪಕ್ಷೀಯ ಸೌಹಾರ್ದತೆ ವೃದ್ಧಿ, ವ್ಯಾಪಾರ ಉತ್ತೇಜನ, ರಕ್ಷಣಾ ಸಹಕಾರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಒಗ್ಗಟ್ಟು ಸಾಧಿಸುವ ದೃಷ್ಟಿಯಿಂದ ಕೆಲವು ದೇಶಗಳು ಒಟ್ಟಾಗಿ ಗುಂಪುಗಳನ್ನು ರಚಿಸಿಕೊಳ್ಳುತ್ತವೆ. ಇದಕ್ಕೆ ಕ್ವಾಡ್‌(Quad), ನ್ಯಾಟೋ(NATO), ಜಿ 7 (G7), ಅಕುಸ್‌(AUKUS)ಸಂಘಟನೆಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಈ ಸಾಲಿಗೆ ಈಗ ಇನ್ನೊಂದು ಹೊಸ ಗುಂಪು ಸೇರ್ಪಡೆಯಾಗಿದೆ. ಅದು ಭಾರತ, ಇಸ್ರೇಲ್‌, ಯುಎಇ ಮತ್ತು ಯುಎಸ್‌ ರಾಷ್ಟ್ರಗಳನ್ನೊಳಗೊಂಡ ಐ2ಯು2 (I2U2) ಸಂಘಟನೆ.

ಇಲ್ಲಿ I 2 ಎಂದರೆ ಇಂಡಿಯಾ ಮತ್ತು ಇಸ್ರೇಲ್‌(India-Israel). U2 ಎಂದರೆ ಯುಎಎ ಮತ್ತು ಯುಎಸ್‌ (UAE-US). ಹೀಗೆ ಹೊಸದಾಗಿ ರಚಿತಗೊಂಡಿರುವ ಐ2ಯು2 ಗುಂಪಿನ ಮೊದಲ ಶೃಂಗಸಭೆ ಇಂದು (ಜುಲೈ 14) ನಡೆಯಲಿದೆ. ಅದರಲ್ಲಿ ಪ್ರಧಾನಿ ಮೋದಿ, ಯುಎಸ್‌ ಅಧ್ಯಕ್ಷ ಜೋ ಬೈಡನ್‌ ಮತ್ತು ಇಸ್ರೇಲ್‌ ಪ್ರಧಾನಿ ಯೈರ್ ಲ್ಯಾಪಿಡ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಪಾಲ್ಗೊಳ್ಳಲಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಐ2ಯು2 ಪ್ರಾರಂಭವಾಗಿದ್ದು ಹೇಗೆ?
2021ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ನಲ್ಲಿ ಭಾರತ, ಯುಎಇ, ಇಸ್ರೇಲ್‌ ಮತ್ತು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರ ಸಭೆ ನಡೆದಿತ್ತು. ಆ ಸಭೆಗೆ ಆಗ ʼಆರ್ಥಿಕ ಸಹಕಾರಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆ(International Forum for Economic Cooperation)ʼ ಎಂದು ಹೆಸರಿಡಲಾಗಿತ್ತು. ಈ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಭಾಗವಹಿಸಿದ್ದರು. ಆರ್ಥಿಕವಾಗಿ ಅಭಿವೃದ್ಧಿಹೊಂದಲು ಪರಸ್ಪರ ಸಹಕಾರ ನೀಡುವ ಸಂಬಂಧ ನಾಲ್ಕೂ ರಾಷ್ಟ್ರಗಳ ಸಚಿವರು ಚರ್ಚಿಸಿದ್ದರು. ಈ ʼಆರ್ಥಿಕ ಸಹಕಾರಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆʼಗೆ ಮುಂದೆ ʼI2U2ʼ ಎಂದು ನಾಮಕರಣ ಮಾಡಲಾಯಿತು. ಹಾಗೇ, ಕಡಲ ಭದ್ರತೆಗೆ ಸಂಬಂಧಪಟ್ಟ ವಿಷಯಗಳು, ಮೂಲಸೌಕರ್ಯಗಳು, ಡಿಜಿಟಲ್‌ ಮೂಲಸೌಕರ್ಯ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ, ಜಲ, ಇಂಧನ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ, ಆಹಾರ ಭದ್ರತೆಯಲ್ಲಿ ಜಂಟಿ ಹೂಡಿಕೆಯ ಉತ್ತೇಜನವನ್ನೂ ಈ ದೇಶಗಳು ಆಧ್ಯತೆಯನ್ನಾಗಿ ಪರಿಗಣಿಸಿವೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಪಶ್ಚಿಮ ಏಷ್ಯಾ ದೇಶಗಳ ಪ್ರವಾಸ ಜುಲೈ 13ರಿಂದ ಪ್ರಾರಂಭವಾಗಿದೆ. ಇದೇ ವೇಳೆ I2U2ದ ಮೊದಲ ಶೃಂಗಸಭೆಯನ್ನು ವೃಚ್ಯುವಲ್‌ ಆಗಿ ಆಯೋಜಿಸಲಾಗಿದೆ. ಇಂದಿನ ಸಭೆಯಲ್ಲಿ 2 ಬಿಲಿಯನ್‌ ಡಾಲರ್‌ಗಳಷ್ಟು ವೆಚ್ಚದ ಆಹಾರ ಭದ್ರತಾ ಉಪಕ್ರಮಗಳನ್ನು ಅನಾವರಣಗೊಳಿಸಲು I2U2 ಸಿದ್ಧತೆ ನಡೆಸಿದೆ. ಯುಎಇಯ ಧನಸಹಾಯದೊಂದಿಗೆ ಭಾರತದಲ್ಲಿ ಕೃಷಿ ಉದ್ಯಾನವನಗಳ ನಿರ್ಮಾಣವೂ ಇದರ ಒಂದು ಭಾಗವಾಗಿದೆ ಎಂದು ಹೇಳಲಾಗಿದೆ. ಅಂದಹಾಗೇ, ಈ ಆಹಾರ ಭದ್ರತೆ ಉಪಕ್ರಮಗಳ ಅನುಷ್ಠಾನಕ್ಕೆ ಇಸ್ರೇಲ್‌ ತಾಂತ್ರಿಕ ಸಹಕಾರವನ್ನು ನೀಡಲಿದ್ದು, ಯುಎಸ್‌ನ ಖಾಸಗಿ ವಲಯಗಳೂ ನೆರವು ನೀಡಲಿವೆ.

ಇದನ್ನೂ ಓದಿ: ಯುವಜನರು ಡಿಗ್ರಿಗಾಗಿ ಕಲಿಯಬೇಡಿ, ವೃತ್ತಿಪರರಾಗಲು ಕಲಿಯಿರಿ ಎಂದ ಪ್ರಧಾನಿ ಮೋದಿ

Exit mobile version