Site icon Vistara News

Aircraft Crash: ತೆಲಂಗಾಣದಲ್ಲಿ ವಾಯುಪಡೆ ವಿಮಾನ ಪತನ, ಇಬ್ಬರು ಪೈಲಟ್‌ಗಳ ಸಾವು

Aircraft Crash

IAF Trainer Aircraft Crashes in Medak District, Both Pilots Dead In Telangana

ಹೈದರಾಬಾದ್:‌ ತೆಲಂಗಾಣದ ಮೇಡಕ್‌ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ತರಬೇತಿ ವಿಮಾನವೊಂದು ಪತನಗೊಂಡಿದ್ದು (Aircraft Crash), ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಟೂಪ್ರಾನ್‌ ಪಟ್ಟಣದ ರಾವೆಳ್ಳಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ (ಡಿಸೆಂಬರ್‌ 4) ವಿಮಾನ ಪತನಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರು ಪೈಲಟ್‌ಗಳು (Two Pilots Dead) ಮೃತಪಟ್ಟಿದ್ದಾರೆ ಎಂದು ವಾಯುಪಡೆ ಮಾಹಿತಿ ನೀಡಿದೆ.

ದುಂಡಿಗಲ್‌ ಏರ್‌ಫೋರ್ಸ್‌ ಅಕಾಡೆಮಿಯಿಂದ ಹಾರಾಟ ಆರಂಭಿಸಿದ ಪೈಲಟಸ್‌ ಪಿಸಿ 7 ಎಂಕೆ-II ವಿಮಾನವು ರಾವೆಳ್ಳಿ ಗ್ರಾಮದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಒಬ್ಬ ಇನ್‌ಸ್ಟ್ರಕ್ಟರ್‌ ಪೈಲಟ್‌ ಹಾಗೂ ಒಬ್ಬ ಕೆಡೆಟ್‌ ಮೃತಪಟ್ಟಿದ್ದಾರೆ. “ದಿನ ನಿತ್ಯದ ಹಾರಾಟದ ಭಾಗವಾಗಿ ತರಬೇತಿ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಇಬ್ಬರೂ ಪೈಲಟ್‌ಗಳು ಮೃತಪಟ್ಟಿದ್ದಾರೆ. ಯಾವುದೇ ಸಾರ್ವಜನಿಕರು ಮೃತಪಟ್ಟಿಲ್ಲ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟಾಗಿಲ್ಲ” ಎಂದು ವಾಯುಪಡೆ ಮಾಹಿತಿ ನೀಡಿದೆ.

ಗುಡ್ಡಗಾಡು ಪ್ರದೇಶದಲ್ಲಿ ವಾಯುಪಡೆ ವಿಮಾನ ಪತನವಾಗುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಇದಾದ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ವಿಮಾನ ಪತನವಾಗಲು ನಿಖರ ಕಾರಣ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯುಪಡೆಯು ತನಿಖೆಗೆ ಆದೇಶಿಸಿದೆ. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಷ್ಟೇ ಇದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅಮೆಜಾನ್​ ದಟ್ಟಾರಣ್ಯದಲ್ಲಿ ವಿಮಾನ ಪತನ; 4 ಮಕ್ಕಳ 40 ದಿನಗಳ ಹೋರಾಟ, ಹಸುಳೆಯೂ ಜೀವಂತ

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ಡಿಆರ್‌ಡಿಒ ವಿಮಾನವೊಂದು ಪತನಗೊಂಡಿತ್ತು. ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾನವರಹಿತ ಲಘುವಿಮಾನ ಪತನಗೊಂಡಿತ್ತು. ಪ್ರಾಯೋಗಿಕ ಹಾರಾಟದ ವೇಳೆ ತಪಸ್‌ 07A-14 ವಿಮಾನವು ಜಮೀನಿನಲ್ಲಿ ಪತನಗೊಂಡಿತ್ತು. ಗ್ರಾಮದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಲಘು ವಿಮಾನ ಬಿದ್ದಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಕೂಡ ಡಿಆರ್‌ಡಿಒದ ರುಸ್ತುಂ 2 ಎಂಬ ಮಾನವರಹಿತ ಲಘು ವಿಮಾನ ಕೂಡ ಚಿತ್ರದುರ್ಗ ಜಿಲ್ಲೆದಲ್ಲಿ ಪತನವಾಗಿತ್ತು.

Exit mobile version