Site icon Vistara News

Niyaz Khan: ಮುಸ್ಲಿಮರು ಸಸ್ಯಾಹಾರಿ ಆಗಲಿ, ಗೋ ರಕ್ಷಣೆ ಮಾಡಲಿ; ಮುಸ್ಲಿಂ ಐಎಎಸ್‌ ಅಧಿಕಾರಿ ಫರ್ಮಾನು

IAS Officer Niyaz Khan

IAS Officer Urges Muslims To Take Vegetarian Food, Protect Cows

ಭೋಪಾಲ್‌: ಡೈನಾಮಿಕ್‌ ಹೇಳಿಕೆಗಳಿಂದಲೇ ದೇಶಾದ್ಯಂತ ಸುದ್ದಿಯಾಗುತ್ತಿರುವ ಮಧ್ಯಪ್ರದೇಶ ಐಎಎಸ್‌ ಅಧಿಕಾರಿ ನಿಯಾಜ್‌ ಖಾನ್‌ (Niyaz Khan) ಈಗ ಮತ್ತಷ್ಟು ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದಾರೆ. “ಮುಸ್ಲಿಮರು ಇನ್ನು ಸಸ್ಯಾಹಾರಿಗಳಾಗಬೇಕು. ಅವರು ಕೂಡ ಗೋವುಗಳ ರಕ್ಷಣೆ ಮಾಡಬೇಕು” ಎಂದು ತಮ್ಮ ಧರ್ಮೀಯರಿಗೇ ಕರೆ ನೀಡಿದ್ದಾರೆ. ಈ ಸುದ್ದಿ ಈಗ ವೈರಲ್‌ ಆಗಿದೆ.

“ಮುಸ್ಲಿಮರು ಇನ್ನುಮುಂದೆ ಮಾಂಸಾಹಾರವನ್ನು ತ್ಯಜಿಸಿ, ಸಸ್ಯಾಹಾರಿಗಳಾಗಬೇಕು. ಮುಸ್ಲಿಮರು ಬ್ರಾಹ್ಮಣರ ಜತೆ ಆತ್ಮೀಯವಾದ ಸಂಬಂಧವನ್ನು ಹೊಂದಬೇಕು. ಸ್ನೇಹಪರತೆಯಿಂದ ವರ್ತನೆ ಮಾಡಬೇಕು. ಹಾಗೆಯೇ, ಮುಸ್ಲಿಮರು ಗೋವುಗಳನ್ನು ರಕ್ಷಣೆ ಮಾಡಬೇಕು. ಮತಾಂತರದ ವಿರುದ್ಧ ಹೋರಾಟ ಮಾಡಬೇಕು” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಐಎಎಸ್‌ ಅಧಿಕಾರಿ ನಿಯಾಜ್‌ ಖಾನ್‌ ಬರೆದುಕೊಂಡಿದ್ದಾರೆ.

ನಿಯಾಜ್‌ ಖಾನ್‌ ಟ್ವೀಟ್

“ನಮ್ಮದು ಪ್ರಜಾಪ್ರಭುತ್ವ ದೇಶ. ಅಷ್ಟಕ್ಕೂ, ಇಸ್ಲಾಂನಲ್ಲಿ ಮತಾಂತರವು ಧರ್ಮಕ್ಕೆ ವಿರೋಧವಾದ ಕೃತ್ಯವಾಗಿದೆ. ದೇಶದಲ್ಲಿ ಮತಾಂತರವಾಗಲು ಬಾಲಿವುಡ್‌ ಕಾರಣ. ದೊಡ್ಡ ಸಿನಿಮಾ ತಾರೆಯರು ಹಿಂದುಗಳನ್ನು ಮದುವೆಯಾಗುವ ಮೂಲಕ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದಾರೆ. ಇಸ್ಲಾಂನಲ್ಲಿ ಮತಾಂತರವು ನಿಷಿದ್ಧವಾಗಿದೆ. ಹಾಗಾಗಿ ಮತಾಂತರ ಮಾಡುವುದು ತಪ್ಪು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಒಂದು ಧರ್ಮವನ್ನು ಎಲ್ಲ ಧರ್ಮಗಳಿಗಿಂತ ಶ್ರೇಷ್ಠ ಎಂದು ಭಾವಿಸಲಾಗುತ್ತದೆ. ಆ ಶ್ರೇಷ್ಠತೆಯು ವರ್ತನೆಯಿಂದ ಇರಬೇಕು. ಯಾರನ್ನೂ ಮತಾಂತರ ಮಾಡಬಾರದು. ಬೇರೆಯವರು ಒಂದು ಧರ್ಮ ಬಿಟ್ಟು ಮತ್ತೊಂದು ಧರ್ಮಕ್ಕೆ ಮತಾಂತರವಾಗಬೇಕಾದರೆ ತಮ್ಮ ಧರ್ಮವನ್ನು ಸಣ್ಣದು ಎಂದು ಭಾವಿಸುತ್ತಾರೆ. ಇದು ಸರಿಯಲ್ಲ” ಎಂದು ಪೋಸ್ಟ್‌ ಮಾಡಿದ್ದಾರೆ.

ಯಾರಿವರು ನಿಯಾಜ್‌ ಖಾನ್?

ಹೇಳಿಕೆಗಳು ಹಾಗೂ ಅಭಿಪ್ರಾಯಗಳ ಮೂಲಕ ನಿಯಾಜ್‌ ಖಾನ್‌ ಸುದ್ದಿಯಲ್ಲಿದ್ದಾರೆ. ಇವರು ಮಧ್ಯಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ಲೇಖಕರೂ ಆಗಿರುವ ನಿಯಾಜ್‌ ಖಾನ್‌ ಅವರು ಇದುವರೆಗೆ ಆರಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಅಬು ಸಲೇಂ ಬಗ್ಗೆಯೂ ಇವರು ಪುಸ್ತಕ ಬರೆದಿದ್ದಾರೆ. ಬ್ರಾಹ್ಮಣ ಸಮುದಾಯದಿಂದ ಹೆಚ್ಚು ಪ್ರಭಾವಿತರಾದ ಕಾರಣ ಇವರನ್ನು ಬ್ರಾಹ್ಮಣರ ಪರ ಅಧಿಕಾರಿ ಎಂದೇ ಕರೆಯಲಾಗುತ್ತಿದೆ.

Exit mobile version