ಹೊಸದಿಲ್ಲಿ: ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ (ICC world cup 2023) ಭಾರತ ತಂಡ, ಆಸ್ಟ್ರೇಲಿಯಾ ತಂಡದ ಎದುರಿಗೆ ಸೋತದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಬಗ್ಗೆ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಇದೀಗ, ಅದಕ್ಕೆ ಎದುರೇಟು ಎಂಬಂತೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅಂಥದೇ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಳೆದ ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಕೂಟದುದ್ದಕ್ಕೂ ಗೆಲುವು ಸಾಧಿಸಿಕೊಂಡು ಬಂದಿದ್ದ ಭಾರತ ಕೊನೆಯ ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಸಿಲುಕಿತ್ತು. ʼʼಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira gandhi) ಅವರ ಜನ್ಮದಿನದಂದು ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಸೋತಿದೆʼʼ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಹೇಳಿ, ಕಾಂಗ್ರೆಸಿಗರನ್ನು ಕೆಣಕಿದ್ದಾರೆ.
“ನಾವು ಎಲ್ಲಾ ಪಂದ್ಯಗಳಲ್ಲಿ ಗೆದ್ದಿದ್ದೇವೆ, ಆದರೆ ಫೈನಲ್‌ನಲ್ಲಿ ಸೋತಿದ್ದೇವೆ. ನಾವು ಪಂದ್ಯವನ್ನು ಏಕೆ ಸೋತಿದ್ದೇವೆ ಎಂದು ನಾನು ಚಿಂತಿಸಿದೆ. ಇಂದಿರಾ ಗಾಂಧಿಯವರ ಜನ್ಮದಿನದಂದು ವಿಶ್ವಕಪ್ ಫೈನಲ್ ಆಡಲಾಗಿದೆ ಎಂದು ನಾನು ಅರಿತುಕೊಂಡೆ. ಇಂದಿರಾ ಗಾಂಧಿಯವರ ಜನ್ಮದಿನದಂದು ನಾವು ವಿಶ್ವಕಪ್ ಫೈನಲ್ ಆಡಿದ್ದೇವೆ. ಆದ್ದರಿಂದ ದೇಶ ಕಪ್ ಗೆಲ್ಲಲು ವಿಫಲವಾಗಿದೆʼʼ ಎಂದು ಅವರು ಹೇಳಿದ್ದಾರೆ.
ಅವರು ಗಾಂಧಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಬಿಸಿಸಿಐಗೆ ನಾನು ಮನವಿ ಮಾಡುವೆ. ದಯವಿಟ್ಟು, ಗಾಂಧಿ ಕುಟುಂಬದ ಸದಸ್ಯರ ಹುಟ್ಟುಹಬ್ಬದ ದಿನದಂದು ಭಾರತ ಆಡಬಾರದು. ನಾನು ಇದನ್ನು ವಿಶ್ವಕಪ್ ಫೈನಲ್‌ನಿಂದ ಕಲಿತಿದ್ದೇನೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಭಾರತ ತಂಡ ಸೋತಿದ್ದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ʼಪನೌತಿʼ (ದುರದೃಷ್ಟದ ವ್ಯಕ್ತಿ) ಎಂದು ಕರೆದಿದ್ದರು. ಮೋದಿ ಅವರು ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದರಿಂದ ಪಂದ್ಯವನ್ನು ಭಾರತ ತಂಡ ಸೋತಿತು ಎಂದು ಆರೋಪಿಸಿದ್ದರು. ಈ ಮೂಲಕ ಭಾರತ ತಂಡದ ಸೋಲು ರಾಜಕೀಯ ತಿರುವು ಪಡೆದುಕೊಂಡಿದೆ.
ಇದನ್ನೂ ಓದಿ: ಮೋದಿ ಅಪಶಕುನ, ಜೇಬುಗಳ್ಳ ಎಂದ ರಾಹುಲ್‌ಗೆ ಚುನಾವಣಾ ಆಯೋಗ ನೋಟಿಸ್