ಮುಂಬೈ: ಮನೆಯಲ್ಲಿ ಹಣ ಇಟ್ಟುಕೊಳ್ಳುವುದು ಸುರಕ್ಷಿತವಲ್ಲ, ಬ್ಯಾಂಕ್‌ನಲ್ಲಿ ಇಟ್ಟರೆ ನಮ್ಮ ಹಣ ಸುರಕ್ಷಿತವಾಗಿರುತ್ತದೆ, ಅದಕ್ಕೊಂದಿಷ್ಟು ಬಡ್ಡಿ ಬರುತ್ತದೆ ಎಂದು ಎಲ್ಲರೂ ಬ್ಯಾಂಕ್‌ನಲ್ಲಿ ಹಣ ಠೇವಣಿ ಮಾಡುತ್ತಾರೆ. ಆದರೆ, ಶ್ವೇತಾ ಶರ್ಮಾ (Shveta Sharma) ಎಂಬ ಮಹಿಳೆಯು ಐಸಿಐಸಿಐ ಬ್ಯಾಂಕ್ (ICICI Bank) ಅಧಿಕಾರಿಗಳನ್ನು ನಂಬಿ ಠೇವಣಿ ಇಟ್ಟಿದ್ದ 16 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ, ಬ್ಯಾಂಕ್ ಮ್ಯಾನೇಜರ್ (Bank Manager) ಒಬ್ಬನೇ ಮಹಿಳೆಯ ಖಾತೆಗೆ ಕನ್ನ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಹೌದು, ಶ್ವೇತಾ ಶರ್ಮಾ ಎಂಬ ಮಹಿಳೆಯು ಅಮೆರಿಕ ಹಾಗೂ ಹಾಂಕಾಂಗ್‌ನಲ್ಲಿ ಕೆಲಸ ಮಾಡಿ, 2016ರಲ್ಲಿ ಭಾರತಕ್ಕೆ ವಾಪಸಾಗಿದ್ದಾರೆ. ಇವರು ಜೀವನಪೂರ್ತಿ ದುಡಿದ, ಉಳಿತಾಯ ಮಾಡಿದ ಹಣವನ್ನು ಐಸಿಐಸಿಐ ಬ್ಯಾಂಕ್‌ನ ಮುಂಬೈ ಬ್ರ್ಯಾಂಚ್‌ನಲ್ಲಿ ಠೇವಣಿ ಮಾಡಿದ್ದರು. 2019ರಿಂದ 2023ರ ಅವಧಿಯಲ್ಲಿ ಇವರು ಸುಮಾರು 13.5 ಕೋಟಿ ರೂಪಾಯಿಯನ್ನು ಠೇವಣಿ ಮಾಡಿದ್ದಾರೆ. ಇವರು ಠೇವಣಿ ಮಾಡಿದ ಹಣಕ್ಕೆ ಶೇ.5ರಷ್ಟು ಬಡ್ಡಿದರ ಸೇರಿ 16 ಕೋಟಿ ರೂ. ಆಗಬೇಕಿತ್ತು. ಆದರೆ, ಇಷ್ಟೂ ಹಣವನ್ನು ಬ್ಯಾಂಕ್ ಮ್ಯಾನೇಜರ್ ಲಪಟಾಯಿಸಿದ್ದಾರೆ ಎಂದು ಶ್ವೇತಾ ಶರ್ಮಾ ಆರೋಪಿಸಿದ್ದಾರೆ.
ಮಹಿಳೆ ಆರೋಪವೇನು?
ನಾನು ಅಮೆರಿಕದಲ್ಲಿದ್ದಾಗ ಮುಂಬೈ ಐಸಿಐಸಿಐ ಬ್ಯಾಂಕ್ ಅಧಿಕಾರಿಯು ನನ್ನನ್ನು ಸಂಪರ್ಕಿಸಿದರು. ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿ ಇರಿಸಲು (Fixed Deposit) ಮನವೊಲಿಸಿದ್ದರು. ಇದಾದ ಬಳಿಕ ಮಹಿಳೆಯು ಬ್ಯಾಂಕ್‌ನಲ್ಲಿ 13.5 ಕೋಟಿ ರೂ. ಇರಿಸಿದ್ದೆ.. ಖಾಸಗಿ ವ್ಯಕ್ತಿಯ ಮೂಲಕ ಅವರು ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಿದ್ದೆ. ಆದರೆ, ನಾನು ಬ್ಯಾಂಕ್ ಖಾತೆಯಲ್ಲಿ ಇರಿಸಿದ ಎಲ್ಲ ಹಣವನ್ನು ಮ್ಯಾನೇಜರ್ ಲಪಟಾಯಿಸಿದ್ದಾರೆ” ಎಂಬುದಾಗಿ ಮಹಿಳೆ ಆರೋಪಿಸಿದ್ದಾರೆ. ಪ್ರಕರಣ ಬಯಲಾಗುತ್ತಲೇ ಮ್ಯಾನೇಜರ್‌ನನ್ನು ಬ್ಯಾಂಕ್ ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Cyber Crime : ಯುಪಿಐ ಮೂಲಕ ಹಣ ಕಳಿಸಿ, ಬ್ಯಾಂಕ್ ಖಾತೆಗೇ ಕನ್ನ! ಹೊಸ ಮಾದರಿ ವಂಚನೆ ಬಗ್ಗೆ ಇರಲಿ ಎಚ್ಚರ
“ನನ್ನ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ನಕಲಿ ದಾಖಲೆಗಳನ್ನು ತಯಾರಿಸಿ, ನನ್ನ ಸಹಿಯನ್ನೂ ನಕಲು ಮಾಡಲಾಗಿದೆ. ಅಷ್ಟೇ ಅಲ್ಲ, ನನ್ನ ಹೆಸರಿನಲ್ಲಿ ನಕಲಿ ಡೆಬಿಟ್ ಕಾರ್ಡ್ ಕೂಡ ಮಾಡಿದ್ದಾರೆ. ಇಷ್ಟೆಲ್ಲ ಮಾಡಿ, ನನ್ನ ಖಾತೆಯಿಂದ ಹಣವನ್ನು ಲಪಟಾಯಿಸಿದ್ದಾರೆ” ಎಂದು ಮಹಿಳೆಯು ಆರೋಪಿಸಿದ್ದಾರೆ. ಈ ಕುರಿತು ಬಿಬಿಸಿ ಕೂಡ ವರದಿ ಮಾಡಿದೆ. “ನನಗೆ ಬ್ಯಾಂಕ್ ಮ್ಯಾನೇಜರ್ ಹಣದ ಕುರಿತು ನಿಯಮಿತವಾಗಿ ಮಾಹಿತಿ ನೀಡುತ್ತಿದ್ದರು. ದಾಖಲೆಗಳನ್ನು ಕೂಡ ಒದಗಿಸುತ್ತಿದ್ದರು. ಹಾಗಾಗಿ, ನನ್ನ ಹಣದ ಬಗ್ಗೆ ಯೋಚನೆ ಇರಲಿಲ್ಲ. ಆದರೆ, ಖಾತಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಲೇ ವಂಚನೆಯಾಗಿರುವುದು ತಿಳಿಯಿತು” ಎಂದಿದ್ದಾರೆ.
ಐಸಿಐಸಿಐ ಬ್ಯಾಂಕ್ ಸ್ಪಷ್ಟನೆ ಏನು?
ಶ್ವೇತಾ ಶರ್ಮಾ ಪ್ರಕರಣದ ಕುರಿತು ಐಸಿಐಸಿಐ ಬ್ಯಾಂಕ್ ಸ್ಪಷ್ಟನೆ ನೀಡಿದೆ. “ಗ್ರಾಹಕರ ಹಿತವನ್ನು ಕಾಯುವುದು, ಅವರ ಹಣಕ್ಕೆ ರಕ್ಷಣೆ ನೀಡುವುದೇ ಬ್ಯಾಂಕ್‌ನ ಪರಮೋಚ್ಚ ಉದ್ದೇಶವಾಗಿದೆ. ಮಹಿಳೆಯ ಪ್ರಕರಣದ ಕುರಿತು ನಾವು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಆದರೆ, ಮಹಿಳೆಯು ಒಂದಷ್ಟು ಹಣವನ್ನು ಈಗಾಗಲೇ ಡ್ರಾ ಮಾಡಿದ್ದಾರೆ. ವಿವಾದಿತ 9.27 ಕೋಟಿ ರೂಪಾಯಿಯನ್ನು ಅವರ ಖಾತೆಗೆ ವರ್ಗಾಯಿಸಲು ಬ್ಯಾಂಕ್ ಸಿದ್ಧವಿದೆ. ಇನ್ನು ಅವರಿಗೆ ಮಾಹಿತಿ ನೀಡದೆಯೇ ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿಯನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ನಮ್ಮ ದಾಖಲೆಗಳ ಪ್ರಕಾರ, ಅವರ ಮೂಲ ಮೊಬೈಲ್ ನಂಬರ್‌ಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಎರಡೂ ಬದಲಾವಣೆ ಕುರಿತು ಅವರಿಗೆ ಮಾಹಿತಿ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ