Site icon Vistara News

Ameen Sayani: ‘ಬಿನಾಕಾ ಗೀತ್‌ಮಾಲಾʼ ಖ್ಯಾತಿಯ ರೇಡಿಯೋ ನಿರೂಪಕ ಅಮೀನ್‌ ಸಯಾನಿ ನಿಧನ

ameen sayani

ಹೊಸದಿಲ್ಲಿ: ಅಪ್ರತಿಮ ರೇಡಿಯೊ ನಿರೂಪಕ, ʼಬಿನಾಕಾ ಗೀತ್‌ಮಾಲಾʼ (Binaca Geetmala) ಕಾರ್ಯಕ್ರಮದ ವಿಶಿಷ್ಟ ಧ್ವನಿಯಾಗಿ ದೇಶಾದ್ಯಂತ ಹೆಸರುವಾಸಿಯಾಗಿದ್ದ ಅಮೀನ್ ಸಯಾನಿ (91) (Ameen Sayani) ಇಂದು ನಿಧನರಾಗಿದ್ದಾರೆ.

ಅಮೀನ್ ಸಯಾನಿ ಹೃದಯಾಘಾತದಿಂದ ಮುಂಬೈನಲ್ಲಿ ಮಂಗಳವಾರ ನಿಧನರಾದರು. ಅವರ ಮಗ ರಜಿಲ್ ಸಯಾನಿ ಅವರು ತಮ್ಮ ತಂದೆಯ ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. ಅಪ್ರತಿಮ ರೇಡಿಯೊ ನಿರೂಪಕರಾಗಿದ್ದ ಅಮೀನ್‌ ಸಯಾನಿ ತಮ್ಮ ವಿಶಿಷ್ಟ ಧ್ವನಿ, ನಿರೂಪಣೆ ಹಾಗೂ ʼಬಿನಾಕಾ ಗೀತ್‌ಮಾಲಾʼ ಕಾರ್ಯಕ್ರಮದಿಂದಲೇ ಜನಪ್ರಿಯರಾಗಿದ್ದರು. ಸಯಾನಿ ಅವರ ಅಂತ್ಯಕ್ರಿಯೆ ಗುರುವಾರ ನಡೆಯಲಿದೆ.

ರೇಡಿಯೊ ಸಿಲೋನ್‌ ಹಾಗೂ ವಿವಿಧ ಭಾರತಿಯಲ್ಲಿ ಅವರ ʼಬಿನಾಕಾ ಗೀತ್‌ಮಾಲಾʼ ಪ್ರಸಾರವಾಗುತ್ತಿತ್ತು. ʼನಮಸ್ಕಾರ್ ಭಾಯಿಯೋಂ ಔರ್ ಬೆಹ್ನೋ, ಮೈನ್ ಆಪ್ಕಾ ದೋಸ್ತ್ ಅಮೀನ್ ಸಯಾನಿ ಬೋಲ್ ರಹಾ ಹೂಂ (ನಮಸ್ಕಾರ ಸಹೋದರಿ ಮತ್ತು ಸಹೋದರರೇ, ಇದು ನಿಮ್ಮ ಸ್ನೇಹಿತ ಅಮೀನ್ ಸಯಾನಿ)’ ಎಂಬ ಮಾತಿನೊಂದಿಗೆ ಅವರ ಕಾರ್ಯಕ್ರಮ ಶುರುವಾಗುತ್ತಿತ್ತು.

ಅಮೀನ್ ಸಯಾನಿ ಅವರು ಡಿಸೆಂಬರ್ 21, 1932ರಂದು ಮುಂಬೈನಲ್ಲಿ ಜನಿಸಿದರು. ಬಿನಾಕಾ ಗೀತ್‌ಮಾಲಾ 1952ರಿಂದ ಪ್ರಸಾರ ಆರಂಭಿಸಿತು. ಮುಖ್ಯವಾಗಿ ರೇಡಿಯೋ ಸಿಲೋನ್, ನಂತರ ವಿವಿಧ್ ಭಾರತಿಯಲ್ಲಿ (AIR) ಒಟ್ಟು 42 ವರ್ಷಗಳ ಕಾಲ ಪ್ರಸಾರವಾಯಿತು.

ಅಮೀನ್ ಸಯಾನಿ ಅವರು 1951ರಿಂದ 54,000 ರೇಡಿಯೋ ಕಾರ್ಯಕ್ರಮಗಳು ಮತ್ತು 19,000 ಸ್ಪಾಟ್‌ಗಳು/ಜಿಂಗಲ್‌ಗಳನ್ನು ನಿರ್ಮಿಸಿದ್ದಾರೆ, ಸಂಕಲಿಸಿದ್ದಾರೆ ಅಥವಾ ಮಾತನಾಡಿದ್ದಾರೆ. ಭಾರತದಲ್ಲಿ ಆಲ್ ಇಂಡಿಯಾ ರೇಡಿಯೊವನ್ನು ಜನಪ್ರಿಯಗೊಳಿಸಲು ಅಮೀನ್ ಸಯಾನಿ ಸಾಕಷ್ಟು ಕೆಲಸ ಮಾಡಿದ್ದಾರೆ.

ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬಂದಿದೆ. “ಬಿನಾಕಾ ಗೀತ್‌ಮಾಲಾ ಮೂಲಕ ಅವರು ಶಾಶ್ವತವಾಗಿ ಉಳಿಯುತ್ತಾರೆ. ಅವರು ನೀಡಿದ ಸಂಗೀತ ಮತ್ತು ನೆನಪುಗಳಿಗೆ ಧನ್ಯವಾದಗಳು” ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. “ನನ್ನ ಬಾಲ್ಯದಲ್ಲಿ ಅವರಿಂದ ಮೂಡಿದ ಬಿನಾಕಾ ಗೀತ್‌ಮಾಲಾ ನೆನಪುಗಳು ಇಂದೂ ಇವೆ. ಆ ಸಮಯದಲ್ಲಿ ಅಮೀನ್ ಸಯಾನಿ ದಂತಕಥೆಯಾಗಿದ್ದರು” ಎಂದು ಮತ್ತೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: Fali Nariman: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಪರ ನಿಂತಿದ್ದ ವಕೀಲ ಫಾಲಿ ನಾರಿಮನ್‌ ಇನ್ನಿಲ್ಲ

Exit mobile version