Site icon Vistara News

ಹೆಣ್ಣು ಕಲಿತರೆ ಗರ್ಭಿಣಿಯಾಗಲು ಗಂಡನಿಗೆ ಅವಕಾಶವೇ ನೀಡಲ್ಲ, ಆದರೆ…! ಬಿಹಾರ ಸಿಎಂ ನಿತೀಶ್ ಎಡವಟ್ಟು!

Congress Served only chai, biscuit no Samosa in India Bloc Says JDU

ನವದೆಹಲಿ: ಮಹಿಳೆ ಅಕ್ಷರಸ್ಥಳಾಗಿದ್ದರೆ (Educated Woman) ಜನನ ನಿಯಂತ್ರಣ ಹೇಗೆ ಸಾಧ್ಯವಾಗುತ್ತದೆ (Birth Control) ಎಂಬುದನ್ನು ವಿವರಿಸುವ ಭರದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ (Bihar CM Nitish Kumar) ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಈ ಕುರಿತಾದ ನೀಡುವ ವಿವರಣೆ ವೇಳೆ ಅವರು ಬಳಸುವ ಕೈ ಸನ್ನೆಗಳು ಮತ್ತು ಭಾಷೆ ಕೀಳು ಮಟ್ಟದಿಂದ ಕೂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ, ನಿತೀಶ್ ಕುಮಾರ್ ಅವರ ನೆರವಿಗೆ ಧಾವಿಸಿರುವ ಡಿಸಿಎಂ ತೇಜಸ್ವಿ ಯಾದವ್ (DCM Tejashwi Yadav) ಅವರು, ಸಿಎಂ ಮಾತುಗಳನ್ನು ಲೈಂಗಿಕ ಶಿಕ್ಷಣವಾಗಿ (Sex Education) ಪರಿಗಣಿಸಬೇಕು. ಅವರ ಮಾತುಗಳನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ಸಿಎಂ ಮಾತುಗಳ ವಿಡಿಯೋ ಕೂಡ ವೈರಲ್ ಆಗಿದೆ.

ಸಿಎಂ ನಿತೀಶ್ ಹೇಳಿದ್ದೇನು?

ಬಿಹಾರ ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತಿದ್ದ ಸಿಎಂ ನಿತೀಶ್ ಕುಮಾರ್ ಅವರು ಮಹಿಳೆ ಸುಶಿಕ್ಷಿತಳಾಗಿದ್ದರೆ ಹೇಗೆ ಜನನ ನಿಯಂತ್ರಣ ಸಾಧ್ಯವಾಗುತ್ತದೆ ಎಂಬುದನ್ನು ವಿವರಿಸುತ್ತಾ, ಮಹಿಳೆ ಒಂದೊಮ್ಮೆ ಜ್ಞಾನವಂತಳು, ಸುಶಿಕ್ಷಿತಳಾಗಿದ್ದರೆ ಗಂಡನ ಜತೆ ಮಿಲನಗೊಂಡಾಗಲೂ ತುಂಬ ಎಚ್ಚರವಾಗಿರುತ್ತಾಳೆ ಮತ್ತು ತಾನು ಗರ್ಭಿಣಿಯಾಗುವುದನ್ನು ತಪ್ಪಿಸುತ್ತಾಳೆ ಎಂದು ಹೇಳುತ್ತಾರೆ. ಆದರೆ, ಈ ವೇಳೆ ಬಳಸುವ ಕೈ ಸನ್ನೆಗಳು ಮತ್ತು ಭಾಷೆಯು ಅಪಾರ್ಥಕ್ಕೆ ಎಡೆ ಮಾಡಿಕೊಟ್ಟಿದೆ. ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಮುಗಿ ಬಿದ್ದ ಬಿಜೆಪಿ

ಅಶ್ಲೀಲ ನಿತೀಶ್ ಎಂದು ಕರೆದಿರುವ ಭಾರತೀಯ ಜನತಾ ಪಾರ್ಟಿಯು ಎಕ್ಸ್ ವೇದಿಕೆಯಲ್ಲಿ ವಿಡಿಯೋ ಷೇರ್ ಮಾಡಿದೆ. ಭಾರತದ ರಾಜಕೀಯದಲ್ಲಿ ನಿತೀಶ್ ಕುಮಾರ್ ಅವರಂತಹ ಅಶ್ಲೀಲ ನಾಯಕನನ್ನು ಯಾರೂ ನೋಡಿಲ್ಲ. ನಿತೀಶ್ ಬಾಬು ಅವರ ಮನಸ್ಸು “ಬಿ” ಗ್ರೇಡ್ ವಯಸ್ಕರ ಚಿತ್ರಗಳ ಪ್ರಭಾವದಿಂದ ಪಾರಾಗಿಲ್ಲ. ಅವರ ಡಬಲ್ ಮೀನಿಂಗ್ ಡೈಲಾಗ್‌ಗಳಿಗೆ ಸಾರ್ವಜನಿಕ ನಿಷೇಧ ಹೇರಬೇಕು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: Viral Video: ಇಂಗ್ಲಿಷ್‌ನಲ್ಲಿ ಮಾತನಾಡಿದ ರೈತನನ್ನು ತರಾಟೆಗೆ ತೆಗೆದುಕೊಂಡ ಬಿಹಾರ ಸಿಎಂ ನಿತೀಶ್ ಕುಮಾರ್

ಅಶ್ಲೀಲ ಅಲ್ಲ, ಲೈಂಗಿಕ ಶಿಕ್ಷಣ

ಸಿಎಂ ನಿತೀಶ್ ಕುಮಾರ್ ಅವರ ಮಾತುಗಳು ವೈರಲ್ ಆಗುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಡಿಸಿಎಂ ತೇಜಸ್ವಿ ಯಾದವ್ ಅವರು, ಸಿಎಂ ಅವರ ಮಾತುಗಳು ಅಶ್ಲೀಲವಲ್ಲ, ಅವು ಲೈಂಗಿಕ ಶಿಕ್ಷಣದ್ದಾಗಿವೆ ಎಂದು ಹೇಳಿಕೊಂಡಿದ್ದಾರೆ. ಸಿಎಂ ಮಾತುಗಳ ಕುರಿತು ನಾನು ಸ್ಪಷ್ಪಪಡಿಸಲು ಇಚ್ಛಿಸುತ್ತೇನೆ. ಮುಖ್ಯಮಂತ್ರಿಗಳು ಲೈಂಗಿಕ ಶಿಕ್ಷಣದ ಹೇಳಿದ್ದಾರೆ, ಜನರು ಈ ವಿಷಯದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಶಾಲೆಗಳಲ್ಲಿ ವಿಜ್ಞಾನ, ಜೀವಶಾಸ್ತ್ರದಲ್ಲಿ ಇವುಗಳನ್ನು ಕಲಿಸಲಾಗುತ್ತದೆ. ಮಕ್ಕಳು ಇದನ್ನು ಕಲಿಯುತ್ತಾರೆ. ಅವರು ಪ್ರಾಯೋಗಿಕವಾಗಿ ಏನು ಮಾಡಬೇಕೆಂದು ಹೇಳಿದರು. ಜನಸಂಖ್ಯೆಯನ್ನು ನಿಯಂತ್ರಿಸಿ, ಇದನ್ನು ತಪ್ಪಾದ ರೀತಿಯಲ್ಲಿ ತೆಗೆದುಕೊಳ್ಳಬಾರದು, ಆದರೆ ಲೈಂಗಿಕ ಶಿಕ್ಷಣ ಎಂದು ತೆಗೆದುಕೊಳ್ಳಬೇಕು ತೇಜಸ್ವಿ ಯಾದವ್ ಅವರು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version