ನವದೆಹಲಿ: ಪಬ್ಜಿ ಆನ್‌ಲೈನ್ ಗೇಮ್ ಮೂಲಕ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, ಆ ಪ್ರೀತಿಯನ್ನು ಬಯಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಮಹಿಳೆ ಸೀಮಾ ಹೈದರ್ (Seema Haider) ಅವರನ್ನು ಭಾರತ ಸರ್ಕಾರವು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸದಿದ್ದರೆ 26/11ರ ಮುಂಬೈ ಮಾದರಿಯಲ್ಲಿ ದಾಳಿ ನಡೆಸಲಾಗುವುದು ಎಂದು ಮುಂಬೈ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸ್‌ಆ್ಯಪ್ ಸಂಖ್ಯೆಗೆ ಬೆದರಿಕೆ ಸಂದೇಶಗಳನ್ನು ರವಾನಿಸಲಾಗಿದೆ. “ಸೀಮಾ ಹೈದರ್ ಅವರನ್ನು ಸರ್ಕಾರ ಪಾಕಿಸ್ತಾನಕ್ಕೆ ಹಿಂತಿರುಗಿಸದಿದ್ದರೆ ಭಾರತವನ್ನು ನಾಶಪಡಿಸುತ್ತೇವೆ. ಮುಂಬೈ ಮಾದರಿ ದಾಳಿಗೆ ಸಿದ್ಧರಾಗಿ. ಹಾಗೇನಾದರೂ ದಾಳಿಯಾದರೆ ಉತ್ತರ ಪ್ರದೇಶ ಸರ್ಕಾರವೇ ಇದರ ಹೊಣೆ” ಎಂದು ಬೆದರಿಕೆ ಹಾಕಲಾಗಿದೆ. ಆದಾಗ್ಯೂ, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. “ಎಲ್ಲಿಂದ ಮೆಸೇಜ್ ಕಳುಹಿಸಿದ್ದಾರೆ ಎಂಬ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 2008ರ ನವೆಂಬರ್ 26ರಂದು ಮುಂಬೈ ಮೇಲೆ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಯಲ್ಲಿ 164 ಜನ ಮೃತಪಟ್ಟಿದ್ದರು.
ಯಾರಿವರು ಸೀಮಾ ಹೈದರ್?
ಸೀಮಾ ಹೈದರ್ ಪಾಕಿಸ್ತಾನದ ಸಿಂಧ್ ಪ್ರಾಂತ್ಯವರಾಗಿದ್ದಾರೆ. 27 ವರ್ಷದ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಆದರೆ, ಗಂಡನ ಕಿರುಕುಳ ತಾಳದೆ ಆಕೆ ಗಂಡನಿಂದ ಬೇರೆಯಾಗಿದ್ದಾಳೆ. ಪಬ್ಜಿ ಆನ್‌ಲೈನ್ ಗೇಮ್ ಮೂಲಕ ಸೀಮಾ ಹೈದರ್ ಹಾಗೂ ಗ್ರೇಟರ್ ನೊಯ್ಡಾದ ಸಚಿನ್ ಸಿಂಗ್ ಪರಿಚಯವಾಗಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಇಬ್ಬರೂ ನೇಪಾಳದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದು ಮದುವೆಯಾಗಲು ತೀರ್ಮಾನಿಸಿದ್ದಾರೆ. ಅದರಂತೆ, ಸೀಮಾ ಹೈದರ್ ಪಾಕಿಸ್ತಾನದಿಂದ ದುಬೈಗೆ ವಿಮಾನದಲ್ಲಿ ತೆರಳಿ, ಅಲ್ಲಿಂದ ನೇಪಾಳ ರಾಜಧಾನಿ ಕಠ್ಮಂಡುಗೆ ವಿಮಾನದಲ್ಲಿ ಬಂದಿದ್ದಾಳೆ. ಕೊನೆಗೆ ನೇಪಾಳ ಗಡಿಯಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದಾಳೆ.
ಇದನ್ನೂ ಓದಿ: PUBG Love Story: ಭಾರತ ನನ್ನದು, ನಾನೀಗ ಹಿಂದು; ಇದು ಪ್ರೀತಿ ಅರಸಿ ಪಾಕ್‌ನಿಂದ ಬಂದ ಮಹಿಳೆ ಮನದಾಳ
“ನಾನೀಗ ಭಾರತೀಯಳು, ನಾನು ಇಲ್ಲಿಯೇ ಇರುತ್ತೇನೆ. ಹಿಂದುತ್ವವನ್ನು ನಾನು ಅಳವಡಿಸಿಕೊಂಡಿದ್ದೇನೆ. ನಾನು ಹಿಂದು ಧರ್ಮದ ಮೌಲ್ಯಗಳನ್ನು ಸ್ವೀಕರಿಸುತ್ತೇನೆ. ನಾನೀಗ ಮಾಂಸಾಹಾರ ಸೇವನೆಯನ್ನು ನಿಲ್ಲಿಸಿದ್ದೇನೆ” ಎಂದು ಸೀಮಾ ಹೈದರ್ ಹೇಳಿದ್ದಾರೆ. ಹಾಗೆಯೇ, ನಮ್ಮ ಮದುವೆಯನ್ನು ಸರ್ಕಾರ ಮಾನ್ಯ ಮಾಡಿ, ನನಗೆ ಪೌರತ್ವ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ, ಸೀಮಾ ಹೈದರ್ ಅವರು ಸಚಿನ್ ಸಿಂಗ್ ಮನೆಯಲ್ಲಿಯೇ ವಾಸವಿದ್ದಾರೆ.