Site icon Vistara News

Adhir Ranjan: ಅಂಬಾನಿ ದುಡ್ಡು ಕೊಟ್ಟರೆ ನಾವೂ ಸುಮ್ಮನಾಗುತ್ತೇವೆ ಎಂದ ಕಾಂಗ್ರೆಸ್‌ ನಾಯಕ; ವಿಡಿಯೊ ವೈರಲ್

Adhir Ranjan

If We take money from Ambani-Adani Will stop speaking against them; Adhir Ranjan Chowdhury

ಕೋಲ್ಕೊತಾ: ಉದ್ಯಮಿಗಳಾದ ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಅವರಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಹಣ ಸಂದಾಯವಾಗಿದೆ. ಇದೇ ಕಾರಣಕ್ಕಾಗಿ ಅದಾನಿ-ಅಂಬಾನಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಮಾತನಾಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ದೂರಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chowdhury) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಅಂಬಾನಿ ಹಾಗೂ ಅದಾನಿ ದುಡ್ಡು ಕಳುಹಿಸಿದರೆ, ನಾವೂ ಅವರ ವಿರುದ್ಧ ಮಾತನಾಡುವುದಿಲ್ಲ” ಎಂದು ಹೇಳಿರುವ ವಿಡಿಯೊ ಈಗ ಸಂಚಲನ ಮೂಡಿಸಿದೆ.

ಯುಟ್ಯೂಬ್‌ ಚಾನೆಲ್‌ನ ನಿರೂಪಕರೊಬ್ಬರ ಜತೆ ಮಾತನಾಡಿದ ಅಧೀರ್‌ ರಂಜನ್‌ ಚೌಧರಿ, “ಅಂಬಾನಿ ಹಾಗೂ ಅದಾನಿ ಅವರಿಂದ ಹಣ ಸಿಕ್ಕರೆ ನಾನು ಸಂತೋಷದಿಂದ ಇರುತ್ತೇನೆ. ಅಷ್ಟಕ್ಕೂ ನಾನು ಬಡತನ ರೇಖೆಗಿಂತ ಕೆಳಗಿರುವ (BPL) ಸಂಸದನಾಗಿದ್ದೇನೆ. ಚುನಾವಣೆ ಪ್ರಚಾರಕ್ಕಾಗಿ ನನಗೆ ಹಣ ಬೇಕು. ಟೆಂಪೋಗಟ್ಟಲೆ ಹಣ ಬಿಡಿ, ಒಂದು ಬ್ಯಾಂಗ್‌ ತುಂಬ ಅವರು ಹಣ ಕಳುಹಿಸಿದರೂ ನನಗೆ ಸಾಕು” ಎಂಬುದಾಗಿ ಕಾಂಗ್ರೆಸ್‌ ನಾಯಕ ತಮಾಷೆಯಾಗಿ ಉತ್ತರ ನೀಡಿದ್ದಾರೆ.

ಉದ್ಯಮಿಗಳ ವಿರುದ್ಧ ಸಂಸತ್ತಿನಲ್ಲಿ ನೀವು ಮಾತನಾಡುತ್ತೀರಲ್ಲ ಎಂದು ಯುಟ್ಯೂಬರ್‌ ಕೇಳಿದ ಪ್ರಶ್ನೆಗೆ, “ಅವರು ನಮಗೆ ಹಣ ಕಳುಹಿಸುವುದಿಲ್ಲ. ಹಾಗಾಗಿ, ನಾವು ಅವರ ವಿರುದ್ಧ ಮಾತನಾಡುತ್ತೇವೆ” ಎಂದರು. “ಅವರು ಹಣ ಕಳುಹಿಸಿದರೆ ನೀವು ಅವರ ವಿರುದ್ಧ ಮಾತನಾಡುವುದಿಲ್ಲವೇ” ಎಂದು ಕೇಳಿದ ಪ್ರಶ್ನೆಗೆ, “ಅವರು ನಮಗೆ ಹಣ ಕಳುಹಿಸಿದಾಗ ನೋಡೋಣ” ಎಂದು ಹಾರಿಕೆಯ ಉತ್ತರ ನೀಡಿದರು. ಈ ವಿಡಿಯೊ ಭಾರಿ ವೈರಲ್‌ ಆಗಿದ್ದು, ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿವೆ.

ಕಾಲೆಳೆದ ಬಿಜೆಪಿ

ಅಂಬಾನಿ-ಅದಾನಿ ಕುರಿತು ಅಧೀರ್‌ ರಂಜನ್‌ ಚೌಧರಿ ಹೇಳಿಕೆ ನೀಡುತ್ತಲೇ ಬಿಜೆಪಿ ಟಾಂಗ್‌ ನೀಡಿದೆ. “ಉದ್ಯಮಿಗಳಿಂದ ಬ್ಯಾಗ್‌ ತುಂಬ ಹಣ ಸಿಕ್ಕರೆ ಸಂಸತ್ತಿನಲ್ಲಿ ಅವರ ವಿರುದ್ಧ ಮಾತನಾಡುವುದಿಲ್ಲ ಎಂಬುದಾಗಿ ಕಾಂಗ್ರೆಸ್‌ ನಾಯಕ ಹೇಳಿದ್ದಾರೆ. ಉದ್ಯಮಿಗಳಿಗೆ ಹಣ ಕೊಡಿ ಎಂಬುದಾಗಿ ಪರೋಕ್ಷವಾಗಿ ಹೇಳುವ ಜತೆಗೆ ಅವರನ್ನು ಟಾರ್ಗೆಟ್‌ ಮಾಡುತ್ತಿರುವುದನ್ನೂ ಒಪ್ಪಿಕೊಂಡಿದ್ದಾರೆ. ಇದು ಹಫ್ತಾ ವಸೂಲಿ ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟ” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಅಧೀರ್‌ ರಂಜನ್‌ ಚೌಧರಿ, “ಬಿಜೆಪಿಯವರಿಗೆ ಜೋಕ್‌ ಯಾವುದು, ಸೀರಿಯಸ್‌ ಯಾವುದು ಎಂಬುದರ ಪರಿಜ್ಞಾನವೇ ಇಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: “ಅದಾನಿ-ಅಂಬಾನಿ… ಕಾಪಾಡಿ..ಕಾಪಾಡಿ ಅಂತಿದ್ದಾರೆ ಪ್ರಧಾನಿ ಮೋದಿ” ; ರಾಹುಲ್‌ ಗಾಂಧಿ ವ್ಯಂಗ್ಯ

Exit mobile version