ನವದೆಹಲಿ: ಬಾಂಬೆ ಐಐಟಿ (Indian Institute of Technology – IIT Bombay) ಸಂಸ್ಥೆಗೆ ಅನಾಮಧೇಯ (an anonymous donor) ವ್ಯಕ್ತಿಯೊಬ್ಬರು 160 ಕೋಟಿ ರೂ. ಕಾಣಿಕೆ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಬಾಂಬೆ ಐಐಟಿ ಮಾಹಿತಿ ನೀಡಿದೆ. ಸಂಸ್ಥೆಯಲ್ಲಿ ಹಸಿರು ಇಂಧನ ಮತ್ತು ಸುಸ್ಥಿರ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಹಳೆ ವಿದ್ಯಾರ್ಥಿ ಈ ಕೊಡುಗೆ ನೀಡಿದ್ದಾರೆ ಎಂದು ಬಾಂಬೆ ಐಐಟಿ ಹೇಳಿದೆ. ಚಿಕ್ಕ ಮೊತ್ತದ ಹಣವನ್ನು ದಾನ ನೀಡಿ, ಬಹಳಷ್ಟು ಪ್ರಚಾರ ತೆಗೆದುಕೊಳ್ಳುವವರ ಮಧ್ಯೆ ಬಾಂಬೆ ಐಐಟಿಯ ಈ ಹಳೆ ವಿದ್ಯಾರ್ಥಿಯು ಭಿನ್ನವಾಗಿದ್ದಾರೆ.
ದಾನ ನೀಡಿರುವ ಹಳೆಯ ವಿದ್ಯಾರ್ಥಿಯ ಹೆಸರನ್ನು ಬಹಿರಂಗಪಡಿಸಲು ಬಾಂಬೆ ಐಐಟಿ ನಿರಾಕರಿಸಿದೆ. ಕಾಣಿಕೆ ನೀಡಿದ ವಿದ್ಯಾರ್ಥಿಯ ಮನವಿಯ ಮೇರೆಗೆ ಅವರ ಗುರುತು ಬಹಿರಂಗಪಡಿಸಿಲ್ಲ. ಭಾರತೀಯ ಶಿಕ್ಷಣದಲ್ಲಿ ಇದೊಂದು ಅಪರೂಪದ ಘಟನೆಯಾಗಿದ್ದು, ಒಬ್ಬ ಪರೋಪಕಾರಿ ಅನಾಮಧೇಯನಾಗಿ ಉಳಿಯಲು ಬಯಸಿದ್ದಾರೆ ಎಂದು ಐಐಟಿ ಬಾಂಬೆಯ ನಿರ್ದೇಶಕ ಪ್ರೊ. ಸುಭಾಸಿಸ್ ಚೌಧುರಿ ಹೇಳಿದ್ದಾರೆ.
ನಾವು(ಬಾಂಬೆ ಐಐಟಿ) ಇದೇ ಮೊದಲ ಬಾರಿಗೆ ಅನಾಮಧೇಯ ದೇಣಿಗೆಯನ್ನು ಸ್ವೀಕರಿಸಿದ್ದೇವೆ. ವಾಸ್ತವವಾಗಿ, ಈ ರೀತಿ ದೇಣಿಗೆ ಅಮೆರಿಕದಲ್ಲಿ ಸಾಮಾನ್ಯವಾಗಿದ್ದರೂ, ಭಾರತದಲ್ಲಿ ಯಾವುದೇ ವಿಶ್ವವಿದ್ಯಾನಿಲಯವು ಖಾಸಗಿ ದೇಣಿಗೆಯನ್ನು ಸ್ವೀಕರಿಸಿದೆ ಎಂದು ನಾನು ಭಾವಿಸುವುದಿಲ್ಲ. ಅಲ್ಲಿ ದಾನಿಯು ಮುಖರಹಿತವಾಗಿರಲು ಬಯಸುತ್ತಾನೆ. ದಾನಿಗಳಿಗೆ ತಿಳಿದಿದೆ ಅವರು ಐಐಟಿಬಿ ಹಣವನ್ನು ನೀಡಿದಾಗ, ಅದನ್ನು ಸಮರ್ಥವಾಗಿ ಮತ್ತು ಸರಿಯಾದ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂದು ಚೌಧುರಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಖಾತೆಯಲ್ಲಿ ಇದ್ದಿದ್ದೇ 17 ರೂ. ಆದ್ರೆ ಹುಂಡಿಗೆ 100 ಕೋಟಿ ರೂ. ಚೆಕ್ ಹಾಕಿದ್ದ ಭಕ್ತ!
ಅನಾಮಧೇಯ ವ್ಯಕ್ತಿ ನೀಡಿರು ದೇಣಿಗೆಯನ್ನು ಬಾಂಬೆ ಐಐಟಿ ಕ್ಯಾಂಪಸ್‌ನಲ್ಲಿ ಗ್ರೀನ್ ಎನರ್ಜಿ ಮತ್ತು ಸಸ್ಟೈನಬಿಲಿಟಿ ರಿಸರ್ಚ್ ಸೆಂಟರ್ (ಜಿಇಎಸ್‌ಆರ್) ಸ್ಥಾಪಿಸಲು ಬಳಸಲಾಗುತ್ತದೆ, ಮೂಲಸೌಕರ್ಯ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ದೊಡ್ಡ ಮೊತ್ತವನ್ನು ಮೀಸಲಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಕೇಂದ್ರವು ಹವಾಮಾನ ಪರಿಹಾರಗಳನ್ನು ಹುಡುಕುವ ಪ್ರಯತ್ನ ಮಾಡಲಿದೆ. ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಶಕ್ತಿ-ಸಮರ್ಥ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುತ್ತದೆ. ಇದು ಬ್ಯಾಟರಿ ತಂತ್ರಜ್ಞಾನಗಳು, ಸೌರ ದ್ಯುತಿವಿದ್ಯುಜ್ಜನಕಗಳು, ಜೈವಿಕ ಇಂಧನಗಳು, ಶುದ್ಧ ಗಾಳಿ ವಿಜ್ಞಾನ, ಪ್ರವಾಹ ಮುನ್ಸೂಚನೆ ಮತ್ತು ಇಂಗಾಲದ ಸೆರೆಹಿಡಿಯುವಿಕೆ ಸೇರಿದಂತೆ ಹಲವಾರು ನಿರ್ಣಾಯಕ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅನುಕೂಲವಾಗಲಿದೆ ಎಂದು ಸಂಸ್ಥೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.