Site icon Vistara News

ಲೋಕಸಭೆ ಚುನಾವಣೆ ಸಮೀಕ್ಷೆ | ನಿತೀಶ್‌ ದೂರ: ಈಗಲೇ ಎಲೆಕ್ಷನ್‌ ನಡೆದರೆ ಎನ್​ಡಿಎಗೆ ಸಿಗುವ ಸ್ಥಾನ ಎಷ್ಟು?

Mood Of the Nation

ನವ ದೆಹಲಿ: 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಕಳೆದ ಎಂಟು ವರ್ಷದಿಂದ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿ ಜನಪ್ರಿಯತೆ ದಿನೇದಿನೆ ಹೆಚ್ಚುತ್ತಲೇ ಇದೆ. ಪ್ರತಿಪಕ್ಷಗಳ ನಾಯಕರಿಗಿಂತಲೂ ಪ್ರಧಾನಿ ಮೋದಿ ಬಹಳ ಮುಂದಿದ್ದಾರೆ. ಆದರೆ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಬಿಜೆಪಿ ಸಖ್ಯ ತೊರೆದ ಹಿನ್ನೆಲೆಯಲ್ಲಿ, ಒಂದೊಮ್ಮೆ ಈಗಲೇ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ ಸ್ಥಾನ ಗಳಿಕೆಯಲ್ಲಿ ಇಳಿಕೆಯಾಗಲಿದೆ ಎನ್ನುತ್ತದೆ (ಲೋಕಸಭೆ ಚುನಾವಣೆ ಸಮೀಕ್ಷೆ) ಲೇಟೆಸ್ಟ್‌ ಸರ್ವೆ.

ಇಂದೇ ಲೋಕಸಭೆ ಚುನಾವಣೆ ನಡೆದರೂ ಎನ್​ಡಿಎ ಒಕ್ಕೂಟಕ್ಕೇ ಗೆಲುವು ನಿಶ್ಚಿತ. ಮತ್ತೆ ಕೇಂದ್ರದಲ್ಲಿ ಎನ್​ಡಿಎಯೇ ಸರ್ಕಾರ ರಚನೆ ಮಾಡುತ್ತದೆ ಎಂಬ ಸನ್ನಿವೇಶ ಇದೆ. ಆದರೂ, ಬಿಹಾರ ರಾಜಕೀಯದಲ್ಲಿ ನಿರೀಕ್ಷೆಗೂ ಮೀರಿದ ಬದಲಾವಣೆಯಾಗಿರುವುದು ಬಿಜೆಪಿಗೆ ಸ್ವಲ್ಪ ಮಟ್ಟಿಗಿನ ಪೆಟ್ಟು ಕೊಡಲಿದೆ. ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟದ ಕ್ಷೇತ್ರ ಹಂಚಿಕೆಯ ಮೇಲೆ ಪ್ರಭಾವ ಬೀರಲಿದೆ ಎಂಬುದು ಸದ್ಯ ಸಮೀಕ್ಷೆಯಿಂದ ಹೊರಬಿದ್ದ ಅಭಿಪ್ರಾಯ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಬಿಹಾರದಲ್ಲಿ ಜೆಡಿಯು, ಎನ್​ಡಿಎ ಒಕ್ಕೂಟವನ್ನು ಬಿಟ್ಟ ಬಳಿಕ ಇಂಡಿಯಾ ಟುಡೆ ಮಾಧ್ಯಮ, ಭಾರತೀಯ ಅಂತಾರಾಷ್ಟ್ರೀಯ ಮತದಾನ ಸಂಸ್ಥೆಯಾದ ಸಿ-ವೋಟರ್​ ಜತೆ ಸೇರಿ, ಈಗಲೇ ಲೋಕಸಭೆ ಚುನಾವಣೆ ನಡೆದರೆ ಏನಾಗಬಹುದು ಎಂಬ ಬಗ್ಗೆ ಸರ್ವೆ ನಡೆಸಿತ್ತು. ಅದರ ಅನ್ವಯ, ಬಿಹಾರ ರಾಜಕೀಯ ಬೆಳವಣಿಗೆ ಪೂರ್ವ ಎಲೆಕ್ಷನ್​ ನಡೆದರೆ ಎನ್​ಡಿಎ ಸ್ಥಿತಿಯೇನಿರುತ್ತಿತ್ತು? ನಂತರ ಚುನಾವಣೆ ನಡೆದರೆ ಏನಾಗಬಹುದು ಎಂಬ ಬಗ್ಗೆ ಅಂಕಿ-ಸಂಖ್ಯೆಗಳ ಮೂಲಕ ವರದಿ ಮಾಡಲಾಗಿದೆ.

ಸಮೀಕ್ಷಾ ವರದಿ ಏನು?

ಆಗಸ್ಟ್​ 1ರವರೆಗೆ ಯಾವುದೇ ದಿನ ಲೋಕಸಭಾ ಚುನಾವಣೆ ನಡೆದಿದ್ದರೆ…
ಒಟ್ಟು ಲೋಕಸಭಾ ಕ್ಷೇತ್ರಗಳು -543
ಎನ್​​ಡಿಎ ಗೆಲ್ಲಲಿದ್ದ ಸೀಟ್​ಗಳು-307
ಯುಪಿಎ ಗೆಲ್ಲಬಹುದಾದ ಕ್ಷೇತ್ರಗಳು-125
ಇತರ ರಾಜಕೀಯ ಪಕ್ಷಗಳಿಗೆ- 111

ಬಿಹಾರದಲ್ಲಿ ಜೆಡಿಯು, ಎನ್​ಡಿಎ ಒಕ್ಕೂಟವನ್ನು ತೊರೆದ ಬಳಿಕ, ಅಂದರೆ ಈಗ ಲೋಕಸಭಾ ಚುನಾವಣೆ ನಡೆದರೆ..
ಒಟ್ಟು ಲೋಕಸಭಾ ಕ್ಷೇತ್ರಗಳು 543
ಎನ್​​ಡಿಎ ಗೆಲ್ಲಬಹುದಾದ ಕ್ಷೇತ್ರಗಳು-286 (ಜೆಡಿಯುದಿಂದ ಸಿಗಬೇಕಿದ್ದ 21 ಕ್ಷೇತ್ರಗಳು ನಷ್ಟ)
ಯುಪಿಎ ಗೆಲ್ಲುವ ಕ್ಷೇತ್ರಗಳು-146 (ಜೆಡಿಯು-ಕಾಂಗ್ರೆಸ್​ ಒಟ್ಟಾಗಿರುವುದಿಂದ ಎನ್​ಡಿಎಯಲ್ಲಿ ಕಳೆದ 21 ಕ್ಷೇತ್ರ ಯುಪಿಗೆ ಪ್ಲಸ್​ ಆಗುತ್ತದೆ.

ಲೋಕಸಭೆ ಚುನಾವಣೆ ವಿಚಾರದಲ್ಲಿ ದೇಶದ ಅಭಿಪ್ರಾಯವೇನು? ಮನಸ್ಥಿತಿ ಹೇಗಿದೆ ಎಂಬಿತ್ಯಾದಿ ಕುರಿತಾಗಿ ಇಂಡಿಯಾ ಟುಡೆ ಮತ್ತು ಸಿ ವೋಟರ್​​ ಜಂಟಿಯಾಗಿ, 2022ರ ಫೆಬ್ರವರಿಯಿಂದ ಸಮೀಕ್ಷೆ ನಡೆಸಿದ್ದವು. ಆಗಸ್ಟ್​ 10ರಂದು ಬಿಹಾರದಲ್ಲಿ ಏಕಾಏಕಿ ರಾಜಕೀಯ ಬದಲಾವಣೆಯಾದಾಗ ಮತ್ತೆ ಒಂದು ಕ್ಷಿಪ್ರ ಸಮೀಕ್ಷೆಯನ್ನೂ ನಡೆಸಿವೆ. ಒಟ್ಟು 1,22,016 ಮಂದಿಯನ್ನು ಇದಕ್ಕಾಗಿ ಸಂದರ್ಶಿಸಲಾಗಿತ್ತು. ಎನ್​​ಡಿಎ ಒಕ್ಕೂಟ ಲೋಕಸಭೆಯಲ್ಲಿ 21 ಕ್ಷೇತ್ರಗಳನ್ನು ಕಳೆದುಕೊಂಡರೆ ದೊಡ್ಡಮಟ್ಟದ ನಷ್ಟವಾಗದೆ ಇದ್ದರೂ, ಸೀಟ್​​ಗಳ ಸಂಖ್ಯೆ 300ಕ್ಕಿಂತ ಕೆಳಗೆ ಬರುತ್ತದೆ.

ಇದನ್ನೂ ಓದಿ: Bihar Politics | ಜೆಡಿಯು ಬಿಟ್ಟು ಹೋದ ಮೇಲೆ ರಾಜ್ಯಸಭೆಯಲ್ಲಿ ಬಿಜೆಪಿ ಸ್ಥಿತಿಯೇನು?

Exit mobile version