Site icon Vistara News

ಯೋಧನ ಸೋಗಿನಲ್ಲಿ ಬಿಎಂಡಬ್ಲ್ಯೂ ಬುಕ್‌ ಮಾಡಿ, ಸೇನೆ ಕಚೇರಿಗೆ ನುಗ್ಗಿದ ಯುವಕ; ಮುಂದೇನಾಯ್ತು?

MS Chouhan

Imposter Checked Into Luxury Hotel, Took A BMW Ride In Kolkata, Arrested

ಕೋಲ್ಕೊತಾ: ಪಶ್ಚಿಮ ಬಂಗಾಳದ ಕೋಲ್ಕೊತಾದಲ್ಲಿರುವ ಭಾರತೀಯ ಸೇನೆಯ (Indian Army) ಈಸ್ಟರ್ನ್‌ ಕಮಾಂಡ್‌ (Eastern Command) ಕೇಂದ್ರ ಕಚೇರಿಯಾದ ಫೋರ್ಟ್‌ ವಿಲಿಯಂಅನ್ನು (Fort William) ಪ್ರವೇಶಿಸಲು ಯತ್ನಿಸಿದ ಯುವಕನನ್ನು ಬಂಧಿಸಲಾಗಿದೆ. ಸೇನೆಯ ಅಧಿಕಾರಿ ಎಂದು ಹೇಳಿಕೊಂಡ ಬಂದ ಯುವಕನು ರಿಜಿಸ್ಟರ್‌ನಲ್ಲಿ ಸರಿಯಾದ ಮಾಹಿತಿ ಭರ್ತಿ ಮಾಡಲು ಆಗದ ಕಾರಣ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಬಿಎಂಡಬ್ಲ್ಯೂ ಕಾರ್‌ನಲ್ಲಿ ಫೋರ್ಟ್‌ ವಿಲಿಯಂಗೆ ಬಂದ ಯುವಕನು ತಾನೊಬ್ಬ ಸೇನಾ ಮೇಜರ್‌ ಎಂಬುದಾಗಿ ಹೇಳಿದ್ದಾನೆ. 5ನೇ ಗೋರ್ಖಾ ರೈಫಲ್ಸ್‌ನಲ್ಲಿ ಮೇಜರ್‌ ಆಗಿದ್ದೇನೆ ಎಂಬುದಾಗಿ ತಿಳಿಸಿದ್ದಾನೆ. ಈತನು ನಕಲಿ ಐಡಿಯನ್ನು ಕೂಡ ತೋರಿಸಿದ್ದು, ಅದರಲ್ಲಿ ಮೇಜರ್ ಎಂ.ಎಸ್.ಚೌಹಾಣ್‌ ಎಂಬುದಾಗಿ ಬರೆಯಲಾಗಿತ್ತು. ಇದಾದ ನಂತರ ರಿಜಸ್ಟರ್‌ನಲ್ಲಿ ಮೊಬೈಲ್‌ ನಂಬರ್‌ ನಮೂದಿಸಲು ಯುವಕನು ತಡವರಿಸಿದ್ದಾನೆ. ಈತನ ಬಗ್ಗೆ ಅನುಮಾನ ವ್ಯಕ್ತವಾಗುತ್ತಲೇ ಅಲ್ಲಿದ್ದ ಸಿಬ್ಬಂದಿಯು ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಯುವಕ ತಿರುಗಾಡಿದ ಖಾಸಗಿ ಹೋಟೆಲ್‌ ಕಾರು.

ವಿಚಾರಣೆ ಬಳಿಕ ಸ್ಫೋಟಕ ಮಾಹಿತಿ ಬಹಿರಂಗ

ಎಂ.ಎಸ್.ಚೌಹಾಣ್‌ ಎಂಬ ಯುವಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈತನ ಕುರಿತು ಹತ್ತಾರು ಮಾಹಿತಿ ಬಹಿರಂಗವಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನವನಾದ ಈತನು ಪದೇಪದೆ ವಂಚನೆ ಎಸಗುವುದು ರೂಢಿಯಾಗಿದೆ. ಅಲ್ಲದೆ, ಈತನ ಕೃತ್ಯಗಳಿಂದಾಗಿ 2023ರ ಸೆಪ್ಟೆಂಬರ್‌ನಿಂದ 2024ರ ಫೆಬ್ರವರಿವರೆಗೆ ಒಡಿಶಾದ ಬಾಲಾಪರಾಧಿಗಳ ಗೃಹದಲ್ಲಿ ಇರಿಸಲಾಗಿತ್ತು. ಜೈಲಿನಿಂದ ಹೊರಬಂದ ಈತನು ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕಳೆದ ಫೆಬ್ರವರಿ 13ರಂದು ಬಾಲಾಪರಾಧಿಗಳ ಗೃಹದಿಂದ ಬಿಡುಗಡೆಗೊಂಡ ಈತನು ಕಟಕ್‌ನಲ್ಲಿರುವ ಹೋಟೆಲ್‌ ಪ್ರೈಡ್‌ನಲ್ಲಿ ತಂಗಿದ್ದಾನೆ. ಅಲ್ಲಿ ತಂಗಿದ್ದಕ್ಕಾಗಿ 6,393 ರೂ. ಹೋಟೆಲ್‌ ಬಿಲ್‌ ಪಾವತಿಸದೆ ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲ, ಟಿಕೆಟ್‌ ಇಲ್ಲದೆಯೇ ರೈಲಿನಲ್ಲಿ ಮಾರ್ಚ್‌ 14ರಂದು ಹೌರಾ ರೈಲು ನಿಲ್ದಾಣ ತಲುಪಿದ್ದಾನೆ. ಅಲ್ಲಿಂದ ಏರ್‌ಪೋರ್ಟ್‌ಗೆ ಕ್ಯಾಬ್‌ ಬುಕ್‌ ಮಾಡಿದ ಆತ, ಜೆಡಬ್ಲ್ಯು ಮ್ಯಾರಿಯಟ್‌ ಹೋಟೆಲ್‌ಗೆ ಕರೆ ಮಾಡಿ, ವಿಮಾನ ನಿಲ್ದಾಣಕ್ಕೆ ಕ್ಯಾಭ್‌ ಕಳುಹಿಸಲು ಹೇಳಿದ್ದಾನೆ. ಕ್ಯಾಬ್‌ನಲ್ಲಿ ಫೈವ್‌ ಸ್ಟಾರ್‌ ಹೋಟೆಲ್‌ಗೆ ತೆರಳಿ, ಅಲ್ಲಿ ಉಳಿದುಕೊಂಡಿದ್ದಾನೆ.

ಇದನ್ನೂ ಓದಿ: Sandeskhali ED Attack: ಸಂದೇಶಖಾಲಿ ಪ್ರಕರಣ; ಮತ್ತೆ ಮೂವರನ್ನು ಬಂಧಿಸಿದ ಸಿಬಿಐ

ಕ್ಯಾಬ್‌ ಚಾಲಕನಿಗೆ ತಾನು ರಾಷ್ಟ್ರಪತಿ ರೆಜಿಮೆಂಟ್‌ನಲ್ಲಿರುವ ಸೇನಾಧಿಕಾರಿ ಎಂದು ಸುಳ್ಳು ಹೇಳಿದ್ದಾನೆ. ಇದನ್ನು ನಂಬಿದ ಕ್ಯಾಬ್‌ ಚಾಲಕನು, ತನ್ನ ಮಗಳಿಗೆ ಜಾಧವ್‌ಪುರ ವಿವಿಯಲ್ಲಿ ಡಿಫೆನ್ಸ್‌ ಕೋಟಾದಲ್ಲಿ ಕೆಲಸ ಕೊಡಿಸಿ ಎಂದು ಮನವಿ ಮಾಡಿದ್ದಾನೆ. ಆಗ ಚೌಹಾಣ್‌, ಕ್ಯಾಬ್‌ ಚಾಲಕನನ್ನು ಕರೆದುಕೊಂಡು ಫೋರ್ಟ್‌ ವಿಲಿಯಂಗೆ ಹೋಗಿದ್ದಾನೆ. ಅಲ್ಲಿ, ಸೇನಾಧಿಕಾರಿ ಎಂದು ಹೇಳಿ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version