Site icon Vistara News

Mid Day Meal: ಮಕ್ಕಳ ಬಿಸಿಯೂಟದಲ್ಲೂ ಕಳ್ಳಾಟ, ವಿದ್ಯಾರ್ಥಿಗಳಿಗೆ ಸಿಗೋದು ಬರೀ ಅನ್ನ-ಅರಿಶಿಣ; Video ಇದೆ

Mid Day Meal

In Chhattisgarh School, Mid-Day Meal Is Just Rice And Turmeric; Watch The Video

ರಾಯ್‌ಪುರ: ಬಡವರ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಸಿಗಲಿ, ಊಟದ ಆಸೆಗಾಗಿಯಾದರೂ ಬಡವರ ಮಕ್ಕಳು ಶಾಲೆಗೆ ಬಂದು, ವಿದ್ಯಾವಂತರಾಗಲಿ ಎಂದು ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದ (Mid Day Meal) ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ, ಸರ್ಕಾರಗಳು ಜಾರಿಗೆ ತಂದಿರುವ ಇಂತಹ ಉತ್ತಮ ಯೋಜನೆಗಳಲ್ಲೂ, ಮಕ್ಕಳ ಊಟದಲ್ಲೂ ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದಾರೆ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬಿಸಿಯೂಟ ನೀಡುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಛತ್ತೀಸ್‌ಗಢದ (Chhattisgarh) ಶಾಲೆಯೊಂದರಲ್ಲಿ ಮಕ್ಕಳಿಗೆ ಬಿಸಿಯೂಟ ಯೋಜನೆ ಅನ್ವಯ ಬರೀ ಅನ್ನ ಹಾಗೂ ಅರಿಶಿಣ ಮಿಶ್ರಣ ಮಾಡಿ, ಅದನ್ನೇ ನೀಡಲಾಗಿದೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಹೌದು, ಛತ್ತೀಸ್‌ಗಢದ ಬಲರಾಮ್‌ಪುರ ಜಿಲ್ಲೆಯ ಬಿಜಾಕುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಇಷ್ಟೊಂದು ಕಳಪೆ ಆಹಾರವನ್ನು ನೀಡಲಾಗುತ್ತಿದೆ. ಮಕ್ಕಳು ಅರಿಶಿಣ ಮಿಕ್ಸ್‌ ಆಗಿರುವ ಅನ್ನವನ್ನು ಸೇವಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 43 ವಿದ್ಯಾರ್ಥಿಗಳು ಓದುತ್ತಿದ್ದು, ಬಹುತೇಕರು ಬಡವರ ಮಕ್ಕಳಾಗಿದ್ದಾರೆ. ಆದರೆ, ಇವರಿಗೆ ಕಳೆದ ಒಂದು ವಾರದಿಂದ ಬಿಸಿಯೂಟದಲ್ಲಿ ತರಕಾರಿ ನೀಡದೆ, ಬರೀ ಅರಿಶಿಣ ಮಿಶ್ರಣ ಆಗಿರುವ ಅನ್ನ ನೀಡಲಾಗುತ್ತಿದೆ. ಇದನ್ನು ಶಾಲೆಯ ಅಧಿಕಾರಿಗಳೇ ದೃಢಪಡಿಸಿದ್ದಾರೆ.

“ಕಳೆದ ಒಂದು ವಾರದಿಂದ ತರಕಾರಿ ಪೂರೈಸುವವರು ಶಾಲೆಗೆ ತರಕಾರಿ ಪೂರೈಸುತ್ತಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ತರಕಾರಿ ವ್ಯವಸ್ಥೆ ಆಗಿಲ್ಲ. ಹಾಗಾಗಿ, ಮಕ್ಕಳಿಗೆ ಅನ್ನ-ಸಾರು ಇಲ್ಲವೇ ಅರಿಶಿಣ ಮಿಶ್ರಿತ ಅನ್ನ ನೀಡುತ್ತಿದ್ದೇವೆ” ಎಂದು ಶಾಲೆಯ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ. ಇವರ ಆರೋಪಗಳಿಗೆ ತರಕಾರಿ ಪೂರೈಸುವವರು ಪ್ರತಿಕ್ರಿಯಿಸಿದ್ದು, “ಶಾಲೆಗೆ ತರಕಾರಿ ಪೂರೈಸಿದ್ದಕ್ಕೆ ಹಲವು ತಿಂಗಳಿಂದ ಹಣ ನೀಡಿಲ್ಲ. ಇದರಿಂದಾಗಿ ನಾವು ತರಕಾರಿ ಪೂರೈಸುತ್ತಿಲ್ಲ” ಎಂದು ಹೇಳಿದ್ದಾರೆ. ಹೀಗೆ ಆರೋಪ-ಪ್ರತ್ಯಾರೋಪದ ಮಧ್ಯೆ ಮಕ್ಕಳು ಪೌಷ್ಟಿಕಾಂಶಯುಕ್ತ ಊಟದಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಅಪೌಷ್ಟಿಕತೆ ಪ್ರಮಾಣ ಶೇ.17.76ರಷ್ಟಿದೆ. ಇದರಿಂದಾಗಿ ಬಿಸಿಯೂಟ ಯೋಜನೆಗೆ ರಾಜ್ಯ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತದೆ. ಬಿಸಿಯೂಟದಲ್ಲಿ ಮಕ್ಕಳಿಗೆ ಚಪಾತಿ, ಅನ್ನ, ಸಾಂಬಾರ್‌, ಬೇಳೆ-ಕಾಳಿನಿಂದ ಮಾಡಿದ ಪಲ್ಯ ಸೇರಿ ಹಲವು ರೀತಿಯ ತಿನಿಸುಗಳು ಇರಬೇಕು ಎಂಬ ನಿಯಮ ರೂಪಿಸಿದೆ. ಇದಕ್ಕಾಗಿ ವಾರ್ಷಿಕ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಇಷ್ಟಾದರೂ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಕ್ಕಳು ಅಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವಂತಾಗಿದೆ. ಮಕ್ಕಳು ಬರೀ ಅನ್ನ ತಿನ್ನುತ್ತಿರುವ ವಿಡಿಯೊ ವೈರಲ್‌ ಆಗುತ್ತಲೇ ಜಿಲ್ಲಾ ಶಿಕ್ಷಣ ಅಧಿಕಾರಿ ದೇವೇಂದ್ರ ನಾಥ್‌ ಮಿಶ್ರಾ ಪ್ರತಿಕ್ರಿಯಿಸಿದ್ದು, “ಪ್ರಕರಣ ಈಗ ಗಮನಕ್ಕೆ ಬಂದಿದೆ. ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.

ಇದನ್ನೂ ಓದಿ: Students Fall Sick: ಬಿಸಿಯೂಟ ಸೇವಿಸಿ ಸರ್ಕಾರಿ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆರೋಗ್ಯ ವಿಚಾರಿಸಿದ ಶಾಸಕ

Exit mobile version