ನವದೆಹಲಿ: ದೇಶದಲ್ಲಿ ರಸ್ತೆ ಮೇಲೆ ವಾಹನ ಚಲಾಯಿಸುವಾಗ, ಬೈಕ್ ಸವಾರಿ ಮಾಡುವಾಗ ಬೇರೊಬ್ಬ ಚಾಲಕನು ಸಣ್ಣ ತಪ್ಪು ಮಾಡಿದರೂ ಜಗಳಕ್ಕೆ (Road Rage) ನಿಲ್ಲುವ, ಅವಾಚ್ಯ ಶಬ್ದಗಳಿಂದ ನಿಂದಿಸುವ, ಸಾರಿ ಕೇಳಿ ಮುಂದೆ ಹೋಗಬೇಕಾದ ಸಂದರ್ಭದಲ್ಲೂ ಹಲ್ಲೆಗೆ ಮುಂದಾಗುವವರ ಸಂಖ್ಯೆ ದೊಡ್ಡದಿದೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ ವ್ಯಕ್ತಿಯೊಬ್ಬ ಬೈಕ್ ಚಲಾಯಿಸುವಾಗ ತನ್ನ ಬೈಕ್‌ಗೆ ಪಕ್ಕದಲ್ಲಿ ಬರುತ್ತಿದ್ದ ಸ್ಕೂಟಿ ಟಚ್ ಆಯಿತು ಎಂದು ಸ್ಕೂಟಿಯಲ್ಲಿ ಬರುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಗೆ ಇಬ್ಬರು ಮಕ್ಕಳ ತಾಯಿಯು ಮೃತಪಟ್ಟಿದ್ದಾರೆ.
ಹೀರಾ ಸಿಂಗ್ ಎಂಬ ವ್ಯಕ್ತಿಯು ಮೌಜ್‌ಪುರದ ಕಡೆಗೆ ಗೋಕಲ್‌ಪುರಿ ಫ್ಲೈಓವರ್ ಮೂಲಕ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಲೆ ಹೀರಾ ಸಿಂಗ್ ಅವರ ಬೈಕ್ ಮತ್ತೊಬ್ಬ ವ್ಯಕ್ತಿಯ ಸ್ಕೂಟಿಗೆ ಟಚ್ ಆಗಿದೆ. ಇದಾದ ಬಳಿಕ ಹೀರಾ ಸಿಂಗ್ ಹಾಗೂ ಸ್ಕೂಟರ್ ಓಡಿಸುತ್ತಿದ್ದ ವ್ಯಕ್ತಿ ಮಧ್ಯೆ ವಾಗ್ವಾದ ನಡೆದಿದೆ. ವಾಗ್ವಾದವು ಜಗಳಕ್ಕೆ ತಿರುಗಿದೆ. ಸ್ಕೂಟಿ ಓಡಿಸುತ್ತಿದ್ದ ವ್ಯಕ್ತಿಯು ಕೋಪದಲ್ಲಿ ಹೀರಾ ಸಿಂಗ್ ಅವರ ಬೈಕ್‌ಗೆ ಗುಂಡು ಹಾರಿಸಿದ್ದಾನೆ. ಆಗ ಸಿಮ್ರನ್‌ಜೀತ್ ಕೌರ್ ಎಂಬ 30 ವರ್ಷದ ಮಹಿಳೆಗೆ ಗುಂಡು ತಗುಲಿದ್ದು, ಅವರು ಮೃತಪಟ್ಟಿದ್ದಾರೆ.
Woman shot dead in road roage in front of her husband, two sons in Delhi
— Atulkrishan (@iAtulKrishan1) July 31, 2024
In a shocking case of road rage, a 30-year-old woman, Simranjeet Kaur, was shot dead in front of her husband and two sons in Delhi, near the Gokalpuri flyover on Wazirabad Road.
The incident occurred… pic.twitter.com/Al6JiOB3VO
ಸಿಮ್ರನ್‌ಜೀತ್ ಕೌರ್ ಅವರು 12 ಹಾಗೂ 4 ವರ್ಷದ ಮಕ್ಕಳನ್ನು ಕೂರಿಸಿಕೊಂಡಿದ್ದರು. ಸ್ಕೂಟಿ ಓಡಿಸುತ್ತಿದ್ದ ವ್ಯಕ್ತಿಯು ಅವಾಚ್ಯ ಶಬ್ದಗಳಿಂದ ಬೈಯುತ್ತಲೇ ಇವರ ಬೈಕ್ ಮೇಲೆ ಗುಂಡು ಹಾರಿಸಿದ್ದಾನೆ. ಆ ಗುಂಡು ಮಹಿಳೆಗೆ ತಗುಲಿದೆ. ಮಹಿಳೆಯ ಕುತ್ತಿಗೆ ಹಾಗೂ ಎದೆಗೆ ಗುಂಡು ತಗುಲಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೆ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸ್ಕೂಟಿಗೆ ಬೈಕ್ ಟಚ್ ಆಗುತ್ತಲೇ ಬೈಕ್ ಓಡಿಸುತ್ತಿದ್ದ ವ್ಯಕ್ತಿಗೆ ಸ್ಕೂಟಿ ಚಾಲಕನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದೇ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈತನ ಸಹವಾಸ ಬೇಡ ಎಂದು ಬೈಕ್ ಚಾಲಕನು ಫ್ಲೈಓವರ್ ಇಳಿದು, ಬೇರೆ ಮಾರ್ಗದ ಮೂಲಕ ತೆರಳಲು ಮುಂದಾಗುತ್ತಾನೆ. ಆಗಲೂ ಸ್ಕೂಟಿ ಚಾಲಕನು ನಿಂದಿಸುತ್ತಾನೆ. ಇದಕ್ಕೆ ಬೈಕ್ ಚಾಲಕನು ಕೂಡ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ. ಆಗ ಸ್ಕೂಟಿ ಚಾಲಕನು ಕೋಪದಲ್ಲಿ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Namaz Row: “ನಮಾಜ್ ಮಾಡೋಕೆ ಕಾಲೇಜಿನಲ್ಲಿ ಪ್ರತ್ಯೇಕ ಕೊಠಡಿ ಬೇಕು”-ವಿದ್ಯಾರ್ಥಿಗಳ ಗಲಾಟೆ; ಭುಗಿಲೆದ್ದಿದೆ ಮತ್ತೊಂದು ವಿವಾದ