ನವದೆಹಲಿ: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ವಾಳ್ಕರ್ ಕೊಲೆ ಪ್ರಕರಣ (Shraddha Murder Case) ಆರೋಪಿ ಅಫ್ತಾಬ್ ಪೂನಾವಾಲ ಪೊಲೀಸ್ ಕಸ್ಟಡಿ ಅವಧಿಯನ್ನು ದಿಲ್ಲಿ ಸ್ಥಳೀಯ ನ್ಯಾಯಾಲಯವು ಮತ್ತೆ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ. ಮಂಗಳವಾರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಸಾಕೇತ್ ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ನಮ್ಮಿಬ್ಬರ ಜಗಳ ನಡೆದಿತ್ತು. ಅದೇ ಸಿಟ್ಟಿನಲ್ಲಿ ಶ್ರದ್ಧಾಳನ್ನು ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿರುವ ಆರೋಪಿ ಅಫ್ತಾಬ್, ಈ ಕುರಿತು ಹೊರ ಬರುತ್ತಿರುವ ಮಾಹಿತಿಗಳೆಲ್ಲವೂ ಸತ್ಯವಲ್ಲ ಎಂದು ಕೋರ್ಟ್ ಮುಂದೆ ಹೇಳಿಕೊಂಡಿದ್ದಾನೆ.
ತನಿಖೆ ವೇಳೆ ಪೊಲೀಸರಿಗೆ ಸಹಕರಿಸುತ್ತಿರವುದಾಗಿ ಅಫ್ತಾಬ್ ಹೇಳಿಕೊಂಡಿದ್ದಾನೆ. ಪೊಲೀಸರೂ ಆತನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಅಫ್ತಾಬ್ ಪೊಲೀಸರಿಗೆ ಸುಳ್ಳು ಹೇಳುತ್ತಿಲ್ಲ. ಅಥವಾ ದಾರಿ ತಪ್ಪಿಸುತ್ತಿಲ್ಲ. ಅಫ್ತಾಬ್‌ನ ಹೇಳಿಕೆಗೆ ಪೊಲೀಸರು ಯಾವುದೇ ವಿರುದ್ಧವಾದ ಹೇಳಿಕೆಯನ್ನು ನೀಡಿಲ್ಲ ಎಂದು ಅಫ್ತಾಬ್ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.
ಸಿಬಿಐ ತನಿಖೆ ಸಾಧ್ಯವಿಲ್ಲ: ಹೈಕೋರ್ಟ್
ಶ್ರದ್ಧಾ ವಾಳ್ಕರ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂದು ದೆಹಲಿ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ. ಶ್ರದ್ಧಾ ವಾಳ್ಕರ್ ಮತ್ತು ಅಫ್ತಾಬ್ ಪೂನಾವಾಲಾ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದರು. ಆದರೆ ಅದೇ ಅಫ್ತಾಬ್ ಕೈಯಲ್ಲೇ ಶ್ರದ್ಧಾ ವಾಳ್ಕರ್ ಭಯಾನಕವಾಗಿ ಕೊಲೆಯಾಗಿದ್ದಾಳೆ. ನಿನ್ನೆಯಷ್ಟೇ ಆಕೆಯ ತಲೆ ಬುರುಡೆ ಭಾಗ ಪತ್ತೆಯಾಗಿತ್ತು.
ತನಿಖೆಗೆ ಅತಿಮುಖ್ಯವಾಗಿ ಅಗತ್ಯವಿರುವ ತಲೆಯ ಭಾಗ ಸಿಗುತ್ತಿದ್ದಂತೆ ಈ ಕೇಸ್ನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿ, ವಕೀಲರೊಬ್ಬರು ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಿಚಾರಣೆ ನಡೆಸಲು ಹೈಕೋರ್ಟ್ ಒಪ್ಪಲಿಲ್ಲ. ‘ಈಗಾಗಲೇ ಪೊಲೀಸರು ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಇಂಥ ಅರ್ಜಿ ಯಾಕೆ’ ಎಂದು ಪ್ರಶ್ನಿಸಿರುವ ಹೈಕೋರ್ಟ್ ‘ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಪ್ರಚಾರದ ಉದ್ದೇಶದಿಂದ ಸಲ್ಲಿಕೆಯಾದ ಪ್ರಚಾರ ಹಿತಾಸಕ್ತಿ ಅರ್ಜಿ’ ಎಂದು ಹೇಳಿದೆ. ಅರ್ಜಿ ಸಲ್ಲಿಕೆ ಮಾಡಿದವರಿಗೆ ದಂಡ ವಿಧಿಸಿ, ವಜಾಗೊಳಿಸಿದೆ.
ಇದನ್ನೂ ಓದಿ | Shraddha Murder Case | ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾಳ ತಲೆ ಬುರುಡೆಯ ಭಾಗಗಳು ಪತ್ತೆ!, ಸಿಬಿಐ ತನಿಖೆಗೆ ಮನವಿ