| ಮಯೂರಲಕ್ಷ್ಮೀ
ಖುದಿರಾಮ್ ಎನ್ನುವ ಆ ಮಹಾನ್ ಚೇತನ 3 ಡಿಸೆಂಬರ್ 1889ರಂದು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಮೊಹೊಬನೀಯಲ್ಲಿ ಜನಿಸಿದರು. ತಂದೆ ತ್ರೈಲೋಕ್ಯನಾಥ್ ಬೋಸ್ ಮತ್ತು ಲಕ್ಷ್ಮಿ ಪ್ರಿಯಾ ದೇವಿ ಅವರ ಮೂವರು ಹೆಣ್ಣು ಮಕ್ಕಳ ಒಬ್ಬನೇ ಸಹೋದರನಾಗಿ ಅವರು ಜನಿಸಿದರು. ಖುದಿರಾಮ್ ಬದುಕು ಮೊದಲಿನಿಂದಲೂ ಕಷ್ಟಗಳಿಂದ ಕೂಡಿತ್ತು. ಅತಿ ಕಿರಿಯ ವಯಸ್ಸಿನಲ್ಲಿಯೇ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಂಡರು. ಬಾಲಕ ಖುದಿರಾಮ್ ಅನುಶೀಲನ್ ಸಮಿತಿ ಸೇರಿದ ನಂತರ ದೇಶ ಸೇವೆಗಾಗಿ ಶ್ರಮಿಸಿದ.
ಬಂಕಿಮಚಂದ್ರರು ಬರೆದ ‘ಆನಂದ ಮಠ’ ಮತ್ತು ‘ಆನಂದದಾತ’ ಕಾದಂಬರಿಗಳೂ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದವು. `ವಂದೇ ಮಾತರಂ’ ಗೀತೆಯಂತೂ ಇವರ ನರನಾಡಿಗಳಲ್ಲಿ ಹರಿಯುತ್ತಾ ದೇಶಭಕ್ತಿಯನ್ನು ಇಮ್ಮಡಿಗೊಳಿಸಿತ್ತು. ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟುಕೊಂಡುದೇ ಅಲ್ಲದೇ ಅದರ ಪ್ರಚಾರ ಕಾರ್ಯಕ್ಕೆ ತೊಡಗಿ ಕರಪತ್ರಗಳನ್ನು ಹಂಚುತ್ತಿದ್ದಾಗ ಸಿಕ್ಕಿಬಿದ್ದು ಪುನಃ ಬಿಡುಗಡೆಗೊಂಡರು. ‘ವಂದೇ ಮಾತರಂ’ ಪತ್ರಿಕೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಮೊಕದ್ದಮೆ ಹೂಡಲಾಯಿತು.
ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡನು ಆ ಯುವಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿ ಮೆರೆದನು.
ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನನ್ನು ಮುಗಿಸಲು ತೀರ್ಮಾನಿಸಿದರು. ಇದರ ಸುಳಿವು ಹತ್ತಿದ ಬ್ರಿಟಿಷ್ ಸರ್ಕಾರ ಕಿಂಗ್ಸ್ ಫೋರ್ಡನನ್ನು ಮುಜಾಫರಪುರಕ್ಕೆ ವರ್ಗ ಮಾಡಿತು. ಅವನ ವಿರುದ್ಧ ಸೇಡು ತೀರಿಸಿಕೊಳ್ಳುವ ಪಣ ತೊಟ್ಟ `ಯುಗಾಂತರ’ ತಂಡದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಆತನ ಸಹ ಕ್ರಾಂತಿಕಾರಿ ಕಿಂಗ್ಸ್ ಫೋರ್ಡನ ಚಲನವಲನಗಳನ್ನು ಗಮನಿಸತೊಡಗಿದರು. ಹೇಮಚಂದ್ರ ಎನ್ನುವ ಗೆಳೆಯನಿಂದ ಪುಸ್ತಕ ಬಾಂಬ್ ತಯಾರಿಯಾದ ನಂತರ ಅದರ ಪ್ರಯೋಗ ಮಾಡಲು ಅವರು ಅನುವಾದರು.
1908ನೆ ಏಪ್ರಿಲ್ 30ರಂದು. ಕಿಂಗ್ಸ್ ಫೋರ್ಡ್ ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಅವನ ವಾಹನದಂತೆಯೇ ಇದ್ದ ಮತ್ತೊಂದು ವಾಹನದ ಮೇಲೆ ಖುದಿರಾಮ್ ಬೋಸ್ ಮತ್ತು ಚಾಕಿ ಬಾಂಬ್ ಎಸೆದರು. ಕಿಂಗ್ಸ್ ಫೋರ್ಡ್ ಬದಲಾಗಿ ಅದರಲ್ಲಿದ್ದ ಅವನ ಪತ್ನಿ ಮತ್ತು ಮಗಳಿಗೆ ತೀವ್ರ ಗಾಯಗಳಾಗಿ ನಂತರ ಅವರು ಅಸುನೀಗಿದರು. ಇತ್ತ ಕಿಂಗ್ಸ್ ಫೋರ್ಡನನ್ನು ಕೊಂದೆವೆಂದುಕೊಂಡ ಈ ಹುಡುಗರು ಒಂದೊಂದು ದಿಕ್ಕಿಗೊಬ್ಬರು ಓಡಿದರು. ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡನನ್ನು ಕೊಲ್ಲಲಿಲ್ಲ, ಬದಲಿಗೆ, ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ಮೊದಲ ನಡುಕ ಹುಟ್ಟಿಸಿಬಿಟ್ಟಿತ್ತು. ಬ್ರಿಟಿಷರ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರಾಗಿಸಿತು.
ಅಲ್ಲಿಂದ ತಪ್ಪಿಸಿಕೊಂಡ ಖುದಿರಾಮ್ ಮುಜಾಫುರದಿಂದ ಸುಮಾರು, 25 ಮೈಲುಗಳಾಚೆ ವೈನಿ ಎನ್ನುವ ನಿಲ್ದಾಣ ತಲುಪಿದ. ಅಲ್ಲಿ ಅವನನ್ನು ಸೆರೆಹಿಡಿಯಲಾಯಿತು. ಮೇ ಒಂದರಂದು ಅವನನ್ನು ಮುಜಾಫರ್ ಪುರದಲ್ಲಿ ಕೈಕೋಳದೊಡನೆ ಹಾಜರು ಪಡಿಸಲಾಯಿತು. ಇಡೀ ನಿಲ್ದಾಣದಲ್ಲಿ ಜನರು ವೀರ ಕ್ರಾಂತಿಕಾರಿ ಬಾಲಕನನ್ನು ನೋಡಲು ಕಿಕ್ಕಿರಿದಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಎಂಬ ನಾಟಕ ನಡೆಯಿತು. ಖುದಿರಾಮ್ ಘಟನೆಯ ಸಂಪೂರ್ಣ ಜವಾಬ್ದಾರಿ ತನ್ನದೇ ಎಂದು ವಾದಿಸಿದ.
ಇದನ್ನೂ ಓದಿ | 152ನೆ ಜನ್ಮದಿನ | ವಾಸುದೇವ ಬಲವಂತ ಫಡ್ಕೆ | ಕ್ರಾಂತಿವೀರನ ನೆನಪು
ಇತ್ತ ಪ್ರಫುಲ್ಲ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ರಿವಾಲ್ವರ್‌ನಿಂದ ತಾವೇ ಸುಟ್ಟುಕೊಂಡು ಅಮರರಾದನು. ಖುದಿರಾಮ್ ಹೇಳಿಕೆ ಮುಗಿಯುವ ವೇಳೆಗೆ ಸ್ನೇಹಿತ ಪ್ರಫುಲ್ಲನ ಕಳೇಬರವನ್ನು ತರಲಾಯಿತು. ಆಗಸ್ಟ್ 11, 1908 ನ್ಯಾಯಾಲಯದ ಪ್ರಕ್ರಿಯೆಗಳೆಲ್ಲವೂ ಮುಗಿಯಿತು. ಸಾಹಸಿ ಬಾಲಕನಿಗೆ ಮರಣದಂಡನೆಯನ್ನು ವಿಧಿಸಲಾಯಿತು. ಇಡೀ ನಗರದಲ್ಲಿ ಖುದಿರಾಮ್ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಯಿತು. ರಸ್ತೆಗಳಲ್ಲಿ ಜನರು ಅವನ ಬಲಿದಾನ ಗುಣಗಾನ ಮಾಡುತ್ತಾ ಕಣ್ಣೀರು ತುಂಬಿ ಪುಷ್ಪಾರ್ಚನೆಗೈದರು.
ತನ್ನ ಅಂತ್ಯ ಸಮಯದಲ್ಲಿ ಖುದಿರಾಮ್ ಉತ್ಸಾಹದಿಂದ ನಗುನಗುತ್ತಾ ನೇಣಿಗೇರಿದ್ದನ್ನು ಅಮೃತ ಬಜಾರ್ ಪತ್ರಿಕೆ ಹೊಗಳಿ ಬರೆಯಿತು. ಮರಾಠಿ ಪತ್ರಿಕೆ ಕೇಸರಿ ಅವನ ತ್ಯಾಗವನ್ನು ವರ್ಣಿಸಿತು. ಖುದಿರಾಮ್ ಬೋಸ್ ಬಲಿದಾನ ಹೊಂದಿದ ಮುಜಾಫರ ಪುರ ಜೈಲನ್ನು ಖುದಿರಾಮ್ ಬೋಸ್ ಕಾರಾಗೃಹ ಎಂದು ಮರು ನಾಮಕರಣ ಮಾಡಲಾಯಿತು. ಬಿಹಾರದ ಪುಸಾ ರೈಲ್ವೆ ನಿಲ್ದಾಣಕ್ಕೆ ಖುದಿರಾಮ್ ಹೆಸರಿಡಲಾಯಿತು. ಖುದಿರಾಮ್ ಬೋಸ್ ಇಂದಿಗೂ ಅಮರರು.
ಇದನ್ನೂ ಓದಿ | Bhagat Singh Birthday | ಲೇಖನ | ಯುವಕರಿಗೆ ಸದಾ ಸ್ಫೂರ್ತಿ ಕ್ರಾಂತಿಕಾರಿ ಭಗತ್ ಸಿಂಗ್